ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold ATM: ವಿಶ್ವದ ಮೊದಲ ಚಿನ್ನದ ಎಟಿಎಂ ಚೀನಾದಲ್ಲಿ ಸ್ಥಾಪನೆ; ಭಾರತಕ್ಕೂ ಬರಲಿ ಎಂದ ನೆಟ್ಟಿಗರು

ವಿಶ್ವದ ಮೊದಲ ಗೋಲ್ಡ್‌ ಎಟಿಎಂ ಚೀನಾದಲ್ಲಿ ಸ್ಥಾಪನೆಯಾಗಿದೆ. ಅರೇ ಎಟಿಎಂ ಗೊತ್ತು. ಇದೇನಿದು ಚಿನ್ನದ ಎಟಿಎಂ ಎಂದಿಕೊಂಡಿರಾ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ನೀವು ಚಿನ್ನವನ್ನು ಈ ಯಂತ್ರದಲ್ಲಿ ಹಾಕಿದರೆ ಅದರ ಮೌಲ್ಯಕ್ಕೆ ಅನುಗುನವಾಗಿ ತಕ್ಷಣ ನಗದು ಲಭಿಸುತ್ತದೆ. ಸದ್ಯ ಈ ಯಂತ್ರದ ವಿಡಿಯೊ ವೈರಲ್‌ ಆಗಿದೆ.

ವಿಶ್ವದ ಮೊದಲ ಚಿನ್ನದ ಎಟಿಎಂ ಚೀನಾದಲ್ಲಿ ಸ್ಥಾಪನೆ

ಸಾಂದರ್ಭಿಕ ಚಿತ್ರ.

Profile Ramesh B Apr 21, 2025 12:32 PM

ಬೀಜಿಂಗ್‌: ಚಿನ್ನದ ಬೆಲೆ (Gold Rate) ದಿನ ಕಳೆದಂತೆ ಗಗನಮುಖಿಯಾಗುತ್ತಿದೆ. ಇದು ಚಿನ್ನ ಮಾರಾಟ ಮಾಡಲು ಸೂಕ್ತ ಸಮಯ ಎನ್ನುವ ಮಾತೂ ಕೇಳಿ ಬಂದಿದೆ. ಇದೀಗ ಚೀನಾ ಚಿನ್ನ ಮಾರಾಟಕ್ಕೆ ಆಧುನಿಕ ಸ್ಪರ್ಶ ನೀಡಿದ್ದು, ಎಟಿಎಂ ಅನ್ನು ಪರಿಚಯಿಸಿದೆ. ಹೌದು, ವಿಶ್ವದ ಮೊದಲ ಚಿನ್ನದ ಎಟಿಎಂ (Gold ATM) ಚೀನಾದಲ್ಲಿ ಸ್ಥಾಪನೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಚಿನ್ನದ ಮಾರಾಟ ವ್ಯವಸ್ಥೆಯನ್ನೇ ಬದಲಾಯಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶಾಂಘೈ ಮಾಲ್‌ನಲ್ಲಿ ಈ ಎಟಿಎಂ ಸ್ಥಾಪನೆಯಾಗಿದ್ದು, ಇದರ ಮುಂದೆ ಜನರು ಸಾಲುಗಟ್ಟಿ ನಿಲ್ಲ ತೊಡಗಿದ್ದಾರೆ. ಹಾಗಾದರೆ ಏನಿದು ಚಿನ್ನದ ಎಟಿಎಂ, ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ನೋಡೋಣ.

ಈ ಯಂತ್ರದಲ್ಲಿ ನೀವು ಚಿನ್ನವನ್ನು ಹಾಕಿದರೆ ಸಾಕು. ಅದು ಶುದ್ಧತೆಯನ್ನು ಪರಿಶೀಲಿಸಿ ಬಳಿಕ ಕರಗಿಸಿ ಅದರ ಮೌಲ್ಯಕ್ಕೆ ಅನುಗುಣವಾದ ಹಣವನ್ನು ನೀಡುತ್ತದೆ.

ಗೋಲ್ಡ್‌ ಎಟಿಎಂನ ವಿಡಿಯೊ ಇಲ್ಲಿದೆ ನೋಡಿ:



ಈ ಸುದ್ದಿಯನ್ನೂ ಓದಿ: Gold Price: ಚಿನ್ನದ ದರ 55,000 ರೂ.ಗೆ ಇಳಿಯುತ್ತಾ? 1 ಲಕ್ಷ ರೂ.ಗೆ ಏರುತ್ತಾ?‌

ಹೇಗೆ ಕಾರ್ಯನಿರ್ವಹಿಸುತ್ತದೆ?

ಚೀನಾದ ಕಿಂಗ್ಹುಡ್ ಗ್ರೂಪ್ ನಿರ್ವಹಿಸುವ ಈ ಯಂತ್ರ 1,200 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಚಿನ್ನವನ್ನು ಕರಗಿಸುತ್ತದೆ. ಬಳಿಕ ನಗದು ನೀಡುತ್ತದೆ. ಇದು ಚಿನ್ನವನ್ನು ಮಾರಾಟ ಮಾಡಲು ಜ್ಯುವೆಲ್ಲರಿ ಅಂಗಡಿಗೆ ಓಡಾಡಬೇಕಾದ ಸಂಕಷ್ಟವನ್ನು ತಪ್ಪಿಸುತ್ತದೆ. ಎಟಿಎಂ ಯಂತ್ರವು ಚಿನ್ನದ ಬೆಲೆಗೆ ಸಮನಾದ ಹಣವನ್ನು ತಕ್ಷಣ ಒದಗಿಸುವುದರಿಂದ ಯಾವಾಗ ಬೇಕಾದರೂ ಪಡೆಯಬಹುದಾಗಿದೆ. ʼʼಇದು ಮೊದಲು 99.99% ಶುದ್ಧತೆಯೊಂದಿಗೆ ಚಿನ್ನದ ತೂಕವನ್ನು ಅಳೆಯುತ್ತದೆ. ಶಾಂಘೈ ಗೋಲ್ಡ್ ಎಕ್ಸ್‌ಚೇಂಜ್‌ ಲೈವ್ ದರದ ಆಧಾರದ ಮೇಲೆ ಯಂತ್ರವು ಪಾವತಿಯನ್ನು ಲೆಕ್ಕ ಹಾಕುತ್ತದೆ. ಇದಕ್ಕಾಗಿ ಸಣ್ಣ ಮೊತ್ತದ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆʼʼ ವರದಿಯೊಂದು ತಿಳಿಸಿದೆ.

ಭಾರತಕ್ಕೂ ಬರಲಿ ಎಂದ ನೆಟ್ಟಿಗರು

ಸದ್ಯ ಚೀನಾದ ಈ ಗೋಲ್ಡ್‌ ಎಟಿಎಂನ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಭಾರತಕ್ಕೂ ಇಂತಹ ಯಂತ್ರ ಬರಬೇಕು ಎಂದು ಆಗ್ರಹಿಸಿದ್ದಾರೆ. ʼʼವಾವ್‌. ಭಾರತಕ್ಕೂ ಶೀಘ್ರದಲ್ಲೇ ಚಿನ್ನದ ಎಟಿಎಂ ಬರಬೇಕು. ಇಲ್ಲಿ ಇದರ ಅಗತ್ಯ ತುಂಬ ಇದೆʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಭಾರತದ ಪಾಲಿಗೆ ಇದು ಅದ್ಭುತಯಂತ್ರ. ಜತೆಗೆ ಕಳ್ಳಕಾರರಿಗೂ ಅನೂಕೂಲವಾಗಲಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.

ಚೀನಾದಲ್ಲಿ ಚಿನ್ನಕ್ಕೆ ಇದೆ ಪ್ರಾಮುಖ್ಯತೆ

ಭಾರತದಂತೆ ಚೀನಾದಲ್ಲಿಯೂ ಚಿನ್ನಕ್ಕೆ ಮಹತ್ವದ ಸ್ಥಾನವಿದೆ. ಚೀನಾದಲ್ಲಿ ಚಿನ್ನವು ದೀರ್ಘ ಕಾಲದಿಂದ ಸಮೃದ್ಧಿಯ ಸಂಕೇತ ಎನಿಸಿಕೊಂಡಿದೆ. ಇದನ್ನು ಸಾಂಪ್ರದಾಯಿಕವಾಗಿ ಮದುವೆ, ಹಬ್ಬ ಮುಂತಾದ ಶುಭ ಸಮಾರಂಭದಲ್ಲಿ ಉಡುಗೊರೆಯಾಗಿ ನೀಡಲಾಗುತ್ತದೆ.

ಶೆನ್ಜೆನ್ ಮೂಲದ ಕಿಂಗ್ಹುಡ್ ಗ್ರೂಪ್ ಅಭಿವೃದ್ಧಿಪಡಿಸಿದ ಈ ಚಿನ್ನದ ಯಂತ್ರವನ್ನು ಈಗಾಗಲೇ ಚೀನಾದಾದ್ಯಂತ ಸುಮಾರು 100 ನಗರಗಳಲ್ಲಿ ಅಳವಡಿಸಲಾಗಿದೆ. ಚಿನ್ನದ ವಹಿವಾಟುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನಲೆಯಲ್ಲಿ ಎಟಿಎಂಗಳನ್ನೂ ವಿಸ್ತರಿಸಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಚಿನ್ನದ ಬೆಲೆ ಏರುತ್ತಲೇ ಇರುವುದರಿಂದ ಯಂತ್ರಗಳು ಇನ್ನಷ್ಟು ಜನಪ್ರಿಯವಾಗುವ ಸಾಧ್ಯತೆಯಿದೆ. ಎಟಿಎಂನಂತೆ ಚಿನ್ನದ ಎಟಿಎಂ ಕೂಡ ಪ್ರತಿ ಕಡೆಗೂ ವಿಸ್ತರಿಸುವ ದಿನ ದೂರವಿಲ್ಲ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.