Acid Attack: ಮದುವೆ ನಿಶ್ಚಯವಾಗಿದ್ದ ಯುವತಿ ಮೇಲೆ ಆ್ಯಸಿಡ್ ದಾಳಿ
ಮದುವೆಯ ಕೆಲವೇ ದಿನಗಳ ಮೊದಲು ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್‌ನಿಂದ ಮನೆಗೆ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಯುವಕನೊಬ್ಬ ಆಸಿಡ್ ಎರಚಿದ್ದಾನೆ. ನೀನು ನನ್ನವಳಾಗದೆ ಇದ್ದರೆ ಬೇರೆಯವರನ್ನು ಮದುವೆಯಾಗಲೂ ಬಿಡುವುದಿಲ್ಲ ಎಂದು ಯುವಕ ಆಕೆಗೆ ಹೇಳಿದ್ದಾನೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ.

ಲಖನೌ: ಮದುವೆಯ ಕೆಲವೇ ದಿನಗಳ ಮೊದಲು ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿದ (Acid Attack) ಪ್ರಕರಣ ಉತ್ತರ ಪ್ರದೇಶದ (Uttar Pradesh) ಮೌ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್‌ನಿಂದ ಮನೆಗೆ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದ ಯುವಕನೊಬ್ಬ ಆ್ಯಸಿಡ್ ಎರಚಿದ್ದಾನೆ. ನೀನು ನನ್ನವಳಾಗದೆ ಇದ್ದರೆ ಬೇರೆಯವರನ್ನು ಮದುವೆಯಾಗಲೂ ಬಿಡುವುದಿಲ್ಲ ಎಂದು ಯುವಕ ಆಕೆಗೆ ಹೇಳಿದ್ದಾನೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಆರೋಪಿ ಯುವತಿ ಮೇಲೆ ಆ್ಯಸಿಡ್ ಎರಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಅಜಮ್‌ಗಢದ ಗ್ಲೋಬಲ್ ಆಸ್ಪತ್ರೆಗೆ (Azamgarh Global Hospital) ದಾಖಲಿಸಲಾಗಿದೆ.
ಬ್ಯಾಂಕ್‌ನಿಂದ ಹಿಂದಿರುಗುತ್ತಿದ್ದ ರೀಮಾ (25) ಎಂಬಾಕೆಯನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನೀನು ನನ್ನವಳಾಗದೇ ಇದ್ದರೆ ಬೇರೆಯವರಿಗೂ ಸಿಗಬಾರದು ಎಂದು ಹೇಳಿ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ರೀಮಾಳಿಗೆ ಮದುವೆ ನಿಶ್ಚಯವಾಗಿದ್ದು, ಕೆಲವೇ ದಿನಗಳಲ್ಲಿ ಮದುವೆ ನಡೆಯುವುದರಲ್ಲಿತ್ತು ಎನ್ನಲಾಗಿದೆ.
ರೀಮಾ ಮತ್ತು ಆಕೆಯ ಕುಟುಂಬವು ಆಕೆಯ ಮದುವೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸುತ್ತಿತ್ತು. ಆಕೆಗೆ ತಂದೆ ಇಲ್ಲ ಮತ್ತು ಸಹೋದರ ಚಿಕ್ಕವನಾಗಿದ್ದರಿಂದ ಮದುವೆಯ ಎಲ್ಲ ವ್ಯವಸ್ಥೆಗಳನ್ನು ಸ್ವತಃ ರೀಮಾನೇ ನೋಡಿಕೊಳ್ಳುತ್ತಿದ್ದಳು.
ರೀಮಾಳನ್ನು ಪ್ರೀತಿಸುತ್ತಿದ್ದ ಆರೋಪಿ ರಾಮ್ ಜನಮ್ ಸಿಂಗ್ ಪಟೇಲ್ ಆಕೆಯನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದ. ಆದರೆ ಆಕೆಯ ಮದುವೆಯನ್ನು ಮೇ 27ರಂದು ಬೇರೊಬ್ಬ ವ್ಯಕ್ತಿಯೊಂದಿಗೆ ನಿಶ್ಚಯವಾಗಿರುವುದನ್ನು ಕೇಳಿ ಸಿಟ್ಟುಗೊಂಡು ಅದನ್ನು ಬಲವಾಗಿ ವಿರೋಧಿಸುತ್ತಿದ್ದ.
ಇದನ್ನೂ ಓದಿ: Cat Island: ಮನುಷ್ಯರಿಗಿಂತಲೂ ಬೆಕ್ಕುಗಳೇ ಹೆಚ್ಚು ಈ ದ್ವೀಪದಲ್ಲಿ! ಎಲ್ಲಿದೆ ಇದು?
ಬ್ಯಾಂಕ್‌ನಿಂದ ಗುರುವಾರ 20,000 ರೂ. ನಗದು ಪಡೆದು ಮನೆಗೆ ಹಿಂತಿರುಗುತ್ತಿದ್ದಾಗ ರೀಮಾಳ ಮದುವೆಯನ್ನು ನಿಲ್ಲಿಸುವ ಉದ್ದೇಶದಿಂದ ಆರೋಪಿಯು ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಇದರಿಂದ ಮಹಿಳೆಯ ಮುಖ, ಭುಜ, ಕುತ್ತಿಗೆ ಮತ್ತು ದೇಹದ ಮೇಲ್ಭಾಗ ತೀವ್ರವಾಗಿ ಸುಟ್ಟು ಹೋಗಿದೆ.
ಕೂಡಲೇ ಸ್ಥಳೀಯರು ಆಕೆಯನ್ನು ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅಜಮ್‌ಗಢದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಶೇ. 60ರಷ್ಟು ಸುಟ್ಟಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪಟೇಲ್ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಬಳಸಲಾದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಯ ಮದುವೆ ರದ್ದಾಗುವಂತೆ ಮಾಡಲು ಮತ್ತು ಆಕೆಯನ್ನು ಮದುವೆಯಾಗುವ ಉದ್ದೇಶದಿಂದ ಆಕೆಗೆ ಕನಿಷ್ಠ ಹಾನಿಯನ್ನುಂಟು ಮಾಡಲು ತಾನು ಆಕೆಯ ಬೆನ್ನಿನ ಮೇಲೆ ಆ್ಯಸಿಡ್ ಎರಚಲು ಬಯಸಿದ್ದೆ ಎಂದು ಪಟೇಲ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಕಳೆದ ತಿಂಗಳು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳ ಮೇಲೆ ಆ್ಯಸಿಡ್ ಎರಚಿದ್ದಾನೆ ಎನ್ನಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.