ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ಕಾಂಗ್ರೆಸ್ ದೇಶದ್ರೋಹಿ ಮಾತ್ರವಲ್ಲ ರಾಮದ್ರೋಹಿ ಕೂಡ: ಬಿಜೆಪಿ ಆಕ್ರೋಶ

ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶ್ರೀರಾಮ ಸೇರಿದಂತೆ ಭಾರತೀಯ ದೇವತೆಗಳನ್ನು ಕಾಲ್ಪನಿಕ ವ್ಯಕ್ತಿಗಳೆಂದು ಹೇಳಿದ್ದಾರೆ. ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ರಾಮ ಕಾಲ್ಪನಿಕ ಎಂದ ರಾಹುಲ್ ವಿರುದ್ಧ ಬಿಜೆಪಿ ವಾಗ್ದಾಳಿ

ರಾಹುಲ್‌ ಗಾಂಧಿ.

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದ ಬಳಿಕ ಕಾಂಗ್ರೆಸ್ ನಾಯಕರ ನೀಡುತ್ತಿರುವ ಕೆಲವೊಂದು ಹೇಳಿಕೆಗಳು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಶ್ರೀರಾಮನನ್ನು ಅವಮಾನಿಸಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶ್ರೀರಾಮನನ್ನು ಕಾಲ್ಪನಿಕ ಎಂದು ಕರೆದಿರುವ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಹಿಂದೂಗಳನ್ನು ಮತ್ತು ಶ್ರೀರಾಮನನ್ನು ಅವಮಾನಿಸುವುದು ಕಾಂಗ್ರೆಸ್‌ನ ಚಾಳಿ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶ್ರೀರಾಮ ಸೇರಿದಂತೆ ಭಾರತೀಯ ದೇವತೆಗಳನ್ನು ಕಾಲ್ಪನಿಕ ವ್ಯಕ್ತಿಗಳೆಂದು ಹೇಳಿದ್ದರು. ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ವೈರಲ್ ಆಗಿರುವ ವಿಡಿಯೊ ಕ್ಲಿಪ್‌ನಲ್ಲಿ ರಾಹುಲ್ ಗಾಂಧಿ, ಎಲ್ಲರೂ ಕಾಲ್ಪನಿಕ ವ್ಯಕ್ತಿಗಳು. ಶ್ರೀರಾಮನು ಆ ರೀತಿಯ ವ್ಯಕ್ತಿ. ಅಲ್ಲಿ ಅವನು ಕ್ಷಮಿಸುತ್ತಿದ್ದನು, ಅವನು ಕರುಣಾಮಯಿಯಾಗಿದ್ದನು ಎಂದು ಹೇಳಿರುವುದು ಸೆರೆಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವಾರು ಭಾರತೀಯ ಜನತಾ ಪಕ್ಷದ ನಾಯಕರು ರಾಹುಲ್ ಗಾಂಧಿಯವರನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. ಈ ವಿಡಿಯೋದ ಒಂದು ಭಾಗವನ್ನು ಹಂಚಿಕೊಂಡ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಭಗವಾನ್ ರಾಮನ ಅಸ್ತಿತ್ವವನ್ನು ಅನುಮಾನಿಸಿದ್ದಕ್ಕಾಗಿ ದೇಶವು ಗಾಂಧಿಯವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ರಾಷ್ಟ್ರ ದ್ರೋಹಿ ಮಾತ್ರವಲ್ಲ ರಾಮ್ ದ್ರೋಹಿ ಕೂಡ. ರಾಹುಲ್ ಗಾಂಧಿ ಅವರು ಪ್ರಭು ಶ್ರೀರಾಮನನ್ನು ಕಲ್ಪನಿಕ ಎಂದು ಹೇಳುತ್ತಾರೆ. ಅವರು ರಾಮ ಮಂದಿರವನ್ನು ವಿರೋಧಿಸಿದರು ಮತ್ತು ಪ್ರಭು ರಾಮನ ಅಸ್ತಿತ್ವವನ್ನು ಸಹ ಅನುಮಾನಿಸಿದ್ದಾರೆ. ರಾಮ ವಿರೋಧಿ ಮತ್ತು ಹಿಂದೂ ವಿರೋಧಿ ಪಕ್ಷದ ಮನಸ್ಥಿತಿಯ ದೊಡ್ಡ ಸೂಚನೆ ಇದು ಎಂದು ಪೂನಾವಾಲಾ ಹೇಳಿದರು.

ಕಾಂಗ್ರೆಸ್ ಶ್ರೀರಾಮನನ್ನು ಪ್ರಶ್ನಿಸುತ್ತಿದೆ, ರಾಮಮಂದಿರವನ್ನು ವಿರೋಧಿಸುತ್ತಿದೆ ಮತ್ತು ಹಿಂದೂ ಭಯೋತ್ಪಾದನೆಯಂತಹ ಪದಗಳನ್ನು ಬಳಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧಿ ರಾಮಸೇತುವನ್ನು ಒಡೆಯಲು ಬಳಸಿದ ಭಾಷೆ ಇದು. ಕಾಂಗ್ರೆಸ್ ಹಿಂದಿ ವಿರೋಧಿ ಮತ್ತು ಭಾರತ ವಿರೋಧಿ ಎಂಬುದಕ್ಕೆ ಇದು ದೊಡ್ಡ ಉದಾಹರಣೆ. ದೇಶದ ಜನರು ಇದಕ್ಕಾಗಿ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದರು.



ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಎಕ್ಸ್‌ನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯ ಕ್ಲಿಪ್ ಅನ್ನು ಹಂಚಿಕೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಶ್ರೀರಾಮನ ಬಗ್ಗೆ ಐತಿಹಾಸಿಕ ಪುರಾವೆಗಳಿಲ್ಲ ಎಂದು ಹೇಳುವ ಅಫಿಡವಿಟ್ ಸಲ್ಲಿಸಿತ್ತು. ಅವರ ಮಿತ್ರಪಕ್ಷ ಡಿಎಂಕೆ ಶ್ರೀರಾಮನನ್ನು ಅಣಕಿಸುತ್ತಾ, ರಾಮನು ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಿದನು ಅಥವಾ ಅವನು ಯಾವ ಸೇತುವೆಯನ್ನು ನಿರ್ಮಿಸಿದನು ಎಂದು ಹೇಳಿ ಇದಕ್ಕೆ ಇತಿಹಾಸವಿಲ್ಲ ಎಂದಿದ್ದರು ಎಂದು ಬರೆದಿದ್ದಾರೆ.

ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಖ್ ವಿದ್ಯಾರ್ಥಿಯೊಬ್ಬ ರಾಹುಲ್ ಗಾಂಧಿಯನ್ನು ಪ್ರಶ್ನಿಸಿರುವ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ.



ಈ ಕ್ಲಿಪ್‌ನಲ್ಲಿ ವಿದ್ಯಾರ್ಥಿಯೊಬ್ಬ ಮಾತನಾಡಿ ರಾಜಕೀಯವು ಹೇಗೆ ನಿರ್ಭೀತವಾಗಿರಬೇಕು ಎಂಬುದರ ಕುರಿತು ನೀವು ಹೇಳಿದಿರಿ. ಭಯಪಡುವಂಥದ್ದೇನೂ ಇರಬಾರದು. ಆದರೆ ನಾವು ಕಡ ಧರಿಸಲು, ಪೇಟ ಕಟ್ಟಲು ಮಾತ್ರ ಬಯಸುವುದಿಲ್ಲ. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಅವಕಾಶ ನೀಡದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಬಯಸುತ್ತೇವೆ ಎಂದು ಹೇಳಿ, ಕಾಂಗ್ರೆಸ್ ಸಿಖ್ ಧ್ವನಿಗಳನ್ನು ನಿರ್ಲಕ್ಷಿಸುತ್ತಿದೆ ಮತ್ತು ಸಜ್ಜನ್ ಕುಮಾರ್‌ ಅವರಂತಹ 1984ರ ಗಲಭೆ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.

ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. 1980ರ ದಶಕದಲ್ಲಿ ನಡೆದದ್ದು ತಪ್ಪು ಎಂದು ಹೇಳಿದರು.