Fancy Saree Fashion: ಫ್ಯಾನ್ಸಿ ಸೀರೆಗಳ ಜಮಾನ; ವೈವಿಧ್ಯಮಯ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ!
Fancy Saree Fashion: ಜಮಾನ ಬದಲಾದಂತೆ ಫ್ಯಾನ್ಸಿ ಸೀರೆಗಳು ಬದಲಾಗಿವೆ. ಆಯಾ ಜನರೇಷನ್‌ನ ಹೆಣ್ಣು ಮಕ್ಕಳಿಗೆ ಇಷ್ಟವಾಗುವಂತಹ ವೈವಿಧ್ಯಮಯ ಡಿಸೈನ್‌ನಲ್ಲಿ ಸೀರೆ ಲೋಕಕ್ಕೆ ಲಗ್ಗೆ ಇಟ್ಟಿವೆ. ಇಂದು ಯಾವ್ಯಾವ ಬಗೆಯವು ಬಂದಿವೆ? ಈ ಬಗ್ಗೆ ಸೀರೆ ಎಕ್ಸ್‌ಪರ್ಟ್‌ಗಳು ಹೇಳುವುದೇನು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಲಕ್ಕೆ ತಕ್ಕಂತೆ ಫ್ಯಾನ್ಸಿ ಸೀರೆಗಳು ಬದಲಾಗಿವೆ. ಆಯಾ ಜನರೇಷನ್‌ನ ಮಾನಿನಿಯರ ಅಭಿಲಾಷೆಗೆ ಹೊಂದುವಂತಹ ಡಿಸೈನ್‌ಗಳಲ್ಲಿ ಸೀರೆ ಲೋಕದಲ್ಲಿ ನಯಾ ಲುಕ್‌ನಲ್ಲಿ ಕಾಲಿಟ್ಟಿವೆ. ಹೌದು, ಇಂದಿನ ಫ್ಯಾನ್ಸಿ ಸೀರೆಗಳನ್ನು (Fancy Saree Fashion) ಉಟ್ಟರೆ ಭಾರವಾಗುವುದಿಲ್ಲ, ಸೆಕೆಯಾಗುವುದಿಲ್ಲ, ಇನ್ನು, ರೇಷ್ಮೆ ಸೀರೆಯಂತೆ ಬೆಲೆಯೂ ದುಬಾರಿಯೂ ಅಲ್ಲ! ಪ್ಲಂಪಿಯಾಗಿರುವವರಿಗೂ ಓಕೆ, ಬಳುಕುವ ಬಳ್ಳಿಯಂತೆ ತೆಳ್ಳಗಿದ್ದರೂ ಸರಿಯೇ, ಮೈ ಬಣ್ಣ ಹಾಲಿನಂತೆ ಬೆಳ್ಳಗಿರಲಿ, ಕಾಡಿಗೆಯಂತೆ ಕಪ್ಪಗಿರಲಿ, ಉಟ್ಟವರನ್ನು ನಕ್ಷತ್ರದಂತೆ ಮಿನುಗಿಸುತ್ತವೆ. ಆ ಜಾದೂ ಈ ಸೀರೆಗಳಿಗಿವೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್. ಪರಿಣಾಮ, ವಿವಾಹಿತ ಮಹಿಳೆಯರನ್ನಷ್ಟೇ ಅಲ್ಲ, ಹದಿಹರೆಯದ ಹುಡುಗಿಯರೂ ಇಷ್ಟಪಟ್ಟು, ಅಪ್ಪಿಕೊಂಡು ಉಟ್ಟಿಕೊಳ್ಳುವ ಮಟ್ಟಕ್ಕೆ ಇವು ಆಕರ್ಷಿಸುತ್ತಿವೆ.

ಕಾಂಟೆಂಪರರಿ ಡಿಸೈನ್‌ನ ಫ್ಯಾನ್ಸಿ ಸೀರೆ
ಹೂವು-ಹಣ್ಣು, ಎಲೆ, ಪ್ರಾಣಿ-ಪಕ್ಷಿ, ಭಗವದ್ಗೀತೆ ಶ್ಲೋಕ, ಚಿತ್ರ, ವಕ್ರ-ಚಕ್ರ, ಅಡ್ಡಾ-ದಿಡ್ಡಿ, ನೇರ ಗೆರೆಗಳು, ವಿಚಿತ್ರ ರೇಖಾ ಚಿತ್ರಗಳು ಸೇರಿದಂತೆ ರಂಗುರಂಗಿನ ವಿನ್ಯಾಸವನ್ನು ಈ ಸೀರೆಗಳಲ್ಲಿ ಕಾಣಬಹುದು. ಸೀರೆಯ ಅಂಚು, ಪಲ್ಲು, ಬುಟ್ಟಾ, ಕುಚ್ಚುಗಳು, ಚಮಕಿ, ಮುತ್ತು-ಮಣಿಯ ಸಿಂಗಾರದಲ್ಲಿ ಮಿಂದೆದ್ದ, ಎಂಬ್ರಾಯ್ಡರಿ, ಶಿಫಾನ್, ಕ್ರೇಪ್, ಜಾರ್ಜೆಟ್, ಪಟ್ಲಿ, ನೆಟ್, ಪ್ರಿಂಟೆಡ್, ಬ್ರಾಸೋ, ಅರ್ಗಾನ್ಸಾ, ಟಿಶ್ಯೂ ಹೀಗೆ ನಾನಾ ಬಗೆಯವು ಎಲ್ಲಾ ಸೀರೆ ಶೋ ರೂಂಗಳಲ್ಲಿ ರಾರಾಜಿಸುತ್ತಿವೆ.
ಫ್ಯಾನ್ಸಿ ಸೀರೆಗೆ ತಕ್ಕ ಬೆಲೆ
ಊಹೆಗೂ ನಿಲುಕದ ಮಿಕ್ಸ್ ಅಂಡ್ ಮ್ಯಾಚ್, ಕಾಂಟ್ರಸ್ಟ್ ಶೇಡ್ಸ್, ಮೆಟಿರಿಯಲ್ಸ್, ಡಿಸೈನ್‌ಗಳು ಪ್ರತಿ ಫ್ಯಾನ್ಸಿ ಸೀರೆಯ ವಿಶೇಷತೆ. ಒಂದರಲ್ಲಿ ಕಾಣುವ ವಿನ್ಯಾಸ ಮತ್ತೊಂದರಲ್ಲಿ ಕಾಣಿಸುವುದಿಲ್ಲ. ಮಧ್ಯಮ ವರ್ಗದ ಸಾಮಾನ್ಯ ಮಹಿಳೆಯರ ಕೈಗೆಟಕಬಹುದಾದ ಇವಕ್ಕೆ ಈಗಂತೂ ಎಲ್ಲಿಲ್ಲದ ಬೇಡಿಕೆ. ಸಂತಸದ ವಿಚಾರ ಎಂದರೆ, ಕೇವಲ 500-600 ರೂ.ಗಳಿಗೂ ಆಕರ್ಷಕ ಫ್ಯಾನ್ಸಿ ಡಿಸೈನ್‌ನ ಸೀರೆಗಳು ಲಭ್ಯ ಎನ್ನುತ್ತಾರೆ ಸ್ಯಾರಿ ಸೆಂಟರ್‌ವೊಂದರ ಮಾರಾಟಗಾರರು.

ಡಿಸೈನರ್ಸ್ ಫ್ಯಾನ್ಸಿ ಸೀರೆಗಳು
ವಿಶೇಷವಾಗಿ ವಿನ್ಯಾಸಕರು ರೂಪಿಸುವ ಸೀರೆಗಳೇ ಡಿಸೈನರ್ಸ್ ಫ್ಯಾನ್ಸಿ ಸೀರೆಗಳು. ಇವು ಕೆಲವೇ ಬಣ್ಣಗಳಲ್ಲಿ ಹಾಗೂ ಡಿಸೈನ್‌ಗಳಲ್ಲಿ ಲಿಮಿಟೆಡ್ ಎಡಿಷನ್‌ನಲ್ಲಿ ಮಾತ್ರ ಲಭ್ಯ. ಬೇಡಿಕೆ ಹೆಚ್ಚಾದಾಗ ಮಾತ್ರ, ನೂರಾರು ಬಗೆಯಲ್ಲಿ ಬಿಡುಗಡೆಗೊಳ್ಳುತ್ತವೆ. ಕೊಂಚ ದುಬಾರಿ ಕೂಡ. ಫ್ಯಾಷನ್ ವಿನ್ಯಾಸಕರೇ ವಿನ್ಯಾಸಗೊಳಿಸಿದ ಬ್ರಾಂಡೆಡ್ ಫ್ಯಾನ್ಸಿ ಸೀರೆಗಳ ಬೆಲೆ ಲಕ್ಷ ರೂ. ಗಳವರೆಗೂ ಇದೆ. ಒಟ್ಟಿನಲ್ಲಿ ವಿನ್ಯಾಸಕ್ಕೆ ತಕ್ಕಂತೆ ಬೆಲೆ ಎಂದರೂ ತಪ್ಪಿಲ್ಲ! ಎನ್ನುತ್ತಾರೆ ಸೀರೆ ಮಾರಾಟಗಾರರಾದ ರಜತ್.
ಈ ಸುದ್ದಿಯನ್ನೂ ಓದಿ | Beauty Secreats: ಮೂಡ್ ಬದಲಿಸುವ ಲಿಪ್‌ಸ್ಟಿಕ್ಸ್ ಕಲರ್‌ಗಳಿವು
ಫ್ಯಾನ್ಸಿ ಸೀರೆ ಪ್ರಿಯರ ಗಮನಕ್ಕೆ
- ಫ್ಯಾನ್ಸಿ ಸೀರೆಗಳನ್ನು ಕೊಳ್ಳುವಾಗ ಪರಿಶೀಲಿಸಿ ನಂತರ ಕೊಳ್ಳಿ. ಏಕೆಂದರೆ ಕುಸುರಿ ವಿನ್ಯಾಸದ ಒಂದು ದಾರದ ಎಳೆ ಕಿತ್ತುಬಂದಿದ್ದರೂ ಇಡೀ ಸೀರೆ ಹಾಳಾಗುತ್ತದೆ.
- ಫ್ಯಾನ್ಸಿ ಕುಸುರಿ ಸೀರೆಗಳು ದುಬಾರಿ ಮಾತ್ರವಲ್ಲ, ನಿರ್ವಹಣೆಯೂ ಕಷ್ಟ ಎಂಬುದು ನೆನಪಿರಲಿ.
- ಇವು ಬೇಸಿಗೆಗೆ ಹೇಳಿ ಮಾಡಿಸಿದ ಸೀರೆಗಳು, ಬೆವರಾಗಿದ್ದಲ್ಲಿ, ಮಡಿಚಿಡುವ ಮುನ್ನ ಒಣಗಿಸಿ.
- ಸೀರೆ ತೆಳುವಾಗಿರುವುದರಿಂದ ನಿಮಗೆ ದೇಹಕ್ಕೆ ಹೊಂದಿಕೆಯಾಗುವುದನ್ನು ನೋಡಿ ಖರೀದಿಸಬೇಕು.
- ಕಾಟನ್ ಮಿಶ್ರ ಫ್ಯಾನ್ಸಿ ಸೀರೆಗಳು ಉಟ್ಟರೆ ರಟ್ಟಿನಂತೆ ನಿಲ್ಲುತ್ತವೆ. ಇವುಗಳಲ್ಲಿ ಹೆಚ್ಚು ವಿನ್ಯಾಸ ದೊರಕುವುದಿಲ್ಲ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)