Laxmi Hebbalkar: ಪುರುಷಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಜಾಸ್ತಿ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Laxmi Hebbalkar: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ. ಇದಕ್ಕಾಗಿಯೇ ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 28 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಮಂಗಳೂರು: ನಮ್ಮ ಸಮಾಜದಲ್ಲಿ ಪುರುಷಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಜಾಸ್ತಿ, ನೂರು ರೂಪಾಯಿ ಕೊಟ್ಟರೂ ಅಷ್ಟೆ, ಒಂದು ಲಕ್ಷ ರೂಪಾಯಿ ಕೊಟ್ಟರೂ ಅಷ್ಟೇ, ಸಂಸಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಮಹಿಳೆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು. ಮಂಗಳೂರಿನ ಬಂಗ್ರ ಕೂಳೂರು ಗೋಲ್ಡನ್ ಫಿಂಚ್ ಸಿಟಿಯಲ್ಲಿ ಶನಿವಾರ ನಡೆದ ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅರು, ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೆ, ಪೂಜಿಸುತ್ತಾರೆ, ಆ ಜಾಗ ಅಭಿವೃದ್ಧಿ ಕಾಣುತ್ತದೆ ಎಂದು ತಿಳಿಸಿದರು.
ನವೋದಯ ಗ್ರಾಮೀಣ ವಿಕಾಸ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. 8 ಜಿಲ್ಲೆಗಳಿಗೆ ಕಾರ್ಯಚಟುವಟಿಕೆ ವಿಸ್ತರಣೆ ಮಾಡಿಕೊಂಡು ಈಗ ರಾಜ್ಯ ಮಟ್ಟದ ಸಂಸ್ಥೆಯಾಗಿ ಬೆಳೆಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದೆ. ರಾಜೇಂದ್ರ ಕುಮಾರ್ ಅವರು ಈ ಎರಡೂ ಕ್ಷೇತ್ರಗಳನ್ನು ಅತ್ಯಂತ ಜಾಣ್ಮೆಯಿಂದ ಸುಮಾರು 3 ದಶಕಗಳಿಂದ ಸ್ವಲ್ಪವೂ ವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಭೀಷ್ಮ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇಡೀ ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಬಿಟ್ಟರೆ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಪೈಕಿ ಅತಿದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವ ಬ್ಯಾಂಕ್ ಅಂದರೆ ಅದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್. ಇದರ ಹಿಂದಿನ ರೂವಾರಿಯೇ ರಾಜೇಂದ್ರ ಕುಮಾರ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದರು.
ಬ್ಯಾಂಕ್ ವ್ಯವಹಾರಗಳು ಪಾರದರ್ಶಕವಾಗಿರಬೇಕು. ಬ್ಯಾಂಕ್ ವ್ಯವಹಾರದಲ್ಲೂ ರಾಜೇಂದ್ರ ಕುಮಾರ್ ಅವರು ತೊಡಗಿಸಿಕೊಂಡು, ಇದರ ಜತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ 8 ಜಿಲ್ಲೆಗಳಲ್ಲಿ ನವೋದಯ ಸ್ವ-ಸಹಾಯ ಗುಂಪುಗಳನ್ನು ರಚಿಸುವ ಮೂಲಕ ನೆರವಾಗುತ್ತಿದ್ದಾರೆ ಎಂದು ಹೇಳಿದರು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ. ಇದಕ್ಕಾಗಿಯೇ ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 28 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ. ಮಹಿಳೆ ಸದೃಢವಾಗಿ ಬೆಳೆಯಬೇಕು ಎಂದು ಅವರು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ | Cabinet meeting: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ನಿವೃತ್ತಿ ವಯಸ್ಸು 65 ವರ್ಷಕ್ಕೆ ಏರಿಕೆ; ಸಚಿವ ಸಂಪುಟ ನಿರ್ಧಾರ
ರಾಜೇಂದ್ರ ಕುಮಾರ್ ಅವರ ಸಾಧನೆಗೆ ಪತ್ನಿಯೇ ಸ್ಫೂರ್ತಿ
ಪ್ರತಿಯೊಂದು ಮನೆಯನ್ನೂ ಬೆಳೆಗುವವಳು ಹೆಣ್ಣುಮಗಳು, ರಾಜೇಂದ್ರ ಕುಮಾರ್ ಅವರು ಇಷ್ಟು ದೊಡ್ಡ ಸಾಧನೆ ಮಾಡಲು ಮೂಲ ಪ್ರೇರಣೆಯೇ ಅವರ ಧರ್ಮಪತ್ನಿ. ತಮ್ಮ ಮೂರು ಮಕ್ಕಳ ಜತೆಗೆ ಮನೆಯ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಸಿದ ಫಲವಾಗಿ, ರಾಜೇಂದ್ರ ಕುಮಾರ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.