ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

1965 India Pakistan War: ಯುದ್ಧ ಕಾಲದಲ್ಲಿ ತಂದೆ ಭಾರತದ ಸಚಿವರಾಗಿದ್ದರೆ, ಮಗ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯಾಗಿದ್ದರು!

ಭಾರತ ಮತ್ತು ಪಾಕಿಸ್ತಾನ 1965ರಲ್ಲಿ ಯುದ್ಧದಲ್ಲಿ ತೊಡಗಿಕೊಂಡಿತ್ತು. ಆಗ ಯುದ್ಧಭೂಮಿ ಕೇವಲ ಗಡಿ ಆಗಿರಲಿಲ್ಲ. ದೆಹಲಿ ಸಂಸತ್ತು ಕೂಡ ಯುದ್ಧ ಭೂಮಿಯೇ ಆಗಿಹೋಯಿತು. ಗಡಿಯಲ್ಲಿ ಸೈನಿಕರು ಬಂದೂಕು ಹಿಡಿದು ಹೋರಾಡುತ್ತಿದ್ದರೆ ಇಲ್ಲಿ ರಾಜಕೀಯ ನಾಯಕರು ಮಾತಿನ ಬಂದೂಕು ಹಿಡಿದಿದ್ದರು. ಈ ವೇಳೆ ಭಾರತದಲ್ಲಿ ಸಚಿವರಾಗಿದ್ದ ಜನರಲ್ ಶಾ ನವಾಜ್ ಖಾನ್ ಅವರ ಹಿರಿಯ ಮಗ ಮಹಮೂದ್ ನವಾಜ್ ಅಲಿ ಪಾಕಿಸ್ತಾನ ಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು.

ಯುದ್ಧ ಕಾಲದಲ್ಲಿ ನೆನಪಾಗುವ  ಜನರಲ್ ಶಾ ನವಾಜ್ ಖಾನ್

ನವದೆಹಲಿ: ಭಾರತದ (India Pakistan War) ವಿರುದ್ಧ ಪಾಕಿಸ್ತಾನ (Pakistan) ಸದಾ ಒಂದಲ್ಲ ಒಂದು ಪಿತೂರಿ ಮಾಡುತ್ತಲೇ ಇರುತ್ತದೆ. ಭಾರತದಿಂದ ಬೇರ್ಪಟ್ಟಿದ್ದರೂ ಅದು ಭಾರತದ ಒಂದು ಮುಖ್ಯ ಭಾಗವೇ ಆಗಿದೆ. ಎರಡು ರಾಷ್ಟ್ರಗಳ ಮಧ್ಯೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಒಂದನ್ನು ಬಿಟ್ಟು ಇನ್ನೊಂದು ಇರಲಾರವು. ಯಾಕೆಂದರೆ ರಾಜಕೀಯ, ಭೌಗೋಳಿಕ ವಿಷಯಗಳು ಏನೇ ಇರಲಿ ಇಲ್ಲಿನ ಜನರು ಅಲ್ಲಿನ ಜನರು ಪರಸ್ಪರ ಬೆಸೆದುಕೊಂಡಿದ್ದಾರೆ. ಅವರನ್ನು ಬೇರ್ಪಡಿಸುವುದು ತುಂಬಾ ಕಷ್ಟ. ಮನೆಯಿಂದ ಹೊರದಬ್ಬಿದರೂ ಸಂಬಂಧವನ್ನು ಬಿಟ್ಟುಕೊಡಲಾಗದು ಎನ್ನುವ ಪರಿಸ್ಥಿತಿ ಹಲವರದ್ದಾಗಿದೆ. ಇದನ್ನೇ ತಾನೇ ಮೊನ್ನೆ ಪಾಕಿಸ್ತಾನ ಪ್ರಜೆಗಳ (Pakistani citizen) ವೀಸಾ ಭಾರತದಲ್ಲಿ ರದ್ದುಗೊಂಡ ಬಳಿಕ ಬಹುತೇಕ ಕಥೆಗಳು ಹೇಳಿರುವುದು. ಇದು ಕೇವಲ ಈಗಿನ ಕಥೆಯಲ್ಲ.

ಪಾಕಿಸ್ತಾನವು ಸ್ವಾತಂತ್ರ್ಯ ರಾಷ್ಟ್ರವಾದ ಬಳಿಕ ಹಲವಾರು ಸಂಬಂಧಗಳು ದೂರವಾಗಿವೆ. ಅಜ್ಜ, ಅಜ್ಜಿ, ತಂದೆ, ತಾಯಿ, ಹೆಂಡತಿ, ಮಕ್ಕಳು... ಹೀಗೆ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಆದರೂ ಯುದ್ಧದ ಸಂದರ್ಭದಲ್ಲಿ ಎಲ್ಲವನ್ನೂ ಬಿಟ್ಟುಕೊಡಬೇಕಾದ ಪರಿಸ್ಥಿತಿ. ಎರಡು ದೇಶಗಳು ಯುದ್ಧಕ್ಕೆ ಹೊರಟಾಗ ಕೇವಲ ಗಡಿಯಲ್ಲಿ ಯುದ್ಧ ನಡೆಯುವುದಿಲ್ಲ ಮನೆಯಲ್ಲೂ ಉಂಟಾಗುತ್ತದೆ. ಇಂತಹ ಒಂದು ಘಟನೆ 1965ರಲ್ಲಿ ನಡೆದಿತ್ತು. ಸಾಮಾನ್ಯ ಪ್ರಜೆಯಾಗಿದ್ದರೆ ಇದು ದೊಡ್ಡ ವಿಚಾರವಾಗುತ್ತಿರಲಿಲ್ಲ. ಆದರೆ ಇಲ್ಲಿ ತಂದೆ ದೇಶದ ಸಚಿವರಾಗಿದ್ದರು ಮತ್ತು ಮಗ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯಾಗಿದ್ದರು.

ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ತೊಡಗಿಕೊಂಡಿತ್ತು. ಆಗ ಯುದ್ಧಭೂಮಿ ಕೇವಲ ಗಡಿ ಆಗಿರಲಿಲ್ಲ. ದೆಹಲಿ ಸಂಸತ್ತು ಕೂಡ ಯುದ್ಧ ಭೂಮಿಯೇ ಆಗಿಹೋಯಿತು. ಗಡಿಯಲ್ಲಿ ಸೈನಿಕರು ಬಂದೂಕು ಹಿಡಿದು ಹೋರಾಡುತ್ತಿದ್ದರೆ ಇಲ್ಲಿ ರಾಜಕೀಯ ನಾಯಕರು ಮಾತಿನ ಬಂದೂಕು ಹಿಡಿದಿದ್ದರು.

ಭಾರತ ಮತ್ತು ಪಾಕಿಸ್ತಾನ ಯುದ್ಧ ಪ್ರಾರಂಭವಾಗಿತ್ತು. ಆಗ ಲಾಲ್ ಬಹದ್ದೂರ್ ಶಾಸ್ತ್ರಿ ದೇಶದ ಪ್ರಧಾನಿಯಾಗಿದ್ದರು. ಅವರ ಸಂಪುಟದಲ್ಲಿ ಸಚಿವರಾಗಿದ್ದ ಜನರಲ್ ಶಾ ನವಾಜ್ ಖಾನ್ ಅವರ ಹಿರಿಯ ಮಗ ಮಹಮೂದ್ ನವಾಜ್ ಅಲಿ ಪಾಕಿಸ್ತಾನ ಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.

ಈ ಸುದ್ದಿ ದೇಶಾದ್ಯಂತ ಆತಂಕವನ್ನು ಉಂಟು ಮಾಡಿತ್ತು. ಮಗ ಶತ್ರು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವಾಗ ಸಚಿವರೊಬ್ಬರು ಸರ್ಕಾರದಲ್ಲಿ ಹೇಗೆ ಉಳಿಯಲು ಸಾಧ್ಯ ಎನ್ನುವ ಪ್ರಶ್ನೆ ಮೂಡಿದವು. ವಿರೋಧ ಪಕ್ಷಗಳು ಆಕ್ರೋಶವನ್ನೂ ವ್ಯಕ್ತಪಡಿಸಿದವು. ಖಾನ್ ಅವರ ರಾಜೀನಾಮೆಗೆ ಅವರ ಮೇಲೆ ಮಾತ್ರವಲ್ಲ ಪ್ರಧಾನಿ ಮೇಲೂ ಒತ್ತಡ ಹೆಚ್ಚಾಯಿತು. ಆದರೆ ಶಾಸ್ತ್ರಿ ಮಾತ್ರ ಇದನ್ನು ಖಡಾಖಂಡಿತವಾಗಿ ನಿರಾಕರಿಸಿದರು.

ಅವರು ಖಾನ್ ಪಕ್ಕದಲ್ಲಿ ನಿಂತು ಒಬ್ಬ ವ್ಯಕ್ತಿಯ ಮಗ ಇನ್ನೊಂದು ಕಡೆ ಹೋರಾಡುತ್ತಿದ್ದರೆ ಅದರಲ್ಲಿ ತಂದೆಯ ತಪ್ಪೇನು? ಬೆಳೆದ ಮಕ್ಕಳ ನಿರ್ಧಾರಕ್ಕಾಗಿ ಪೋಷಕರನ್ನು ಶಿಕ್ಷಿಸುವುದು ಸರಿಯೇ ಎಂದು ಪ್ರಶ್ನಿಸಿದರು. ರಾಜಕೀಯ ಒತ್ತಡಗಳಿಂದಾಗಿ ಶಾ ನವಾಜ್ ಖಾನ್ ಅವರು ರಾಜೀನಾಮೆ ನೀಡಲು ಮುಂದಾದರು. ಆದರೆ ಶಾಸ್ತ್ರಿ ಅದನ್ನು ಅಂಗೀಕರಿಸಲಿಲ್ಲ.

sha1

ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯ ಮಾತೂರ್ ಗ್ರಾಮದಲ್ಲಿ ಜನಿಸಿದ ಶಾ ನವಾಜ್ ಖಾನ್ ಅವರು ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್‌ನಲ್ಲಿ ಮೇಜರ್ ಜನರಲ್ ಆಗಿದ್ದರು. ಅದಕ್ಕೂ ಮೊದಲು ಅವರು ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಎರಡನೇ ಮಹಾಯುದ್ಧದ ಸಮಯದಲ್ಲಿ ರಾಷ್ಟ್ರೀಯತಾವಾದಿ ಉತ್ಸಾಹವನ್ನು ಹೆಚ್ಚಿಸಿದ ಆರೋಪದಲ್ಲಿ ಬ್ರಿಟಿಷರಿಂದ ಕೆಂಪು ಕೋಟೆಯಲ್ಲಿ ವಿಚಾರಣೆಗೆ ಒಳಗಾದ ಐಎನ್‌ಎ ಅಧಿಕಾರಿಗಳಲ್ಲಿ ಅವರು ಒಬ್ಬರಾಗಿದ್ದರು. ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದಲ್ಲಿದ್ದ ತಮ್ಮ ಜನ್ಮಸ್ಥಳ, ಪತ್ನಿ ಮತ್ತು ಆರು ಮಕ್ಕಳನ್ನು ಬಿಟ್ಟು ಖಾನ್ ಭಾರತದಲ್ಲಿ ನೆಲೆಸಲು ತೀರ್ಮಾನ ಮಾಡಿದರು. ಭಾರತದಲ್ಲಿ ಹೊಸ ಜೀವನ ಪ್ರಾರಂಭಿಸಿದ ಖಾನ್ ಬಾಲಿವುಡ್ ನಟ ಶಾರುಖ್ ಖಾನ್ ಅವರ ತಾಯಿ ಲತೀಫ್ ಫಾತಿಮಾ ಅವರನ್ನು ದತ್ತು ಪಡೆದರು.

ಜವಾಹರಲಾಲ್ ನೆಹರೂ ಅವರು ದೇಶಕ್ಕಾಗಿ ಖಾನ್ ಅವರ ಸಮರ್ಪಣೆಯನ್ನು ಗುರುತಿಸಿ ಸ್ವತಂತ್ರ ಭಾರತದಲ್ಲಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡರು. ಮೊದಲು ರೈಲ್ವೆ ಮತ್ತು ಸಾರಿಗೆ ಉಪ ಮಂತ್ರಿಯಾಗಿ, ಬಳಿಕ ಕೃಷಿ ಸೇರಿದಂತೆ ವಿವಿಧ ಪ್ರಮುಖ ಖಾತೆಗಳನ್ನು ನಿರ್ವಹಿಸಿದರು. ಮೀರತ್‌ನಿಂದ ನಾಲ್ಕು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಕೋಮು ಸೂಕ್ಷ್ಮ ಕ್ಷೇತ್ರವಾಗಿದ್ದ ಮೀರತ್ ಇವರ ಅಧಿಕಾರಾವಧಿಯಲ್ಲಿ ಶಾಂತಿಯುತವಾಗಿತ್ತು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಯಾದ ಬಳಿಕ 1956ರಲ್ಲಿ ಭಾರತ ರಚನೆ ಮಾಡಿದ ಮೊದಲ ತನಿಖಾ ಆಯೋಗದ ಅಧ್ಯಕ್ಷರನ್ನಾಗಿ ಶಾ ನವಾಜ್ ಖಾನ್ ಅವರನ್ನು ನೇಮಕ ಮಾಡಲಾಗಿತ್ತು. ಇದು ಅವರ ದೇಶಪ್ರೇಮ ಮತ್ತು ಸಮರ್ಪಣೆಗೆ ನೀಡಿದ ಗೌರವವೂ ಆಗಿತ್ತು.

ಇದನ್ನೂ ಓದಿ: Narendra Modi: ಭಯೋತ್ಪಾದಕರಿಗೆ ಸರಿಯಾದ ಶಿಕ್ಷೆಯನ್ನು ನೀಡಿ; ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್

ದೇಶಕ್ಕಾಗಿ ಸಾಕಷ್ಟು ಕೊಡುಗೆ ನೀಡಿರುವ ಖಾನ್ ಬಗ್ಗೆ ಇಂದು ಯಾರೂ ಮಾತನಾಡುತ್ತಿಲ್ಲ. ಅವರ ಕುಟುಂಬವು ರಾಜಕೀಯದಿಂದ ದೂರವೇ ಉಳಿದಿದೆ. ಹರಿದ್ವಾರ ಬಳಿಯ ಏಥಾಲ್ ಗ್ರಾಮದಲ್ಲಿರುವ ಅವರ ಆಸ್ತಿ ಕುಟುಂಬದೊಳಗಿನ ವಿವಾದಗಳ ವಿಷಯವಾಗಿ ಉಳಿದಿದೆ. ದೇಶಕ್ಕಾಗಿ ಖಾನ್ ನೀಡಿರುವ ಕೊಡುಗೆಗಳು ಹಾಗೂ ಅವರ ನಿಷ್ಠೆ ಭಾರತ ಪಾಕಿಸ್ತಾನ ಯುದ್ಧ ಸನ್ನಿವೇಶದ ಈ ಸಂದರ್ಭದಲ್ಲಿ ಇವರನ್ನು ಮತ್ತೆ ಎಲ್ಲರೂ ನೆನಪಿಸುವಂತೆ ಮಾಡಿದೆ.