Madharasi Movie: ಕಾಲಿವುಡ್ಗೂ ಬರಲಿದೆ ರುಕ್ಮಿಣಿ ʼವಸಂತʼ ಕಾಲ; ಸ್ಯಾಂಡಲ್ವುಡ್ ಪುಟ್ಟಿಯ ಮೊದಲ ತಮಿಳು ಚಿತ್ರದ ರಿಲೀಸ್ ಡೇಟ್ ಅನೌನ್ಸ್
Rukmini Vasanth: ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಸ್ಯಾಂಡಲ್ವುಡ್ ಜತೆಗೆ ಪರಭಾಷಿಕರನ್ನೂ ಸೆಳೆದ ರುಕ್ಮಿಣಿ ವಸಂತ್ ಸದ್ಯ ತೆಲುಗಿನಲ್ಲಿಯೂ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ ಆ್ಯಕ್ಷನ್ ಹೇಳುತ್ತಿರುವ ʼಮದರಾಸಿʼ ತಮಿಳು ಚಿತ್ರದಲ್ಲಿ ಶಿವಕಾರ್ತಿಕೇಯನ್ಗೆ ಜೋಡಿಯಾಗಿ ರುಕ್ಮಿಣಿ ನಟಿಸುತ್ತಿದ್ದು, ರಿಲೀಸ್ ಡೇಟ್ ಅನೌನ್ಸ್ ಆಗಿದೆ.

ರುಕ್ಮಿಣಿ ವಸಂತ್.


ಕಾಲಿವುಡ್ಗೆ ಕಾಲಿಟ್ಟ ಕರುನಾಡ ಪುಟ್ಟಿ
ಚೆನ್ನೈ: 2019ರಲ್ಲಿ ತೆರೆಕಂಡ ʼಬೀರ್ಬಲ್ ತ್ರಯಾಲಜಿ ಕೇಸ್ 1ʼ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ರುಕ್ಮಿಣಿ ವಸಂತ್ 2023ರಲ್ಲಿ ರಿಲೀಸ್ ಆದ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ ಎ ಮತ್ತು ಸೈಡ್ ಬಿ ಮೂಲಕ ಕನ್ನಡಿಗೆ ಮನೆ ಮಾತಾದರು. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ರುಕ್ಮಿಣಿ ಅವರ ಸಹಜಾಭಿನಯ ಪರ ಭಾಷಿಕರನ್ನೂ ಸೆಳೆಯಿತು. ಕಳೆದ ವರ್ಷ ತೆಲುಗಿಗೆ ಕಾಲಿಟ್ಟ ಅವರು ಈ ವರ್ಷ ಕಾಲಿವುಡ್ವೂ ಪ್ರವೇಶಿಸಿದ್ದಾರೆ.

ಶಿವಕಾರ್ತಿಕೇಯನ್ಗೆ ಜೋಡಿ
ರುಕ್ಮಿಣಿ ವಸಂತ್ ಕಾಲಿವುಡ್ಗೆ ಭರ್ಜರಿಯಾಗಿಯೇ ಕಾಲಿಟ್ಟಿದ್ದು, ತಮಿಳಿನ ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಮದರಾಸಿʼ ಚಿತ್ರದಲ್ಲಿ ಅವರು ಶಿವಕಾರ್ತಿಕೇಯನ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಶಿವಕಾರ್ತಿಕೇಯನ್ ಜನ್ಮದಿನದ ಪ್ರಯುಕ್ತ ಇತ್ತೀಚೆಗೆ ಹೊರಬಂದ ʼಮದರಾಸಿʼ ಸಿನಿಮಾದ ಆ್ಯಕ್ಷನ್ ಪ್ಯಾಕ್ಡ್ ಗ್ಲಿಂಪ್ಸ್ ಗಮನ ಸೆಳೆದಿದೆ.

ರಿಲೀಸ್ ಡೇಟ್
ಸೂಪರ್ ಹಿಟ್ ʼಅಮರನ್ʼ ಸಿನಿಮಾ ಬಳಿಕ ಶಿವಕಾರ್ತಿಕೇಯನ್ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಪ್ರಾಜೆಕ್ಟ್ ʼಮದರಾಸಿʼ. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಸೆ. 5ರಂದು ತೆರೆಗೆ ಬರಲಿದೆ. ತಮಿಳಿನ ಜತೆಗೆ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಬಹು ತಾರಾಗಣ
ವಿಶೇಷ ಎಂದರೆ ʼಮದರಾಸಿʼಯಲ್ಲಿ ಜನಪ್ರಿಯ ಕಲಾವಿದರ ದಂಡೇ ಇದೆ. ಬಾಲಿವುಡ್ನ ವಿದ್ಯುತ್ ಜಮ್ವಾಲ್ ಖಳನಾಯಕನಾಗಿ ತೊಡೆ ತಟ್ಟಿದ್ದು, ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎನ್. ಶ್ರೀ ಲಕ್ಷ್ಮೀ ಪ್ರಸಾದ್ ಅವರು ಶ್ರೀ ಲಕ್ಷ್ಮೀ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಮತ್ತೊಂದು ತಮಿಳು ಚಿತ್ರಕ್ಕೂ ನಾಯಕಿ
ʼಮದರಾಸಿʼ ಚಿತ್ರದ ಜತೆಗೆ ರುಕ್ಮಿಣಿ ಮತ್ತೊಂದು ತಮಿಳು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಕಾಲಿವುಡ್ನ ʼಏಸ್ʼ ಸಿನಿಮಾಕ್ಕೂ ಅವರು ಆಯ್ಕೆಯಾಗಿದ್ದಾರೆ. ಇದರಲ್ಲಿ ಅವರು ವಿಜಯ್ ಸೇತುಪತಿಗೆ ಜೋಡಿಯಾಗಿದ್ದಾರೆ. ಆರುಮುಗ ಕುಮಾರ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.