PM Narendra Modi: ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ; ಪಾಕ್‌ಗೆ ಮೋದಿ ಎಚ್ಚರಿಕೆ
ಸದ್ಯಕ್ಕೆ ಭಾರತ ಆಪರೇಷನ್ ಸಿಂದೂರ ಕಾರ್ಯಚರಣೆ ನಿಲ್ಲಿಸಿದ್ದರೂ, ಗಡಿಯಲ್ಲಿ ನಮ್ಮ ಮೂರು ಸೇನೆ ನಿರಂತರ ಅಲರ್ಟ್ ಆಗಿದೆ. ಭಯೋತ್ಪಾದಕರನ್ನು ನಿರ್ನಾಮ ಮಾಡಲು ನಾವು ಪಡೆಗಳಿಗೆ ಸ್ವತಂತ್ರವಾಗಿ ಅವಕಾಶ ನೀಡಿದ್ದೆವು. ಭಾರತದ ದಾಳಿಗೆ ಪಾಕ್ ಪತರಗುಟ್ಟಿ ಹೋಗಿದೆ ಎಂದು ಮೋದಿ ಹೇಳಿದ್ದಾರೆ.


ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ದೃಢ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ ಮತ್ತೊಮ್ಮೆ ಪುನರುಚ್ಚರಿಸುವ ಮೂಲಕ ಪಾಕ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ. 'ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಹಾಗೆಯೇ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ' ಎಂದಿದ್ದಾರೆ.
ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಬಲಿಪಡೆದ ಉಗ್ರದಾಳಿಯ ಮರುದಿನವೇ, ಉಗ್ರಪೋಷಕ ಪಾಕಿಸ್ತಾನದ ವಿರುದ್ಧ ಪ್ರತೀಕಾರವಾಗಿ ಮೊದಲ ದಿನವೇ ಭಾರತ, ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿತ್ತು. ಇದೀಗ ಈ ಬಗ್ಗೆ ಮೋದಿ ಮತ್ತೊಮ್ಮೆ ಪಾಕ್‌ಗೆ ಈ ಒಪ್ಪಂದಂತೆ ನೀರು ಬಿಡಬೇಕಾದರೆ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಇಲ್ಲವಾದಲ್ಲಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎನ್ನುವ ಮೂಲಕ ನೀರು ಬಿಡುವುದು ಅಸಾಧ್ಯ ಎಂಬ ಸಂದೇಶ ನೀಡಿದ್ದಾರೆ.
ಇದು ಯುದ್ಧದ ಯುಗವಲ್ಲ ಆದರೆ ಪಾಕಿಸ್ತಾನದ ಭಯೋತ್ಪಾದನೆಯನ್ನು ಎಂದೂ ಸಹಿಸಲ್ಲ. ಇನ್ನು ಪಾಕ್ ಜತೆ ಮಾತುಕತೆ ಏನಿದ್ದರೂ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ. ರಕ್ತ ಮತ್ತು ನೀರು ಜತೆಯಾಗಿ ಹರಿಯಲ್ಲ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದರು. ಭಾರತದ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಪಾಕ್‌ನ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಮೋದಿ ಹೇಳಿದರು.
ಸದ್ಯಕ್ಕೆ ಭಾರತ ಆಪರೇಷನ್ ಸಿಂದೂರ ಕಾರ್ಯಚರಣೆ ನಿಲ್ಲಿಸಿದ್ದರೂ, ಗಡಿಯಲ್ಲಿ ನಮ್ಮ ಮೂರು ಸೇನೆ ನಿರಂತರ ಅಲರ್ಟ್ ಆಗಿದೆ. ಭಯೋತ್ಪಾದಕರನ್ನು ನಿರ್ನಾಮ ಮಾಡಲು ನಾವು ಪಡೆಗಳಿಗೆ ಸ್ವತಂತ್ರವಾಗಿ ಅವಕಾಶ ನೀಡಿದ್ದೆವು. ಭಾರತದ ದಾಳಿಗೆ ಪಾಕ್ ಪತರಗುಟ್ಟಿ ಹೋಗಿದೆ ಎಂದರು.
ಇದನ್ನೂ ಓದಿ Operation Sindoor: ಪಾಕಿಸ್ತಾನದ ವಾಯು ಪ್ರದೇಶದೊಳಗೆ ನುಗ್ಗಿ ಹೊಡೆದ ಭಾರತ; ಕರಾಚಿಯ ಮಾಲಿರ್ ಕ್ಯಾಂಟ್ ಮೇಲೆ ದಾಳಿ