Boycott Turkey: ಟರ್ಕಿಗೆ ಬಹಿಷ್ಕಾರದ ಬಿಸಿ: ಟರ್ಕಿಶ್ ಬ್ರ್ಯಾಂಡ್‌ಗಳ ಮಾರಾಟ ಸ್ಥಗಿತಗೊಳಿಸಿದ ಅಜಿಯೋ, ಮಿಂತ್ರಾ
Boycott Turkey: ಭಾರತದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಜಿಯೋ ಮತ್ತು ಮಿಂತ್ರಾ ಟರ್ಕಿಯ ಬಟ್ಟೆ ಬ್ರಾಂಡ್‌ಗಳನ್ನು ತಮ್ಮ ಪೋರ್ಟಲ್‌ಗಳಿಂದ ತೆಗೆದುಹಾಕಿವೆ. ಪಾಕಿಸ್ತಾನ (Pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಕೇಂದ್ರಗಳನ್ನು ಧ್ವಂಸಗೊಳಿಸಲು ಭಾರತ ನಡೆಸಿದ ‘ಆಪರೇಷನ್ ಸಿಂಧೂರ್ ಗೆ ಟರ್ಕಿಯು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ನಂತರ ಆ ದೇಶದ ಉತ್ಪನ್ನಗಳಿಗೆ ಜನರು ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ದಾರೆ.

ಸಾಂಧರ್ಬಿಕ ಚಿತ್ರ

ನವದೆಹಲಿ: ಭಾರತದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಜಿಯೋ (Ajio) ಮತ್ತು ಮಿಂತ್ರಾ (Myntra), ಟರ್ಕಿಯ (Turkey) ಬಟ್ಟೆ ಬ್ರಾಂಡ್‌ಗಳನ್ನು ತಮ್ಮ ಪೋರ್ಟಲ್‌ಗಳಿಂದ ತೆಗೆದುಹಾಕಿವೆ. ಪಾಕಿಸ್ತಾನ (Pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಭಯೋತ್ಪಾದಕ ಕೇಂದ್ರಗಳನ್ನು ಧ್ವಂಸಗೊಳಿಸಲು ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’(Operation Sindoor) ಗೆ ಟರ್ಕಿಯು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ನಂತರ ಆ ದೇಶದ ಉತ್ಪನ್ನಗಳಿಗೆ ಜನರು ಬಹಿಷ್ಕಾರ (Boycott) ಹಾಕುವಂತೆ ಕರೆ ನೀಡಿದ್ದಾರೆ.
ಮಿಂತ್ರಾ ತನ್ನ ಪ್ಲಾಟ್‌ಫಾರ್ಮ್‌ನಿಂದ ಭಾರತದಲ್ಲಿ ಜನಪ್ರಿಯ ಮಹಿಳಾ ಫ್ಯಾಷನ್ ಬ್ರಾಂಡ್ ಟ್ರೆಂಡಿಯೋಲ್ ಅನ್ನು ತೆಗೆದುಹಾಕಿದೆ. ಇದರ ಜೊತೆಗೆ ಕೋಟನ್, ಮಾವಿ, ಮತ್ತು ಎಲ್‌ಸಿ ವೈಕಿಕಿ ಮುಂತಾದ ಇತರ ಟರ್ಕಿಶ್ ಬ್ರಾಂಡ್‌ಗಳು ಕೂಡ ಮಿಂತ್ರಾ ಮತ್ತು ಅಜಿಯೋದಿಂದ ಸಂಪೂರ್ಣವಾಗಿ ಕಣ್ಮರೆಯಾಗಿವೆ ಅಥವಾ ‘ಸ್ಟಾಕ್ ಖಾಲಿಯಾಗಿದೆ’ ಎಂದು ತೋರಿಸುತ್ತಿವೆ.
“ಕಳೆದ ವಾರಾಂತ್ಯದಿಂದ ಟರ್ಕಿಶ್ ಬ್ರಾಂಡ್‌ಗಳು ಮಿಂತ್ರಾದಲ್ಲಿ ಅಷ್ಟಾಗಿ ಲಭ್ಯವಿರಲಿಲ್ಲ. ಗುರುವಾರದಂದು ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು” ಎಂದು ಒಬ್ಬ ಅಧಿಕಾರಿ ತಿಳಿಸಿದ್ದಾರೆ. “ದೇಶದ ಮೌಲ್ಯಗಳು ಮತ್ತು ಭಾವನೆಗಳನ್ನು ಪ್ರತಿಬಿಂಬಿಸುವಂತೆ ನಮ್ಮ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ಪನ್ನಗಳನ್ನು ಮರುಪರಿಶೀಲಿಸುತ್ತಿದ್ದೇವೆ” ಎಂದು ರಿಲಯನ್ಸ್ ವಕ್ತಾರರು ಹೇಳಿದ್ದಾರೆ. ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ‘ಭಾರತೀಯ ಉತ್ಪನ್ನಗಳನ್ನು ಖರೀದಿಸಿ’ ಎಂಬ ದೇಶಭಕ್ತಿಯ ಕರೆ ಜನಪ್ರಿಯವಾಗುತ್ತಿದ್ದು, ಗ್ರಾಹಕರು ಟರ್ಕಿ ಮತ್ತು ಅಜೆರ್‌ಬೈಜಾನ್‌ನ ಉತ್ಪನ್ನಗಳನ್ನು ತ್ಯಜಿಸಲು ಮುಂದಾಗಿದ್ದಾರೆ.
ಸಿಎಐಟಿಯಿಂದ ಬೆಂಬಲ
ಕಾನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಲೋಕಸಭಾ ಸಂಸದ ಪ್ರವೀಣ್ ಖಂಡೇಲ್‌ವಾಲ್ ಈ ಕ್ರಮವನ್ನು ಶ್ಲಾಘಿಸಿದ್ದಾರೆ. “ಟರ್ಕಿಯು ಪಾಕಿಸ್ತಾನದ ಭಾರತ ವಿರೋಧಿ ಧೋರಣೆಗೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವಾಗ, ಭಾರತೀಯ ಕಂಪನಿಗಳು ಟರ್ಕಿಯ ಆರ್ಥಿಕ ಹಿತಾಸಕ್ತಿಗಳ ವಿರುದ್ಧ ದೃಢ ನಿಲುವು ತಾಳಿರುವುದು ದೇಶಭಕ್ತಿ ಮತ್ತು ವಾಣಿಜ್ಯ ಪರಿಶುದ್ಧತೆಯ ಸಂಕೇತವಾಗಿದೆ. ಅಜಿಯೋ ಮತ್ತು ಮಿಂತ್ರಾ ‘ರಾಷ್ಟ್ರ ಪ್ರಥಮ’ ಎಂಬ ಚೈತನ್ಯವನ್ನು ತೋರಿದ್ದಾರೆ” ಎಂದು ಖಂಡೇಲ್‌ವಾಲ್ ಹೇಳಿದ್ದಾರೆ. ಎಲ್ಲಾ ಇ-ಕಾಮರ್ಸ್, ಚಿಲ್ಲರೆ ವ್ಯಾಪಾರ ಮತ್ತು FMCG ಕಂಪನಿಗಳು ಟರ್ಕಿ, ಅಜೆರ್‌ಬೈಜಾನ್, ಮತ್ತು ಪಾಕಿಸ್ತಾನದ ಉತ್ಪನ್ನಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನು ಓದಿ: Boycott Turkey, Azerbaijan: ಪಾಕ್‌ಗೆ ನೆರವಾದ ಟರ್ಕಿ, ಅಜೆರ್ಬೈಜಾನ್ ಬಿಟ್ಹಾಕಿ; ಕಡಿಮೆ ಖರ್ಚಿನಲ್ಲಿ ಪ್ರವಾಸ ಹೋಗಬಹುದಾದ ದೇಶಗಳಿವು
ಶುಕ್ರವಾರ, CAIT ಟರ್ಕಿ ಮತ್ತು ಅಜೆರ್‌ಬೈಜಾನ್‌ನ ಉತ್ಪನ್ನಗಳ ಆಮದು, ರಫ್ತು, ಪ್ರವಾಸೋದ್ಯಮ, ಮತ್ತು ಮನರಂಜನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬಹಿಷ್ಕರಿಸಲು ಔಪಚಾರಿಕವಾಗಿ ಕರೆ ನೀಡಿದೆ. ಭಾರತೀಯ ರಫ್ತುದಾರರು, ಆಮದುದಾರರು ಮತ್ತು ವ್ಯಾಪಾರಿ ತಂಡಗಳು ಈ ದೇಶಗಳ ಕಂಪನಿಗಳು ಅಥವಾ ಸಂಸ್ಥೆಗಳೊಂದಿಗೆ ಸಂಪರ್ಕವನ್ನು ತಪ್ಪಿಸಲು ಸೂಚಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಒಂದು ಮನವಿಯನ್ನು ಸಲ್ಲಿಸಲಾಗುವುದು, ಈ ರಾಷ್ಟ್ರಗಳೊಂದಿಗಿನ ಎಲ್ಲಾ ವಾಣಿಜ್ಯ ಸಂಬಂಧಗಳನ್ನು ಪರಿಶೀಲಿಸಲು ಒತ್ತಾಯಿಸಲಾಗುವುದು ಎಂದು CAIT ತಿಳಿಸಿದೆ.
ಇದರ ಜೊತೆಗೆ, ಮುಂಬೈ ವಿಮಾನ ನಿಲ್ದಾಣದ 70% ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರುವ ಟರ್ಕಿಶ್ ಕಂಪನಿ ಸೆಲೆಬಿ ಏವಿಯೇಷನ್‌ನ ಭದ್ರತಾ ಅನುಮತಿಯನ್ನು ಭಾರತ ರದ್ದುಗೊಳಿಸಿದೆ. ಪಾಕಿಸ್ತಾನವು ಟರ್ಕಿಶ್ ಡ್ರೋನ್‌ಗಳನ್ನು ಬಳಸುತ್ತಿರುವ ವರದಿಗಳು ಇದಕ್ಕೆ ಕಾರಣವಾಗಿವೆ. ಈ ಬೆಳವಣಿಗೆಯ ಪರಿಣಾಮವು ವೇಗವಾಗಿ ಹರಡುತ್ತಿದೆ. ಬಾಲಿವುಡ್ ಒಕ್ಕೂಟಗಳು ಟರ್ಕಿಶ್ ಉತ್ಪನ್ನಗಳ ನಿಷೇಧಕ್ಕೆ ಒತ್ತಾಯಿಸಿವೆ ಮತ್ತು ದೆಹಲಿಯ ಆಜಾದ್‌ಪುರ ಮಂಡಿಯಲ್ಲಿ ಟರ್ಕಿಶ್ ಸೇಬು ಆಮದು ಸ್ಥಗಿತಗೊಂಡಿದೆ.