Pralhad Joshi: ಆರೆಸ್ಸೆಸ್ ಬ್ಯಾನ್, ಕಾಂಗ್ರೆಸ್‌ಗೆ ಅಧಿಕಾರ ಎಲ್ಲಾ ಹಗಲುಗನಸು ಎಂದ ಪ್ರಲ್ಹಾದ್ ಜೋಶಿ
Pralhad Joshi: ದೇಶದಲ್ಲಿ ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ದೂರದ ಮಾತು. ʼನಾವು ಅಧಿಕಾರಕ್ಕೆ ಬಂದರೆ ಬ್ಯಾನ್ʼ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ಹೀಗೇ ಹಗಲುಗನಸು ಕಾಣುತ್ತಲೇ ಇರಲಿ. ಕಾಂಗ್ರೆಸ್ ಅತಿ ದೊಡ್ಡ ವಿರೋಧ ಪಕ್ಷವಾಗಿದ್ದೇ ನಿಮ್ಮ ಪುಣ್ಯ. ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಅತಿ ದೊಡ್ಡ ವಿರೋಧ ಪಕ್ಷವಾಗಿದ್ದೇ ಪುಣ್ಯ, ಇನ್ನು ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದು ಹಾಗೂ ಆರೆಸ್ಸೆಸ್ ಅನ್ನು ಬ್ಯಾನ್ ಮಾಡುವುದು ಹಗಲುಗನಸು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆರೆಸ್ಸೆಸ್ ಅನ್ನು ಬ್ಯಾನ್ ಮಾಡಲು ಖರ್ಗೆ ಅವರ ಲೀಡರ್ ರಾಹುಲ್ ಗಾಂಧಿ, ಇವರ ಅಜ್ಜಿ, ಮುತ್ತಾತರೆಲ್ಲಾ ಪ್ರಯತ್ನ ಮಾಡಿ ವಿಫಲರಾದರು. ಈ ದೇಶದಲ್ಲಿ ಆರೆಸ್ಸೆಸ್ ಇನ್ನೂ ವಿಸ್ತಾರವಾಗಿ ಬೆಳೆಯುತ್ತದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಬ್ಯಾನ್ ಆಗುತ್ತದೆ ಎಂದಿರುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸುವ ಕನಸು ಕಾಣುತ್ತಿದ್ದಾರೆ ಪ್ರಿಯಾಂಕ ಖರ್ಗೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂದಿರುವುದು ಅವರ ಹತಾಶೆಯನ್ನು ತೋರ್ಪಡಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ದೂರದ ಮಾತು. ʼನಾವು ಅಧಿಕಾರಕ್ಕೆ ಬಂದರೆ ಬ್ಯಾನ್ʼ ಎಂದಿದ್ದಾರೆ, ಖರ್ಗೆ ಹೀಗೇ ಹಗಲುಗನಸು ಕಾಣುತ್ತಲೇ ಇರಲಿ. ಕಾಂಗ್ರೆಸ್ ಅತಿ ದೊಡ್ಡ ವಿರೋಧ ಪಕ್ಷವಾಗಿದ್ದೇ ನಿಮ್ಮ ಪುಣ್ಯ. ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಬಿಡಿ ಎಂದು ಜೋಶಿ ಚಾಟಿ ಬೀಸಿದರು.
1975ರಲ್ಲಿ ಆರೆಸ್ಸೆಸ್ ಅನ್ನು ಬ್ಯಾನ್ ಮಾಡಲು ಅವರ ಸರ್ಕಾರವೇ ಮುಂದಾಯಿತು. ಆದರೆ, ಅವರ ಸರ್ಕಾರವೇ ಹೋಯಿತು. ನೆಹರು ಅವರು ಆರೆಸ್ಸೆಸ್ ಅನ್ನು ಬ್ಯಾನ್ ಮಾಡಿದ ನಂತರ ಆಯೋಗ ರಚನೆ ಮಾಡಲಾಯಿತು. ಆಯೋಗ ಯಾವುದೇ ರೀತಿಯ ಸಾಕ್ಷಿಗಳಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇತಿಹಾಸ ಅರಿಯದ ಪ್ರಿಯಾಂಕ ಖರ್ಗೆ ತಮ್ಮ ಅನುಕೂಲಕ್ಕೆ ಬೇಕಾದ್ದನ್ನು ಅಷ್ಟೇ ಹೇಳುತ್ತಾರೆ, ಉಳಿದದ್ದನ್ನೆಲ್ಲ ಮರೆಮಾಚುತ್ತಾರೆ ಎಂದು ಆರೋಪಿಸಿದರು.
ಆರೆಸ್ಸೆಸ್ ಮತ್ತಷ್ಟು ಬೆಳೆಯುತ್ತದೆ
ಆರೆಸ್ಸೆಸ್ ಬ್ಯಾನ್ ಮಾಡುವ ಕಾಲ ಮುಗಿದಿದೆ. ನಮ್ಮ ಬಂಧನ ಎಲ್ಲದೂ ಆಗಿ ಹೋಗಿದೆ. ಇನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಆರೆಸ್ಸೆಸ್ ನೂರು ವರ್ಷ ಪೂರೈಸುತ್ತಿದೆ. ಮತ್ತಷ್ಟು ಬೆಳೆಯುತ್ತಾ ಹೋಗುತ್ತದೆ. ದೇಶದ ಜನ ಆರೆಸ್ಸೆಸ್ ಮತ್ತು ಬಿಜೆಪಿ ವಿಚಾರಧಾರೆಗಳನ್ನು ಒಪ್ಪಿಕೊಂಡಿದ್ದಾರೆ. ನಿಮ್ಮ ವಿಚಾರಧಾರೆಗಳನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಗರಣ ವಿಷಯಾಂತರಕ್ಕೆ ಯತ್ನ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುವುದು ಸುದ್ದಿಯಾಗುತ್ತಲೇ ಅದನ್ನು ಮಾರೆಮಾಚಲು ಏನೆಲ್ಲಾ ಪ್ರಯತ್ನ ಮಾಡುತ್ತಿದೆ. ಎಂಎಲ್‌ಸಿ ರವಿಕುಮಾರ್ ವಿಚಾರವನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದರು.
ರಾಜ್ಯ ಮುಖ್ಯ ಕಾರ್ಯದರ್ಶಿ ವಿಚಾರದಲ್ಲಿ ಎಂಎಲ್ಸಿ ರವಿಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ತನಿಖೆ ನಡೆಸಲಿ. ಆದರೆ, ಕಾಂಗ್ರೆಸ್ ಸರ್ಕಾರ ತಮ್ಮ ಹುಳುಕು ಮುಚ್ಚಿಕೊಳ್ಳಲು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಅಷ್ಟೇ ಎಂದು ಟೀಕಿಸಿದರು.
ಈ ಸುದ್ದಿಯನ್ನೂ ಓದಿ | IBPS Recruitment 2025: 6,215 ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸಿಎಂ ಅಪಮಾನಿಸಲಿಲ್ಲವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಅಪಮಾನಿಸಲಿಲ್ಲವೇ? ಜಿಲ್ಲಾಧಿಕಾರಿಗೆ, ಎಸಿಪಿ ಅವರಿಗೆ ವೇದಿಕೆ ಮೇಲೆ ಬಹಿರಂಗವಾಗಿಯೇ ಅವಮಾನ ಮಾಡಿದರು. ಹಲವಾರು ಬಾರಿ ಅಧಿಕಾರಿಗಳಿಗೆ ಸಿಎಂರಿಂದ ಅವಮಾನ ಆಗಿದೆ. ಆಗೇಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.