ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಸ್ವಂತ ಮಕ್ಕಳಿಗೆ ಉತ್ತರಾಧಿಕಾರ ಏಕೆ ನೀಡಲಿಲ್ಲ ?!

ವಾರೆನ್ ಬಫೆಟ್ ಅವರು ತಮ್ಮ ಮಕ್ಕಳಾದ ಹೋವರ್ಡ್, ಪೀಟರ್ ಮತ್ತು ದಿವಂಗತ ಸುಸಾನ್ (ಪುತ್ರಿ) ಹೆಸರಿನಲ್ಲಿ ಸಾಕಷ್ಟು ಸಂಪತ್ತನ್ನು ಕೊಟ್ಟಿದ್ದರೂ, ಬರ್ಕ್‌ಶೈರ್ ಹಾಥ್‌ವೇ ಕಂಪನಿಯ ನಾಯಕತ್ವವನ್ನು ವಹಿಸಿಲ್ಲ. ಈ ಮೂಲಕ ನಾಯಕತ್ವದ ಪಾತ್ರಕ್ಕೆ ಕೌಟುಂಬಿಕ ರಕ್ತ ಸಂಬಂಧಗಳಿ ಗಿಂತ, ಪ್ರತಿಭೆ ಮತ್ತು ಸಾಮರ್ಥ್ಯವೇ ನಿರ್ಣಾಯಕ ಎಂಬುದನ್ನು ಸಾರಿದ್ದಾರೆ.

ಸ್ವಂತ ಮಕ್ಕಳಿಗೆ ಉತ್ತರಾಧಿಕಾರ ಏಕೆ ನೀಡಲಿಲ್ಲ ?!

ಮನಿ ಮೈಂಡೆಡ್

ವಾರೆನ್ ಬಫೆಟ್!

94 ವರ್ಷದ ಈ ಹಿರಿಯಜ್ಜನನ್ನು ಅಮೆರಿಕದ ಖ್ಯಾತ ಹೂಡಿಕೆದಾರ ಎಂದಷ್ಟೇ ಪರಿಚಯಿಸಿದರೆ ಕ್ಲೀಷೆಯಾಗುತ್ತದೆ. ವಿಶ್ವದ 6ನೇ ಅತ್ಯಂತ ಶ್ರೀಮಂತ ವ್ಯಕ್ತಿ ಆತ. ತನ್ನ 11-12ನೇ ವಯಸ್ಸಿನಲ್ಲಿಯೇ ಪತ್ರಿಕೆಗಳನ್ನು, ಬೇಕರಿ ತಿನಿಸುಗಳನ್ನು ಮನೆಮನೆಗೆ ಹಂಚುತ್ತಿದ್ದ, ಆ ಎಳೆಯ ಹರೆಯದಲ್ಲಿಯೇ ಮೊದಲ ಬಾರಿಗೆ ಷೇರುಗಳನ್ನು ಖರೀದಿಸಿದ್ದ ಹುಡುಗ ಬೆಳೆಯುತ್ತಾ, ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆಯ ಪಟ್ಟುಗಳನ್ನು ಕಲಿಯುತ್ತಾ, ಪ್ರಪಂಚದ ಸಾರ್ವಕಾಲಿಕ ಯಶಸ್ವಿ ಹೂಡಿಕೆದಾರನಾದ ದಂತಕಥೆಯಿದು. ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ, ವಾರೆನ್ ಬಫೆಟ್ ಅವರ ನಿವ್ವಳ ಸಂಪತ್ತು 161 ಶತಕೋಟಿ ಡಾಲರ್. ಬರೋಬ್ಬರಿ 14 ಲಕ್ಷ ಕೋಟಿ ರುಪಾಯಿ. ಕರ್ನಾಟಕದ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಮೂರೂವರೆ ವರ್ಷಗಳ ಬಜೆಟ್ ಆಗಬಹುದು. ಬಫೆಟ್ ಗಳಿಸಿದ್ದೆಲ್ಲವೂ ಸ್ವಯಾ ರ್ಜಿತವೇ. ಗಳಿಸಿದ ಬಹುಪಾಲು ಆಸ್ತಿಯನ್ನೆಲ್ಲ ಸಮಾಜಸೇವೆಗೆ ದಾನ ನೀಡಿದ ದಾನಶೂರ.

‘ಒಮಾಹಾದ ದ್ರಷ್ಟಾರ’ ( Oracle of Omaha) ಎಂದು ಜಾಗತಿಕ ಮಾಧ್ಯಮಗಳು ಬಫೆಟ್ ಅವರನ್ನು ಬಣ್ಣಿಸುತ್ತಿವೆ. ಭಾರತ-ಪಾಕಿಸ್ತಾನ ನಡುವಣ ಈ ನಿಗಿನಿಗಿ ‘ವಾರ್ -ಸದೃಶ’ ಸಂದರ್ಭದಲ್ಲೂ ವಾರೆನ್ ಬಫೆಟ್ ಬಗ್ಗೆ ಪ್ರಸ್ತಾಪಿಸಲು ಬಲವಾದ ಕಾರಣವೂ ಇದೆ. ಇತ್ತೀಚೆಗೆ (2025 ಮೇ 3) 94 ವರ್ಷದ ಅಜ್ಜ ವಾರೆನ್ ಬಫೆಟ್ ತಮ್ಮ ಬರ್ಕ್‌ ಶೈರ್ ಹಾಥ್‌ವೇ ಸಮೂಹದ ವಾರ್ಷಿಕ ಸಭೆಯಲ್ಲಿ ಸಿಇಒ ಹುದ್ದೆಯಿಂದ ಈ ವರ್ಷಾಂತ್ಯಕ್ಕೆ ನಿರ್ಗಮಿಸುತ್ತಿರುವುದಾಗಿ ಹೇಳಿದರು.

ಜತೆಗೆ ಮುಂದಿನ ವರ್ಷದಿಂದ ಹೊಸ ಸಿಇಒ ಆಗಿ ಗ್ರೇಗ್ ಅಬೆಲ್ ಅವರನ್ನು ಆಯ್ಕೆ ಮಾಡಿರುವು ದಾಗಿ ಘೋಷಿಸಿದರು. ಆಗ ಇಡೀ ಕಾರ್ಪೊರೇಟ್ ಜಗತ್ತು ಚಕಿತವಾಯಿತು. ಈ ಕಲಿಯುಗದಲ್ಲಿ ಇದು ಸಾಧ್ಯವೇ ಎಂಬಂತೆ ಬೆರಗಾಯಿತು. ಏಕೆಂದರೆ ವಾರೆನ್ ಬಫೆಟ್ ನಿರ್ಧಾರ ಅಂಥದ್ದಾಗಿತ್ತು. ತಮ್ಮ ಮೂವರು ಮಕ್ಕಳನ್ನು ಬಿಟ್ಟು ಕುಟುಂಬದ ಹೊರಗಿನ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದರು!

ಇದನ್ನೂ ಓದಿ: Keshav Prasad B Column: ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!

ಜತೆಗೆ ಮೂವರು ಮಕ್ಕಳೂ ತುಟಿ ಪಿಟಿಕ್ಕೆನ್ನದೆ ತಂದೆಯ ನಿರ್ಣಯವನ್ನು ಗೌರವಿಸಿದ್ದರು. ಒಬ್ಬರೂ ಆಕ್ಷೇಪದ ದನಿ ಎತ್ತಲಿಲ್ಲ! ಸ್ವಂತ ಮಕ್ಕಳಿದ್ದರೂ ವಾರೆನ್ ಬಫೆಟ್ ಕುಟುಂಬಕ್ಕೆ ಯಾವ ರೀತಿ ಯಲ್ಲೂ ಸಂಬಂಧಿಯಲ್ಲದ ಬೇರೆ ವ್ಯಕ್ತಿಯನ್ನು ತಮ್ಮ ಸಂಪತ್ತಿನ ಉತ್ತರಾಧಿಕಾರಿಯಾಗಿ ಯಾಕೆ ಆಯ್ಕೆ ಮಾಡಿದರು? ಎಂಬ ಶೀರ್ಷಿಕೆಯಲ್ಲಿಯೇ ಅನೇಕ ಲೇಖನಗಳು ಪ್ರಕಟವಾದವು.

ವಾರೆನ್ ಬೆಟ್ ಅವರು ತಮ್ಮ ಮಕ್ಕಳಾದ ಹೋವರ್ಡ್, ಪೀಟರ್ ಮತ್ತು ದಿವಂಗತ ಸುಸಾನ್ (ಪುತ್ರಿ) ಹೆಸರಿನಲ್ಲಿ ಸಾಕಷ್ಟು ಸಂಪತ್ತನ್ನು ಕೊಟ್ಟಿದ್ದರೂ, ಬರ್ಕ್‌ಶೈರ್ ಹಾಥ್‌ವೇ ಕಂಪನಿಯ ನಾಯಕತ್ವ ವನ್ನು ವಹಿಸಿಲ್ಲ. ಈ ಮೂಲಕ ನಾಯಕತ್ವದ ಪಾತ್ರಕ್ಕೆ ಕೌಟುಂಬಿಕ ರಕ್ತ ಸಂಬಂಧಗಳಿಗಿಂತ, ಪ್ರತಿಭೆ ಮತ್ತು ಸಾಮರ್ಥ್ಯವೇ ನಿರ್ಣಾಯಕ ಎಂಬುದನ್ನು ಸಾರಿದ್ದಾರೆ.

ಭಾರತದಲ್ಲೂ ಸ್ವಜನಪಕ್ಷಪಾತದ ಬಗ್ಗೆ ರಾಜಕೀಯ, ಕಾರ್ಪೊರೇಟ್ ಮತ್ತು ಸಾಮಾಜಿಕ ವಲಯ ದಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಅಂಥ ಸ್ವಜನಪಕ್ಷಪಾತವನ್ನು ತಿರಸ್ಕರಿಸಿದವರ ಸಾಲಿನಲ್ಲಿ ಇದೀಗ ಬಫೆಟ್ ನಿಂತಿದ್ದಾರೆ. ಬಫೆಟ್ ಅವರ ಮಕ್ಕಳೂ ಎಲೆಮರೆಯ ಕಾಯಿಯಂತೆ ಇದ್ದವರು. 2006ರಿಂದೀಚೆಗೆ ತಮ್ಮ ಮಕ್ಕಳು ನಡೆಸುತ್ತಿರುವ ಚಾರಿಟಬಲ್ ಟ್ರಸ್ಟ್‌ಗೆ ಬರ್ಕ್‌ಶೈರ್‌ನ ತಲಾ 300 ಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಕೊಟ್ಟಿದ್ದಾರೆ.

ಇನ್ನೂ ತಲಾ 200 ಕೋಟಿ ಡಾಲರ್ ಕೊಡಲು ನಿರ್ಧರಿಸಿದ್ದಾರೆ. ಹೀಗಿದ್ದರೂ, ಬರ್ಕ್‌ಶೈರ್ ಹಾಥ್‌ ವೇಯ ಚುಕ್ಕಾಣಿಯನ್ನು ಮೆರಿಟ್ ಆಧಾರದಲ್ಲಿ ಗ್ರೇಗ್ ಅಬೆಲ್ ಎಂಬ ಮೂರನೇ ವ್ಯಕ್ತಿಗೆ ನೀಡಿದ್ದಾರೆ. ಸ್ವಂತ ಮಕ್ಕಳು ಎಂಬ ಕಾರಣಕ್ಕೆ ಕೊಟ್ಟಿಲ್ಲ. 2026ರಿಂದ ಅಬೆಲ್ ಅವರೇ ಕಂಪನಿಯ ಸಿಇಒ ಆಗಿ ಮುನ್ನಡೆಸಲಿದ್ದಾರೆ. ಬಫೆಟ್ ಸಲಹೆಗಾರರಾಗಿ ಇರಲಿದ್ದಾರೆ.

ಮಕ್ಕಳು ಕಂಪನಿಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ಹೋವರ್ಡ್ ಬಫೆಟ್ ಬಹುಶಃ ನಾನ್ ಎಕ್ಸಿಕ್ಯುಟಿವ್ ಚೇರ್ಮನ್ ಆಗಿ ಸಾಂಕೇತಿಕವಾಗಿ ಹುದ್ದೆಯಲ್ಲಿ ಇರಬಹುದು. ಆದರೆ ಸಕ್ರಿಯ ವಾಗಿ ನಾಯಕತ್ವ ಪಾತ್ರ ವಹಿಸುವುದಿಲ್ಲ.

ನಮ್ಮಲ್ಲಿ ‘ಕುಳಿತು ಉಂಬವರಿಗೆ ಕುಡಿಕೆ ಹೊನ್ನೂ ಸಾಲದು’ ಎಂಬ ಗಾದೆ ಇದೆಯಲ್ಲವೇ. ವಾರೆನ್ ಬಫೆಟ್ ಕೂಡ ಇದನ್ನು ನಂಬುತ್ತಾರೆ. “ಪೋಷಕರ ಜವಾಬ್ದಾರಿಯಾಗಿ ನಿಮ್ಮ ಮಕ್ಕಳಿಗೆ ಎಷ್ಟು ಬೇಕೊ ಅಷ್ಟನ್ನು ಕೊಡಿ, ಆದರೆ ಅವರು ಇನ್ನೇನೂ ಮಾಡುವುದು ಬೇಕಿಲ್ಲ ಎನ್ನುವಷ್ಟರ ಮಟ್ಟಿಗೆ ಕೊಡಬೇಡಿ" ಎಂಬ ಸಲಹೆಯನ್ನು ಪೋಷಕರ ಸಭೆಯೊಂದರಲ್ಲಿ ಬಫೆಟ್ ಕೊಟ್ಟಿದ್ದರು.

ಹೀಗಾಗಿ ತಮ್ಮ ಮಕ್ಕಳಿಗೆ ಸಮಾಜದ ಒಳಿತಿಗೆ ಅಗತ್ಯವಿರುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಎಂದಿ ದ್ದಾರೆ. ಅದಕ್ಕೆ ಬೇಕಾದಷ್ಟು ಸಂಪತ್ತನ್ನೂ ನೀಡಿದ್ದಾರೆ. ಆದರೆ ಬರ್ಕ್‌ಶೈರ್ ಕಂಪನಿಯ ನಾಯಕತ್ವ ವಿಚಾರದಲ್ಲಿ ಮಾತ್ರ ಬಫೆಟ್ ಅವರ ನಿಲುವು ಅತ್ಯಂತ ಸ್ಪಷ್ಟ- “ಅತ್ಯವಶ್ಯಕವಾದ ಪ್ರತಿಭೆಯ ಮೌಲ್ಯದ ಆಧಾರದಲ್ಲಿ ಸಂಸ್ಥೆಯ ಭವಿಷ್ಯವನ್ನು ಕಟ್ಟುವುದು, ರಕ್ತಗತ ಸಂಬಂಧದ ಅಧಾರದಲ್ಲಿ ಅಲ್ಲ".

ವಾರೆನ್ ಬಫೆಟ್ ಅವರ ಸರಳ ಜೀವನ ಶೈಲಿ, ಹವ್ಯಾಸಗಳ ಬಗ್ಗೆ ಹಲವಾರು ದಂತಕತೆಗಳೇ ಚಾಲ್ತಿ ಯಲ್ಲಿವೆ. ಬಫೆಟ್ ಷೇರು ಮಾರುಕಟ್ಟೆಯಲ್ಲಿ ಅಪಾರ ಸಂಪತ್ತು ಗಳಿಸಿದ್ದು ಹೇಗೆ ಎಂಬುದನ್ನು ವಿವರಿಸುವ ಸಾವಿರಾರು ಪುಸ್ತಕಗಳೂ ಬಂದಿವೆ. ವಾರೆನ್ ಬಫೆಟ್ ಅವರು ಜಗತ್ತಿನ ಆರನೇ ಅತ್ಯಂತ ಶ್ರೀಮಂತರಾಗಿದ್ದರೂ, 1958ರಲ್ಲಿ ಖರೀದಿಸಿದ್ದ ಹಳೆಯ ಮನೆಯಲ್ಲಿಯೇ ಈಗಲೂ ವಾಸಿಸುತ್ತಿದ್ದಾರೆ.

ಭಾರತದ ನಗರ, ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿಯೂ ಇಂಥ ಮನೆಗಳನ್ನು ನೋಡಬಹುದು. ಕಳೆದ 66 ವರ್ಷಗಳಿಂದ ಬಫೆಟ್ ಅವರು ನಿಸರ್ಗದ ಮಡಿಲಿನಲ್ಲಿರುವ ಸರಳವಾಗಿರುವ ಹಳೆಯ ಮತ್ತು ಕಂಫರ್ಟಬಲ್ ಆಗಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಐಫೋನ್ ಕಂಪನಿಯ ಷೇರುಗಳಲ್ಲಿ ಭಾರಿ ಹೂಡಿಕೆ ಮಾಡಿದ್ದರೂ, ಬಫೆಟ್ ಹಲವಾರು ವರ್ಷಗಳ ಕಾಲ ಐಫೋನ್ ಬಳಸುತ್ತಿರಲಿಲ್ಲ.

ಸ್ಯಾಮ್‌ಸಂಗ್‌ನ ಬೇಸಿಕ್ ಫೋನ್ ಉಪಯೋಗಿಸುತ್ತಿದ್ದರಂತೆ. ಸಾಧಾರಣ ಕಾರಿನಲ್ಲಿಯೇ ಅವರು ಓಡಾಡುತ್ತಾರೆ. ಪ್ರತಿ ದಿನ ಹಲವಾರು ದಿನಪತ್ರಿಕೆಗಳು, ನಿಯತಕಾಲಿಕೆಗಳು, ಹಣಕಾಸು ವರದಿಗಳು, ನಾನಾ ಕಂಪನಿಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಓದುತ್ತಾರೆ. ಜ್ಞಾನಾರ್ಜನೆಗೆ ದಿನಕ್ಕೆ ಕನಿಷ್ಠ 500 ಪುಟ ಗಳಷ್ಟಾದರೂ ಓದಿಕೊಳ್ಳಿ ಎಂದು ಬಫೆಟ್ ಸಲಹೆ ನೀಡುತ್ತಾರೆ.

ವಾರೆನ್ ಬೆಟ್ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾ ಹೇರಳವಾದ ಸಂಪತ್ತು ಗಳಿಸಿದ್ದು ಹೇಗೆ? ಎಂಬುದನ್ನು ಅವಲೋಕಿಸಿದರೆ, ದೀರ್ಘಕಾಲೀನ ಹೂಡಿಕೆಯೇ ಅವರ ಗುಟ್ಟು ಎಂಬುದು ರಟ್ಟಾಗುತ್ತದೆ. ಕೇವಲ 11ರ ಬಾಲಕನಾಗಿದ್ದಾಗಲೇ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್‌ಮೆಂಟ್ ಬಗ್ಗೆ ಆಸಕ್ತಿ ವಹಿಸಿ ಷೇರುಗಳನ್ನು ಖರೀದಿಸುತ್ತಿದ್ದರು ಬಫೆಟ್. 13ರ ವಯಸ್ಸಿನಲ್ಲಿ ಇನ್‌ಕಮ್ ಟ್ಯಾP ರಿಟರ್ನ್ ಸಲ್ಲಿಸಿದ್ದರು.

ಹದಿಹರೆಯದ ‘ವಾಷಿಂಗ್ಟನ್ ಪೋರ್ಬ್ಸ್’ ಪತ್ರಿಕೆಯನ್ನು ಮಾರುತ್ತಾ ತಿಂಗಳಿಗೆ 175 ಡಾಲರ್ ಸಂಪಾದಿಸುತ್ತಿದ್ದರು. ಕ್ಯಾಲೆಂಡರ್, ಚಾಕೊಲೇಟ್, ಗಾಲ್ಫ್ ಚೆಂಡು, ಸ್ಟಾಂಪ್ ಗಳನ್ನು ಮಾರಿ ತಮ್ಮ ಟೀಚರ್‌ಗಳ ಸಂಬಳಕ್ಕಿಂತ ಹೆಚ್ಚು ಗಳಿಸುತ್ತಿದ್ದರು. ಬಫೆಟ್ ಬರ್ಕ್‌ಶೈರ್ ಹಾಥ್‌ವೇ ಮಾಲೀಕರಾದ ಬಳಿಕ ಇದೇ ಪತ್ರಿಕೆಯ ಸುಮಾರು ಶೇ.30ರಷ್ಟು ಷೇರುಗಳನ್ನು 40 ವರ್ಷಗಳ ಕಾಲ ಇಟ್ಟುಕೊಂಡಿ‌ ದ್ದರು.

2014ರಲ್ಲಿ ಆ ಷೇರುಗಳನ್ನು ಮಾರಿ ಲಾಭ ಗಳಿಸಿದರು. ಬಫೆಟ್ ಅವರ ಬರ್ಕ್‌ಶೈರ್ ಹಾಥ್‌ವೇ, ನಾನಾ ಕಂಪನಿಗಳ ಷೇರುಗಳ ಕೊಡು-ಕೊಳ್ಳುವಿಕೆಯನ್ನು ಮಾಡುತ್ತದೆ. ವಾರೆನ್ ಬಫೆಟ್ ಅವರು ಕೋಕಾಕೋಲ, ಅಮೆರಿಕನ್ ಎಕ್ಸ್‌ಪ್ರೆಸ್, ಆಪಲ್, ಮೂಡೀಸ್, ಚೆವ್ರೋನ್ ಮುಂತಾದ ಹಲವಾರು ಕಂಪನಿಗಳ ಷೇರುಗಳಲ್ಲಿ ದೀರ್ಘಾವಧಿಯಿಂದ ಹೂಡಿಕೆ ಮಾಡಿದ್ದಾರೆ.

25-40 ವರ್ಷಗಳ ಸುದೀರ್ಘ ಹೂಡಿಕೆಯಿಂದ ಭಾರಿ ಲಾಭ ಗಳಿಸಿದ್ದಾರೆ. ಹಣ, ಹೂಡಿಕೆಯ ವಿಚಾರ‌ ಗಳಿಗೆ ಸಂಬಂಧಿಸಿ ವಾರೆನ್ ಬೆಟ್ ನೀಡಿರುವ ಹೇಳಿಕೆಗಳು ವಿಖ್ಯಾತವಾಗಿವೆ. ಅವುಗಳಲ್ಲಿ ಕೆಲವನ್ನು ಸ್ಮರಿಸಿಕೊಳ್ಳೋಣ: ಷೇರು ಮಾರುಕಟ್ಟೆಯಲ್ಲಿ ಇತರರು ಆತುರಪಟ್ಟು ಖರೀದಿಸುವಾಗ ಎಚ್ಚರ ವಹಿಸಬೇಕು. ಆಗ ಷೇರುಗಳನ್ನು ಮಾರಾಟ ಮಾಡಬಹುದು. ಇತರರು ತೀವ್ರ ಆತಂಕದಿಂದ ಷೇರು ಗಳನ್ನು ಮಾರುತ್ತಿರುವಾಗ, ಖರೀದಿಸಲು ಅವಕಾಶ ಸೃಷ್ಟಿಯಾಗುತ್ತದೆ.

ಆಗ ಕೊಳ್ಳುವ ಷೇರು ಭವಿಷ್ಯದಲ್ಲಿ ಲಾಭದಾಯಕವಾದೀತು’- ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತಕ್ಕೀಡಾದಾಗ ಹೂಡಿಕೆದಾರರು ಆತಂಕದಿಂದ ಷೇರುಗಳನ್ನು ಹಿಂದೆ ಮುಂದೆ ನೋಡದೆ ಮಾರುತ್ತಾರೆ. ಆದರೆ ಬುದ್ಧಿವಂತ ಹೂಡಿಕೆದಾರ ಅದೇ ಸಂದರ್ಭ ಉತ್ತಮ ಮೌಲ್ಯ‌ ವಿರುವ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಇಟ್ಟುಕೊಳ್ಳುತ್ತಾನೆ. ಭವಿಷ್ಯದಲ್ಲಿ ಲಾಭವನ್ನು ಜೇಬಿಗಿಳಿಸುತ್ತಾನೆ ಎಂಬುದು ಈ ಹೇಳಿಕೆಯ ತಾತ್ಪರ್ಯ.

ಯಶಸ್ವಿ ಹೂಡಿಕೆಯ ಮೊದಲ ನಿಯಮ ಏನೆಂದರೆ, ಹಣವನ್ನು ಕಳೆದುಕೊಳ್ಳಬೇಡಿ, ಎರಡನೇ ನಿಯಮ ಯಾವುದು ಎಂದರೆ, ಮೊದಲನೇ ನಿಯಮವನ್ನು ಮರೆಯಬೇಡಿ. ನೀವು ನಿಮ್ಮ ಆದಾ ಯಕ್ಕೆ ಕೇವಲ ಸಂಬಳ ಒಂದನ್ನೇ ಅವಲಂಬಿಸಿದ್ದರೆ, ಬಡತನಕ್ಕೆ ಒಂದೇ ಹೆಜ್ಜೆ ಹತ್ತಿರದಲ್ಲಿ ಇದ್ದೀರಿ ಎಂದರ್ಥ.

ಯಾವುದೇ ಷೇರಿನಲ್ಲಿ ಹೂಡಿಕೆಗೆ ಮುನ್ನ ಆ ಕಂಪನಿಯ ಬಿಸಿನೆಸ್ ಬಗ್ಗೆ ಚೆನ್ನಾಗಿ ಅರ್ಥಮಾಡಿ ಕೊಳ್ಳಿ. ಯಾವುದಾದರೂ ಒಂದು ಕಂಪನಿಯ ಷೇರನ್ನು ಮುಂದಿನ 10 ವರ್ಷವಾದರೂ ಇಟ್ಟು ಕೊಳ್ಳಬಹುದು ಎನ್ನಿಸಿದರೆ ಮಾತ್ರ ಹೂಡಿಕೆ ಮಾಡಿರಿ, ಇಲ್ಲದಿದ್ದರೆ 10 ನಿಮಿಷ ಕೂಡ ಇಟ್ಟು ಕೊಳ್ಳದಿರಿ. ದೀರ್ಘಾವಧಿಯಲ್ಲಿ ನಿಲ್ಲಬಲ್ಲ, ಲಾಭದಾಯಕವಾಗಬಲ್ಲ ಕಂಪನಿಯ ಷೇರುಗಳನ್ನು ಖರೀದಿಸಿ. ಸಾಲ ತಂದು ಹೂಡಿಕೆ ಮಾಡಲು ಹೋಗದಿರಿ.

ನಿಮ್ಮ ಖರ್ಚುಗಳನ್ನು ಮಾಡಿದ ಬಳಿಕ ಉಳಿತಾಯ ಮಾಡುತ್ತೇನೆ ಎಂದು ಭಾವಿಸದಿರಿ, ಉಳಿತಾಯ ಮಾಡಿದ ಬಳಿಕ ಮಿಕ್ಕಿದ್ದನ್ನು ಖರ್ಚು ಮಾಡಿ. ನೀವು ನಿಮ್ಮ ಮೇಲೆ ಮಾಡುವ ಹೂಡಿಕೆಯೇ ಎಲ್ಲಕ್ಕಿಂತ ಮಹತ್ವದ್ದು. ದರ ಎನ್ನುವುದು ನೀವು ಕೊಡುವಂಥದ್ದು, ಮೌಲ್ಯ ಎನ್ನುವುದು ನೀವು ಪಡೆಯುವಂಥದ್ದು. ಸಾಕ್ಸ್ ಆಗಿರಬಹುದು, ಸ್ಟಾಕ್ಸ್ ಆಗಿರಬಹುದು, ಗುಣಮಟ್ಟದ ಮೌಲ್ಯ ನಿಮ್ಮ ದಾಗಬೇಕು. ನೀವೇನು ಮಾಡುತ್ತಿದ್ದೀರಿ ಎನ್ನುವುದರ ಬಗ್ಗೆ ನಿಮಗೆ ಸಾಕಷ್ಟು ತಿಳಿದಿರಬೇಕು. ಇಲ್ಲದಿದ್ದರೆ ಅಪಾಯ ಸನ್ನಿಹಿತವಾಗಿದೆ ಎಂದರ್ಥ.