ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Hassan Controversy: ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಚಿತ್ರ ರಿಲೀಸ್‌ ಇಲ್ಲ; ಜೂ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Kamal Hassan Controversy: ಕ್ಷಮೆಯಾಚಿಸದೆ ಮೊಂಡಾಟ ಪ್ರದರ್ಶಿಸುತ್ತಿದ್ದ ಕಮಲ್‌ ಹಾಸನ್‌ಗೆ ಆಘಾತ ಎದುರಾಗಿದೆ. ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ. ವಾಣಿಜ್ಯ ಮಂಡಳಿ ಜತೆ ಚರ್ಚೆ ನಡೆಸುತ್ತೇವೆ ಎಂದು ರಾಜ್‌ ಕಮಲ್‌ ಸಂಸ್ಥೆ ಪರ ವಕೀಲರು ತಿಳಿಸಿದ್ದರಿಂದ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಲಾಗಿದೆ.

ಕರ್ನಾಟಕದಲ್ಲಿ ಕಮಲ್‌ ಹಾಸನ್‌ ನಟನೆಯ ʼಥಗ್‌ ಲೈಫ್‌ʼ ಚಿತ್ರ ರಿಲೀಸ್‌ ಇಲ್ಲ

Profile Prabhakara R Jun 3, 2025 3:16 PM

ಬೆಂಗಳೂರು: ಕರ್ನಾಟಕದಲ್ಲಿ ಕಮಲ್ ಹಾಸನ್ (Kamal Hassan Controversy) ಅವರ ಹೊಸ ಸಿನಿಮಾ ʼಥಗ್‌ ಲೈಫ್‌ʼ ಬಿಡುಗಡೆಗೆ ತಾತ್ಕಾಲಿಕ ತಡೆ ಬಿದ್ದಿದೆ. ʼಥಗ್‌ ಲೈಫ್‌ʼ (Thug Life Movie) ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಮಂಗಳವಾರ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅರ್ಜಿಯ ಮುಂದಿನ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿದ್ದಾರೆ.

ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕುರಿತು ಕ್ಷಮೆಯಾಚಿಸದೆ ಮೊಂಡಾಟ ಪ್ರದರ್ಶಿಸುತ್ತಿದ್ದ ಕಮಲ್‌ ಹಾಸನ್‌ಗೆ ಆಘಾತ ಎದುರಾಗಿದೆ. ಸದ್ಯ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ. ವಾಣಿಜ್ಯ ಮಂಡಳಿ ಜತೆ ಚರ್ಚೆ ನಡೆಸುತ್ತೇವೆ. ಹೀಗಾಗಿ ಒಂದು ವಾರ ವಿಚಾರಣೆ ಮುಂದೂಡಲು ಥಗ್‌ ಲೈಫ್‌ ನಿರ್ಮಾಣ ಸಂಸ್ಥೆ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಪರ ವಕೀಲರು ಮನವಿ ಮಾಡಿದ್ದು, ರಾಜ್ಯದಲ್ಲಿ ಸದ್ಯ ʼಥಗ್‌ ಲೈಫ್‌ʼ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ.

ಜೂನ್‌ 5ಕ್ಕೆ ವಿಶ್ವದಾದ್ಯಂತ ಥಗ್‌ ಲೈಫ್‌ ಬಿಡುಗಡೆಯಾಗಲಿದೆ. ಆದರೆ, ಕಮಲ್‌ ಹಾಸನ್‌ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಅವರ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿತ್ತು. ಹೀಗಾಗಿ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಥಗ್‌ ಲೈಫ್‌ ನಿರ್ಮಾಪಕರು ಹೈಕೋರ್ಟ್‌ ಮೊರೆಹೋಗಿದ್ದಾರೆ.

ಕನ್ನಡದ ಬಗ್ಗೆ ಇರುವ ಗೌರವವನ್ನು ಕಮಲ್‌ ಹಾಸನ್‌ ಅವರು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ. ನಾವು ಭಾಷೆ ಆಧಾರದಲ್ಲಿ ವಿಭಜನೆ ಆಗಬಾರದು. ದೇಶ ಒಂದೇ, ಕನ್ನಡವೂ ಇರಬೇಕು, ತಮಿಳೂ ಇರಬೇಕು ಎಂದು ನಟನ ಪರ ವಕೀಲ ವಕೀಲ ಧ್ಯಾನ್ ಚಿನ್ನಪ್ಪ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ಇದಕ್ಕೆ ಜಡ್ಜ್‌ ಪ್ರತಿಕ್ರಿಯಿಸಿ, ಕೋರ್ಟ್‌ ಎಲ್ಲೂ ಕ್ಷಮೆ ಕೇಳಲು ಹೇಳುತ್ತಿಲ್ಲ, ಕರ್ನಾಟಕ ಫಿಲ್ಮ್‌ ಚೇಂಬರ್‌ ಕೇಳುತ್ತಿದೆ ಎಂದು ತಿಳಿಸಿದ್ದಾರೆ.

ಕಮಲ್ ಹಾಸನ್‌ಗೆ ಹೈಕೋರ್ಟ್‌ ತೀವ್ರ ತರಾಟೆ

ಕನ್ನಡದ ಕುರಿತು ಉಡಾಫೆಯ ಮಾತನಾಡಿ, ಬಳಿಕ ತಾನು ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ ತಮಿಳು ನಟ ಕಮಲ್‌ ಹಾಸನ್‌ (Kamal Hassan Controversy) ಅವರನ್ನು ಕರ್ನಾಟಕ ಹೈಕೋರ್ಟ್‌ (Karnataka high court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕಮಲ್ ಹಾಸನ್ ಅವರ ಹೊಸ ಸಿನಿಮಾ ʼಥಗ್‌ ಲೈಫ್‌ʼ ಬಿಡುಗಡೆಗೆ ಭದ್ರತೆ ಕೋರಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡ ಭಾಷೆಯ ಕುರಿತು ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ ಕಮಲ್ ಹಾಸನ್‌ಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಕಮಲ್ ಹಾಸನ್ ಅವರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಗೆ ಕನ್ನಡದ ಕೆಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಇದೇ ಕಾರಣದಿಂದಾಗಿ ಸಿನಿಮಾಕ್ಕೆ ವಿರೋಧ ಉಂಟಾಗಿದೆ. ವಿಚಾರಣೆ ವೇಳೆ ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡರು. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದೆಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ. ಅವರು ಇತಿಹಾಸಕಾರರೇ? ಇಂತಹ ಹೇಳಿಕೆಗಳಿಂದ ಕನ್ನಡಿಗರ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಕಮಲ್ ಹಾಸನ್ ಅವರು ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆ ಕೇಳಬೇಕು ಎಂದು ನ್ಯಾಯಾಧೀಶರು ಹೇಳಿದರು.

ಇದನ್ನೂ ಓದಿ: Kamal Hassan Controversy: ಕಮಲ್‌ ಹಾಸನ್‌ ಥಗ್‌ ಲೈಫ್‌ ರಾಜ್ಯದಲ್ಲಿ ಬಿಡುಗಡೆ: ಇಂದು ಕೆಎಫ್‌ಸಿಸಿ ಮಹತ್ವದ ಸಭೆ

ಅಭಿವ್ಯಕ್ತಿ ಸ್ವಾತಂತ್ರ್ಯ ಮಹತ್ವದ್ದಾಗಿದ್ದರೂ, ಅದು ಇನ್ನೊಬ್ಬರ ಭಾವನೆಗೆ ಧಕ್ಕೆ ತರುವಂತಿರಬಾರದು. ಈ ಪರಿಸ್ಥಿತಿಗೆ ಕಾರಣನಾಗಿರುವ ನೀವು ಈಗ ಭದ್ರತೆ ಕೋರುತ್ತಿದ್ದೀರಿ. ನಿಮಗೆ ಲಕ್ಷಾಂತರ ರೂಪಾಯಿ ಹೂಡಿಕೆ ಇರಬಹುದು, ಆದರೆ ಕನ್ನಡಿಗರ ಭಾವನೆ ಅವುಗಳಿಗಿಂತ ಉನ್ನತವಾದದ್ದು, ಕಮಲ್ ಹಾಸನ್ ಅವರು ಸಾಮಾನ್ಯ ವ್ಯಕ್ತಿಯಲ್ಲ, ಅವರು ಸಾರ್ವಜನಿಕ ವ್ಯಕ್ತಿ. ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳುತ್ತಿಲ್ಲ, ಬದಲಿಗೆ ಹೇಳಿದ್ದು ಸರಿಯೆಂದು ಮತ್ತೊಮ್ಮೆ ಹೇಳುತ್ತಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಕನ್ನಡದ ಭಾವನೆಗೆ ಧಕ್ಕೆ ತರೋದನ್ನ ಒಪ್ಪುವುದಿಲ್ಲ. ಹೀಗಿದ್ದರೆ, ಕರ್ನಾಟಕ ಯಾಕೆ ನಿಮಗೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.