Suruli Short Film: ಮನಮುಟ್ಟುವ ಕಥೆಯನ್ನೊಳಗೊಂಡಿರುವ ʼಸುರುಳಿʼ ಕಿರುಚಿತ್ರ ರಿಲೀಸ್
Suruli Short Film: ಹೇಮಂತ್ ಎಂ. ರಾವ್ ನಿರ್ಮಾಣದ ʼಸುರುಳಿʼ ಎಂಬ ಕಿರುಚಿತ್ರವು ದಾಕ್ಷಾಯಿಣಿ ಟಾಕೀಸ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. 33 ನಿಮಿಷದ ʼಸುರುಳಿʼ ಕಿರುಚಿತ್ರವು ಮಾನವೀಯತೆಯನ್ನು ತೆರೆದಿಟ್ಟಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ ನಿರ್ದೇಶಕ ಹೇಮಂತ್ ಎಂ. ರಾವ್ ನಿರ್ಮಾಣದ ಚೊಚ್ಚಲ ಸಿನಿಮಾ ʼಅಜ್ಞಾತವಾಸಿʼ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ಇದೀಗ ʼಸುರುಳಿʼ ಎಂಬ ಕಿರುಚಿತ್ರವನ್ನು (Suruli Short Film) ನಿರ್ಮಿಸಿದ್ದಾರೆ. ತಮ್ಮದೇ ದಾಕ್ಷಾಯಿಣಿ ಟಾಕೀಸ್ ನಡಿ ನಿರ್ಮಾಣಗೊಂಡಿರುವ ಈ ಕಿರುಚಿತ್ರ ಮನಮುಟ್ಟುವ ಕಥೆಯನ್ನೊಳಗೊಂಡಿದೆ. ದಾಕ್ಷಾಯಿಣಿ ಟಾಕೀಸ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿರುವ 33 ನಿಮಿಷದ ಕಿರುಚಿತ್ರ ಮಾನವೀಯತೆಯನ್ನು ತೆರೆದಿಟ್ಟಿದೆ. ಯುವ ಸಿನಿಮೋತ್ಸಾಹಿಗಳ ಕನಸಿಗೆ ಹೇಮಂತ್ ರಾವ್ ಬೆಂಬಲವಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿ ಹೆಸರಿನಡಿ ನಿರ್ಮಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ನಡಿ ವಿಭಿನ್ನ ಬಗೆಯ ಸಿನಿಮಾ ಹಾಗೂ ಕಿರುಚಿತ್ರಗಳನ್ನು ನಿರ್ಮಿಸುವ ಹಾದಿಯಲ್ಲಿದ್ದು, ಅದರ ಭಾಗವಾಗಿ ರೂಪಗೊಂಡಿರುವ ಪ್ರಯತ್ನವೇ ʼಸುರುಳಿʼ ಕಿರುಚಿತ್ರ.
ಇತ್ತೀಚೆಗೆ ಈ ಪ್ರೊಡಕ್ಷನ್ ನಡಿ ನಿರ್ಮಾಣಗೊಂಡ ಮೊದಲ ಚಿತ್ರ ʼಅಜ್ಞಾತವಾಸಿʼ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಿಂದ ಒಂದೊಳ್ಳೆ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರ ಬೆನ್ನಲ್ಲೀಗ ʼಸುರುಳಿʼ ಕಿರುಚಿತ್ರವನ್ನು ನಿರ್ಮಿಸಿ, ಬಿಡುಗಡೆ ಮಾಡಿದ್ದಾರೆ. ಸುರುಳಿ ಶಾರ್ಟ್ ಮೂವೀ ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಸುರುಳಿ ಕಿರುಚಿತ್ರಕ್ಕೆ ಮನು ಅನುರಾಮ್ ಸಾರಥಿ. ಅವರೇ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ಪೊರೇಟ್ ಕೆಲಸ ಮಾಡಿಕೊಂಡೇ ಸಿನಿಮಾ ಗೀಳು ಬೆಳೆಸಿಕೊಂಡಿರುವ ಮನು ಅನುರಾಮ್ ಅವರು ಈಗಾಗಲೇ ಸಾಕಷ್ಟು ಕಿರುಚಿತ್ರ ಹಾಗೂ ವೆಬ್ ಸೀರೀಸ್ ನಿರ್ದೇಶಿಸಿದ್ದಾರೆ. ಕಿರುಚಿತ್ರ ಸಿನಿಮೋತ್ಸವದಲ್ಲಿ ಹೇಮಂತ್ ರಾವ್ ಹಾಗೂ ಮನು ಅನುರಾಮ್ ಅವರ ಪರಿಚಯವಾಗುತ್ತದೆ. ಅವರ ಕಿರುಚಿತ್ರ ಇಷ್ಟಪಟ್ಟಿದ್ದ ಹೇಮಂತ್ ಇಂದು ಮನು ಅನುರಾಮ್ ನಿರ್ದೇಶನದ ʼಸುರುಳಿʼಗೆ ಜತೆಯಾಗಿ ನಿಂತಿದ್ದಾರೆ.
ವಿಶೇಷ ಎಂದರೆ ಸುರುಳಿಗೆ ಸಂಗೀತ ಒದಗಿಸಿರುವುದು ಚರಣ್ ರಾಜ್. ಒಂದೊಳ್ಳೆ ಅದ್ಭುತ ಮ್ಯೂಸಿಕ್ ಅನ್ನು ಈ ಕಿರುಚಿತ್ರಕ್ಕೆ ಅವರು ಕೊಟ್ಟಿದ್ದಾರೆ. ಹರ್ಷಿಲ್ ಕೌಶಿಕ್, ನಿಧಿ ಹೆಗ್ಡೆ ಹಾಗೂ ವಂಶಿಧಾರ್ ಭೋಗರಾಜು ಶಾರ್ಟ್ ಮೂವಿಯಲ್ಲಿ ಅಭಿನಯಿಸಿದ್ದಾರೆ. ಅಮಲ್ ಅಂಬಿಕಾ ರಾಜೇಂದ್ರನ್ ಛಾಯಾಗ್ರಹಣ, ಸ್ಯಾಮ್ ವೆಂಕಟ್ ಹಾಗೂ ವರುಣ್ ಗೋಲಿ ಸಂಕಲನ ಕಿರುಚಿತ್ರಕ್ಕಿದೆ.
ಈ ಸುದ್ದಿಯನ್ನೂ ಓದಿ | Royal Blue Colour Fashionwears: ಸೀಸನ್ ಫ್ಯಾಷನ್‌ವೇರ್‌ಗಳಲ್ಲಿ ರಾಯಲ್ ಬ್ಲ್ಯೂ ಕಲರ್ ಹಂಗಾಮ
ನಮ್ಮ ಜೀವನದಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆಗಳು ನಮಗೆ ಗೊತ್ತಿಲ್ಲದೇ ಬೇರೆಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆ ಸುಳಿವು ನಮಗೆ ಇರುವುದಿಲ್ಲ. ಅಂತಹ ಕಥೆಯನ್ನು ಮನು ಅನುರಾಮ್ ಅಚ್ಚುಕಟ್ಟಾಗಿ ದೃಶ್ಯರೂಪಕ್ಕಿಳಿಸಿದ್ದು, ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.