ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻದಯವಿಟ್ಟು ವಿದಾಯ ಹೇಳಬೇಡಿʼ-ವಿರಾಟ್‌ ಕೊಹ್ಲಿಗೆ ಅಂಬಾಟಿ ರಾಯುಡು ಮನವಿ!

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ವಿರಾಟ್ ಕೊಹ್ಲಿಯನ್ನು ಒತ್ತಾಯಿಸಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡ ದುರ್ಬಲವಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡಕ್ಕೆ ಕೊಹ್ಲಿಯ ಅಗತ್ಯವಿದೆ ಎಂದಿದ್ದಾರೆ.

ʻವಿದಾಯ ಹೇಳಬೇಡಿʼ: ಕೊಹ್ಲಿಗೆ ಮನವಿ ಮಾಡಿದ ಅಂಬಾಟಿ ರಾಯುಡು!

ವಿರಾಟ್‌ ಕೊಹ್ಲಿಗೆ ಅಂಬಾಟಿ ರಾಯುಡು ಮನವಿ.

Profile Ramesh Kote May 11, 2025 2:23 PM

ನವದೆಹಲಿ: ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳದಂತೆ ಭಾರತೀಯ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಗೆ (Virat Kohli) ಸಾಕಷ್ಟು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದೀಗ ಈ ಸಾಲಿನ ಟೀಮ್‌ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು (Ambati Rayudu) ಸೇರ್ಪಡೆಯಾಗಿದ್ದಾರೆ. ದಯವಿಟ್ಟು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಬೇಡಿ, ಭಾರತ ತಂಡಕ್ಕೆ ನಿಮ್ಮ ಅಗತ್ಯ ತುಂಬಾ ಇದೆ ಎಂದು ರಾಯುಡು ಟ್ವೀಟ್‌ ಮಾಡಿ ಮನವಿ ಮಾಡಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ (IND vs ENG) ಮುನ್ನ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುತ್ತೇನೆಂದು ಬಿಸಿಸಿಐ ತಿಳಿಸಿದ್ದರು. ಆದರೆ, ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡದೆ, ಇದರ ಬಗ್ಗೆ ಮತ್ತೊಮ್ಮೆ ಯೋಚಿಸಿ ಎಂದು ಹೇಳಿದೆ.

2019ರ ಐಸಿಸಿ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಅಂಬಾಟಿ ರಾಯುಡುಗೆ ಅವಕಾಶ ನೀಡದ ಕಾರಣ ವಿರಾಟ್‌ ಕೊಹ್ಲಿ ವಿರುದ್ದ ಹೈದರಾಬಾದ್‌ ಬ್ಯಾಟರ್‌ ಪರೋಕ್ಷವಾಗಿ ಟೀಕೆಗಳನ್ನು ಮಾಡುತ್ತಿದ್ದರು. ಅಲ್ಲದೆ ವಿರಾಟ್‌ ಕೊಹ್ಲಿ ಪ್ರತಿನಿಧಿಸುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಕೂಡ ಅವರು ಕಾಲೆಳೆದಿದ್ದಾರೆ. ಆದರೆ, ಇದೀಗ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸುತ್ತಿದಾರೆಂಬ ವಿಷಯ ತಿಳಿಯುತ್ತಿದ್ದಂತೆ ಅಂಬಾಟಿ ರಾಯುಡು, ವಿರಾಟ್‌ ಕೊಹ್ಲಿಯ ವೈಮನಸನ್ನು ಮರೆತು ದಿಗ್ಗಜ ಬ್ಯಾಟ್ಸ್‌ಮನ್‌ ಜತೆ ನಿಂತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಬೇಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ.

ʻಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿಯ ಅಗತ್ಯವಿದೆʼ-ಆಧುನಿಕ ದಿಗ್ಗಜನಿಗೆ ಬ್ರಿಯಾನ್‌ ಲಾರಾ ಸಂದೇಶ!

ವಿರಾಟ್‌ ಕೊಹ್ಲಿಗೆ ಅಂಬಾಟಿ ರಾಯುಡು ಮನವಿ

ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಭಾರತ ತಂಡ ಮೊದಲಿನಂತೆ ಬಲಿಷ್ಠವಾಗಿ ಕಾಣುವುದಿಲ್ಲ ಎಂದು ಅಂಬಟಿ ರಾಯುಡು ಹೇಳಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾದಲ್ಲಿಅಂಬಾಟಿ ರಾಯುಡು, "ವಿರಾಟ್ ಕೊಹ್ಲಿ ದಯವಿಟ್ಟು ನಿವೃತ್ತಿ ಹೊಂದಬೇಡಿ. ಭಾರತ ತಂಡಕ್ಕೆ ನಿಮ್ಮ ಅವಶ್ಯಕತೆ ತುಂಬಾ ಇದೆ. ನೀವು ಇನ್ನೂ ನೀಡುವುದು ಬಹಳಷ್ಟಿದೆ. ನೀವು ಇಲ್ಲದೆ ಟೆಸ್ಟ್ ಕ್ರಿಕೆಟ್ ಎಂದಿಗೂ ಮೊದಲಿನಂತೆ ಇರುವುದಿಲ್ಲ, ದಯವಿಟ್ಟು ಮತ್ತೊಮ್ಮೆ ಯೋಚಿಸಿ," ಎಂದು ಮನವಿ ಮಾಡಿದ್ದಾರೆ.

ಜೂನ್‌ 20 ರಂದು ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಆರಂಭ

ಭಾರತ ತಂಡ ಜೂನ್‌ 20 ರಂದು ಇಂಗ್ಲೆಂಡ್‌ ವಿರುದ್ದ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಆ ಮೂಲಕ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನು ಆರಂಭಿಸಲಿದೆ. ಆರಂಭಿಕ ಎರಡು ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಫೈನಲ್ ತಲುಪಿತ್ತು. ಎರಡೂ ಬಾರಿಯೂ ಭಾರತ ಸೋಲು ಅನುಭವಿಸಿತ್ತು. ಈ ಬಾರಿ ಭಾರತ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲು, ನಂತರ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸೋಲಿನ ಆಘಾತ ಅನುಭವಿಸಿತ್ತು.

ವಿರಾಟ್‌ ಕೊಹ್ಲಿಯ ಭಾರತ ಟೆಸ್ಟ್‌ ನಾಯಕತ್ವದ ಬೇಡಿಕೆಯನ್ನು ತಿರಸ್ಕರಿಸಿದ ಬಿಸಿಸಿಐ! ವರದಿ

10000 ರನ್‌ಗಳ ಸನಿಹದಲ್ಲಿ ವಿರಾಟ್‌ ಕೊಹ್ಲಿ

ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2011 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್‌ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.85ರ ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. ಆದರೆ ಕೊಹ್ಲಿ ಟೆಸ್ಟ್‌ನಿಂದ ನಿವೃತ್ತಿ ಹೊಂದುವ ಯೋಜನೆಯೊಂದಿಗೆ ಮುಂದುವರಿದರೆ, ಅವರ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಅನುಭವದ ಕೊರತೆಯನ್ನು ಅನುಭವಿಸಲಿದೆ.