ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kesari Chapter 2: ಬಾಕ್ಸ್‌ ಆಫೀಸ್‌ನಲ್ಲಿ ಮತ್ತೆ ಅಕ್ಷಯ್‌ ಕುಮಾರ್‌ ಮ್ಯಾಜಿಕ್‌; ʼಕೇಸರಿ 2ʼ ಚಿತ್ರಕ್ಕೆ ಭರ್ಜರಿ ಓಪನಿಂಗ್‌

Kesari Chapter 2 Box Office Collection: ಬಹು ನಿರೀಕ್ಷಿತ ಬಾಲಿವುಡ್‌ನ ʼಕೇಸರಿ ಚಾಪ್ಟರ್‌ 2ʼ ಚಿತ್ರ ತೆರೆ ಕಂಡಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಆರ್‌.ಮಾಧವನ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ 1919ರ ಜಲಿಯಲ್‌ ವಾಲಾಭಾಗ್‌ ಹತ್ಯಾಕಾಂಡದ ಸುತ್ತ ಸುತ್ತುತ್ತದೆ.

ಅಕ್ಷಯ್‌ ಕುಮಾರ್‌ ನಟನೆಯ ʼಕೇಸರಿ 2ʼ ಚಿತ್ರಕ್ಕೆ ಭರ್ಜರಿ ಓಪನಿಂಗ್‌

ʼಕೇಸರಿ ಚಾಪ್ಟರ್‌ 2ʼ ಚಿತ್ರದ ಪೋಸ್ಟರ್‌.

Profile Ramesh B Apr 19, 2025 7:13 PM

ಮುಂಬೈ: ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಅಕ್ಷಯ್‌ ಕುಮಾರ್‌ (Akshay Kumar) - ಆರ್‌.ಮಾಧವನ್‌ (R.Madhavan) ನಟನೆಯ ʼಕೇಸರಿ ಚಾಪ್ಟರ್‌ 2ʼ (Kesari Chapter 2) ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಶತಮಾನಗಳ ಹಿಂದೆ ಪಂಜಾಬ್‌ನ ಅಮೃತಸರದಲ್ಲಿ ನಡೆದ, ಭಾರತದ ಇತಿಹಾಸದಲ್ಲಿ ಇಂದಿಗೂ ಕಪ್ಪು ಚುಕ್ಕೆಯಾಗಿ ಉಳಿದಿರುವ ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡವನ್ನು ತೆರೆಮೇಲೆ ಇಂಚಿಂಚಾಗಿ ತೆರೆದಿಡುವ ಈ ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ (Kesari Chapter 2 Box Office Collection). ಅದರಲ್ಲಿಯೂ ಅಕ್ಷಯ್‌ ಮತ್ತು ಮಾಧವನ್‌ ನಟನೆಗೆ ಪೂರ್ಣಾಂಕ ಸಿಕ್ಕಿದ್ದು, ಬಾಕ್ಸ್‌ ಆಪೀಸ್‌ನಲ್ಲಿಯೂ ಅಬ್ಬರಿಸುತ್ತಿದೆ. ಆ ಮೂಲಕ ಅಕ್ಷಯ್‌ ಕುಮಾರ್‌ ಖಾತೆಗೆ ಮತ್ತೊಂದು ಗೆಲುವು ಸಿಕ್ಕಂತಾಗಿದೆ.

ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡವನ್ನು ವಿರೋಧಿಸಿ ಬ್ರಿಟಿಷ್‌ ಸರ್ಕಾರವನ್ನು ಕಟೆಕಟೆಗೆ ತಂದು ನಿಲ್ಲಿಸಿದ ವಕೀಲ, ಕೇರಳ ಮೂಲದ ಶಂಕರನ್‌ ನಾಯರ್‌ ಅವರ ಜೀವನವನ್ನಾಧರಿಸಿದ ʼಕೇಸರಿ ಚಾಪ್ಟರ್‌ 2ʼ ಚಿತ್ರ ಹಲವರಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದೆ. ಕಾಲಗರ್ಭದಲ್ಲಿ ಅಡಗಿದ್ದ ಅಧ್ಯಾಯವೊಂದನ್ನು ಇದು ಪ್ರಸ್ತುತಪಡಿಸಿದೆ. ಇದೇ ಕಾರಣಕ್ಕೆ ಈ ಚಿತ್ರ ಗಮನ ಸೆಳೆಯುತ್ತಿದೆ.

ʼಕೇಸರಿ ಚಾಪ್ಟರ್‌ 2ʼ ಚಿತ್ರದ ಬಗ್ಗೆ ತರಣ್‌ ಆದರ್ಶ್‌ ಅವರ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Kesari Chapter 2 Movie: ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ ವಿರೋಧಿಸಿ ಬ್ರಿಟಿಷ್‌ ಸರ್ಕಾರದ ವಿರುದ್ಧ ಶಂಕರನ್‌ ನಾಯರ್‌ ಹೋರಾಟ; ಯಾರಿವರು? ಹಿನ್ನೆಲೆ ಏನು?

ಮೊದಲ ದಿನ ಗಳಿಸಿದ್ದೆಷ್ಟು?

ಕರಣ್‌ ಸಿಂಗ್‌ ತ್ಯಾಗಿ ನಿರ್ದೇಶನದ ಈ ಕೋರ್ಟ್‌ ಡ್ರಾಮ ಏ. 18ರಂದು ರಿಲೀಸ್‌ ಆಗಿದ್ದು, ಗುಡ್‌ಫ್ರೈ ಡೇ ಪ್ರಯುಕ್ತ ರಜೆ ಇದ್ದ ಕಾರಣ ಉತ್ತಮ ಕಲೆಕ್ಷನ್‌ ಮಾಡಿದೆ. ಮೊದಲ ದಿನ ಭಾರತದಲ್ಲಿ ಸುಮಾರು 7.75 ಕೋಟಿ ರೂ. ಗಳಿಸಿದೆ. ಇನ್ನು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿಯೂ ಗಮನ ಸೆಳೆದ್ದು, ಒಟ್ಟಾರೆ ಕಲೆಕ್ಷನ್‌ 15 ಕೋಟಿ ರೂ. ದಾಟಿದೆ. ನೋಡುಗರಿಂದ ಪಾಸಿಟಿವ್‌ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಗಳಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಚಿತ್ರ ರಿಲೀಸ್‌ ಆದ ದಿನ ಬೆಳಗ್ಗಿನ ಶೋಕ್ಕೆ ಸಾಧಾರಣ ಪ್ರತಿಕ್ರಿಯೆ ಕಂಡು ಬಂದಿತ್ತು. ಅದಾದ ಬಳಿಕ ನೋಡಿದವರೆಲ್ಲ ಮೆಚ್ಚುಗೆ ಸೂಚಿಸಿದ ಹಿನ್ನೆಲೆಯಲ್ಲಿ ನಂತರದ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದು, ಭಾರತದ ಇತಿಹಾಸದಲ್ಲಿನ ರಕ್ತಸಿಕ್ತ ಅಧ್ಯಾಯವೊಂದರ ಪರಿಚಯ ಮಾಡಿಸುತ್ತದೆ.

ಅಕ್ಷಯ್‌ ಕುಮಾರ್‌ಗೆ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂದ ಫ್ಯಾನ್ಸ್‌

ಶಂಕರನ್‌ ನಾಯರ್‌ ಪಾತ್ರದಲ್ಲಿ ಅಕ್ಷಯ್‌ ಕುಮಾರ್‌ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲಿದೆ ಎಂದೇ ಭವಿಷ್ಯ ನುಡಿಯುತ್ತಿದ್ದಾರೆ. ಅಕ್ಷಯ್‌ ಕುಮಾರ್‌ ಈ ಹಿಂದೆ 2016ರಲ್ಲಿ ʼರುಸ್ತುಂʼ ಮತ್ತು ʼಏರ್‌ಲಿಫ್ಟ್‌ʼ ಸಿನಿಮಾಗಳಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

'ಕೇಸರಿ ಚಾಪ್ಟರ್‌ 2' ಚಿತ್ರದಲ್ಲಿ ಆರ್‌.ಮಾಧವನ್‌, ಅನನ್ಯಾ ಪಾಂಡೆ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್‌.ಮಾಧವನ್‌ ಬ್ರಿಟಿಷ್‌ ವಕೀಲ ನೆವಿಲ್ಲೆ ಎಂಸಿಕಿನ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ಷಯ್‌ ಕುಮಾರ್‌ ಜತೆಗೆ ಅವರೂ ಗಮನ ಸೆಳೆದಿದ್ದಾರೆ.