Kesari Chapter 2 Movie: ಜಲಿಯನ್ ವಾಲಾಭಾಗ್ ಹತ್ಯಾಕಾಂಡ ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ಶಂಕರನ್ ನಾಯರ್ ಹೋರಾಟ; ಯಾರಿವರು? ಹಿನ್ನೆಲೆ ಏನು?
Jallianwala Bagh Massacre: 1919ರ ಏ. 13ರಂದು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಭಾಗ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡ ಇಂದಿಗೂ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿ ಉಳಿದಿದೆ. ಸುಮಾರು 1,500 ಮಂದಿಯ ಹತ್ಯೆಗೆ ಕಾರಣವಾದ ಬ್ರಿಟಿಷ್ ಅಧಿಕಾರಿಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿದ ವಕೀಲ ಶಂಕರನ್ ನಾಯರ್ ಅವರ ಜೀವನ ಕಥೆ ಇದೀಗ ʼಕೇಸರಿ ಚಾಪ್ಟರ್ 2ʼ ಬಾಲಿವುಡ್ ಸಿನಿಮಾ ರೂಪದಲ್ಲಿ ಹೊರ ಬಂದಿದೆ.

ಶಂಕರನ್ ನಾಯರ್.

ಚಂಡೀಗಢ: ಜಲಿಯನ್ ವಾಲಾಭಾಗ್ ಹತ್ಯಾಕಾಂಡ (Jallianwala Bagh Massacre) ಭಾರತೀಯ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿ ಈಗಲೂ ಉಳಿದುಕೊಂಡಿದೆ. ಬ್ರಿಟಿಷರ ದುರಾಡಳಿತದ ಜ್ವಲಂತ ಸಾಕ್ಷಿಯಾಗಿ ಇಂದಿಗೂ ಪಂಜಾಬ್‌ನ ಅಮೃತಸರದಲ್ಲಿ ಗುಂಡೇಟು ತಿಂದ ಗೋಡೆಗಳು ನಿಂತಿದೆ. ಅಂದು ಬ್ರಿಟಿಷರು ಹಾರಿಸಿದ್ದ ಗುಂಡಿಗೆ ಸುಮಾರು 1,500ಕ್ಕೂ ಅಧಿಕ ಅಮಾಯಕ ಭಾರತೀಯರು ಮೃತಪಟ್ಟರೆ, 1,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಭೀಕರ ಹತ್ಯಾಕಾಂಡ ನಡೆದು 106 ವರ್ಷ ಕಳೆದರೂ ಇಂದಿಗೂ ಭಾರತೀಯರಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಈ ಘಟನೆ ನೆನಪಿಸಿಕೊಂಡರೆ ಪಂಜಾಬಿಗರು ಈಗಲೂ ನಿದ್ದೆಯಲ್ಲಿ ಬೆಚ್ಚಿಬೀಳುತ್ತಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಹುಮುಖ್ಯ ತಿರುವು ನೀಡಿದ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಇದೀಗ ಸಿನಿಮಾ ರೂಪದಲ್ಲಿ ತೆರೆಮೇಲೆ ಬಂದಿದೆ. ಅಕ್ಷಯ್ ಕುಮಾರ್-ಆರ್.ಮಾಧವನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ, ಕರಣ್ ಸಿಂಗ್ ತ್ಯಾಗಿ ನಿರ್ದೇಶನದ 'ಕೇಸರಿ ಚಾಪ್ಟರ್ 2' (Kesari Chapter 2 Movie) ಬಾಲಿವುಡ್ ಚಿತ್ರ ಏ. 18ರಂದು ರಿಲೀಸ್ ಆಗಿದ್ದು, ಇದು ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆಸಿದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ವಿರುದ್ದ ನ್ಯಾಯಾಲಯದಲ್ಲಿ ಹೋರಾಡಿದ ಅಪ್ರತಿಮ ದೇಶಭಕ್ತ, ಕೇರಳ ಮೂಲದ ವಕೀಲ ಚೆಟ್ಟೂರ್ ಶಂಕರನ್ ನಾಯರ್ (Chettur Sankaran Nair) ಅವರ ಸಾಹಸಗಾಥೆಯನ್ನು ಒಳಗೊಂಡಿದೆ. ಹಾಗಾರೆ ಏನಿದು ಜಲಿಯನ್ ವಾಲಾಭಾಗ್ ದುರಂತ? ಶಂಕರ್ ನಾಯರ್ ಹಿನ್ನೆಲೆ ಏನು ಎನ್ನುವ ವಿವರ ಇಲ್ಲಿದೆ.
ಬ್ರಿಟಿಷ್ ಸರ್ಕಾರವನ್ನು ನ್ಯಾಯಾಲಯದ ಕಟೆಕಟೆಗೆ ತಂದು ನಿಲ್ಲಿಸಿದ ಶಂಕರನ್ ನಾಯರ್ ಅವರ ಮರಿ ಮೊಮ್ಮಗ ರಘು ಪಲತ್ ಮತ್ತು ಅವರ ಪತ್ನಿ ಪುಷ್ಪಾ ಪಲತ್ ಬರೆದ ʼದಿ ಕೇಸ್ ದಾಟ್ ಶಾಕ್ ದ ಎಂಪೈರ್ (‘The Case That Shook the Empire’) ಕೃತಿಯನ್ನು ಆಧರಿಸಿ ಈ ಸಿನಿಮಾ ತಯಾರಿಸಲಾಗಿದೆ. ಹೇಗೆ ನಾಯರ್ ಏಕಾಂಗಿಯಾಗಿ ಬ್ರಿಟಿಷ್ ದುರಾಡಳಿತದ ವಿರುದ್ಧ ಹೋರಾಡಿದರು ಎನ್ನುವುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ನಿರಾಯುಧರಾಗಿದ್ದ ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದನ್ನು ಬಹಿರಂಗವಾಗಿ ಟೀಕಿಸಿದ್ದ ನಾಯರ್ ವಿರುದ್ದ ಮಾನನಷ್ಟ ಮೊಕ್ಕದ್ದಮೆ ಹೂಡಲಾಗಿತ್ತು. ಇದನ್ನು ನಾಯರ್ ದಿಟ್ಟವಾಗಿ ಎದುರಿಸಿದ್ದರು. ಇದನ್ನು ಕೇಸರಿ ಚಾಪ್ಟರ್ ಸಿನಿಮಾದಲ್ಲಿ ವಿವರಿಸಲಾಗಿದೆ.
ಶಂಕರನ್ ನಾಯರ್ ಅವರ ಹಿನ್ನೆಲೆಯನ್ನು ನೋಡುವ ಮುನ್ನ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಹೇಗಾಯ್ತು ಎನ್ನುವುದನ್ನು ತಿಳಿಯಬೇಕು.

ಏನಿದು ಜಲಿಯನ್ ವಾಲಾಭಾಗ್ ಹತ್ಯಾಕಾಂಡ?
1919ರಲ್ಲಿ ಬ್ರಿಟಿಷ್ ಸರ್ಕಾರವು ರೌಲಟ್ ಆ್ಯಕ್ಟ್ ಜಾರಿಗೊಳಿಸಿತು. ಇದರ ಪ್ರಕಾರ ಪೊಲೀಸರು ಕಾರಣವಿಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದಾಗಿತ್ತು. ಈ ಕಾಯ್ದೆಯಡಿ ಬ್ರಿಟಿಷ್ ಸರ್ಕಾರ ದೇಶಕ್ಕಾಗಿ ಹೋರಾಡುತ್ತಿದ್ದ ಸೈಫುದ್ದೀನ್ ಕಿಚ್ಲೆವ್ ಮತ್ತು ಸತ್ಯಪಾಲ್ ಅವರನ್ನು ಬಂಧಿಸಿತು.
ಬ್ರಿಟಿಷರ ಈ ನಡೆಯನ್ನು ವಿರೋಧಿಸಿ 1919ರ ಏ. 13ರಂದು ಸಾವಿರಾರು ಸಂಖ್ಯೆಯ ಭಾರತೀಯರು ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಬಳಿಯ ಜಲಿಯಲ್ ವಾಲಾಭಾಗ್‌ನಲ್ಲಿ ಗುಂಪುಗೂಡಿದರು. ಇದು 3 ಕಡೆಗಳಲ್ಲಿಯೂ ಕಟ್ಟಡ ಸುತ್ತುವರಿದರುವ ಮೈದಾನವಾಗಿದ್ದು, ಒಂದು ಕಡೆ ಮಾತ್ರ ಓಡಾಲು ದಾರಿ ಹೊಂದಿದೆ. ಸಾವಿರಾರು ಮಂದಿ ಶಾಂತಿಯುತವಾಗಿ ಪ್ರತಿಭಟನೆ ನಡೆಸತೊಡಗಿದರು.
ಆ ವೇಳೆ ಅಲ್ಲಿಗೆ ಆಗಮಿಸಿದ ಬ್ರಿಟಿಷ್ ಜನರಲ್ ಡಯರ್ ಹೊರ ಹೋಗಲಿರುವ ಇದ್ದ ಏಕೈಕ ದಾರಿಯನ್ನೂ ಬಂದ್ ಮಾಡಿ ಗುಂಡಿನ ಮಳೆಗೆರೆದ. ನಿರಂತರವಾಗಿ ಸುಮಾರು 10 ನಿಮಿಷ ಈ ಗುಂಡಿನ ದಾಳಿ ನಡೆಯಿತು. ಈ ವೇಳೆ ಮಕ್ಕಳು, ಮಹಿಳೆಯರು ಸೇರಿ ನಿರಾಯುಧರಾಗಿದ್ದ ಸುಮಾರು 1,500 ಮಂದಿ ಪ್ರಾಣ ಕಳೆದುಕೊಂಡರೆ, ಸುಮಾರು 1,200 ಮಂದಿ ಗಾಯಗೊಂಡರು. ಬ್ರಿಟಿಷ್ ಸರ್ಕಾರ ಮೃತಪಟ್ಟವರು 400 ಮಂದಿ ಮಾತ್ರ ಎಂದು ಹೇಳಿದ್ದರೂ ಬಳಿಕ ಅದು ಸುಳ್ಳು ಎನ್ನುವುದು ಸಾಬೀತಾಯ್ತು. ಈ ಕೃತ್ಯವನ್ನು ಖಂಡಿಸಿದ ವಕೀಲ ಶಂಕರ್‌ನ್ ನಾಯರ್ ಇದನ್ನು ತಮ್ಮ ಕೃತಿಯಲ್ಲಿ ಬರೆದಿದ್ದಲ್ಲದೆ, ನ್ಯಾಯಾಲಯದ ಮೊರೆ ಹೋದರು.
ಈ ಸುದ್ದಿಯನ್ನೂ ಓದಿ: ಜಲಿಯನ್ ವಾಲಾಭಾಗ್ ಹತ್ಯಾಕಾಂಡ ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಶಂಕರನ್ ನಾಯರ್ ಹೋರಾಟ ಸ್ಮರಿಸಿದ ಮೋದಿ
ಶಂಕರನ್ ನಾಯರ್ ಹಿನ್ನೆಲೆ
ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಂಕರದ ಮಮ್ಮಾಯಿಲ್ ರಾಮುಣ್ಣಿ ಪಣಿಕ್ಕರ್ ಮತ್ತು ಪಾರ್ವತಿ ಅಮ್ಮ ಚೆಟ್ಟೂರ್ ಎಂಬ ಶ್ರೀಮಂತ ದಂಪತಿ ಮಗನಾಗಿ 1857ರ ಜು. 11ರಂದು ಶಂಕರನ್ ನಾಯರ್ ಜನಿಸಿದರು. 1877ರಲ್ಲಿ ಅವರು ತಮ್ಮ ಕಲಾ ಪದವಿಯನ್ನು ಪಡೆದ ನಂತರ ಮತ್ತೆ 2 ವರ್ಷ ಮದ್ರಾಸ್ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕಾನೂನು ಪದವಿ ಪಡೆದರು.
1880ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. 1902ರಲ್ಲಿ ವೈಸರಾಯ್ ಲಾರ್ಡ್ ಕರ್ಜನ್ ಅವರನ್ನು ರೇಲಿ ವಿಶ್ವವಿದ್ಯಾಲಯ ಆಯೋಗಕ್ಕೆ ಕಾರ್ಯದರ್ಶಿಯಾಗಿ ನೇಮಿಸಿದರು. 1908ರವರೆಗೆ ನಾಯರ್ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿದ್ದಲ್ಲದೇ ಹಂಗಾಮಿ ನ್ಯಾಯಾಧೀಶರಾದರು. 1908ರಿಂದ 1915ರವರೆಗೆ ಅವರು ಮದ್ರಾಸ್‌ನ ಹೈಕೋರ್ಟ್‌ನಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರ್ಕಾರ ಅವರಿಗೆ 1912ರಲ್ಲಿ ನೈಟ್ ಪದವಿ ನೀಡಿತು.
ಬ್ರಿಟಿಷ್ ಸರ್ಕಾರದ ವೈಸ್‌ರಾಯ್ ಕಾರ್ಯಕಾರಿ ಮಂಡಳಿಯ ಏಕೈಕ ಭಾರತೀಯ ಸದಸ್ಯರಾದರು. ಹೀಗೆ ಬ್ರಿಟಿಷ್ ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಶಂಕರ್ ನಾಯರ್ ಅವರ ಜೀವನದ ದಿಕ್ಕನ್ನೇ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಬದಲಾಯಿಸಿಬಿಟ್ಟಿತು. ಅದಾದ ಬಳಿಕ ಅವರು ಹುದ್ದೆಗೆ ರಾಜೀನಾಮೆ ಸಲ್ಲಿಸಿ ಬ್ರಿಟಿಷ್ ಸರ್ಕಾರದ ಈ ಕೃತ್ಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.
ಈ ಹತ್ಯಾಕಾಂಡದ ತಪ್ಪಿತಸ್ಥ ಜನರಲ್ ಡಯರ್‌ನನ್ನು ಬ್ರಿಟಿಷ್ ಆಡಳಿತವು ಸಮರ್ಥಿಸಿದಾಗ, ನಾಯರ್ ಇದನ್ನು ವಿರೋಧಿಸಿದರು. ಜತೆಗೆ ಬ್ರಿಟಿಷ್ ವ್ಯವಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಹೂಡಿದರು. ಲಂಡನ್‌ನಲ್ಲಿ ನಡೆದ ವಿಚಾರಣೆಯಲ್ಲಿ ನಾಯರ್ ಬ್ರಿಟಿಷ್ ಆಳ್ವಿಕೆಯ ವಿರುದ್ಧ ತಮ್ಮ ಹೋರಾಟ ನಡೆಸಿದರು. ಕೊನೆಗೆ ನಿರೀಕ್ಷೆಯಂತೆಯೇ ಅವರ ವಿರುದ್ಧ ತೀರ್ಪು ಪ್ರಕಟಗೊಂಡಾಗ 500 ಪೌಂಡ್‌ಗಳ ದಂಡವನ್ನು ಪಾವತಿಸಲು ನಿರ್ಧರಿಸಿದರೇ ವಿನಾಃ ಕ್ಷಮೆ ಕೋರಲು ಮುಂದಾಗಲಿಲ್ಲ. ನಾಯರ್ 1934ರ ಏ. 24ರಂದು ನಿಧನ ಹೊಂದಿದರು. ಅವರ ಈ ಸಾಹಸಗಾಥೆ, ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ ರೀತಿಯನ್ನು ʼಕೇಸರಿ ಚಾಪ್ಟರ್ 2ʼ ಸಿನಿಮಾದಲ್ಲಿ ವಿವರಿಸಲಾಗಿದೆ.

ಅಕ್ಷಯ್ ಕುಮಾರ್‌ಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ?
ಸದ್ಯ ಚಿತ್ರಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಂಕರನ್ ನಾಯರ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಜೀವಿಸಿದ್ದು, ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿ ಪಕ್ಕಾ ಎನ್ನಲಾಗುತ್ತಿದೆ. ಕಾಮಿಡಿ, ಆ್ಯಕ್ಷನ್, ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಅಕ್ಷಯ್ ಕುಮಾರ್ ಸದ್ಯ ದೇಶಪ್ರೇಮ ಸಾರುವ, ಪ್ರಯೋಗಾತ್ಮಕ ಚಿತ್ರಗಳಲ್ಲಿ ಆಯ್ದುಕೊಳ್ಳುತ್ತಿದ್ದಾರೆ. ʼಏರ್‌ಲಿಫ್ಟ್ʼ, ʼಜಾಲಿ ಎಲ್‌ಎಲ್‌ಬಿ 2ʼ, ʼಟಾಯ್ಲೆಟ್: ಏಕ್ ಪ್ರೇಮ್ ಕಥಾʼ, ʼಪ್ಯಾಡ್ ಮ್ಯಾನ್ʼ, ʼಗೋಲ್ಡ್ʼ, ʼಕೇಸರಿʼ, ʼಮಿಷನ್ ಮಂಗಲ್ʼ, ʼಸಾಮ್ರಾಟ್ ಪೃಥ್ವಿರಾಜ್ʼ, ʼಓ ಮೈ ಗಾಡ್ 2ʼ, ʼಸ್ಕ್ರೈ ಫೋರ್ಸ್ʼ ಇತ್ಯಾದಿ ಚಿತ್ರ ಇದಕ್ಕೆ ಉದಾಹರಣೆ. ಈ ಸಾಲಿಗೆ ಇದೀಗ ʼಕೇಸರಿ ಚಾಪ್ಟರ್ 2ʼ ಕೂಡ ಸೇರ್ಪಡೆಯಾಗಿದೆ.
ಇನ್ನು ಈ ಚಿತ್ರದಲ್ಲಿ ಆರ್.ಮಾಧವನ್, ಅನನ್ಯಾ ಪಾಂಡೆ ಮತ್ತಿತರರು ನಟಿಸಿದ್ದಾರೆ. ಆರ್.ಮಾಧವನ್ ಬ್ರಿಟಿಷ್ ವಕೀಲ ನೆವಿಲ್ಲೆ ಎಂಸಿಕಿನ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧವನ್ ಮತ್ತು ಅಕ್ಷಯ್ ಕುಮಾರ್ ಜಿದ್ದಿಗೆ ಬಿದ್ದವರಂತೆ ಅಭಿನಯಿಸಿದ್ದು, ಮತ್ತೊಮ್ಮೆ ದೇಶದ ಎದುರು ಇತಿಹಾಸದ ಪುಟ ತೆರೆದುಕೊಂಡಿದೆ.