ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೇ 7ರಂದು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಸಲು ಕೇಂದ್ರದ ಸೂಚನೆ; ಪಾಕಿಸ್ತಾನದ ವಿರುದ್ಧ‌ ಯುದ್ಧ ಪಕ್ಕಾ?

Mock Drills: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಅಮಾಯಕರು ಬಲಿಯಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹದಗೆಟ್ಟಿದೆ. ಈ ಮಧ್ಯೆ ಕೇಂದ್ರ ಯುದ್ಧದ ಸಂದರ್ಭದಲ್ಲಿ ನಾಗರಿಕ ರಕ್ಷಣೆಗಾಗಿ ಕೈಗೊಳ್ಳುವ ಕ್ರಮದ ಅಣಕು ಪ್ರದರ್ಶನವನ್ನು ನಡೆಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಸಲು ಕೇಂದ್ರದ ಸೂಚನೆ

ಸಾಂದರ್ಭಿಕ ಚಿತ್ರ.

Profile Ramesh B May 5, 2025 10:16 PM

ಹೊಸದಿಲ್ಲಿ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಅಮಾಯಕರು ಬಲಿಯಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧದಲ್ಲಿ ಬಿರುಕು ಮೂಡಿದ್ದು, ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಯುದ್ಧದ ಸಂದರ್ಭದಲ್ಲಿ ನಾಗರಿಕ ರಕ್ಷಣೆಗಾಗಿ ಕೈಗೊಳ್ಳುವ ಕ್ರಮದ ಅಣಕು ಪ್ರದರ್ಶನವನ್ನು (Mock Drills) ಮೇ 7ರಂದು ದೇಶಾದ್ಯಂತ ನಡೆಸುವಂತೆ ರಾಜ್ಯಗಳಿಗೆ ಸೂಚಿಸಿದೆ. 1971ರಲ್ಲಿ ಕೊನೆಯ ಬಾರಿಗೆ ಇಂತಹ ಅಣಕು ಪ್ರದರ್ಶನ ನಡೆಸಲಾಗಿತ್ತು. ಸುಮಾರು 44 ವರ್ಷಗಳ ಬಳಿಕ ಈ ಅಣಕು ಪ್ರದರ್ಶನ ನಡೆಯಲಿದ್ದು, ಭಾರತ ಯುದ್ದಕ್ಕೆ ಸಜ್ಜಾಯಿತಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ಯುದ್ಧದ ಹಿನ್ನಲೆಯಲ್ಲಿ 1971ರಲ್ಲಿ ಅಣಕು ಪ್ರದರ್ಶನ ನಡೆಸಲಾಗಿತ್ತು. ಇದೀಗ ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ಮೇ 7ರಂದು ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಯಲಿದೆ.

ಮಾಕ್ ಡ್ರಿಲ್‌ ನಡೆಸುವಂತೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶ:



ಈ ಸುದ್ದಿಯನ್ನೂ ಓದಿ: Ballistic Missile: ಯುದ್ಧದ ಭೀತಿ ನಡುವೆ ಪಾಕಿಸ್ತಾನದಿಂದ 450 ಕಿ.ಮೀ. ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಪರೀಕ್ಷೆ

ಏನೆಲ್ಲ ಕಾರ್ಯಾಚರಣೆ ನಡೆಸಬೇಕು?

  • ವಾಯು ದಾಳಿ ಎಚ್ಚರಿಕೆಯ ಸೈರನ್ ಕಾರ್ಯಾಚರಣೆ.
  • ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕ ರಕ್ಷಣಾ ಅಂಶಗಳ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳಿಗೆ ತರಬೇತಿ.
  • ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳ ಮಾಹಿತಿ.
  • ಪ್ರಮುಖ ಕಟ್ಟಡಗಳು, ಸ್ಥಾವರಗಳನ್ನು ಮರೆಮಾಚುವ ವಿಧಾನ.
  • ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸುವ ಬಗ್ಗೆ ಪೂರ್ವಾಭ್ಯಾಸ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಭಾರತ

ಅತ್ತ ಪಾಕಿಸ್ತಾನ ಗಡಿಗಳಲ್ಲಿ ಸತತ 11ನೇ ದಿನವೂ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಭಾರತ ಪತ್ಯುತ್ತರ ನೀಡಿದೆ. ಈ ಮಧ್ಯೆ ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಸೇನೆಯನ್ನು ಸಜ್ಜುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಮೇ 5) ಸಂಜೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ರಷ್ಯಾ ಘೋಷಿಸಿದೆ.

ಮತ್ತೊಮ್ಮೆ ಕ್ಷಿಪಣಿ ಪ್ರಯೋಗ ನಡೆಸಿದ ಪಾಕಿಸ್ತಾನ

ಅತ್ತ ಪಾಕಿಸ್ತಾನ ಮಿಲಿಟರಿ ಸೋಮವಾರ ಖಂಡಾಂತರ ಕ್ಷಿಪಣಿಯ 2ನೇ ಪರೀಕ್ಷೆ ನಡೆಸಿತು. 120 ಕಿ.ಮೀ. ವ್ಯಾಪ್ತಿಯಲ್ಲಿ ಚಲಿಸಬಲ್ಲ ಫತಾಹ್ ಸರಣಿಯ ಖಂಡಾಂತರ ಕ್ಷಿಪಣಿಯನ್ನು ಪಾಕಿಸ್ತಾನ ಸೇನೆಯು ಪರೀಕ್ಷಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ತಿಳಿಸಿದೆ. ಫತಾಹ್ ಕ್ಷಿಪಣಿಯು ಅಬ್ದಾಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಿಂತ ಕಡಿಮೆ ವ್ಯಾಪ್ತಿಯನ್ನು ಹೊಂದಿದೆ. ಅಬ್ದಾಲಿ ಬ್ಯಾಲಿಸ್ಟಿಕ್ ಕ್ಷಿಪಣಿ 450 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದನ್ನು ಮೇ 3ರಂದು ಪರೀಕ್ಷಿಸಲಾಗಿತ್ತು. 3 ದಿನಗಳ ಅಂತರದಲ್ಲಿ ಪಾಕ್‌ ನಡೆಸುತ್ತಿರುವ 2ನೇ ಪ್ರಯೋಗ ಇದಾಗಿದೆ. ಸಾಂಪ್ರದಾಯಿಕ ಸಿಡಿತಲೆಯನ್ನು ಹೊತ್ತೊಯ್ಯುವ ಫತಾಹ್ ಕ್ಷಿಪಣಿಯ ಪರೀಕ್ಷೆಯು ಸೈನಿಕ ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಕ್ಷಿಪಣಿ ಪರೀಕ್ಷೆಯ ಬಗ್ಗೆ ಭಾರತೀಯ ಅಧಿಕಾರಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಉಭಯ ದೇಶಗಳು ಮಿಲಿಟರಿ ಅಭ್ಯಾಸಗಳನ್ನು ನಡೆಸಿವೆ ಎಂದು ಮೂಲಗಳು ತಿಳಿಸಿವೆ.