ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pope Francis: ಪೋಪ್ ಫ್ರಾನ್ಸಿಸ್ ವಿಧಿವಶ; ಮುಂದಿನ ಪೋಪ್‌ ಆಯ್ಕೆ ಹೇಗೆ? ಇಲ್ಲಿದೆ ವಿವರ

ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ಸಿಟಿಯಲ್ಲಿ ನಿಧನರಾದರು. ಫ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಮುಂದಿನ ಪೋಪ್‌ ಆಯ್ಕೆ ಹಲವು ಹಂತಗಳಲ್ಲಿ ನಡೆಯಲಿದೆ. ಅದಕ್ಕೆ ಯಾವ ವಿಧಾನವನ್ನು ಅನುಸರಿಸಲಾಗುತ್ತದೆ ಎನ್ನುವ ವಿವರ ಇಲ್ಲಿದೆ.

ಪೋಪ್ ಫ್ರಾನ್ಸಿಸ್ ವಿಧಿವಶ; ಮುಂದಿನ ಪೋಪ್‌ ಆಯ್ಕೆ ಹೇಗೆ?

ಪೋಪ್ ಫ್ರಾನ್ಸಿಸ್.

Profile Ramesh B Apr 21, 2025 3:36 PM

ವ್ಯಾಟಿಕನ್‌ ಸಿಟಿ: ರೋಮನ್ ಕ್ಯಾಥೊಲಿಕ್ ಚರ್ಚ್ ಮುನ್ನಡೆಸುವ ಪೋಪ್ ಫ್ರಾನ್ಸಿಸ್ (Pope Francis) ತಮ್ಮ 88ನೇ ವಯಸ್ಸಿನಲ್ಲಿ ಸೋಮವಾರ (ಏ. 21) ಮೃತಪಟ್ಟಿದ್ದಾರೆ. ಅವರು 2013ರಲ್ಲಿ 266ನೇ ಪೋಪ್ ಆಗಿ ಆಯ್ಕೆಯಾಗಿದ್ದರು. ವಿಶ್ವದ ಅತಿದೊಡ್ಡ ಧರ್ಮ ಕ್ರಿಶ್ಚಿಯನ್‌ನ ಪರಮೋನ್ನತ ನಾಯಕರಾದ ಪೋಪ್ ಫ್ರಾನ್ಸಿಸ್ ವಿಶ್ವದಾದ್ಯಂತ 140 ಕೋಟಿ (1.4 ಬಿಲಿಯನ್) ಜನರಿಗೆ ಆಧ್ಯಾತ್ಮಿಕ ಮುಖ್ಯಸ್ಥರಾಗಿದ್ದರು. ಈಸ್ಟರ್‌ ಭಾನುವಾರದ ಏ. 20ರಂದು ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಭೇಟಿಯಾಗಿದ್ದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಡಬಲ್ ನ್ಯುಮೋನಿಯಾದಿಂದ ಅಸ್ವಸ್ಥರಾಗಿದ್ದರು. ಅಲ್ಲದೆ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ವೆಂಟಿಲೇಟರ್‌ ಸಹಾಯದಿಂದ ಅವರು ಉಸಿರಾಡುತ್ತಿದ್ದರು.



ಈ ಸುದ್ದಿಯನ್ನೂ ಓದಿ: Pope Francis Passes away: ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ವಿಧಿವಶ

ಹೇಗಿರಲಿದೆ ಮುಂದಿನ ಪ್ರಕ್ರಿಯೆ?

ಮುಂದಿನ ಪೋಪ್‌ ಆಯ್ಕೆ ಹಲವು ಹಂತಗಳಲ್ಲಿ ನಡೆಯಲಿದೆ. ಪೋಪ್‌ ಮೃತಪಟ್ಟಿರುವುದು ದೃಢೀಕರಣಗೊಂಡ ಬಳಿಕ ಅವರ ದೇಹವನ್ನು ಅವರ ಖಾಸಗಿ ಪ್ರಾರ್ಥನಾ ಮಂದಿರಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಅವರ ದೇಹವನ್ನು ಸತು-ಲೇಪಿತ ಮರದ ಶವಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ. ಅಂತ್ಯ ಸಂಸ್ಕಾರ ಪೂರ್ಣಗೊಂಡ ನಂತರ, ಮುಂದಿನ ಮಹತ್ವದ ಹಂತವೆಂದರೆ ಪೋಪ್ ಸಮಾವೇಶ. ಈ ಸಮಾವೇಶವನ್ನು ಸಾಮಾನ್ಯವಾಗಿ ಪೋಪ್ ಮರಣದ 15ರಿಂದ 20 ದಿನಗಳ ನಂತರ ಏರ್ಪಡಿಸಲಾಗುತ್ತದೆ. ಕಾರ್ಡಿನಲ್ ಕಾಲೇಜಿನ ಪ್ರಸ್ತುತ ಡೀನ್ ಕಾರ್ಡಿನಲ್ ಜಿಯೋವಾನಿ ಬಟಿಸ್ಟಾ ರೆ (91) ಈ ಸಮಾವೇಶದ ಅಧ್ಯಕ್ಷತೆ ವಹಿಸುವ ನಿರೀಕ್ಷೆಯಿದೆ.

ಆಯ್ಕೆ ವಿಧಾನ

ಪೋಪ್ ಆಯ್ಕೆ ಬಹು ಗೌಪ್ಯವಾಗಿ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕಾರ್ಡಿನಲ್‌ಗಳಿಗೆ ಹೊರಜಗತ್ತಿನ ಸಂಪರ್ಕವಿರುವುದೇ ಇಲ್ಲ. ಈ ಹಿಂದೆ ಪೋಪ್ ಆಯ್ಕೆಗೆ 3 ವಿಧಾನಗಳಿದ್ದವು ಎನ್ನುತ್ತದೆ ಇತಿಹಾಸ. ಇದೀಗ ಚಾಲ್ತಿಯಲ್ಲಿರುವುದು ಕಾನ್‌ಕ್ಲೇವ್ ಮೂಲಕ ಪೋಪ್ ಆರಿಸುವ ವಿಧಾನ. ಕಾಲೇಜ್ ಆಫ್ ಕಾರ್ಡಿನಲ್ಸ್‌ನ ಡೀನ್ ಎಲ್ಲ ಕಾರ್ಡಿನಲ್‌ಗಳ ಸಮಾವೇಶ ಕರೆದು ಪ್ರಕ್ರಿಯೆಯ ನೀತಿನಿಯಮಗಳನ್ನು ವಿವರಿಸುತ್ತಾರೆ. ಈ ವೇಳೆ ಚಾಪೆಲ್‌ನ ಸುತ್ತ ಕಟ್ಟೆಚ್ಚ ವಹಿಸಲಾಗುತ್ತದೆ.

ಪ್ರತಿದಿನ 4 ಬಾರಿ ಮತದಾನ ನಡೆಸಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಬಾರಿ ನಡೆಯುವ ಮತದಾನದಲ್ಲಿ, ಕಾರ್ಡಿನಲ್‌ಗಳು ತಮ್ಮ ಆಯ್ಕೆಯನ್ನು ಬರೆದು ಪವಿತ್ರ ಪೀಠದ ಬಳಿಯಿರುವ ಮತಪೆಟ್ಟಿಗೆಗೆ ಹಾಕುತ್ತಾರೆ. ಪ್ರತಿ ಸುತ್ತಿನ ಮತದಾನದ ಫಲಿತಾಂಶ ಬಂದ ಮೇಲೆ ಮತಪತ್ರಗಳನ್ನು ಸುಡಲಾಗುತ್ತದೆ. ಪೋಪ್ ಆಯ್ಕೆಯಾಗದಿದ್ದರೆ ಮತಪತ್ರಗಳನ್ನು ಸುಡುವಾಗ ಕಪ್ಪು ಹೊಗೆ ಉಂಟು ಮಾಡುವ ವಿಶೇಷ ರಾಸಾಯನಿಕ ಬೆರೆಸಲಾಗುತ್ತದೆ. ಚಿಮಣಿಯಲ್ಲಿ ಕಪ್ಪು ಹೊಗೆ ಬಂದರೆ ಪೋಪ್ ಆಯ್ಕೆಯಾಗಿಲ್ಲ ಎಂದರ್ಥ. ಬಿಳಿ ಹೊಗೆ ಹೊಸ ನೇತಾರನ ಆಯ್ಕೆಯಾಗಿದೆ ಎಂಬ ಸಂದೇಶ ಸಾರುತ್ತದೆ. ಚಿಮಣಿಯಿಂದ ಬರುವ ಈ ಸಂದೇಶಕ್ಕಾಗಿ ರೋಮಿನ ಸೆಂಟ್ ಪೀಟರ್ಸ್‌ ಚೌಕದಲ್ಲಿ ಭಕ್ತರು ಕಿಕ್ಕಿರಿದು ತುಂಬಿರುತ್ತಾರೆ. ಯಾವುದೇ ಅಭ್ಯರ್ಥಿ 3ನೇ 2 ಭಾಗ ಬಹುಮತ ಪಡೆದು ಆಯ್ಕೆಯಾಗುವವರೆಗೆ ಈ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ತಜ್ಞರು ವಿವರಿಸುತ್ತಾರೆ.