ʼಮದರಾಸಿʼ ಚಿತ್ರಕ್ಕೂ ಮೊದಲೇ ತೆರೆ ಕಾಣಲಿದೆ ರುಕ್ಮಿಣಿ ವಸಂತ್ ನಟನೆಯ ಮತ್ತೊಂದು ತಮಿಳು ಸಿನಿಮಾ; ವಿಜಯ್ ಸೇತುಪತಿ ಜತೆಗಿನ ʼಏಸ್ʼ ರಿಲೀಸ್ ಡೇಟ್ ಅನೌನ್ಸ್
Rukmini Vasanth: ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಇದೀಗ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ಈ ವರ್ಷವೇ ಅವರು ನಟಿಸುತ್ತಿರುವ 2 ತಮಿಳು ಸಿನಿಮಾಗಳು ತೆರೆಗೆ ಬರಲಿವೆ. ಮುಂದಿನ ತಿಂಗಳು ವಿಜಯ್ ಸೇತುಪತಿ ಜತೆಗಿನ ʼಏಸ್ʼ ರಿಲೀಸ್ ಆದರೆ ಸೆ. 5ರಂದು ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಕಾಣಿಸಿಕೊಂಡ ʼಮದರಾಸಿʼ ಬಿಡುಗಡೆಯಾಗಲಿದೆ.

ವಿಜಯ್ ಶೇತುಪತಿ-ರುಕ್ಮಿಣಿ ವಸಂತ್.

ಚೆನ್ನೈ: 2023ರಲ್ಲಿ ತೆರೆಕಂಡ, ಸ್ಯಾಂಡಲ್‌ವುಡ್ ನಿರ್ದೇಶಕ ಹೇಮಂತ್ ರಾವ್ ಆ್ಯಕ್ಷನ್ ಕಟ್ ಹೇಳಿದ, ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗದಾಚೆ ಎಲ್ಲೋ ಸೈಡ್ ಎ', 'ಸೈಡ್ ಬಿ' ಚಿತ್ರದ ಮೂಲಕ ಗಮನ ಸೆಳೆದ ರುಕ್ಮಿಣಿ ವಸಂತ್ (Rukmini Vasanth) ಸದ್ಯ ಪರಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಟಾಲಿವುಡ್‌ಗೆ ಕಾಲಿಟ್ಟ ಅವರು ಇದೀಗ ಒಂದಲ್ಲ 2 ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷವೇ ಈ ಎರಡೂ ಚಿತ್ರಗಳು ತೆರೆಕಾಣಲಿವೆ. ಕಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಿವಕಾರ್ತಿಕೇಯನ್ ನಟನೆಯ ʼಮದರಾಸಿʼ (Madharasi) ಮತ್ತು ವಿಜಯ್ ಸೇತುಪತಿ (Vijay Sethupathi) ಅಭಿನಯದ ʼಏಸ್ʼ (Ace) ಸಿನಿಮಾಗಳಲ್ಲಿ ನಾಯಕಿಯಾಗಿ ರುಕ್ಮಣಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ʼಮದರಾಸಿʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು. ಇದೀಗ ʼಏಸ್ʼ ಸಿನಿಮಾ ಕೂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಆರುಮುಗ ಕುಮಾರ್ ನಿರ್ದೇಶನದ ʼಏಸ್ʼ ಚಿತ್ರದಲ್ಲಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮೇ 23ರಂದು ಇದು ತೆರೆಗೆ ಬರಲಿದೆ. ಇಸ್ಟೇಟ್ ಕಾರ್ಡ್‌ಗಳ ಹಿನ್ನಲೆಯಲ್ಲಿ ವಿಜಯ್ ಸೇತುಪತಿ ಗನ್ ಹಿಡಿದಿರುವ ಪೋಸ್ಟರ್ ಇದಾಗಿದ್ದು, ಆ್ಯಕ್ಷನ್ ಪ್ಯಾಕ್ಟ್ ಚಿತ್ರ ಎನ್ನುವ ಸೂಚನೆ ಸಿಕ್ಕಿದೆ.
ʼಏಸ್ʼ ಚಿತ್ರದ ಹೊಸ ಪೋಸ್ಟರ್:
ಈ ಸುದ್ದಿಯನ್ನೂ ಓದಿ: Madharasi Movie: ಕಾಲಿವುಡ್‌ಗೂ ಬರಲಿದೆ ರುಕ್ಮಿಣಿ ʼವಸಂತʼ ಕಾಲ; ಸ್ಯಾಂಡಲ್‌ವುಡ್ ಪುಟ್ಟಿಯ ಮೊದಲ ತಮಿಳು ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಈ ಚಿತ್ರದ ಮುಖ್ಯ ಭಾಗವನ್ನು ಮಲೇಷ್ಯಾದಲ್ಲಿ ಚಿತ್ರೀಕರಿಸಲಾಗಿದೆ. ರುಕ್ಮಿಣಿ ವಸಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಡಿಸೆಂಬರ್‌ನಲ್ಲಿ ಚಿತ್ರತಂಡ ನಾಯಕಿಯ ಪಾತ್ರವನ್ನು ಪರಿಚಯಿಸುವ ಟೀಸರ್ ರಿಲೀಸ್ ಮಾಡಿತ್ತು. ಇದರಲ್ಲಿ ರುಕ್ಮಿಣಿ ಮಲೇಷ್ಯಾದಲ್ಲಿ ಜನಿಸಿದ ತಮಿಳು ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಬಹಿರಂಗವಾಗಿತ್ತು. ಈ ಸಿನಿಮಾದಲ್ಲಿ ರುಕ್ಮಿಣಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ರುಕ್ಕು ಆಗಿ ಕಾಣಿಸಿಕೊಳ್ಳುತ್ತಿರುವ ರುಕ್ಮಿಣಿ ಅವರ ಪಾತ್ರದ ಝಲಕ್ ಟೀಸರ್‌ನಲ್ಲಿ ಅನಾವರಣಗೊಂಡು ಸಾಕಷ್ಟು ಗಮನ ಸೆಳೆದಿತ್ತು.
ಇನ್ನು ವಿಜಯ್ ಸೇತುಪತಿ ಅವರ ಪಾತ್ರದ ಗುಟ್ಟು ಬಿಟ್ಟುಕೊಡುವ ಟೀಸರ್ ಅನ್ನು ಜನವರಿಯಲ್ಲಿ ಹೊರ ತರಲಾಗಿತ್ತು. ಆ ಮೂಲಕ ವಿಜಯ್ ಬೋಲ್ಡ್ ಕಣ್ಣನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಬಹಿರಂಗವಾಗಿತ್ತು. ಸಾಂಪ್ರದಾಯಿಕ ಉಡುಗೆ ಧರಿಸಿ ಅವರು ವಿಮಾನ ನಿಲ್ದಾಣದಲ್ಲಿ ನಡೆದುಕೊಂಡು ಹೋಗುವುದು ಈ ಪುಟ್ಟ ವಿಡಿಯೊದಲ್ಲಿ ಕಂಡು ಬಂದಿತ್ತು. ಆ ಮೂಲಕ ಇದು ಆ್ಯಕ್ಷನ್, ಸೆಂಟಿಮೆಂಟ್‌ಗಳನ್ನು ಒಳಗೊಂಡ ಚಿತ್ರ ಎನ್ನುವುದು ಗೊತ್ತಾಗಿದೆ. ಈ ಎಲ್ಲ ಕಾರಣಗಳಿಂದ ಇದು ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರುಕ್ಮಿಣಿ, ವಿಜಯ್ ಅವರ ಅಭಿನಯ ಸಾಮರ್ಥ್ಯವನ್ನು ಹೊಗಳಿದ್ದರು. ʼʼವಿಜಯ್ ಸೇತುಪತಿ ಅವರ ಜತೆಗೆ ನನಗೆ ತುಂಬ ದೃಶ್ಯಗಳಿವೆ. ಅವರಂತಹ ಅದ್ಭುತ ನಟನೊಂದಿಗೆ ತೆರೆ ಹಂಚಿಕೊಳ್ಳುವುದು ಉತ್ತಮ ಅನುಭವ. ವಿಶೇಷ ಎಂದರೆ ಇದರಲ್ಲಿ ನನಗೆ ಕಾಮಿಡಿ ದೃಶ್ಯಗಳೂ ಇವೆ. ಕಾಮಿಡಿ ಸೀನ್‌ಗಳಲ್ಲಿ ಅಭಿನಯಿಸಲು ಇದುವರೆಗೆ ನನಗೆ ಅವಕಾಶ ಸಿಕ್ಕಿರಲಿಲ್ಲʼʼ ಎಂದಿದ್ದರು.
4 ತಿಂಗಳ ಅಂತರದಲ್ಲಿ 2 ಚಿತ್ರಗಳು
ರುಕ್ಮಿಣಿ ಅವರ ಮತ್ತೊಂದು ತಮಿಳು ಚಿತ್ರ, ಎ.ಆರ್.ಮುರುಗದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಮದರಾಸಿʼ ಸೆ. 5ರಂದು ತೆರೆಗೆ ಬರಲಿದೆ. ಆ ಮೂಲಕ 4 ತಿಂಗಳ ಅಂತರದಲ್ಲಿ ರುಕ್ಮಿಣಿ ಅವರ 2 ಚಿತ್ರಗಳು ರಿಲೀಸ್ ಆದಂತಾಗುತ್ತದೆ. ʼಮದರಾಸಿʼ ಕೂಡ ಈಗಾಗಲೇ ನಿರೀಕ್ಷೆ ಹುಟ್ಟು ಹಾಕಿದೆ.