Home Loan: ಮನೆ ಸಾಲ 8%ಕ್ಕಿಂತ ಕಡಿಮೆ ಬಡ್ಡಿ? ಯಾವ ಬ್ಯಾಂಕ್‌ನಲ್ಲಿ ಹೋಮ್ ಲೋನ್ ಪಡೆಯೋದು ಉತ್ತಮ?
ಸ್ವಂತ ಮನೆಯನ್ನು ಹೊಂದುವುದು ಅನೇಕ ಮಂದಿಯ ಜೀವಮಾನದ ಕನಸು. ಅದಕ್ಕೇ ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆ ಹುಟ್ಟಿಕೊಂಡಿದೆ. ಏಕೆಂದರೆ ಮಧ್ಯಮ ಆದಾಯದ ಜನತೆಗೆ ಮನೆಯನ್ನು, ಫ್ಯಾಟನ್ನು ಖರೀದಿಸುವುದು ಎಂದರೆ ಬಹಳ ದುಬಾರಿಯ ಸಂಗತಿ.


ಕೇಶವ ಪ್ರಸಾದ.ಬಿ
ಬೆಂಗಳೂರು: ಸ್ವಂತ ಮನೆಯನ್ನು ಹೊಂದುವುದು ಅನೇಕ ಮಂದಿಯ (Home loan) ಜೀವಮಾನದ ಕನಸು. ಅದಕ್ಕೇ ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆ ಹುಟ್ಟಿಕೊಂಡಿದೆ. ಏಕೆಂದರೆ ಮಧ್ಯಮ ಆದಾಯದ ಜನತೆಗೆ ಮನೆಯನ್ನು, ಫ್ಯಾಟನ್ನು ಖರೀದಿಸುವುದು ಎಂದರೆ ಬಹಳ ದುಬಾರಿಯ ಸಂಗತಿ. ಆದ್ದರಿಂದ ಸ್ವಂತ ಮನೆಯ ಮಾಲೀಕರಾದಾಗ ಆಗುವ ಸಂತಸ, ಸಂಭ್ರಮ ಅಷ್ಟಿಷ್ಟಲ್ಲ.
ಮನೆ ಎಂದರೆ ಹೋಮ್ ಲೋನ್ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಯಾವ ಬ್ಯಾಂಕ್‌ನಲ್ಲಿ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಎಂದು ಜನ ಆಲೋಚಿಸುವುದು ಸಹಜ. ಏಕೆಂದರೆ ಗೃಹ ಸಾಲ ದೀರ್ಘಾವಧಿಯ ಸಾಲವಾದ್ದರಿಂದ ಸ್ವಲ್ಪ ಕಡಿಮೆಯಾದರೂ, ಲಕ್ಷಗಟ್ಟಲೆ ಉಳಿತಾಯವಾಗುತ್ತದೆ. ಈಗಾಗಲೇ ಗೃಹ ಸಾಲದ ಇಎಂಐ ಕಟ್ಟುತ್ತಿರುವವರೂ ಅಗ್ಗದ ಬಡ್ಡಿ ದರದ ಲಾಭ ಪಡೆಯಬಹುದು.
ಈ ಎಪಿಸೋಡಿನಲ್ಲಿ 8% ಅಥವಾ ಅದಕ್ಕಿಂತ ಕಡಿಮೆ ಬಡ್ಡಿ ದರವನ್ನು ನೀಡುವ 10 ಬ್ಯಾಂಕ್‌ಗಳ ತಿಳಿದುಕೊಳ್ಳೋಣ. ಜತೆಗೆ ಹೋಮ್‌ಲೋನ್ ಅನ್ನು ಬೇಗನೆ ತೀರಿಸಿ ಸಾಲ ಮುಕ್ತರಾಗುವುದು ಹೇಗೆ ಎಂಬುದನ್ನೂ ತಿಳಿಯೋಣ. ಆರ್‌ಬಿಐ 2025 ರಲ್ಲಿ ತನ್ನ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್ಸ್ ಅಥವಾ ಅರ್ಧ ಪರ್ಸೆಂಟ್‌ನಷ್ಟು ಬಡ್ಡಿ ದರ ಇಳಿಸಿದೆ. ಹೀಗಾಗಿ ಹೋಮ್ ಲೋನ್ ಬಡ್ಡಿ ದರ 8% ಗಿಂತ ಕೆಳಕ್ಕಿಳಿದಿದೆ. ಹಲವಾರು ಸಾರ್ವಜನಿಕ ಬ್ಯಾಂಕ್‌ಗಳು ಈಗ ಆಕರ್ಷಕ ಬಡ್ಡಿ ದರದಲ್ಲಿ ಫ್ಲೋಟಿಂಗ್ ರೇಟ್ ಹೋಮ್ ಲೋನ್ ಅನ್ನು ನೀಡುತ್ತಿವೆ.
10 ಪಿಎಸ್‌ಯು ಬ್ಯಾಂಕ್‌ಗಳಲ್ಲಿ ಗೃಹ ಸಾಲದ ಕನಿಷ್ಠ ಬಡ್ಡಿ ದರ
ಕೆನರಾ ಬ್ಯಾಂಕ್ : 7.80%
ಬ್ಯಾಂಕ್ ಆಫ್ ಮಹಾರಾಷ್ಟ್ರ : 7.85%
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ : 7.85%
ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ: 7.85%
ಇಂಡಿಯನ್ ಬ್ಯಾಂಕ್ : 7.9%
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ : 7.9%
ಬ್ಯಾಂಕ್ ಅಫ್ ಬರೋಡಾ: 8%
ಬ್ಯಾಂಕ್ ಆಫ್ ಇಂಡಿಯಾ: 8%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 8%
ಪಂಜಾಬ್ ನ್ಯಾಷನಲ್ ಬ್ಯಾಂಕ್ : 8%
ಹಾಗಾದರೆ ಅತ್ಯಂತ ಕಡಿಮೆ ಬಡ್ಡಿ ದರ ಸದ್ಯಕ್ಕೆ ಯಾವ ಸಾರ್ವಜನಿಕ ಬ್ಯಾಂಕ್‌ನಲ್ಲಿ ಸಿಗುತ್ತದೆ ಎಂದರೆ ಅದಕ್ಕೆ ಉತ್ತರ-ಕೆನರಾ ಬ್ಯಾಂಕ್.
ಕೆನರಾ ಬ್ಯಾಂಕ್‌ನಲ್ಲಿ 7.80% ಬಡ್ಡಿ ದರದಲ್ಲಿ ಹೋಮ್ ಲೋನ್ ಸಿಗುತ್ತದೆ. 1 ಲಕ್ಷ ರುಪಾಯಿಗೆ ಇಎಂಐ 824 ರುಪಾಯಿ ಇರುತ್ತದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ ತಲಾ 7.85% ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತವೆ. ಈ ಬ್ಯಾಂಕ್‌ಗಳಲ್ಲಿ 1 ಲಕ್ಷ ರುಪಾಯಿ ಇಎಂಐಗೆ 827 ರುಪಾಯಿ ಇಎಂಐ ಇದೆ.
ಇಂಡಿಯನ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 7.90% ಬಡ್ಡಿ ಇದೆ. 1 ಲಕ್ಷ ರುಪಾಯಿಗೆ 830 ರುಪಾಯಿ ಇಎಂಐ ಇರುತ್ತದೆ.
ಬ್ಯಾಂಕ್ ಅಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ,
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಅP ಬರೋಡಾ, ಯುಕೊ ಬ್ಯಾಂಕ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಲ್ಲಿ ತಲಾ 8% ಹೋಮ್ ಲೋನ್ ಬಡ್ಡಿ ದರ ಇದೆ. ಪ್ರತಿ 1 ಲಕ್ಷ ರುಪಾಯಿಗೆ 836 ರುಪಾಯಿ ಇಎಂಐ ಇರುತ್ತದೆ.
ಐಡಿಬಿಐನಲ್ಲಿ 8.25% ಹೋಮ್ ಲೋನ್ ಬಡ್ಡಿ ದರವಿದ್ದು, ಪ್ರತಿ 1 ಲಕ್ಷ ರುಪಾಯಿಗೆ 852 ರುಪಾಯಿ ಇಎಂಐ ಇದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 8.50% ಬಡ್ಡಿ ದರ ಇದ್ದು, 1 ಲಕ್ಷ ರುಪಾಯಿಗೆ 868 ರುಪಾಯಿ ಇಎಂಐ ಇರುತ್ತದೆ.
ಈಗ ಹೋಮ್ ಲೋನ್ ಅನ್ನು ಬೇಗನೆ ಪಾವತಿಸಿ ಸಾಲ ಮುಕ್ತರಾಗುವುದು ಹೇಗೆ? ಇದರಿಂದ ಪ್ರಯೋಜನ ಏನೆಂಬುದನ್ನು ನೋಡೋಣ.
ಮೊದಲಿಗೆ ಒಂದು ವಿಷಯವನ್ನು ಯಾವತ್ತೂ ಮರೆಯಬಾರದು. ಸಾಲದ ಅವಧಿ ದೀರ್ಘವಾದಷ್ಟೂ ಬಡ್ಡಿಯ ಹೊರೆ ಹೆಚ್ಚುತ್ತದೆ. ಆದರೆ ಆರಂಭದಲ್ಲಿ ಅಲ್ಪಾವಧಿಗೆ ದೊಡ್ಡ ಹೋಮ್ ಲೋನ್ ಪಡೆದರೆ ಇಎಂಐ ಅತ್ಯಂತ ಭಾರವಾಗುತ್ತದೆ. ಇದೂ ಕಷ್ಟ. ಆದ್ದರಿಂದ ದೀರ್ಘಾವಧಿಯ ಹೋಮ್ ಲೋನ್ ತೆಗೆದುಕೊಂಡರೂ, ಒಂದು ಹಂತದ ಬಳಿಕ ಹೆಚ್ಚು ಹಣವನ್ನು ಕಟ್ಟಿ ಭಾಗಶಃ ಸಾಲವನ್ನು ತೀರಿಸುತ್ತಾ ಬರಬೇಕು. ಆಗ ಸಾಲವೂ ಬೇಗ ಮುಗಿಯುತ್ತದೆ.
ನೀವೀಗ 50 ಲಕ್ಷ ರುಪಾಯಿಗಳ ಗೃಹಸಾಲವನ್ನು 8% ಬಡ್ಡಿಯಲ್ಲಿ 30 ವರ್ಷಗಳ ಅವಧಿಗೆ ಪಡೆದಿದ್ದೀರಿ ಎಂದು ಭಾವಿಸಿ. ಆಗ ನೀವು ಒಟ್ಟು ಬಡ್ಡಿಯಾಗಿ 82 ಲಕ್ಷ ರುಪಾಯಿ ಕಟ್ಟಬೇಕಾಗುತ್ತದೆ. ಅಸಲು ಬಡ್ಡಿ ಎಲ್ಲ ಸೇರಿ 1 ಕೋಟಿಯ 32 ಲಕ್ಷ ರುಪಾಯಿ ಕೊಡಬೇಕಾಗುತ್ತದೆ. ಇದೇ 50 ಲಕ್ಷ ರುಪಾಯಿಗಳ ಸಾಲವನ್ನು 20 ವರ್ಷಗಳಿಗೆ ಮರು ಪಾವತಿಸಿದರೆ, ಆಗ ಒಟ್ಟು ಬಡ್ಡಿ 50 ಲಕ್ಷದ 37 ಸಾವಿರ ರುಪಾಯಿ ಆಗುತ್ತದೆ. ಒಟ್ಟು 1 ಕೋಟಿ 37 ಸಾವಿರ ರುಪಾಯಿ ಆಗುತ್ತದೆ.
ಇದೇ 50 ಲಕ್ಷ ರುಪಾಯಿಗಳ ಸಾಲವನ್ನು 10 ವರ್ಷಗಳಲ್ಲಿಯೇ ಮರು ಪಾವತಿಸಿದರೆ, ಆಗ ಒಟ್ಟು ಬಡ್ಡಿ 22 ಲಕ್ಷದ 79 ಸಾವಿರ ರುಪಾಯಿ ಆಗುತ್ತದೆ. ಒಟ್ಟು ಮೊತ್ತ 72 ಲಕ್ಷದ 79 ಸಾವಿರ ರುಪಾಯಿಗೆ ಇಳಿಯುತ್ತದೆ. ಇದು ನಿಮಗೆ ಗೃಹ ಸಾಲವನ್ನು ಯಾಕೆ ಸಾಧ್ಯವದಷ್ಟು ಬೇಗನೆ ತೀರಿಸಬೇಕು ಎಂಬ ಮಹತ್ವವನ್ನು ತಿಳಿಸುತ್ತದೆ.
ಹಾಗಾದರೆ ಗೃಹ ಸಾಲವನ್ನು ಬೇಗನೆ ತೀರಿಸುವುದು ಹೇಗೆ?
ಮೊದಲನೆಯದಾಗಿ ನಿಧಾನವಾಗಿ ಇಎಂಐ ಮರು ಪಾವತಿಯ ಮೊತ್ತವನ್ನು ಹೆಚ್ಚಿಸಿ. ಇಎಂಐನಲ್ಲಿ ನೀವು ಪ್ರತಿ ವರ್ಷ ಕೇವಲ 5% ಏರಿಸಿದರೂ, 20 ವರ್ಷಗಳ ಅವಧಿಯ ಹೋಮ್ ಲೋನ್ ಅವಧಿಯನ್ನು ಬಹುತೇಕ 12 ವರ್ಷಗಳಿಗೆ ಇಳಿಸಬಹುದು.
ಒಂದು ವೇಳೆ ನೀವು ಪ್ರತಿ ವರ್ಷ 10% ನಂತೆ ಇಎಂಐ ಮರುಪಾವತಿಯನ್ನು ಹೆಚ್ಚಿಸಿದರೆ ಕೇವಲ 10 ವರ್ಷದಲ್ಲೇ ಗೃಹ ಸಾಲವನ್ನು ಮುಕ್ತಾಯಗೊಳಿಸಬಹುದು. ಪ್ರತಿ ವರ್ಷ ನಿಮ್ಮ ಆದಾಯದಲ್ಲಿ 8-10% ಹೆಚ್ಚಳವಾದರೆ, ಹೋಮ್ ಲೋನ್ ಇಎಂಐನಲ್ಲಿ 5% ಏರಿಸುವುದು ಕಷ್ಟವಾಗದು.
ಬೆಂಗಳೂರಿನಂತಹ ನಗರಗಳಲ್ಲಿ 2 ಬಿಎಚ್‌ಕೆ ಫ್ಲಾಟ್ ಖರೀದಿಸುವುದು ಮಧ್ಯಮವರ್ಗದ ಜನತೆಗೆ ಗಗನ ಕುಸುಮ ಎಂಬಂತಾಗಿದೆ. ಒಂದು ಕೋಟಿಗಿಂತ ಕೆಳಗಿನ ದರದಲ್ಲಿ ಫ್ಲಾಟ್ ಸಿಗೋದೇ ಕಷ್ಟ ಎಂಬ ದುರ್ಭರ ಪರಿಸ್ಥಿತಿ ಬೆಂಗಳೂರಿನ ಬಹಳ ಬಡಾವಣೆಗಳಲ್ಲಿದೆ. ಕನಿಷ್ಠ 50 ಲಕ್ಷ ರುಪಾಯಿ ಹೋಮ್ ಲೋನ್ ಅನ್ನು ತೆಗೆದುಕೊಂಡರೂ, ತಿಂಗಳಿಗೆ ಎಷ್ಟು ಇಎಂಐ ಬರುತ್ತದೆ? ಎಷ್ಟು ಬಡ್ಡಿಯಾಗುತ್ತದೆ? ಎಷ್ಟು ಒಟ್ಟು ಮೌಲ್ಯ ಕೊಡಬೇಕಾಗುತ್ತದೆ ಎಂಬ ಲೆಕ್ಕಾಚಾರವನ್ನು ಮಾಡಲೇಬೇಕು.
50 ಲಕ್ಷ ಹೋಮ್ ಲೋನ್ ಪಡೆದರೆ
20 ವರ್ಷಕ್ಕೆ 8% ಬಡ್ಡಿಯಲ್ಲಿ ಒಟ್ಟು ಬಡ್ಡಿಯ ಮೊತ್ತ 50 ಲಕ್ಷದ 37 ಸಾವಿರ ಆಗುತ್ತದೆ. ಒಟ್ಟು ಮೊತ್ತ 1 ಕೋಟಿ 37 ಸಾವಿರ ಆಗುತ್ತದೆ. ಹೀಗಾಗಿ ಹೋಮ್ ಲೋನ್ ಪಡೆಯುವವರು ಡೌನ್ ಪೇಮೆಂಟ್ ಅನ್ನು ಹೆಚ್ಚು ಕೊಡುವ ಮೂಲಕ ಸಾಲವನ್ನು ಸಾಧ್ಯವಾದಷ್ಟು ಕಡಿಮೆ ಮಾಡೋದು ಒಳ್ಳೆಯದು. ಸಾಮಾನ್ಯವಾಗಿ 15-25% ಡೌನ್ ಪೇಮೆಂಟ್ ಕೊಡಬೇಕಾಗುತ್ತದೆ. ಆ ಲೆಕ್ಕದಲ್ಲಿ 50 ಲಕ್ಷ ಸಾಲಕ್ಕೆ 7.5 ಲಕ್ಷದಿಂದ 12.5 ಲಕ್ಷ ರುಪಾಯಿ ಡೌನ್ ಪೇಮೆಂಟ್ ಕೊಡಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ: Repo Rate: ಗುಡ್‌ನ್ಯೂಸ್! ರೆಪೋ ರೇಟ್ ದರ ಇಳಿಕೆ- ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಕಡಿತ
ಆದ್ದರಿಂದ ಲಾಂಗ್ ಟರ್ಮ್‌ಗೆ ತೆಗೆದುಕೊಂಡರೂ, ಕ್ರಮೇಣ ಹೆಚ್ಚೆಚ್ಚು ಇಎಂಐ ಕಟ್ಟುವ ಮೂಲಕ ಗೃಹ ಸಾಲದ ಹೊರೆ ತಗ್ಗಿಸಿ ಸಾಲ ಮುಕ್ತರಾಗಬೇಕು.