ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣ; ಸರ್ಕಾರಕ್ಕೆ ತನಿಖಾ ವರದಿ ಶೀಘ್ರ ಸಲ್ಲಿಕೆ ಎಂದ ಡಾ. ಶ್ಯಾಮ್ ಭಟ್
ಹುಬ್ಬಳ್ಳಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ ಹಾಗೂ ಆರೋಪಿ ಎನ್‌ಕೌಂಟರ್ ಬಗ್ಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ.ಶ್ಯಾಮ್ ಭಟ್ ಪ್ರತಿಕ್ರಿಯಿಸಿದ್ದಾರೆ. ನ್ಯಾಷನಲ್ ಹ್ಯೂಮನ್ ರೈಟ್ಸ್ ಕೇಸ್ ದಾಖಲು ಮಾಡದೇ ಇರುವ ಹಿನ್ನೆಲೆಯಲ್ಲಿ ನಾವು ತೆಗೆದುಕೊಂಡಿದ್ದೇವೆ ಎಂದು ಡಾ. ಟಿ. ಶ್ಯಾಮ್ ಭಟ್ ತಿಳಿಸಿದ್ದಾರೆ.


ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಎನಕೌಂಟರ್ ಪ್ರಕರಣದ (Hubli encounter case) ಬಗ್ಗೆ ನಮಗಿಂತ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇದೆ. ಪೊಲೀಸ್ ಕಮೀಷನರ್ ರಿಪೋರ್ಟ್ ಆಧರಿಸಿ ಇಲ್ಲಿ ಬಂದಿದ್ದೇವೆ. ಎನ್‌ಕೌಂಟರ್ ಆದ ಸಂದರ್ಭದಲ್ಲಿ ನಾವು ಬರುವುದು ಸಹಜ. ಇಲ್ಲಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಶೀಘ್ರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹೇಳಿದರು.
ನಗರದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ ಹಾಗೂ ಆರೋಪಿ ಎನ್‌ಕೌಂಟರ್ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎನ್‌ಕೌಂಟರ್ ಬಗ್ಗೆ ನಾವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂದಿದ್ದೇವೆ. ನ್ಯಾಷನಲ್ ಹ್ಯೂಮನ್ ರೈಟ್ಸ್‌ನಲ್ಲಿ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ನಿಟ್ಟಿನಲ್ಲಿ ನಾವು ಕೂಡ ಕನ್ಫರ್ಮ್ ಮಾಡಿಕೊಂಡು ನಾವು ಇಲ್ಲಿಗೆ ಬಂದಿದ್ದೇವೆ. ಪ್ರಕರಣ ನಡೆದಿರುವ ಸ್ಥಳದಿಂದ ಆರಂಭಿಸಿ ಈಗ ಎನ್‌ಕೌಂಟರ್ ಸ್ಥಳ ಕೂಡ ಪರಿಶೀಲನೆ ನಡೆಸಿದ್ದೇವೆ ಎಂದರು.
ಈ ಪ್ರಕರಣದಲ್ಲಿ ಠಾಣೆ ಇನ್ಸ್ಪೆಕ್ಟರ್ ಕಂಪ್ಲೆಂಟರ್ ಆಗಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಮ್ಮ ವ್ಯಾಪ್ತಿಗೆ ಬರುವುದು ಎನ್‌ಕೌಂಟರ್ ವಿಷಯ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತೇವೆ. ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣ ಪೊಲೀಸ್ ತನಿಖೆ ನಡೆಸುತ್ತಿದೆ. ಇನ್ಸ್ಪೆಕ್ಟರ್ ಕಿರಣ್‌ಕುಮಾರ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ನ್ಯಾಷನಲ್ ಹ್ಯೂಮನ್ ರೈಟ್ಸ್ ಕೇಸ್ ದಾಖಲು ಮಾಡದೇ ಇರುವ ಹಿನ್ನೆಲೆಯಲ್ಲಿ ನಾವು ತೆಗೆದುಕೊಂಡಿದ್ದೇವೆ. ಎನ್‌ಕೌಂಟರ್ ಮಾಡಿದ ಅಧಿಕಾರಿಗಳು ಶೀಘ್ರವಾಗಿ ತನಿಖೆಗೆ ಹಾಜರಾದರೇ ತ್ವರಿತವಾಗಿ ವರದಿ ಸಲ್ಲಿಸುತ್ತೆವೆ. ಸ್ಪಾಟ್ ಇನ್ಸ್‌ಸ್ಪೆಕ್ಷನ್ ಮೂಲಕ ಎನ್‌ಕೌಂಟರ್ ಬಗ್ಗೆ ಏನನ್ನೂ ಹೇಳಲು ಆಗುವುದಿಲ್ಲ. ಸಿಐಡಿ ತನಿಖೆ ಹಾಗೂ ಹ್ಯೂಮನ್ ರೈಟ್ಸ್ ತನಿಖೆ ಪ್ರತ್ಯೇಕವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಬಾಲಕಿಯ ಮನೆಗೆ ಮಾನವ ಹಕ್ಕು ಆಯೋಗ ಭೇಟಿ
ಇದಕ್ಕೂ ಮೊದಲು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಬಾಲಕಿ ಮನೆಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ, ಮಾಹಿತಿ ಪಡೆದರು.
ಈ ಸುದ್ದಿಯನ್ನೂ ಓದಿ | Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ವಿಶ್ವಾದ್ಯಂತ ಭಾರತೀಯರಿಂದ ಪ್ರತಿಭಟನೆ- ಫೋಟೋಗಳು ಇಲ್ಲಿವೆ
ಹುಬ್ಬಳ್ಳಿಯ ವಿಶ್ವೇಶ್ವರನಗರದ ಮೃತ ಬಾಲಕಿಯ ಮನೆಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಮತ್ತು ಸದಸ್ಯ ವಂಟಗೋಡಿ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದಿದರು. ಇದೇ ವೇಳೆ ಕುಟುಂಬಕ್ಕೆ ಆಯೋಗದ ಅಧ್ಯಕ್ಷ ಸಾಂತ್ವನ ಹೇಳಿದರು. ಏಪ್ರಿಲ್ 13 ರಂದು ಹುಬ್ಬಳ್ಳಿ ನಗರದಲ್ಲಿ ನಡೆದಿದ್ದ ಘಟನೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ದುರುಳನ ಬಗ್ಗೆ ಮಾಹಿತಿ ಪಡೆದಿದ್ದಾರೆ.