Sonu Nigam: ಸಾರಿ ಕರ್ನಾಟಕ; ಕನ್ನಡಿಗರ ಕ್ಷಮೆ ಕೋರಿದ ಗಾಯಕ ಸೋನು ನಿಗಮ್
‘ʼಕ್ಷಮೆ ಇರಲಿ ಕರ್ನಾಟಕ. ನಿಮ್ಮ ಮೇಲೆ ನನಗೆ ಇರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆʼʼ ಎಂದು ಗಾಯಕ ಸೋನು ನಿಗಮ್ ಕ್ಷಮೆ ಕೋರಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ʼʼಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದುʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸೋನು ನಿಗಮ್.

ಬೆಂಗಳೂರು: ಕನ್ನಡಿಗರ ಒಗ್ಗಟ್ಟಿನ ಹೋರಾಟಕ್ಕೆ ಕೊನೆಗೂ ಗಾಯಕ ಸೋನು ನಿಗಮ್ (Sonu Nigam) ತಲೆ ಬಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ʼʼಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದುʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಾದ ಬಳಿಕ ಕನ್ನಡ ಪರ ಸಂಘಟನೆಗಳು ಅವರನ್ನು ನಿಷೇಧಿಸಬೇಕು ಎಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಲೇ ಬಂದಿವೆ. ಇದೀಗ ಸೋನು ನಿಗಮ್ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ʼʼಸಾರಿ ಕರ್ನಾಟಕʼʼ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ.
‘ʼಕ್ಷಮೆ ಇರಲಿ ಕರ್ನಾಟಕ. ನಿಮ್ಮ ಮೇಲೆ ನನಗೆ ಇರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆʼʼ ಎಂದು ಬರೆದು ಸೋನು ನಿಗಮ್ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ವಿವಾದ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಸೋನು ನಿಗಮ್ ಅವರ ಪೋಸ್ಟ್:
ಈ ಸುದ್ದಿಯನ್ನೂ ಓದಿ: Singer Sonu Nigam: ಕನ್ನಡಿಗರನ್ನು ಕೆಣಕಲು ಹೋಗಿ ಸರಿಯಾದ ಹೊಡೆತ ತಿಂದ ಸೋನು ನಿಗಮ್; ಸ್ಯಾಂಡಲ್‌ವುಡ್‌ನಿಂದ ಬ್ಯಾನ್
ಘಟನೆ ಬಗ್ಗೆ ಅವರು ಸ್ಪಷ್ಟನೆ ನೀಡಿದ ಕೆಲವೇ ಗಂಟೆಗಳ ಬಳಿಕ ಕ್ಷಮೆ ಕೋರಿದ್ದಾರೆ. ಈ ಮೊದಲು ಅವರು ಸುದೀರ್ಘ ಪೋಸ್ಟ್ ಮೂಲಕ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದರು. ʼʼನಮಸ್ಕಾರ... ನಾನು ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ಈ ರಾಜ್ಯ ಮತ್ತು ಜನರ ಮೇಲೆ ಅಪರೂಪದ ಪ್ರೀತಿ ಹರಿಸಿದ್ದೇನೆ. ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿ ಇತರ ಭಾಷೆಗಳ ಹಾಡುಗಳಿಗಿಂತ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಕ್ಷಿಯಾಗಿ ನೂರಾರು ವಿಡಿಯೊಗಳು ಹರಿದಾಡುತ್ತಿವೆ. ನಾನು ಪ್ರತಿಯೊಂದು ಕರ್ನಾಟಕದ ಕಾರ್ಯಕ್ರಮಕ್ಕಾಗಿ ಒಂದು ಗಂಟೆಗಿಂತ ಹೆಚ್ಚು ಕನ್ನಡ ಹಾಡುಗಳನ್ನು ತಯಾರಿಸಿಕೊಂಡಿರುತ್ತೇನೆʼʼ ಎಂದು ತಿಳಿಸಿದ್ದರು.
ಮುಂದುವರಿದು, ‘ʼಅದಾಗ್ಯೂ ಯಾರಿಂದಲಾದರೂ ಅವಮಾನವನ್ನು ಸಹಿಸುವ ವಯಸ್ಸು ನನ್ನದಲ್ಲ. ನನಗೆ ಈಗ 51 ವರ್ಷ. ಜೀವನದ ದ್ವಿತೀಯಾರ್ಧಕ್ಕೆ ಹೆಜ್ಜೆ ಇಟ್ಟಿದ್ದೇನೆ. ನನ್ನ ಮಗನಷ್ಟು ಕಿರಿಯವನು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಪ್ರಯತ್ನಿಸಿದ. ಈ ವೇಳೆ ನನ್ನ 2ನೇ ಭಾಷೆಯಾದ ಕನ್ನಡವೇ ಆಗಿರಲಿ ನಾನು ಪ್ರತಿಕ್ರಿಯಿಸುದು ಸಹಜ. ಅದು ಕೂಡ ನಾನು ಮೊದಲ ಹಾಡು ಹಾಡಿದ ತಕ್ಷಣವೇ ಅವನು ಗಲಾಟೆ ಮಾಡಿದ್ದ. ಅವನು ಇನ್ನೂ ಕೆಲವರನ್ನು ಪ್ರಚೋದಿಸಿದʼʼ ಎಂದು ವಿವರಿಸಿದ್ದರು.
ʼʼನಾನು ಅವರಿಗೆ ತುಂಬಾ ಶಾಂತಿಯುತವಾಗಿ, ಪ್ರೀತಿಯಿಂದ ಹೇಳಿದೆ. ಈಗ ಮಾತ್ರ ಕಾರ್ಯಕ್ರಮ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು. ನಾನು ನಿಮಗೆ ನಿರಾಸೆ ಉಂಟು ಮಾಡಲ್ಲ. ನೀವು ನನಗೆ ಕಾರ್ಯಕ್ರಮವನ್ನು ಮುಂದುವರಿಸಲು ಅವಕಾಶ ನೀಡಬೇಕೆಂದೆ. ಆದರೆ ಅವರು ಗದ್ದಲ ಸೃಷ್ಟಿಸಲು, ಬೆದರಿಕೆ ಹಾಕಲು ಪ್ರಯತ್ನಿಸಿದರು. ಬಳಿಕ ನಾನು ಅವರಿಗೆ ಬುದ್ಧಿವಾದ ಹೇಳಬೇಕಾಯಿತು. ನಾನು ನಂತರ 1 ಗಂಟೆಗಿಂತ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡಿದೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಮತ್ತು ನಿಮ್ಮ ತೀರ್ಪು ಏನೇ ಆಗಿರಲಿ, ಯಾವುದೇ ದ್ವೇಷವಿಲ್ಲದೆ ಅದನ್ನು ಸದಾ ಗೌರವದಿಂದ ಜ್ಞಾಪಿಸಿಕೊಳ್ಳುತ್ತೇನೆ'' ತಿಳಿಸಿದ್ದರು. ಇದೀಗ ಕ್ಷಮೆ ಕೋರಿದ್ದು, ವಿವಾದ ಅಂತ್ಯವಾಗುತ್ತ ಎನ್ನುವುದನ್ನು ಕಾದು ನೋಡಬೇಕಿದೆ.