Indus Waters Treaty: ಸಿಂಧೂ ನದಿ ನೀರು ಒಪ್ಪಂದ ಮುರಿಯುವುದರಿಂದ ಪಾಕಿಸ್ತಾನಕ್ಕೆ ಬೀಳುತ್ತಾ ದೊಡ್ಡ ಹೊಡೆತ? ಇಲ್ಲಿದೆ ಡಿಟೇಲ್ಸ್?
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಬಳಿ ಮಂಗಳವಾರ ನಡೆದ ಉಗ್ರರ ದಾಳಿ(Pahalgam terror attack)ಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ ಬಳಿಕ ಪಾಕಿಸ್ತಾನಕ್ಕೆ ಭಾರತ ಬಹುದೊಡ್ಡ ಶಾಕ್ ನೀಡಿದೆ. ಇದರಲ್ಲಿ ಸಿಂಧೂ ನದಿ ನೀರು ಒಪ್ಪಂದ ರದ್ದು ಕೂಡ ಒಂದಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ದಶಕಗಳಿಂದ ಇದ್ದ ಈ ಒಪ್ಪಂದ ರದ್ದಾಗಿರುವುದರಿಂದ ಪಾಕಿಸ್ತಾನದಲ್ಲಿ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.


ನವದೆಹಲಿ: ಭಾರತ ಮತ್ತು ಪಾಕಿಸ್ತಾನದ (india-pakistan) ನಡುವೆ ಹಲವು ದಶಕಗಳಿಂದ ಇದ್ದ ಸಿಂಧೂ ನದಿ ನೀರು ಒಪ್ಪಂದವನ್ನು (Indus Waters Treaty) ಅನಿರ್ದಿಷ್ಟಾವಧಿಗೆ ರದ್ದಾಗಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ (Pahalgam ) ಬೈಸರನ್ ಬಳಿ ಮಂಗಳವಾರ ಉಗ್ರರು ದಾಳಿ (terror attack ) ನಡೆಸಿದ ಬಳಿಕ ಭಾರತದ ಭದ್ರತಾ ಸಂಪುಟ ಸಮಿತಿ (India’s Cabinet Committee on Security) ಪಾಕಿಸ್ತಾನದ ವಿರುದ್ಧ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಇದರಲ್ಲಿ ಸಿಂಧೂ ನದಿ ನೀರು ಒಪ್ಪಂದ ರದ್ದು ಕೂಡ ಒಂದಾಗಿದೆ. ಅನಿರ್ದಿಷ್ಟಾವಧಿಗೆ ರದ್ದಾಗಿರುವ ಈ ಒಪ್ಪಂದದಿಂದ ಪಾಕಿಸ್ತಾನ ಇನ್ನು ಮುಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಗುಂಪಿನ ಒಂದು ಅಂಗವಾದ ರೆಸಿಸ್ಟೆನ್ಸ್ ಫ್ರಂಟ್ (TRF) ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಭಾರತದ ಭದ್ರತಾ ಸಂಪುಟ ಸಮಿತಿ (CCS) ಬುಧವಾರ ಸಭೆ ನಡೆಸಿ ಪಾಕಿಸ್ತಾನದೊಂದಿಗಿನ ದಶಕಗಳಷ್ಟು ಹಳೆಯದಾದ ಸಿಂಧೂ ನದಿ ನೀರು ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿದೆ. ಇದರಿಂದ ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲುಜ್‌ಗಳ ನೀರು ಸರಬರಾಜು ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು ಇದರಿಂದ ಪಾಕಿಸ್ತಾನದ ಲಕ್ಷಾಂತರ ಜನ ಜೀವನ ಅಸ್ತವ್ಯಸ್ತಗೊಳ್ಳಲಿದೆ.
2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಭದ್ರತಾ ಸಂಪುಟ ಸಮಿತಿಗೆ ಹೇಳಿದ್ದರು. ಆದರೆ ಆಗ ಇದನ್ನು ಜಾರಿಗೆ ತರಲಿಲ್ಲ. ಆದರೆ ಈ ಬಾರಿ ಜಾರಿಗೆ ತರುವ ನಿರ್ಣಯವನ್ನು ಭಾರತದ ಭದ್ರತಾ ಸಂಪುಟ ಸಮಿತಿ ಮಾಡಿದೆ.
ಸಿಂಧೂ ಜಲ ಒಪ್ಪಂದ
ಭಾರತ ಮತ್ತು ಪಾಕಿಸ್ತಾನ ಈ ಎರಡು ರಾಷ್ಟ್ರಗಳು 1960ರಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದಕ್ಕೆ ಸಾಕ್ಷಿಯಾಗಿ ವಿಶ್ವ ಬ್ಯಾಂಕ್ ಕೂಡ ಸಹಿ ಹಾಕಿತ್ತು. ಈ ಒಪ್ಪಂದದ ಪ್ರಕಾರ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಎರಡೂ ದೇಶಗಳ ನಡುವೆ ಸಮಾನವಾಗಿ ಹಂಚಲು ತೀರ್ಮಾನಿಸಲಾಯಿತು. ಮೂರು ಪೂರ್ವ ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್‌ನಿಂದ ಭಾರತಕ್ಕೆ ಮತ್ತು ಮೂರು ಪಶ್ಚಿಮ ನದಿಗಳಾದ ಚೆನಾಬ್, ಸಿಂಧೂ ಮತ್ತು ಝೀಲಂನಿಂದ ಪಾಕಿಸ್ತಾನಕ್ಕೆ ಸಿಂಧೂ ನದಿಯ ನೀರನ್ನು ಹಂಚಲಾಯಿತು.

ಯಾರಿಗೆ ಎಷ್ಟು?
ಈ ಒಪ್ಪಂದದ ಅಡಿಯಲ್ಲಿ ಮೂರು ಪೂರ್ವ ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್ ಮೇಲೆ ಭಾರತಕ್ಕೆ ಅಧಿಕಾರವಿದೆ. ಈ ನದಿಗಳು ವಾರ್ಷಿಕವಾಗಿ ಸರಿಸುಮಾರು 33 ಮಿಲಿಯನ್ ಎಕರೆಗೆ ನೀರನ್ನು ಒದಗಿಸುತ್ತದೆ. ಪಶ್ಚಿಮ ನದಿಗಳಾದ ಸಿಂಧೂ, ಚೆನಾಬ್ ಮತ್ತು ಝೀಲಂ ಮೇಲೆ ಪಾಕಿಸ್ತಾನಕ್ಕೆ ಅಧಿಕಾರವಿದ್ದು, ಇದು ಇಲ್ಲಿ ಸುಮಾರು 80 ಮಿಲಿಯನ್ ಎಕರೆಗೆ ನೀರನ್ನು ಒದಗಿಸುತ್ತದೆ. ಭಾರತದಲ್ಲಿರುವ ಸಿಂಧೂ ನದಿ ನೀರಿನ ಒಪ್ಪಂದದಿಂದ ಒಟ್ಟು ನೀರಿನಲ್ಲಿ ಸುಮಾರು ಶೇ. 30ರಷ್ಟು ಭಾರತಕ್ಕೆ ಸಿಕ್ಕಿದರೆ ಉಳಿದ ಶೇ. 70ರಷ್ಟು ನೀರು ಪಾಕಿಸ್ತಾನದ ಪಾಲಾಗಿದೆ.
ಈ ಒಪ್ಪಂದದ ಅಡಿಯಲ್ಲಿ ಪಶ್ಚಿಮ ನದಿಗಳಿಂದ ಭಾರತಕ್ಕೆ ನೀರಾವರಿ, ವಿದ್ಯುತ್ ಉತ್ಪಾದನೆ, ಮೀನು ಕೃಷಿ ಮೊದಲಾದವುಗಳಿಗೆ ಅನಿಯಮಿತವಾಗಿ ನೀರನ್ನು ಬಳಸಲು ಅನುಮತಿ ನೀಡಿದೆ. ನೀರಿನ ಬಳಕೆಗಾಗಿ ಎರಡು ದೇಶಗಳ ಹಕ್ಕು ಮತ್ತು ಬಾಧ್ಯತೆಗಳನ್ನು ಸದ್ಭಾವನೆ, ಸ್ನೇಹ ಮತ್ತು ಸಹಕಾರದ ಮನೋಭಾವದಿಂದ ಗುರುತಿಸುವಂತೆ ಒಪ್ಪಂದದಲ್ಲಿ ಹೇಳಲಾಗಿದೆ. ಭಾರತದ ಭಾಗದಲ್ಲಿರುವ ಅಣೆಕಟ್ಟು, ಬ್ಯಾರೇಜ್ ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ನಡೆಸಿ ನಾಶ ಪಡಿಸಿದರೆ ಈ ಒಪ್ಪಂದವನ್ನು ರದ್ದು ಮಾಡಬಹುದಾಗಿದೆ.
ಇದನ್ನೂ ಓದಿ: Pahalgam Terror Attack: 48ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗಿ... ಪಾಕ್ ಪ್ರಜೆಗಳಿಗೆ ಭಾರತ ತಾಕೀತು

ಅಣೆಕಟ್ಟು ವಿವಾದ
ನೀರಿನ ಹಂಚಿಕೆಗೆ ಸಂಬಂಧಿಸಿ ಹೆಚ್ಚಾಗಿ ಎರಡು ದೇಶಗಳು ಶಾಂತಿಯನ್ನು ಕಾಪಾಡುತ್ತಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿರುವ ಕಿಶನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಗಳು ದೀರ್ಘಕಾಲದಿಂದ ವಿವಾದದಲ್ಲಿದೆ. ಝೀಲಂ ನದಿಯ ಉಪನದಿಯಾದ ಕಿಶನ್‌ಗಂಗಾ ನದಿಗೆ ಅಡ್ಡಲಾಗಿ ಬಂಡಿಪೋರಾ ಜಿಲ್ಲೆಯಲ್ಲಿ ಕಿಶನ್‌ಗಂಗಾ ಯೋಜನೆಯನ್ನು 2018ರಲ್ಲಿ ನಿರ್ಮಿಸಲಾಯಿತು. ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮೇಲಿನ ರಾಟ್ಲೆ ಜಲವಿದ್ಯುತ್ ಯೋಜನೆ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.
ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾಗಿರುವ ಭಾರತೀಯ ಅಣೆಕಟ್ಟುಗಳ ವಿನ್ಯಾಸದ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸಿದ್ದು, ಇದು ತನ್ನ ನೀರಾವರಿ ಬೆಳೆಗಳಲ್ಲಿ ಶೇ. 80ರಷ್ಟು ನೀರನ್ನು ಒದಗಿಸುವ ನದಿಗಳ ಹರಿವಿಗೆ ಅಡ್ಡಿಯಾಗುತ್ತದೆ ಎಂದು ಹೇಳಿಕೊಂಡಿದೆ. ಈ ಮೂಲಕ ಭಾರತ ಈ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ ಮಧ್ಯಂತರ ಆದೇಶದ ಬಳಿಕ 2013ರಲ್ಲಿ ಭಾರತಕ್ಕೆ ಕಿಶನ್‌ಗಂಗಾ ಆಣೆಕಟ್ಟು ನಿರ್ಮಾಣ ಪುನರಾರಂಭಿಸಲು ಅವಕಾಶ ದೊರೆಯಿತು. ಪಾಕಿಸ್ತಾನದ ಬಳಕೆಯನ್ನು ಆಧರಿಸಿ ನೀರನ್ನು ತಡೆಯಬಹುದು ಎಂದು ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನೀರಾವರಿಗಾಗಿ ಬಳಸಲಾಗುವ ಉಪನದಿಗಳ ನೀರು ಆಹಾರ ಭದ್ರತೆ ಮತ್ತು ದೇಶದ ಆರ್ಥಿಕ, ಸಾಮಾಜಿಕ ಸ್ಥಿರತೆಗೆ ಅವಶ್ಯಕವಾಗಿರುವುದರಿಂದ ಇಸ್ಲಾಮಾಬಾದ್ ಈ ನಿಟ್ಟಿನಲ್ಲಿ ಕಾಳಜಿ ತೋರಿಸುತ್ತಿದೆ ಎಂದು ಅದು ಹೇಳಿದೆ.
ನ್ಯಾಯಾಲಯವು ಭಾರತ ಸರ್ಕಾರದ ನಿಲುವನ್ನು ಅನುಮೋದಿಸಿದ್ದು, ವಿಶ್ವಬ್ಯಾಂಕ್ ನೇಮಿಸಿದ ತಜ್ಞರು ಸಿಂಧೂ ಜಲ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಜಲವಿದ್ಯುತ್ ಯೋಜನೆಗಳ ವಿನ್ಯಾಸ ಮತ್ತು ನೀರಿನ ಬಳಕೆಯನ್ನು ನಿರ್ಧರಿಸಬಹುದು ಎಂದು ಹೇಳಿದೆ.
ಕಾಶ್ಮೀರದಲ್ಲಿ ಕಿಶನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಯ ವಿರುದ್ಧ ನ್ಯಾಯಾಲಯದ ಮೊರೆ ಹೋದ ಪಾಕಿಸ್ತಾನದ ಅರ್ಜಿಯ ಮೇರೆಗೆ ಈ ತೀರ್ಪು ಬಂದಿದೆ. ವಿಶ್ವಬ್ಯಾಂಕ್ ನೇಮಿಸಿದ ತಜ್ಞರ ಮೂಲಕ ವಿಷಯಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿರುವ ಭಾರತ ಇದನ್ನು ವಿರೋಧಿಸಿದೆ.
ಪಾಕಿಸ್ತಾನದ ಮಂಗ್ಲಾದಂತಹ ಕೆಲವು ದೊಡ್ಡ ಅಣೆಕಟ್ಟುಗಳನ್ನು ಝೀಲಂ ನದಿಯ ಮೇಲೆ ನಿರ್ಮಿಸಲಾಗಿದೆ. ಅವು ಪಾಕಿಸ್ತಾನಕ್ಕೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಒದಗಿಸುತ್ತಿದೆ.
ಪಾಕಿಸ್ತಾನದ ಆತಂಕವೇನು?
ಸಿಂಧೂ ನದಿ ನೀರಿನ ಒಪ್ಪಂದವು ಎರಡೂ ರಾಷ್ಟ್ರಗಳ ಭದ್ರತಾ ಅಂಶಗಳೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ. ಆದರೆ ಯುದ್ಧ ಸನ್ನಿವೇಶ ಉಂಟಾದರೆ ಪೂರ್ವ ಮತ್ತು ಪಶ್ಚಿಮ ನದಿಗಳ ಕೆಳಭಾಗದಲ್ಲಿರುವ ಪಾಕಿಸ್ತಾನದಲ್ಲಿ ಪ್ರವಾಹ ಅಥವಾ ಬರಗಾಲವನ್ನು ಭಾರತ ಉಂಟು ಮಾಡುತ್ತದೆ ಎನ್ನುವ ಆತಂಕವನ್ನು ಪಾಕಿಸ್ತಾನ ಹೊಂದಿದೆ.
1947–1948ರಲ್ಲಿ ಭಾರತ- ಪಾಕಿಸ್ತಾನ ಯುದ್ಧದ ವೇಳೆ ಸಿಂಧೂ ನದಿ ನೀರು ಎರಡು ರಾಷ್ಟ್ರಗಳ ನಡುವೆ ವಿವಾದ ಉಂಟು ಮಾಡಿತ್ತು. 1960ರಲ್ಲಿ ಒಪ್ಪಂದವನ್ನು ಅಂಗೀಕರಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವಾರು ಮಿಲಿಟರಿ ಸಂಘರ್ಷ ನಡೆದಿದ್ದರೂ ಸಿಂಧೂ ನದಿ ನೀರಿನ ವಿವಾದ ಉಂಟಾಗಿಲ್ಲ. ಈ ಕುರಿತ ವಿವಾದಗಳನ್ನು ಒಪ್ಪಂದದಲ್ಲಿ ಹೇಳಿರುವಂತೆ ಕಾನೂನು ಕಾರ್ಯವಿಧಾನಗಳ ಮೂಲಕ ಇತ್ಯರ್ಥಪಡಿಸಲಾಗಿದೆ.
ವಿಶ್ಲೇಷಕರು ಈ ಒಪ್ಪಂದವನ್ನು ನವೀಕರಿಸಬೇಕು, ವಿಸ್ತರಿಸಬೇಕು ಎನ್ನುವ ಸಲಹೆಗಳನ್ನು ನೀಡುತ್ತಿದ್ದಾರೆ. ಆದರೂ ಸಿಂಧೂ ಜಲ ಒಪ್ಪಂದ ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಯಶಸ್ವಿ ನೀರು ಹಂಚಿಕೆ ಒಪ್ಪಂದಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.