Indian Origin Techie: ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿಯ ಭೀಕರ ಹತ್ಯೆ: ಈ ಕಾರಣಕ್ಕೂ ಕೊಲೆ ಮಾಡ್ತಾರ?
ಅಮೆರಿಕದ ಆಸ್ಟಿನ್‌ನ ಚಲಿಸುತ್ತಿದ್ದ ಬಸ್‌ನಲ್ಲಿ ಭಾರತೀಯ ಮೂಲದ 30 ವರ್ಷದ ಉದ್ಯಮಿ ಅಕ್ಷಯ್ ಗುಪ್ತಾ ಅವರನ್ನು ಮತ್ತೊಬ್ಬ ಭಾರತೀಯ 31 ವರ್ಷದ ದೀಪಕ್ ಕಂಡೆಲ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೇ 14ರಂದು ನಡೆದಿದೆ ಎಂದು ಆಸ್ಟಿನ್ ಪೊಲೀಸ್ ಇಲಾಖೆ ತಿಳಿಸಿದೆ.

ಹತ್ಯೆಗೀಡಾದ ಅಕ್ಷಯ್ ಗುಪ್ತಾ.

ವಾಷಿಂಗ್ಟನ್: ಅಮೆರಿಕದ ಆಸ್ಟಿನ್‌ನ (Austin) ಚಲಿಸುತ್ತಿದ್ದ ಬಸ್‌ನಲ್ಲಿ ಭಾರತೀಯ ಮೂಲದ 30 ವರ್ಷದ ಉದ್ಯಮಿ (Entrepreneur) ಅಕ್ಷಯ್ ಗುಪ್ತಾ (Akshay Gupta) ಅವರನ್ನು ಮತ್ತೊಬ್ಬ ಭಾರತೀಯ 31 ವರ್ಷದ ದೀಪಕ್ ಕಂಡೆಲ್ (Deepak Kandel) ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೇ 14ರಂದು ನಡೆದಿದೆ ಎಂದು ಆಸ್ಟಿನ್ ಪೊಲೀಸ್ ಇಲಾಖೆ ತಿಳಿಸಿದೆ.
ಆಸ್ಟಿನ್ ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ, "ಗುಪ್ತಾ ಅವರ ಕತ್ತಿಗೆ ಕಂಡೆಲ್ ಚಾಕುವಿನಿಂದ ಇರಿದಿದ್ದಾನೆ. ಬಸ್ ನಿಂತ ನಂತರ ಕಂಡೆಲ್ ಶಾಂತವಾಗಿ ಇತರ ಪ್ರಯಾಣಿಕರೊಂದಿಗೆ ವಾಹನದಿಂದ ಇಳಿದಿದ್ದಾನೆ." KXAN ನೆಟ್‌ವರ್ಕ್‌ನ ವರದಿಯ ಪ್ರಕಾರ, CCTV ದೃಶ್ಯಾವಳಿಯಲ್ಲಿ ಗುಪ್ತಾ ಬಸ್‌ನ ಹಿಂಭಾಗದಲ್ಲಿ ಕುಳಿತು, ಯಾರೊಂದಿಗೂ ಮಾತನಾಡದೆ ತಲೆ ಬಾಗಿಸಿಕೊಂಡು ಕುಳಿತಿದ್ದರು. ಆಗ ದಿಢೀರನೆ ಆರೋಪಿ ಕಂಡೆಲ್ ಎದ್ದು, ಚಾಕುವನ್ನು ತೆಗೆದುಕೊಂಡು ಗುಪ್ತಾರ ಕತ್ತಿಗೆ ಇರಿದಿದ್ದಾನೆ.
ತುರ್ತು ಸಿಬ್ಬಂದಿ ಅವರ ಜೀವ ರಕ್ಷಣೆಗೆ ಯತ್ನಿಸಿದರೂ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಕಂಡೆಲ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಕಂಡೆಲ್ ಕೊಲೆಯನ್ನು ಒಪ್ಪಿಕೊಂಡಿದ್ದು, "ಗುಪ್ತಾ ತನ್ನ ಚಿಕ್ಕಪ್ಪನನ್ನು ಹೋಲುತ್ತಿದ್ದ" ಎಂಬ ವಿಚಿತ್ರ ಕಾರಣವನ್ನು ನೀಡಿದ್ದಾನೆ.
ಈ ಸುದ್ದಿಯನ್ನು ಓದಿ: Viral Video: ಬೆಂಗಳೂರನ್ನು ಐಜ್ವಾಲ್‌ನೊಂದಿಗೆ ಹೋಲಿಕೆ ಮಾಡಿದ ವಿದೇಶಿ ಕಂಟೆಂಟ್ ಕ್ರಿಯೇಟರ್ ಹೇಳಿದ್ದೇನು? ವಿಡಿಯೊ ವೈರಲ್!
ಅಕ್ಷಯ್ ಗುಪ್ತಾ ಆಸ್ಟಿನ್‌ನಲ್ಲಿ ಆರೋಗ್ಯ ತಂತ್ರಜ್ಞಾನ ಕ್ಷೇತ್ರದ ಉದಯೋನ್ಮುಖ ಉದ್ಯಮಿಯಾಗಿದ್ದರು. ಅವರು 'ಫೂಟ್‌ಬಿಟ್' ಎಂಬ ಸ್ಟಾರ್ಟ್‌ಅಪ್‌ನ ಸಹ-ಸಂಸ್ಥಾಪಕರಾಗಿದ್ದು, ಈ ಕಂಪನಿಯು ಹಿರಿಯ ನಾಗರಿಕರ ಚಲನಶೀಲತೆ ಮತ್ತು ಸಮತೋಲನವನ್ನು ಸುಧಾರಿಸಲು ಕೆಲಸ ಮಾಡುತ್ತಿತ್ತು. ಪೆನ್ ಸ್ಟೇಟ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರಾಗಿದ್ದ ಗುಪ್ತಾ, ತಮ್ಮ ನವೀನ ಆವಿಷ್ಕಾರಕ್ಕಾಗಿ ಮೈಕ್ರೋಸಾಫ್ಟ್‌ನ CEO ಸತ್ಯ ನಾಡೆಲ್ಲ ಅವರಿಂದ ವೈಯಕ್ತಿಕ ಆಹ್ವಾನವನ್ನು ಪಡೆದಿದ್ದರು.
ಇತ್ತೀಚೆಗೆ, ಅವರು ಅಮೆಜಾನ್‌ನಿಂದ ಬಂದ 3 ಲಕ್ಷ ಡಾಲರ್‌ನ ಉದ್ಯೋಗದ ಆಫರ್ ತಿರಸ್ಕರಿಸಿ, ತಮ್ಮ ಸ್ಟಾರ್ಟ್‌ಅಪ್ ಅನ್ನು ಮುಂದುವರಿಸಲು ನಿರ್ಧರಿಸಿದ್ದರು. ಜತೆಗೆ ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಸಾಮರ್ಥ್ಯವಿರುವವರಿಗೆ ನೀಡಲಾಗುವ ಒ-1ಎ ವೀಸಾವನ್ನು ಪಡೆದಿದ್ದರು.
ಕಂಡೆಲ್‌ನ ವಿರುದ್ಧ ಪ್ರಥಮ ದರ್ಜೆಯ ಕೊಲೆಯ ಆರೋಪ ಹೊರಿಸಲಾಗಿದ್ದು, ಅವನನ್ನು ಟ್ರಾವಿಸ್ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ಈ ಘಟನೆಯು ಆಸ್ಟಿನ್‌ನ ಭಾರತೀಯ ಸಮುದಾಯದಲ್ಲಿ ಆಘಾತವನ್ನುಂಟು ಮಾಡಿದೆ.