Online Gaming : ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಿಗೂ ಹರಡಿದ ಆನ್‌ಲೈನ್ ಗೇಮಿಂಗ್ ಭೂತ
ಮಾದಕ ವ್ಯಸಗಳ ಕುರಿತು ಹಾಗೂ ಬೆಟ್ಟಿಂಗ್ ದಂಧೆಯ ಮೇಲೆ ಸರ್ಕಾರ ಸಮರ ಸಾರಿದ ಬೆನ್ನಲ್ಲೇ ಆನ್‌ಲೈನ್ ಗೇಮಿಂಗ್ ಭೂತ ನಿಧಾನವಾಗಿ, ಗಟ್ಟಿಯಾಗಿ ಬೇರೂರಿದೆ. ಕಳೆದ ಎರಡು ವರ್ಷಗಳಿಂದ ಈಚೆಗೆ ಆನ್‌ಲೈನ್ ಗೇಮಿಂಗ್‌ಗೆ ಬಲಿಯಾಗಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.


ನವದೆಹಲಿ: ಮಾದಕ ವ್ಯಸಗಳ ಕುರಿತು ಹಾಗೂ ಬೆಟ್ಟಿಂಗ್ ದಂಧೆಯ ಮೇಲೆ ಸರ್ಕಾರ ಸಮರ ಸಾರಿದ ಬೆನ್ನಲ್ಲೇ ಆನ್‌ಲೈನ್ ಗೇಮಿಂಗ್ (Online Gaming) ಭೂತ ನಿಧಾನವಾಗಿ, ಗಟ್ಟಿಯಾಗಿ ಬೇರೂರಿದೆ. ಕಳೆದ ಎರಡು ವರ್ಷಗಳಿಂದ ಈಚೆಗೆ ಆನ್‌ಲೈನ್ ಗೇಮಿಂಗ್‌ಗೆ ಬಲಿಯಾಗಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಯಸ್ಸಿನ ಹಂಗಿಲ್ಲದೆ ಜನರು ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಮನೆ ಮಠ ಕಳೆದುಕೊಂಡು ಜನರು ಬೀದಿ ಪಾಲಾಗುತ್ತಿದ್ದಾರೆ. ಇತ್ತೀಚೆಗೆ ಆನ್‌ಲೈನ್ ಗೇಂಮಿಂಗ್‌ನಲ್ಲಿ ಕೋಟಿ ಗೆದ್ದು ವ್ಯಕ್ತಿಯೊಬ್ಬ ಮನೆ ಕಟ್ಟಿಸಿದ್ದೇನೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಕುರಿತು ಸಾಕಷ್ಟು ಚರ್ಚೆಗಳೂ ಕೂಡ ನಡೆದಿದ್ದವು. ಆದರೆ ಆ ಅದೃಷ್ಟ ಲಭಿಸುವವರ ಸಂಖ್ಯೆ ಎಷ್ಟು? ಏಕಾಏಕಿ ಕೋಟ್ಯಾಧಿಪತಿಗಳಾಗುವ ದುರಾಸೆಯಿಂದ ಜೀವನವನ್ನೇ ಹಾಳು ಮಾಡಿಕೊಂಡವರ ಸಂಖ್ಯೆಯನ್ನು ಗಮನಿಸಬೇಕಾಗುತ್ತದೆ.
ಈ ಗೇಮಿಂಗ್‌ಗಳು ಪ್ರಾರಂಭವಾಗಿದ್ದಾಗ ಕೆಲವೇ ಭಾಷೆಗಳಿಗೆ ಮಾತ್ರ ಸೀಮಿತವಾಗಿತ್ತು. ಹಿಂದಿ, ಇಂಗ್ಲೀಷ್, ಸೇರಿದಂತೆ ಕೆಲ ಭಾಷೆಗಳಲ್ಲಿ ಮಾತ್ರ ಇದನ್ನು ಆಡಬಹುದಾಗಿತ್ತು. ಆದರೆ ಇದರ ಜಾಲ ವಿಸ್ತ್ರತಗೊಂಡತೆ ಪ್ರಾದೇಶಿಕ ಭಾಷೆಗೂ ಇದರ ಜಾಲ ಹಬ್ಬಿದೆ. 70% ಕ್ಕಿಂತ ಹೆಚ್ಚು ಆನ್‌ಲೈನ್ ಗೇಮ್‌ಗಳು ಸ್ಥಳೀಯ ಭಾಷೆಗಳಲ್ಲಿ ದೊರಕುತ್ತವೆ. ಇದು ಭಾವನಾತ್ಮಕವಾಗಿ ಗ್ರಾಹಕರನ್ನು ಸೆಳೆಯುತ್ತದೆ.
ಭಾರತವು ಸುಮಾರು 550 ಮಿಲಿಯನ್ ಗೇಮಿಂಗ್ ಬಳಕೆದಾರರನ್ನು ಹೊಂದಿದ್ದು, ಇತ್ತೀಚೆಗೆ ವಿನ್‌ಝೋ ಇಂಟರಾಕ್ಟಿವ್ ಎಂಟರ್‌ಟೈನ್‌ಮೆಂಟ್ ಮತ್ತು ಇನ್ನೋವೇಶನ್ ಕೌನ್ಸಿಲ್ (ಐಇಐಸಿ) ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿದ ಇಂಡಿಯಾ ಗೇಮಿಂಗ್ ವರದಿಯ ಎರಡನೇ ಆವೃತ್ತಿಯ ಪ್ರಕಾರ, ಅವರಲ್ಲಿ ಹೆಚ್ಚಿನವರು ತಮ್ಮ ಸ್ಥಳೀಯ ಭಾಷೆಯಲ್ಲಿ ಆಟವಾಡಲು ಬಯಸುತ್ತಾರೆ ಎಂಬ ಅಂಶ ಹೊರಬಿದ್ದಿದೆ. ಭಾರತದಾದ್ಯಂತ ಆನ್‌ಲೈನ್ ವ್ಯವಹಾರ 20 ಸಾವಿರ ಕೋಟಿ ರೂ. ತಲುಪಿದೆ. 2024 ರಲ್ಲಿ ಸ್ಥಳೀಯ ಭಾಷೆಯಲ್ಲಿ ಗೇಮ್ ಡೌನ್‌ಲೋಡ್ ಮಾಡುವವರ ಸಂಖ್ಯೆ ಶೇ 5 ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಗೇಮಿಂಗ್ ಆಪ್ ಸಂಸ್ಥಾಪಕರು.
ಸರಣಿ ಆತ್ಮಹತ್ಯೆ
ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದವರು ವಿದ್ಯಾವಂತರೇ ಆಗಿದ್ದಾರೆ ಎನ್ನುತ್ತದೆ ವರದಿ. ಇವರು ಮಾನಸಿಕ ಸ್ಥೀಮಿತವನ್ನು ಕಳೆದುಕೊಂಡಿರುತ್ತಾರೆ. ಸದಾ ತಮ್ಮದೇ ಆದ ಪ್ರಪಂಚದಲ್ಲಿ ಮುಳುಗಿರುತ್ತಾರೆ ಎಂದು ಹಲವಾರ ಮನೋವೈದ್ಯರು ದೃಢಪಡಿಸಿದ್ದಾರೆ. ಈಗಾಗಲೇ ಈ ಚಟಕ್ಕೆ ಬಿದ್ದು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಆಂಧ್ರಪ್ರದೇಶ, ತೆಲಂಗಾಣ ಸೇರಿಂದಂತೆ ಹಲವು ರಾಜ್ಯಗಳು ಆನ್‌ಲೈನ್ ಜೂಜಾಟವನ್ನು ನಿಷೇಧಿಸಿವೆ. ಈ ಕುರಿತು ಕರ್ನಾಟಕ ಸರ್ಕಾರವೂ ಕ್ರಮ ಕೈಗೊಳ್ಳಲು ಮುಂದಾಗಿದೆ. ಇತ್ತೀಚೆಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ (betting) ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಹರಡಿಕೊಳ್ಳುತ್ತಿದೆ. ಹೀಗಾಗಿ ಈ ಆ್ಯಪ್ಗಳಿಗೆ ಶೀಘ್ರದಲ್ಲೇ ಹೊಸ ಮಾನದಂಡ ತರಲಾಗುವುದು ಎಂದು ಹೇಳಿದ್ದರು. ಈಗಾಗಲೇ ಕಾಯ್ದೆಗಳು ಇವೆ. ಆದರೆ ಕಾಯ್ದೆಗಳನ್ನ ಸಮರ್ಪಕವಾಗಿ ಜಾರಿ ಮಾಡಬೇಕು ಮತ್ತು ಹೆಚ್ಚುವರಿ ಕಾಯ್ದೆಗಳನ್ನ ಸೇರಿಸುವ ಬಗ್ಗೆ ಚರ್ಚೆ ನಡೆದಿದೆ. ಗೇಮಿಂಗ್ ಇಂಡಸ್ಟ್ರಿ ಮತ್ತು ಸಾರ್ವಜನಿಕರು, ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯಿಂದ ಸಲಹೆ ಪಡೆದು ಒಂದು ಡ್ರಾಫ್ಟ್ ರೆಡಿ ಮಾಡಲು ಗೃಹ ಸಚಿವರು ಆದೇಶ ನೀಡಿದ್ದಾರೆ ಎಂದು ಸೂಚನೆ ನೀಡಿದ್ದರು.
ಈ ಸುದ್ದಿಯನ್ನೂ ಓದಿ: Priyank Kharge: ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಕಡಿವಾಣಕ್ಕೆ ನೂತನ ಕಾನೂನು: ಪ್ರಿಯಾಂಕ್ ಖರ್ಗೆ
ಸೆಲೆಬ್ರಿಟಿಗಳಿಗೆ ನೋಟೀಸ್
ಬೆಟ್ಟಿಂಗ್ ಆಪ್ ಹಾಗೂ ಈ ತರಹದ ಗೇಮಿಂಗ್ ಆಪ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವವರಿಗೆ ಕೋರ್ಟ್ ಇದೀಗ ನೋಟೀಸ್ ನೀಡಿದೆ. ನೀವು ಅಮಾಯಕರ ದಾರಿ ತಪ್ಪಿಸುತ್ತೀದ್ದೀರಿ ಎಂದು ಛೀಮಾರಿ ಹಾಕಿದೆ. ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.