ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhargavastra: ಪಾಕಿಸ್ತಾನದ ಡ್ರೋನ್‌ ದಾಳಿ ತಡೆಯಲು ಭಾರತಕ್ಕೆ ಸಿಕ್ತು ಆನೆ ಬಲ; ‘ಭಾರ್ಗವಾಸ್ತ್ರ’ ಪ್ರಯೋಗ ಯಶಸ್ವಿ

ಭಾರತವು ಸ್ವದೇಶಿ ನಿರ್ಮಿತ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಆಯುಧಕ್ಕೆ ಭಾರ್ಗವಾಸ್ತ್ರ ಎಂದು ಹೆಸರಿಡಲಾಗಿದೆ. ಶತ್ರು ಪಡೆಯ ಡ್ರೋನ್‌ ದಾಳಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ‘ಭಾರ್ಗವಾಸ್ತ್ರ’ ಪ್ರಯೋಗ ಯಶಸ್ವಿ

Profile Ramesh B May 14, 2025 4:15 PM

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಬೆನ್ನು ಮೂಳೆ ಮುರಿದಿದ್ದು, ಸದ್ಯ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ತಿಳಿಯಾಗಿದೆ. ಹಾಗಿದ್ದೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಭಾರತವು ಸ್ವದೇಶಿ ನಿರ್ಮಿತ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ವ್ಯವಸ್ಥೆಯ (Counter drone system in hard kill mode) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಆಯುಧಕ್ಕೆ ಭಾರ್ಗವಾಸ್ತ್ರ (Bhargavastra) ಎಂದು ಹೆಸರಿಡಲಾಗಿದೆ.

ಭಾರ್ಗವಾಸ್ತ್ರ ಎನ್ನುವ ಈ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ಶತ್ರು ಪಡೆಯ ಡ್ರೋನ್‌ ದಾಳಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಭಾರತಕ್ಕೆ ಆನೆಬಲ ಬಂದಂತಾಗಿದೆ. ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ (Solar Defence and Aerospace Limited-SDAL) ಕಡಿಮೆ ವೆಚ್ಚದ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ಹೆಚ್ಚುತ್ತಿರುವ ಡ್ರೋನ್ ಬೆದರಿಕೆಯನ್ನು ಯಶಸ್ವಿಯಾಗಿ ಎದುರಿಸಲು ನೆರವಾಗುತ್ತದೆ.

ಭಾರ್ಗವಾಸ್ತ್ರ ಪ್ರಯೋಗದ ದೃಶ್ಯ



ಪ್ರಯೋಗ ಯಶಸ್ವಿ

ಈ ಕೌಂಟರ್-ಡ್ರೋನ್ ವ್ಯವಸ್ಥೆಯಲ್ಲಿ ಬಳಸಲಾದ ಮೈಕ್ರೋ ರಾಕೆಟ್‌ಗಳನ್ನು ಒಡಿಶಾದ ಗೋಪಾಲ್‌ಪುರದ ಸೀವರ್ಡ್ ಫೈರಿಂಗ್ ರೇಂಜ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ. ಮೇ 13ರಂದು ಸೇನಾ ವಾಯು ರಕ್ಷಣಾ (ಎಎಡಿ) ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 3 ಪ್ರಯೋಗಗಳನ್ನು ನಡೆಸಲಾಯಿತು.

2 ಸೆಕೆಂಡುಗಳ ಒಳಗೆ ಎರಡು ರಾಕೆಟ್‌ಗಳನ್ನು ಸಾಲ್ವೋ ಮೋಡ್‌ನಲ್ಲಿ ಹಾರಿಸುವ ಮೂಲಕ ಪ್ರಯೋಗ ನಡೆಸಲಾಯಿತು. ಎಲ್ಲ ನಾಲ್ಕು ರಾಕೆಟ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು ಮತ್ತು ನಿಗದಿತ ಗುರಿಯನ್ನು ತಲುಪಿದವು ಎಂದು ಮೂಲಗಳು ತಿಳಿಸಿವೆ. ಇದು ದೊಡ್ಡ ಪ್ರಮಾಣದ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನೆರವಾಗಲಿದೆ.

ಭಾರ್ಗವಸ್ತ್ರವು 2.5 ಕಿ.ಮೀ. ದೂರದಲ್ಲಿನ ಸಣ್ಣ ಡ್ರೋನ್‌ಗಳನ್ನು ಗುರುತಿಸುವ ಮತ್ತು ಧ್ವಂಸ ಮಾಡುವ ಸಾಮರ್ಥ್ಯಗಳನ್ನು ಹೊಂದಿದೆ. ಈ ವ್ಯವಸ್ಥೆಯು ಭವಿಷ್ಯದಲ್ಲಿ ಭಾರತದ ಡ್ರೋನ್ ವಿರೋಧಿ ಸಾಮರ್ಥ್ಯಗಳನ್ನು ಬಲಪಡಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜತೆಗೆ ತಂತ್ರಜ್ಞಾನ ಆಧಾರಿತ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಲು ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ತಜ್ಞರು ಊಹಿಸಿದ್ದಾರೆ.

ʼಮೇಕ್ ಇನ್ ಇಂಡಿಯಾʼ ಯೋಜನೆಯ ಭಾಗ

ಇದನ್ನು ʼಮೇಕ್ ಇನ್ ಇಂಡಿಯಾʼ ಯೋಜನೆಯ ಭಾಗವಾಗಿ ನಿರ್ಮಿಸಲಾಗಿದ್ದು, ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ. ಎತ್ತರದ ಪ್ರದೇಶಗಳೂ ಸೇರಿದಂತೆ ವೈವಿಧ್ಯಮಯ ಭೂಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಂತೆಯೂ ಇದನ್ನು ವಿನ್ಯಾಸಗೊಳಿಸಲಾಗಿದೆ.

ಆಪರೇಷನ್‌ ಸಿಂದೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪಾಕ್‌ ಹೆಚ್ಚಿನ ಸಂಖ್ಯೆಯಲ್ಲಿ ಡ್ರೋನ್‌ ಬಳಸಿತ್ತು. ಇವೆಲ್ಲವನ್ನೂ ಭಾರತ ಯಸಸ್ವಿಯಾಗಿ ಹಿಮ್ಮೆಟ್ಟಿಸಿದ್ದು, ಇದೀಗ ಡ್ರೋನ್‌ ತಡೆಗೆ ಮತ್ತೊಂದು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.