ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸ್ವಪಕ್ಷೀಯರಿಂದಲೇ ತಿರಸ್ಕೃತರಾದರು !

ಕಾಂಗ್ರೆಸ್ಸಿನ ಎಲ್ಲ ವೇದಿಕೆಗಳಲ್ಲಿ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭಾವಚಿತ್ರಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ಲಾಲ್ ಬಹಾದುರ್ ಶಾಸ್ತ್ರಿ ಯವರ ಭಾವಚಿತ್ರವನ್ನು ಕಾಣಬಹುದು. ಆದರೆ ಅಪ್ಪಿತಪ್ಪಿಯೂ ನರಸಿಂಹರಾಯರ ಚಿತ್ರಕ್ಕೆ ಆಸ್ಪದವೇ ಇಲ್ಲ. ಯಾವ ವೇದಿಕೆಗಳಲ್ಲೂ ಅವರ ಹೆಸರನ್ನೂ ಹೇಳುವುದಿಲ್ಲ.

ಸ್ವಪಕ್ಷೀಯರಿಂದಲೇ ತಿರಸ್ಕೃತರಾದರು !

ಸಂಪಾದಕರ ಸದ್ಯಶೋಧನೆ

ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ನೆಹರು-ಗಾಂಧಿ ಕುಟುಂಬದ ಹೊರಗಿನವರಾಗಿ ಮಹತ್ವದ ಕಾಣಿಕೆ ನೀಡಿದ ನಾಯಕರುಗಳಲ್ಲಿ ಪಿ.ವಿ.ನರಸಿಂಹರಾವ್ ಅವರು ಪ್ರಮುಖರು. ಅನೇಕರು ರಾಜಕೀಯ ಕ್ಷೇತ್ರ ಪ್ರವೇಶಿಸಿ, ಕೊನೆ ತನಕ ರಾಜಕಾರಣಿಯಾಗಿಯೇ ಇರುತ್ತಾರೆ. ಆದರೆ ನರಸಿಂಹ ರಾಯರು ರಾಜನೀತಿಜ್ಞ ( statesman) ಎಂದು ಕರೆಯಿಸಿಕೊಳ್ಳುವ ಎತ್ತರಕ್ಕೆ ಸಾರ್ವಜನಿಕ ರಂಗದಲ್ಲಿ ಬೆಳೆದರು. ಈ ದೇಶದ ಒಂಬತ್ತನೇ ಪ್ರಧಾನಿಯಾಗಿ ಅವರು ಕೈಗೊಂಡ ಕ್ರಮಗಳು ಇಂದಿಗೂ ಪ್ರಶಂಸೆ ಗೆ ಪಾತ್ರವಾಗಿವೆ. ದೇಶದ ಆರ್ಥಿಕತೆಯನ್ನು ಮುಕ್ತವಾಗಿ ತೆರೆದಿಟ್ಟು, ಉದಾರ ನೀತಿಗೆ ನಾಂದಿ ಹಾಡಿದ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಆ ದಿನಗಳಲ್ಲಿ ನರಸಿಂಹರಾಯರಿಗೆ ಬಹುಮತವಿರಲಿಲ್ಲ. ಗಾಂಧಿ ಮನೆತನದ ಬೆಂಬಲವೂ ಇರಲಿಲ್ಲ.

ಆದರೂ ಆ ಸಂಕಷ್ಟ ಮತ್ತು ವಿಷಮ ರಾಜಕೀಯ ಪರಿಸ್ಥಿತಿಯಲ್ಲಿ, ಅವರು ದೇಶದ ಆರ್ಥಿಕತೆ ಯನ್ನು ಜಾಗತೀಕರಣದ ಹೊಸ್ತಿಲಲ್ಲಿ ತಂದಿರಿಸಿದ್ದು ಅತ್ಯಂತ ದಿಟ್ಟ ಕ್ರಮ ಎಂದೇ ಪರಿಗಣಿತ ವಾಗಿದೆ. ನೆಹರು ನಂತರ ಈ ದೇಶ ಕಂಡ ಅತ್ಯಂತ ಮೇಧಾವಿ, ಬಹುಶ್ರುತ ಮತ್ತು ಪ್ರಬುದ್ಧ ನಾಯಕ ಎಂದು ಕರೆಯಿಸಿಕೊಂಡ ನರಸಿಂಹರಾಯರನ್ನು ಅವರದ್ದೇ ಕಾಂಗ್ರೆಸ್ ಪಕ್ಷ ಮರೆತಿದ್ದು, ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಗೌರವ, ಮರ್ಯಾದೆ ಮತ್ತು ಸ್ಥಾನಮಾನವನ್ನು ನೀಡದಿರುವುದು ನರಸಿಂಹರಾಯರಿಗೊಂದೇ ಅಲ್ಲ, ತನಗೂ (ಪಕ್ಷಕ್ಕೆ) ಮಾಡಿಕೊಂಡ ಘೋರ ಅನ್ಯಾಯ.

ಕಾಂಗ್ರೆಸ್ಸಿನ ಎಲ್ಲ ವೇದಿಕೆಗಳಲ್ಲಿ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭಾವಚಿತ್ರಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ಲಾಲ್ ಬಹಾದುರ್ ಶಾಸ್ತ್ರಿ ಯವರ ಭಾವಚಿತ್ರವನ್ನು ಕಾಣಬಹುದು. ಆದರೆ ಅಪ್ಪಿತಪ್ಪಿಯೂ ನರಸಿಂಹರಾಯರ ಚಿತ್ರಕ್ಕೆ ಆಸ್ಪದವೇ ಇಲ್ಲ. ಯಾವ ವೇದಿಕೆಗಳಲ್ಲೂ ಅವರ ಹೆಸರನ್ನೂ ಹೇಳುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಆತ್ಮಹತ್ಯೆಯಲ್ಲೂ ಮುಂದು

ಡಾ.ಮನಮೋಹನ್ ಸಿಂಗ್ ಹೆಸರನ್ನಾದರೂ ಹೇಳಿಯಾರು, ಆದರೆ ನರಸಿಂಹರಾಯರು ಸಂಪೂರ್ಣ ವರ್ಜ್ಯ. ಹಾಗೆ ನೋಡಿದರೆ, ಡಾ.ಮನಮೋಹನ್ ಸಿಂಗ್‌ರನ್ನು ರಾಜಕೀಯಕ್ಕೆ ಕರೆ ತಂದು ಹಣಕಾಸು ಸಚಿವರನ್ನಾಗಿ ಮಾಡಿದವರು ನರಸಿಂಹರಾಯರೇ. ತಮ್ಮನ್ನು ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಲು ಪ್ರಧಾನಿ ನರಸಿಂಹರಾಯರನ್ನು ಡಾ.ಸಿಂಗ್ ಭೇಟಿ ಮಾಡಿದ್ದರು. ಆದರೆ ಅವರ ಅದೃಷ್ಟವೇ ಬದಲಾಯಿತು.

ನಂತರ ಡಾ.ಸಿಂಗ್ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದು ಬೇರೆ ಕಥೆ. 2004ರ ಡಿಸೆಂಬರ್ ನಲ್ಲಿ ರಾಯರು ದಿಲ್ಲಿಯಲ್ಲಿ ನಿಧನರಾದಾಗ, ಅವರ ಅಂತಿಮ ಸಂಸ್ಕಾರ ರಾಷ್ಟ್ರದ ರಾಜಧಾನಿಯಲ್ಲೇ ನೆರವೇರಲಿ ಎಂದು ಅವರ ಕುಟುಂಬದ ಸದಸ್ಯರು ಬಯಸಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿ ಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್, ಯಾವ ಕಾರಣಕ್ಕೂ ಅದು ಸಾಧ್ಯವಿಲ್ಲ ಎಂದು ಖಡಾಖಡಿ ಹೇಳಿಬಿಟ್ಟರು.

ಅಷ್ಟೇ ಅಲ್ಲ, ನರಸಿಂಹರಾಯರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಎಐಸಿಸಿ ಕಟ್ಟಡ ದಲ್ಲಿರಿಸಲು ಸಹ ಅವಕಾಶವನ್ನು ನೀಡಲಿಲ್ಲ. ನಂತರ ರಾಯರ ಅಂತ್ಯಕ್ರಿಯೆ ಹೈದರಾಬಾದಿನಲ್ಲಿ ನೆರವೇರಿತು. ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಅವರ ಪಾರ್ಥಿವ ಶರೀರಕ್ಕೆ ಪಕ್ಷ ಗೌರವಯುತವಾಗಿ ಅಂತಿಮ ನಮನವನ್ನೂ ಸಲ್ಲಿಸಲಿಲ್ಲ. ಹೈದರಾಬಾದಿನ ಸಂಜೀವಯ್ಯ ಪಾರ್ಕಿನಲ್ಲಿ ನರಸಿಂಹರಾ ಯರ ಸಮಾಧಿಯನ್ನು ನಿರ್ಮಿಸಲಾಯಿತು.

ಹತ್ತು ವರ್ಷಗಳ ಬಳಿಕ ತೆಲಂಗಾಣ ಸರಕಾರ ನರಸಿಂಹರಾಯರ ಜನ್ಮದಿನವನ್ನು ರಾಜ್ಯ ಸರಕಾರಿ ಆಚರಣೆಯಾಗಿ ಘೋಷಿಸಿತು. ದಿಲ್ಲಿಯಲ್ಲಿ ದೇಶದ ದಿವಂಗತ ಪ್ರಧಾನಿಗಳ ಸಮಾಧಿ ಸ್ಮಾರಕವಿದ್ದರೆ, ನರಸಿಂಹರಾಯರದ್ದೊಂದೇ ದಿಲ್ಲಿಯಿಂದ ಹೊರಗೆ ನಿರ್ಮಿಸಲಾಯಿತು.