Pralhad Joshi: ಪ್ರಧಾನಿ ಮೋದಿ ವಿರೋಧಿಸುವ ಭರದಲ್ಲಿ ದೇಶದ ಸಾಧನೆಗೆ ಅಪಮಾನ; ಸಿಎಂ ಕ್ಷಮೆಯಾಚನೆಗೆ ಜೋಶಿ ಆಗ್ರಹ
Pralhad Joshi: ಕೋವಿಡ್ ವ್ಯಾಕ್ಸಿನ್‌ಗೂ, ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಬೇಕು ಮತ್ತು ಈ ಕೂಡಲೇ ವಿಜ್ಞಾನಿಗಳ, ದೇಶದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಬೆಂಗಳೂರು: ಕಾಂಗ್ರೆಸ್ ಪಕ್ಷ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ ಸಾಧನೆ ಹಾಗೂ ಸಂಶೋಧಕರು-ವಿಜ್ಞಾನಿಗಳ ಸಮೂಹವನ್ನೇ ಅವಮಾನಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆಗ್ರಹಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಯಾವುದೇ ಆಧಾರವಿಲ್ಲದೆ ಕೋವಿಡ್ ವ್ಯಾಕ್ಸಿನ್ ಅನ್ನು ಅನುಮಾನಿಸುತ್ತಿದೆ. ಕೋಟ್ಯಂತರ ಜನರ ಜೀವ ಉಳಿಸಿದ ವಿಜ್ಞಾನಿಗಳ ಸಮುದಾಯಕ್ಕೆ ಅಪಮಾನ ವೆಸಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಅವರ ಸಾಧನೆ ಸಹಿಸದೆ ರಾಜಕೀಯವಾಗಿ ವಿರೋಧಿಸುತ್ತಾರೆ ವಿರೋಧಿಸಲಿ ಆದರೆ, ದೇಶ-ವಿದೇಶಿಗರ ಜೀವ ರಕ್ಷಿಸಿದ ಕೋವಿಡ್ ವ್ಯಾಕ್ಸಿನ್ ಅನ್ನೇ ಅನುಮಾನಿಸುತ್ತಿದ್ದಾರೆ. ಸೈಂಟಿಸ್ಟ್ ಸಮೂಹವನ್ನು ಅವಮಾನಿಸುತ್ತಿದ್ದಾರೆ. ಕೋವಿಡ್ ವ್ಯಾಕ್ಸಿನ್‌ಗೂ, ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಮತ್ತು ಈ ಕೂಡಲೇ ವಿಜ್ಞಾನಿಗಳ, ದೇಶದ ಜನರ ಕ್ಷಮೆ ಕೇಳಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ವರ್ಷ ಆಡಳಿತ ನಡೆಸಿದರೂ ಒಂದೇ ಒಂದು ಸ್ವದೇಶಿ ವ್ಯಾಕ್ಸಿನ್ ಸಿದ್ಧಪಡಿಸಲಿಲ್ಲ. ಇವರ ಕಾಲದಲ್ಲಿ ಎಲ್ಲದೂ ಆಮದು ಆಗುತ್ತಿತ್ತು. ವಿದೇಶಗಳಲ್ಲಿ ವ್ಯಾಕ್ಸಿನ್ ತಯಾರಿಸಿ ಹತ್ತಿಪ್ಪತ್ತು ವರ್ಷಗಳ ಬಳಿಕ ಭಾರತಕ್ಕೆ ತರಿಸಿಕೊಳ್ಳುತ್ತಿದ್ದರು. ಆದರೆ, ಕೋವಿಡ್ ವೇಳೆ ಮೋದಿ ಸರ್ಕಾರ ಭಾರತದ ಸ್ವದೇಶಿ ವ್ಯಾಕ್ಸಿನ್ ಸಿದ್ಧಪಡಿಸಲು ಉತ್ತೇಜನ ನೀಡಿತು. ಇದಕ್ಕೆ ಹೆಮ್ಮೆ ಪಡಬೇಕು ಅದು ಬಿಟ್ಟು ಅಪಮಾನಿಸುವುದು ಶೋಭೆ ತರುವಂಥದಲ್ದಲ್ಲ ಎಂದು ಹರಿಹಾಯ್ದರು.
ಕೋವಿಡ್ ವೇಳೆ ಕೇಂದ್ರ ಸರ್ಕಾರ ದೇಶೀಯ ವ್ಯಾಕ್ಸಿನ್ ಸಿದ್ಧಪಡಿಸಿ ದೇಶದ ಜನಕ್ಕೆ 240 ಕೋಟಿ ಡೋಸ್ ಕೊಟ್ಟಿದೆ. 110-120 ಕೋಟಿ ಜನ ವ್ಯಾಕ್ಸಿನ್ ಪಡೆದಿದ್ದಾರೆ. ಅಲ್ಲದೇ, 150 ದೇಶಗಳಿಗೆ ಭಾರತ ವ್ಯಾಕ್ಸಿನ್ ಪೂರೈಸಿದೆ. ಭಾರತದ ಈ ಸಾಧನೆಯನ್ನು ಮುಕ್ತವಾಗಿ ಪ್ರಶಂಸೆಪಡಬೇಕು. ಆದರೆ ಕಾಂಗ್ರೆಸ್ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದ ಜೋಶಿ, ಇದು ದೇಶದ ಬಗ್ಗೆ ಕಾಂಗ್ರೆಸ್‌ಗಿರುವ ಮನಸ್ಥಿತಿಯನ್ನು ತೋರ್ಪಡಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನಲ್ಲೇ ಕಾಂಗ್ರೆಸ್ ಸರ್ಕಾರದ ವಿರೋಧಿ ಅಲೆ
ರಾಜ್ಯದಲ್ಲಿ ʼ5 ವರ್ಷ ನಾನೇ ಸಿಎಂʼ ಎನ್ನುವಂತಹ ದಯನೀಯ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಎದುರಾಗಿದೆ. ಕಾಂಗ್ರೆಸ್‌ನಲ್ಲೇ ಕಾಂಗ್ರೆಸ್ ಸರ್ಕಾರದ ವಿರೋಧಿ ಅಲೆ ಜೋರಾಗಿದೆ. ಶಾಸಕ ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ ಸರ್ಕಾರದ ಭ್ರಷ್ಟಾಚಾರವನ್ನು ತೆರೆದಿಟ್ಟರು. ಗೃಹ ಸಚಿವ ಪರಮೇಶ್ವರ್ ಸಿದ್ದರಾಮಣ್ಣ ಬಳಿ ದುಡ್ಡಿಲ್ಲ ಎಂದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನವನ್ನು ಬಯಲಿಗೆಳೆದರು. ಶಾಸಕ ರಾಜು ಕಾಗೆ, ಎನ್.ವೈ. ಗೋಪಾಲಕೃಷ್ಣ ಒಂದು ಚರಂಡಿ ಅಭಿವೃದ್ಧಿ ಸಹ ಸಾಧ್ಯವಾಗಿಲ್ಲ ಎಂದು ಸರ್ಕಾರದ ಅಭಿವೃದ್ಧಿ ಶೂನ್ಯ ಕಾರ್ಯ ವೈಖರಿಯನ್ನು ಬಹಿರಂಗಪಡಿಸಿದರು. ಇದನ್ನೆಲ್ಲ ಮರೆಮಾಚಲು ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಎಂದು ಜೋಶಿ ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Karnataka Rains: ಆರೆಂಜ್ ಅಲರ್ಟ್; ನಾಳೆ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!
ಭ್ರಷ್ಟಾಚಾರಕ್ಕೆ ದುಡ್ಡು ಕೊಡಲ್ಲ ಕೇಂದ್ರ
ಗೃಹ ಸಚಿವ ಪರಮೇಶ್ವರ್ ಅವರು ಬಾದಾಮಿಯಲ್ಲಿ ʼಅಭಿವೃದ್ಧಿಗೆ ಸಿಎಂ ಸಿದ್ದರಾಮಣ್ಣ ಬಳಿ, ನನ್ನ ಬಳಿ ದುಡ್ಡಿಲ್ಲ; ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆ ರೂಪಿಸಿ ಕೇಂದ್ರ ಸರ್ಕಾರದ ಬಳಿ ಕೇಳಬೇಕುʼ ಎಂದಿದ್ದಾರೆ. ಇದು ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಆರ್ಥಿಕ ದುಸ್ಥಿತಿಯನ್ನು ಪ್ರದರ್ಶಿಸುತ್ತಿದೆ ಎಂದು ಟೀಕಿಸಿದ ಸಚಿವ ಜೋಶಿ, ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಅನುದಾನ ಕೊಡಲು ಸಿದ್ಧವಿದೆ. ಆದರೆ, ಇವರು ಭ್ರಷ್ಟಾಚಾರ ನಡೆಸಲು ದುಡ್ಡು ಕೊಡುವುದಿಲ್ಲ. ಸರಿಯಾದ ಅಭಿವೃದ್ಧಿ ಯೋಜನೆ ಹಾಕಿಕೊಂಡು ಬರಲಿ, ಕೊಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದರು.