Uma Mahesh Vaidya Column: ತನಿಖಾಧಿಕಾರಿಗಳ ಮನೋಸ್ಥೈರ್ಯ ಕುಸಿಯುತ್ತಿದೆಯೇ ?
ಇತ್ತ ನೋಟಿಸ್ ನೀಡದೆಯೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ತನಿಖಾಧಿಕಾರಿಯನ್ನೇ ಅಕ್ಷರಶಃ ಆರೋಪಿಯ ರೀತಿ ನೋಡಿ, ಹಾಜರುಪಡಿಸಲಾದ ಆರೋಪಿ ಯನ್ನು ಆತನೆದುರೇ ಬಂಧನದಿಂದ ಮುಕ್ತಗೊಳಿಸಿ, ತನಿಖಾಧಿಕಾರಿಗೇ ಎಚ್ಚರಿಕೆ ನೀಡುವಂಥ ಪ್ರಸಂಗಗಳಿವೆ. ಇವು ಯಾವ ತನಿಖಾಧಿಕಾರಿಯ ಆತ್ಮಸ್ಥೈರ್ಯವನ್ನು ಕುಂದಿಸಲಾರವು ಹೇಳಿ? ತನಿಖಾಧಿಕಾರಿಯೇ ಸುಪ್ರೀಂ. ಆತ ತಾನು ಸಂಗ್ರಹಿಸಿದ ಸಾಕ್ಷ್ಯಗಳ ಅನುಸಾರ ತನ್ನದೇ ಅಭಿಪ್ರಾಯವನ್ನು ತಳೆದು, ಅದನ್ನು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾನೆ.


ಯಕ್ಷ ಪ್ರಶ್ನೆ
ಉಮಾ ಮಹೇಶ್ ವೈದ್ಯ
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಗಾಢವಾಗಿ ಚಿಂತನೆಯಲ್ಲಿರುವ ವಿಷಯವೆಂದರೆ, ತನಿಖಾಧಿಕಾರಿಗಳನ್ನು ರಕ್ಷಿಸಲು ಯಾರೂ ಮುಂದಾಗುತ್ತಿಲ್ಲ ಎಂಬುದು. ಈ ಬೇಸರಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಒಂದು- ತನಿಖಾಧಿಕಾರಿಗಳನ್ನು ತೆರೆದ ನ್ಯಾಯಾಲ ಯಕ್ಕೆ ಕರೆಸಿಕೊಂಡು ಎಲ್ಲರೆದುರು ಅವಮಾನಿಸುವುದು, ಹುದ್ದೆಗೆ ಧಕ್ಕೆ ತರುವ ಬೆದರಿಕೆ ಹಾಕುವುದು; ಈ ಸಂಬಂಧದ ಸುದ್ದಿಗಳನ್ನು ನ್ಯಾಯಾಲಯ ಕಲಾಪಗಳ ವಿಡಿಯೋ ದೃಶ್ಯಾವಳಿಯ ಮೂಲಕ ನಾವು ಕಾಣಬಹುದು. ಕೆಳಹಂತದ ನ್ಯಾಯಾಲಯಗಳಲ್ಲೂ ಈ ಚಿತ್ರಣ ಭಿನ್ನವೇನಿಲ್ಲ. ಇದರ ಜತೆಗೆ, ಆರೋಪಿತರು ತನಿಖಾಧಿಕಾರಿಗಳ ವಿರುದ್ಧ ಮಾಡುವ ಆಪಾದನೆಗಳ ಬಗ್ಗೆ ವಿಚಾ ರಣೆಗೆ ನಿರ್ದೇಶನ ನೀಡಿದರೆ, ತನಿಖಾಧಿಕಾರಿಯು ಇತ್ತ ಪ್ರಕರಣದ ತನಿಖೆ ಮಾಡಬೇಕೋ ಅಥವಾ ತನಿಖೆಯನ್ನು ಬಿಟ್ಟು ತನ್ನ ಮೇಲಿನ ಆಪಾದನೆಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಲು ಹರಸಾಹಸಪಡಬೇಕೋ? ಎನ್ನುವ ಭಾವನೆಗಳು ಕಾಡುತ್ತಿವೆ.
ಇನ್ನು, ಆರೋಪಿಯನ್ನು ಗುರುತಿಸುವುದು ಒಂದು ಕ್ಲಿಷ್ಟ ಭಾಗವಾದರೆ, ನಂತರ ಆತನನ್ನು ಬಂಧಿಸುವ ಅಥವಾ ಬಂಧಿಸದೇ ಇರುವ ನಿರ್ಧಾರ ಯಾವುದೇ ಅಗ್ನಿಪರೀಕ್ಷೆಗಿಂತ ಕಡಿಮೆಯೇನಿಲ್ಲ. ಉದಾಹರಣೆಗೆ, 7 ವರ್ಷದ ಒಳಗಿನ ಶಿಕ್ಷೆಗೆ ಒಳಪಡುವ ಅಪರಾಧಗಳ ಕುರಿತಂತೆ ತನಿಖಾಧಿಕಾರಿ ಗಳು ಆರೋಪಿಯನ್ನು ಒಮ್ಮೆಲೇ ಬಂಧಿಸಲು ಬರುವುದಿಲ್ಲವೆಂಬುದಾಗಿ ಸರ್ವೋಚ್ಚ ನ್ಯಾಯಾ ಲಯದ ತೀರ್ಪು ಇದ್ದು, ಇದರ ಅನುಸಾರ ಬಂಧಿಸುವ ಬದಲು ನೋಟಿಸ್ ನೀಡಿದಾಗ, ದೂರು ದಾರರ ಪರ ಜನರು, ಮಾಧ್ಯಮದವರು ‘ಆರೋಪಿತರ ದಸ್ತಗಿರಿ ಯಾವಾಗ?’ ಎಂದು ಸಾರ್ವಜನಿಕ ವಾಗಿಯೇ ಕೇಳಲು ಆರಂಭಿಸಿ, ಕೊನೆಗೆ ತನಿಖಾಧಿಕಾರಿಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ಹಂತಕ್ಕೆ ಹೋಗುತ್ತಾರೆ.
ಇತ್ತ ನೋಟಿಸ್ ನೀಡದೆಯೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ತನಿಖಾಧಿಕಾರಿಯನ್ನೇ ಅಕ್ಷರಶಃ ಆರೋಪಿಯ ರೀತಿ ನೋಡಿ, ಹಾಜರುಪಡಿಸಲಾದ ಆರೋಪಿ ಯನ್ನು ಆತನೆದುರೇ ಬಂಧನದಿಂದ ಮುಕ್ತಗೊಳಿಸಿ, ತನಿಖಾಧಿಕಾರಿಗೇ ಎಚ್ಚರಿಕೆ ನೀಡುವಂಥ ಪ್ರಸಂಗಗಳಿವೆ. ಇವು ಯಾವ ತನಿಖಾಧಿಕಾರಿಯ ಆತ್ಮಸ್ಥೈರ್ಯವನ್ನು ಕುಂದಿಸಲಾರವು ಹೇಳಿ? ತನಿಖಾಧಿಕಾರಿಯೇ ಸುಪ್ರೀಂ. ಆತ ತಾನು ಸಂಗ್ರಹಿಸಿದ ಸಾಕ್ಷ್ಯಗಳ ಅನುಸಾರ ತನ್ನದೇ ಅಭಿಪ್ರಾಯವನ್ನು ತಳೆದು, ಅದನ್ನು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾನೆ. ಇದು ಆತನ ಕರ್ತವ್ಯ ಹಾಗೂ ಮಹತ್ವದ ಜವಾಬ್ದಾರಿಯಾಗಿರುತ್ತದೆ. ತನಿಖಾಧಿಕಾರಿಯ ಈ ಜವಾಬ್ದಾರಿ ನಿರ್ವ ಹಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅನೇಕ ತೀರ್ಪು ಗಳಲ್ಲಿ ಸ್ಪಷ್ಟಪಡಿಸಿದೆ.
ಆದರೆ ಹಸ್ತಕ್ಷೇಪ ನಿಂತಿದೆಯೇ? ತನಿಖಾಧಿಕಾರಿಯು ಸ್ವತಂತ್ರವಾಗಿ ತನಿಖೆ ಮಾಡಲು ಸದ್ಯದ ಪರಿಸ್ಥಿತಿಯಲ್ಲಿ ಮುಕ್ತ ಅವಕಾಶವಿದೆಯೇ? ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ಪೊಲೀಸ್ ತನಿಖಾ ಕ್ರಮವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೈಗೊಳ್ಳುವಂತೆ ಮಾಡಲು ಬರುವು ದಿಲ್ಲ; ಆದರೆ ತನಿಖೆಯು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಮಾತ್ರ ಪಡೆಯಲು ಸಾಧ್ಯ.
ಈ ಹಿನ್ನೆಲೆಯಲ್ಲಿ, ಮೇಲಧಿಕಾರಿಗಳಾಗಲೀ ಅಥವಾ ನ್ಯಾಯಾಲಯಗಳಾಗಲೀ ತನಿಖೆಯ ಯಾವುದೇ ಹಂತದಲ್ಲಿ ‘ತನಿಖೆಯನ್ನು ಹೀಗೆಯೇ ಮಾಡಬೇಕು, ಆರೋಪಿಯನ್ನು ಬಂಽಸಬೇಕು ಅಥವಾ ಬಂಽಸಬಾರದು, ತನಿಖೆಯನ್ನು ಇಷ್ಟೇ ದಿನದಲ್ಲಿ ಪೂರ್ಣಗೊಳಿಸಬೇಕು, ದೋಷಾರೋಪಣ ವರದಿಯನ್ನೇ ದಾಖಲಿಸಬೇಕು’ ಎಂದು ಯಾವುದೇ ಕಾರಣಕ್ಕೆ ನಿರ್ದೇಶನ ನೀಡುವಂತಿಲ್ಲ. ಈ ತೀರ್ಪಿನ ಸೂಚನೆಗಳು ತನಿಖಾಧಿಕಾರಿಯ ಮನೋಸ್ಥೈರ್ಯವನ್ನು ಹೆಚ್ಚಿಸಿ, ಸ್ವತಂತ್ರವಾಗಿ ನಿರ್ಭೀತಿಯಿಂದ ತನಿಖೆ ಮಾಡಲು ತಾನು ಸಿದ್ಧ ಅಂತ ಆತ ಭಾವಿಸುತ್ತಿರುವಾಗಲೇ, ಆತನ ಈ ಉತ್ಸಾಹಕ್ಕೆ ಪರೋಕ್ಷವಾಗಿ ತಣ್ಣೀರೆರಚುವ ಪ್ರಯತ್ನಗಳು, ಹಸ್ತಕ್ಷೇಪಗಳು ಆದಲ್ಲಿ ಅವು ತನಿಖೆಯ ಕ್ರಮಗಳನ್ನು ಬಾಧಿಸುತ್ತವೆ.
ಉದಾಹರಣೆಗೆ ತನಿಖಾಧಿಕಾರಿಯು, ‘ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಂತರ ಆರೋಪಿಯನ್ನು ಬಂಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಹೇಳಿದರೆ, ಆರೋಪಿಯನ್ನು ತಕ್ಷಣ ಬಂಧಿಸು ವಂತೆ ಬರುವ ಒತ್ತಡವು ಆತನ ನಿರ್ಧಾರವನ್ನು ಬದಲಿಸುತ್ತದೆ. ಜತೆಗೆ, ಸೂಕ್ತ ಸಾಕ್ಷ್ಯ ವಿಲ್ಲದೆಯೇ ಬಂಧನ ಮಾಡಿರುತ್ತಾರೆಂಬ ನ್ಯಾಯಾಲಯದ ಅಭಿಪ್ರಾಯವು ಆ ತನಿಖಾಧಿಕಾರಿಯ ವಿರುದ್ಧದ ಇಲಾಖಾ ವಿಚಾರಣೆಗೆ ಮಾತ್ರವಲ್ಲದೆ ಇತರ ಕಾನೂನು ಕ್ರಮಗಳಿಗೂ ದಾರಿ ಮಾಡಿ ಕೊಡುತ್ತದೆ.
ಇಂಥ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ತಾವು ಏನು ಮಾಡಬೇಕೆಂಬುದರ ಬಗ್ಗೆ ದಿಕ್ಕು ತೋಚದೆ, ‘ಇನ್ನು ಮುಂದೆ ತನಿಖಾಧಿಕಾರಿಯೇ ಆಗಬಾರದು’ ಎಂಬ ಭಾವನೆ ತೀವ್ರವಾಗುತ್ತದೆ. ಇನ್ನು, ತನಿಖೆಯಲ್ಲಿರುವ ಪ್ರಕರಣವು ‘ರಾಜಕೀಯ-ಪ್ರೇರಿತ’ವಾಗಿದ್ದರಂತೂ ಮುಗಿದೇಹೋಯಿತು. ತನಿಖಾಧಿಕಾರಿಗಳ ಪ್ರತಿಯೊಂದು ಹೆಜ್ಜೆಯ ಮೇಲೂ ಹಿರಿಯ ಅಧಿಕಾರಿಗಳು, ನ್ಯಾಯಾಲಯಗಳು ಹದ್ದಿನ ಕಣ್ಣಿಟ್ಟಿದ್ದರೆ,
ಕೆಲ ಮಾಧ್ಯಮಗಳಂತೂ ತಾವೇ ತನಿಖಾ ತಂಡದ ಒಂದು ಭಾಗವೆಂಬಂತೆ ವರ್ತಿಸುತ್ತಾ, ತನಿಖೆ ಯಲ್ಲಿ ಇರುವ ಅಥವಾ ಇಲ್ಲದಿರುವ ವಿಷಯಗಳನ್ನು ಬಹಿರಂಗಪಡಿಸುತ್ತಾ, ತನಿಖೆಯ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸುತ್ತಾ, ಚರ್ಚೆಯನ್ನು ಹುಟ್ಟುಹಾಕುತ್ತವೆ. ತನಿಖೆಯ ಬಗ್ಗೆ ತಿಳಿಯದ ಜನರು ಮಾಧ್ಯಮದ ತನಿಖೆಯನ್ನೇ ಆಧರಿಸಿಕೊಂಡು, ನಂತರ ತನಿಖಾಧಿಕಾರಿಯ ತನಿಖಾ ಕ್ರಮವನ್ನು ಪ್ರಶ್ನಿಸುವ ಹಂತಕ್ಕೆ ಬಂದು ನಿಲ್ಲುತ್ತಾರೆ.
ಇಂಥ ಪ್ರಕರಣಗಳಲ್ಲಿ ಆರೋಪಿಯೇನಾದರೂ ನ್ಯಾಯಾಂಗ ಬಂಧನದಲ್ಲಿದ್ದರೆ ಅಥವಾ ಮಹಿಳಾ ದೌರ್ಜನ್ಯದಂಥ ಪ್ರಕರಣಗಳಲ್ಲಿದ್ದರೆ, ನಿಗದಿತ ಅವಧಿಯೊಳಗೇ ದೋಷಾರೋಪಣ ವರದಿಯನ್ನು ಸಲ್ಲಿಸಬೇಕಾಗುವುದರಿಂದ ತನಿಖಾಧಿಕಾರಿಗಳು ಸತತ ಒತ್ತಡದಲ್ಲಿ ಸಿಲುಕುತ್ತಾರೆ; ಇಂಥ ಒತ್ತಡ ದಲ್ಲಿಯೇ ಅವರು ತನಿಖೆಯನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಲ್ಲಿ ಹಾಗೂ ತೀವ್ರಗತಿ ಯಲ್ಲಿ ಪೂರ್ಣಗೊಳಿಸುವ ಭರದಲ್ಲಿ, ತನಿಖೆಯಲ್ಲಿ ಕೆಲವೊಂದು ಲೋಪಗಳು/ಕೊರತೆಗಳು ಉಳಿದು ಬಿಡುವುದು ಸಹಜ.
ಬೇಗನೆ ದೋಷಾರೋಪಣ ಪಟ್ಟಿಯನ್ನು ಸಜ್ಜುಗೊಳಿಸುವ ಯತ್ನದಲ್ಲಿ ಲೋಪಗಳ ಬಗ್ಗೆ ಗಮನ ಕೊಡದೇ ನ್ಯಾಯಾಲಯಕ್ಕೆ ಅದನ್ನು ಸಲ್ಲಿಸುವುದರಿಂದ, ಆರೋಪಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾದರೂ, ಆ ಲೋಪಗಳೇ ವಿಚಾರಣೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲು ಪ್ರಧಾನ ಕಾರಣಗಳಾಗುತ್ತವೆ. ಆ ಲೋಪಗಳನ್ನು ಎಸಗಿದ ತನಿಖಾಧಿಕಾರಿಯ ಕುರಿತು ನ್ಯಾಯಾಲಯವು ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿದರಂತೂ, ಆತನ ವೃತ್ತಿಭವಿಷ್ಯಕ್ಕೇ ಕಂಟಕ ಒದಗಿದಂತೆ. ಆ ಬಿಡುಗಡೆಯ ತೀರ್ಪು ಪರಿಶೀಲನಾ ಸಮಿತಿಯೆದುರು ಬಂದು, ‘ತನಿಖಾಧಿಕಾರಿಯ ಕರ್ತವ್ಯಲೋಪದಿಂದ ಆರೋಪಿಯು ಬಿಡುಗಡೆಯಾಗಿದ್ದಾನೆ’ ಎಂದು ಅದು ಅಭಿಪ್ರಾಯಪಟ್ಟು ಇಲಾಖಾ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದರಂತೂ ಆ ತನಿಖಾಧಿಕಾರಿ ಯನ್ನು ಶಿವನೇ ಕಾಪಾಡಬೇಕು.
ಇಂಥ ಶಿಸ್ತುಕ್ರಮವು ಆ ತನಿಖಾಧಿಕಾರಿಯ ಕರ್ತವ್ಯಪರತೆ, ಕಾತುರತೆ, ಹುಮ್ಮಸ್ಸು, ತನಿಖಾ ಕೌಶಲ ಗಳಿಗೆ ಮಂಕು ಕವಿಯುವಂತೆ ಮಾಡಿದರೆ, ಇಂಥ ಬೆಳವಣಿಗೆಯನ್ನು ಗಮನಿಸುವ ಇತರೆ ತನಿಖಾಧಿ ಕಾರಿಗಳ ಮನೋಸ್ಥೈರ್ಯವೂ ಕುಗ್ಗಿಬಿಡುತ್ತದೆ.
ಒಬ್ಬ ಬಾಲಕಿಯ ಮೇಲೆ ಅತ್ಯಾಚಾರಗೈದು, ನಂತರ ಕೊಲೆ ಮಾಡಿ, ಕಾಡಿನ ಒಂದು ಭಾಗದಲ್ಲಿ ಶವವನ್ನು ಎಸೆದು ಹೋಗಿದ್ದಾರೆ ಎಂಬ ಪ್ರಕರಣವನ್ನೇ ಉದಾಹರಣೆಯಾಗಿ ಪರಿಗಣಿಸೋಣ. ಈ ಪ್ರಕರಣದಲ್ಲಿ ಪೊಲೀಸರು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ, ನೂರಾರು ಸ್ಥಳೀಯರು ಆ ಸ್ಥಳಕ್ಕೆ ಕುತೂಹಲದಿಂದ ಭೇಟಿಕೊಟ್ಟು, ಅಲ್ಲಿ ಸಿಗಬಹುದಾಗಿದ್ದ ಪಾದಮುದ್ರೆ, ಬೆರಳುಮುದ್ರೆ ಹಾಗೂ ಇತರೆ ಭೌತಿಕ ಸಾಕ್ಷ್ಯಗಳನ್ನು ಅರಿವಿಲ್ಲದೆಯೇ ಊನಗೊಳಿಸಿದರೆ/ನಾಶಪಡಿಸಿದರೆ, ತನಿಖಾಧಿಕಾರಿ ಗಳಿಗೆ ಅಂಥ ಮಹತ್ವಪೂರ್ಣ ಸಾಕ್ಷಿ ದೊರಕದೆ ತನಿಖೆಗೆ ಹಿನ್ನಡೆಯಾಗುತ್ತದೆ.
ಒಂದು ವೇಳೆ, ವಿಧಿವಿಜ್ಞಾನ ಪರಿಣತರನ್ನೂ ಸ್ಥಳಕ್ಕೆ ಕರೆಯಿಸಿ ಸಾಕ್ಷ್ಯಗಳನ್ನು ಕಲೆಹಾಕುವಂತೆ ಕೇಳಿಕೊಂಡರೂ, ನೆರೆದ ಜನರ ಬೇಜವಾಬ್ದಾರಿಯುತ ವರ್ತನೆಗಳಿಂದಾಗಿ ಸಾಕ್ಷ್ಯನಾಶವಾದ ಹಿನ್ನೆಲೆ ಯಲ್ಲಿ ಅವರೂ ನಿಸ್ಸಹಾಯಕರಾಗುತ್ತಾರೆ. ಆದರೆ ನ್ಯಾಯಾಲಯದಲ್ಲಿ ಇದೊಂದೇ ಅಂಶದ ಮೇಲೆ ‘ತನಿಖಾಧಿಕಾರಿಯು ಗೋಲ್ಡನ್ ಅವರ್‌ನಲ್ಲಿ ಸಾಕ್ಷ್ಯ ಸಂಗ್ರಹಿಸಿಲ್ಲ’ ಎಂಬ ಕಾರಣ ನೀಡಿ ಆರೋಪಿ ಯ ಬಿಡುಗಡೆಗೆ ಅನುವುಮಾಡಿಕೊಟ್ಟರೆ, ಏನೂ ತಪ್ಪು ಮಾಡದ ಅಧಿಕಾರಿಯು ಆ ಅಭಿಪ್ರಾಯದ ಪರಿಣಾಮವಾಗಿ ಸಂಕಷ್ಟವನ್ನೂ ಮಾನಸಿಕ ಹಿಂಸೆಯನ್ನೂ ಅನುಭವಿಸಬೇಕಾಗು ತ್ತದೆ, ಸಮಾಜದ ಕೆಂಗಣ್ಣಿಗೂ ಅನಗತ್ಯವಾಗಿ ಗುರಿಯಾಗಬೇಕಾಗುತ್ತದೆ.
ಇಂಥ ಸಂದರ್ಭಗಳು ಎಂಥದೇ ಗಟ್ಟಿ ಗುಂಡಿಗೆಯ ತನಿಖಾಧಿಕಾರಿಯ ಜಂಘಾಬಲವನ್ನೇ ಉಡುಗಿಸಿ ಬಿಡುತ್ತವೆ. ಹೀಗಿರುವಾಗ, ಯಾವ ಪೊಲೀಸ್ ಅಧಿಕಾರಿಯಾದರೂ ಗಂಭೀರ ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಲು ಇಚ್ಛೆಪಡುತ್ತಾರೆ ಹೇಳಿ? ಏನೋ ಒಂದು ಸಬೂಬು ಹೇಳಿಯೋ ಅಥವಾ ಅನಾರೋಗ್ಯದ ನೆಪವನ್ನು ಮುಂದುಮಾಡಿಯೋ ಅವರು ಆಸ್ಪತ್ರೆಗೆ ದಾಖಲಾಗಿ ಈ ಹೊಣೆ ಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ.
ಆರೋಪಿಯೇನಾದರೂ ಸಮಾಜಘಾತುಕ ವ್ಯಕ್ತಿಯಾಗಿದ್ದರೆ, ಆತನನ್ನು ಬಂಧಿಸಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರೆ, ಆಗ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲೆಂದು ಅನಿವಾರ್ಯವಾಗಿ ಆತನ ಕಾಲಿಗೋ ಅಥವಾ ತೊಡೆಗೋ ಗುಂಡುಹಾರಿಸಿ, ಆತನನ್ನು ಬಂಧಿಸುವ ಅನೇಕ ಪ್ರಕರಣಗಳನ್ನು ನಾವು ಕೇಳಿದ್ದೇವೆ ಹಾಗೂ ಮಾಧ್ಯಮಗಳಲ್ಲಿ ನೋಡಿದ್ದೇವೆ. ಒಂದು ವೇಳೆ, ಅದೇ ಗುಂಡು ಆ ಆರೋಪಿಯ ಪ್ರಾಣವನ್ನು ಬಲಿ ತೆಗೆದುಕೊಂಡರೆ, ಆಗ ಆ ಪೊಲೀಸ್ ಅಧಿಕಾರಿಯ ವಿರುದ್ಧ ಮಾನವ ಹಕ್ಕುಗಳ ಆಯೋಗವು ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ಕೈಗೊಳ್ಳಲು ಮುಂದಾದರೆ, ಆ ತನಿಖಾಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ. ಆ ಪ್ರಕರಣವು ಒಂದು ತಾರ್ಕಿಕ ಅಂತ್ಯಕ್ಕೆ ಬರುವಷ್ಟರಲ್ಲಿ ಆ ಪೊಲೀಸ್ ಅಧಿಕಾರಿಯ ವೃತ್ತಿಬದುಕಷ್ಟೇ ಅಲ್ಲ, ಆತನ ವೈಯಕ್ತಿಕ ಜೀವನವೂ ಕುಸಿತದ ಅಂಚಿಗೆ ಬಂದಿರು ತ್ತದೆ.
ಪೊಲೀಸ್ ಅಧಿಕಾರಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಇಂಥ ಅನುಭವಗಳು ಅಡ್ಡಿ ಯನ್ನುಂಟು ಮಾಡುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ರೀತಿಯ ಪ್ರಸಂಗಗಳು ಒಂದು ರೀತಿಯಲ್ಲಿ ಪೊಲೀಸ್ ಅಧಿಕಾರಿಗಳ ಮನೋವ್ಯಾಕುಲತೆಗೆ ಕಾರಣವಾದರೆ, ಮತ್ತೊಂದೆಡೆ ನ್ಯಾಯಾಲಯಗಳಲ್ಲಿ ತನಿಖಾಧಿಕಾರಿಗಳು ಎದುರಿಸುವ ಸನ್ನಿವೇಶಗಳು ಕೂಡ ಅವರ ಆತ್ಮಸ್ಥೈರ್ಯಕ್ಕೆ ಬಲವಾದ ಪೆಟ್ಟುಕೊಡುವಂಥವುಗಳು ಎಂದರೆ ತಪ್ಪಾಗಲಿಕ್ಕಿಲ್ಲ.
ನೂರಾರು ಪ್ರಕರಣಗಳಲ್ಲಿ, ಪೊಲೀಸ್ ಅಧಿಕಾರಿಯು ಅಪರಾಧ ನಡೆಯುವ ಸ್ಥಳದ ಮೇಲೆ ದಾಳಿ ಮಾಡಿ, ನಂತರ ಸರಕಾರದ ಪರ ದೂರು ನೀಡುವ ಕರ್ತವ್ಯವನ್ನು ನಿರ್ವಹಿಸಿರುತ್ತಾನೆ. ಆದರೆ ಆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವಷ್ಟರಲ್ಲಿ ಹಲವು ತಿಂಗಳು ಕಳೆದು ಹೋಗಿರು ತ್ತವೆ. ಆದರೆ ದೂರುದಾರನಾಗಿ ಸಾಕ್ಷಿ ಹೇಳಲು ಬರುವ ಪೊಲೀಸ್ ಅಧಿಕಾರಿಗೆ, ತನ್ನ ದೂರನ್ನು ನೋಡಿಕೊಳ್ಳದೆಯೇ ಕೇಳಿದ ಪ್ರಶ್ನೆಗೆ ಉತ್ತರ ಹೇಳುವಂತೆ ನ್ಯಾಯಾಲಯ ಹಾಗೂ ಆರೋಪಿ ಪರ ವಕೀಲರು ಒತ್ತಾಯ ಮಾಡಿದರಂತೂ ಅಯೋಮಯವಾಗುತ್ತದೆ.
ತಾನು ಏಕಾದರೂ ದಾಳಿಮಾಡಿ ಅಪರಾಧ ಪತ್ತೆ ಹಚ್ಚಿ ದೂರು ನೀಡಿದೆನೋ? ಎಂದು ಆ ಪೊಲೀಸ್ ಅಧಿಕಾರಿಗೆ ಒಂದು ಕ್ಷಣ ಅನಿಸುತ್ತದೆ. ದಾಖಲೆಗಳನ್ನು ನೋಡದೆಯೇ ಆತ ತನ್ನ ಸ್ಮರಣಶಕ್ತಿಯನ್ನೇ ನಂಬಿಕೊಂಡು ನೀಡಿದ ಸಾಕ್ಷ್ಯದಲ್ಲಿ ಇರುವ ಲೋಪ-ದೋಷಗಳನ್ನು ನ್ಯಾಯಾಲಯವು ಆರೋಪಿ ಯನ್ನು ಬಿಡುಗಡೆಗೊಳಿಸುವಲ್ಲಿನ ಕಾರಣಗಳನ್ನಾಗಿಸಿದರೆ, ಆ ದೂರುದಾರ ಪೊಲೀಸ್ ಅಧಿಕಾರಿ ಯು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಾನೆ.
ಜತೆಗೆ, ತನ್ನ ವೃತ್ತಿ ಬದುಕಿನಲ್ಲಿ ಸರಕಾರದ ಪರವಾಗಿ ‘ಸುಮೊಟೊ’ ಪ್ರಕರಣವನ್ನು ದಾಖಲಿಸಲು ಮುಂದಾಗುವುದಿಲ್ಲ. ಪೊಲೀಸ್ ಇಲಾಖೆಯನ್ನು ಹೊರತುಪಡಿಸಿ ನಮ್ಮ ರಾಜ್ಯದ ಯಾವುದೇ ಇಲಾಖೆಯಲ್ಲಿ ತಮ್ಮ ಸಹೋದ್ಯೋಗಿಗಳ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ, ದೋಷಾರೋಪಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ನಂತರ ಅಭಿಯೋಜನೆಗೊಳಿಸಿ ಶಿಕ್ಷೆ ಯಾಗುವಂತೆ ಕ್ರಮ ಕೈಗೊಳ್ಳುವ ಚಿತ್ರಣವನ್ನು ನಾವು ಕಾಣಲಾರೆವು. ಒಂದು ಪ್ರಕರಣದ ತನಿಖಾಧಿಕಾರಿಯು ಅದೇ ಪ್ರಕರಣದ ಮುಂದುವರಿದ ತನಿಖೆಯಲ್ಲಿ ಆರೋಪಿಯಾಗಿರುವ ಸಂದರ್ಭಗಳು ನಮ್ಮ ಕಣ್ಣ ಮುಂದಿವೆ.
ಇಂಥ ಸನ್ನಿವೇಶಗಳು ಇತರ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಂದಿಸಿ, ‘ನನ್ನ ರಕ್ಷಣೆಗೆ ಯಾರಿದ್ದಾರೆ?’ ಎಂಬ ಅನಾಥಭಾ ವದಿಂದ ಅವರನ್ನು ಬಳಲಿಸುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ. ಪೊಲೀಸರ, ತನಿಖಾಧಿಕಾರಿಗಳ ಮನೋಧೈರ್ಯದ ಕುಸಿತ ನಾಗರಿಕ ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನು ಸುರಕ್ಷತೆಯನ್ನು ನಿಶ್ಚಿತಗೊಳಿಸುವ ಪೊಲೀಸ್ ಅಧಿಕಾರಿಗಳ ಹಾಗೂ ತನಿಖಾಧಿಕಾರಿಗಳ ಆತ್ಮಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳುವುದರ ಜತೆಗೆ, ಅದನ್ನು ರಕ್ಷಿಸುವ ಮತ್ತು ಹೆಚ್ಚಿಸುವ ವಾತಾವರಣವನ್ನೂ ವ್ಯವಸ್ಥೆಯನ್ನೂ ರೂಪಿಸಬೇಕಾದ್ದು ಇಂದಿನ ಅಗತ್ಯವಾಗಿದೆ.
(ಲೇಖಕಿ ಹವ್ಯಾಸಿ ಬರಹಗಾರ್ತಿ)