ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dream: ಹಗಲುಗನಸು ತಪ್ಪಲ್ಲ- ಅತಿಯಾದರೆ ಕಷ್ಟ ತಪ್ಪಿದ್ದಲ್ಲ!

ಹಗಲುಗನಸು ಕಾಣುವುದೇ ಎಚ್ಚರ ಇದ್ದಾಗ. ಇಷ್ಟಕ್ಕೂ ʻಹಗಲುಗನಸುʼ ಎಂಬುದು ಅಷ್ಟೇನೂ ಆಪ್ಯಾಯಮಾನವಾದ ವಿಷಯವಲ್ಲ. ಎಲ್ಲ ಸಂಸ್ಕೃತಿಗಳಲ್ಲೂ ʻಕನಸು ಕಾಣ್ತಾ ಕೂತಿರುʼ ಎಂಬುದು ಮೂದಲಿಕೆಯ ಮಾತಾಗಿಯೇ ಬಳಕೆಯಾಗುತ್ತದೆ. ಹಾಗೆಂದು ಹಗಲುಗನಸಿನಿಂದ ಪ್ರಯೋಜನವೇ ಇಲ್ಲವೆಂದಲ್ಲ. ಆದರೆ ಕನಸೇ ಹೆಚ್ಚಾಗಿಬಿಟ್ಟರೆ, ಅದನ್ನು ನನಸು ಮಾಡುವುದಕ್ಕೆ ಸಮಯವೇ ಸಾಲದಲ್ಲ? ಏನೀ ಹಗಲುಗನಸಿನ ಮರ್ಮ?

ಅತಿಯಾಗಿ ಹಗಲುಗನಸು ಕಾಣುತ್ತೀರಾ? ಸಮಸ್ಯೆ ಏನು?

Profile Pushpa Kumari Apr 18, 2025 5:00 AM

ನವದೆಹಲಿ: ಬದುಕಿನಲ್ಲಿ ಮುಂದೆ ಬರುವುದಕ್ಕೆ ಕನಸುಗಳಿರಬೇಕೆಂಬ (Dreams) ಮಾತನ್ನು ಪಾಲಿಸಲು ಹಗಲಿಗೂ ನಿದ್ದೆ ಮಾಡುತ್ತಿದ್ದೇನೆʼ ಎಂಬುದೊಂದು ಹಳೆಯ ನಗೆಹನಿ. ಆದರೆ ಹಗಲಿಗೆ ಕನಸು ಕಾಣುವುದಕ್ಕೆ ನಿದ್ದೆಯನ್ನೇ ಮಾಡಬೇಕೆಂದು ಇಲ್ಲವಲ್ಲ… ಹಗಲುಗನಸು ಕಾಣುವುದೇ ಎಚ್ಚರ ಇದ್ದಾಗ. ಇಷ್ಟಕ್ಕೂ ʻಹಗಲುಗನಸುʼ ಎಂಬುದು ಅಷ್ಟೇನೂ ಆಪ್ಯಾಯಮಾನವಾದ ವಿಷಯವಲ್ಲ. ಎಲ್ಲ ಸಂಸ್ಕೃತಿಗಳಲ್ಲೂ ʻಕನಸು ಕಾಣ್ತಾ ಕುಳಿತಿರುʼ ಎಂಬುದು ಮೂದಲಿಕೆಯ ಮಾತಾಗಿಯೇ ಬಳಕೆಯಾಗುತ್ತದೆ. ಹಾಗೆಂದು ಹಗಲುಗನಸಿನಿಂದ ಪ್ರಯೋಜನವೇ ಇಲ್ಲವೆಂದಲ್ಲ. ಆದರೆ ಕನಸೇ ಹೆಚ್ಚಾಗಿಬಿಟ್ಟರೆ, ಅದನ್ನು ನನಸು ಮಾಡುವುದಕ್ಕೆ ಸಮಯವೇ ಸಾಲದಲ್ಲ? ಏನೀ ಹಗಲುಗನಸಿನ ಮರ್ಮ?

ಮನೆಯಲ್ಲಿ, ಕಚೇರಿಯಲ್ಲಿ, ಪ್ರಯಾಣಿಸುವಾಗ, ಯಾವುದೋ ಕೆಲಸದಲ್ಲಿ ತೊಡಗಿರುವಾಗ, ಸುಮ್ಮನೆ ಕುಳಿತಿರುವಾಗ… ಎಲ್ಲೇ ಆದರೂ ಮನವೆಂಬ ಮರ್ಕಟಕ್ಕೆ ಬಿಡುವಿಲ್ಲ. ಮಂಗವೊಂದು ಕೊಂಬೆಯಿಂದ ಕೊಂಬೆಗೆ ಹಾರುವಂತೆ ಮನಸ್ಸೂ ಯೋಚನೆಯಿಂದ ಯೋಚನೆಗೆ ಹಾರುತ್ತಲೇ ಇರುತ್ತದೆ. ಅದರಿಂದ ಬಿಡುವು, ಬಿಡುಗಡೆ ಸಾಧ್ಯವಿಲ್ಲ. ಕೂತಲ್ಲೇ ಯಾರನ್ನೋ, ಏನನ್ನೋ ಕಲ್ಪಿಸಿಕೊಳ್ಳುವುದರಿಂದ ನಮ್ಮ ಬೇಸರ ಕಳೆಯಬಹುದು, ಸೃಜನಶೀಲತೆಗೆ ಇಂಬು ದೊರೆಯಬಹುದು, ಸಮಸ್ಯೆ ಗಳನ್ನು ಬಿಡಿಸುವಲ್ಲಿ ನೆರವಾಗಬಹುದು, ಬದುಕಿನ ಕಷ್ಟದಿಂದ ಸಣ್ಣದೊಂದು ವಿರಾಮ ನೀಡಬಹುದು- ಹೀಗೆ ಅದಕ್ಕೂ ಒಂದಿಷ್ಟು ಧನಾತ್ಮಕ ಪ್ರಯೋಜನಗಳಿವೆ. ಆದರೆ ಇವೆಲ್ಲವೂ ಒಂದು ಹಂತದವರೆಗೆ ಸರಿ. ಮದ್ದು ತಿನ್ನುವ ಬದಲು ಮದ್ದಿನ ಮರವನ್ನೇ ಜಗಿದರೆ…? ಸಮಸ್ಯೆಗಳು ಖಂಡಿತ. ಏನು ಸಮಸ್ಯೆ? ಇದರಿಂದ ಏನಾಗುತ್ತದೆ?

ಪ್ರಯೋಜನವೇನು?

ಸಮಸ್ಯೆಯನ್ನು ಅರಿಯುವ ಮೊದಲು, ಇದರಿಂದ ಪ್ರಯೋಜನವೇನು ಎನ್ನುವುದನ್ನು ತಿಳಿಯೋಣ. ಬದುಕಿನಲ್ಲಿ ಈಗಾಗಲೇ ಇರುವಂಥ ಹಿತವಲ್ಲದ ಭಾವಗಳು ಮತ್ತು ಅವಸ್ಥೆಗಳಿಂದ ತಪ್ಪಿಸಿಕೊಳ್ಳಲು ಇದು ಅನುಕೂಲ ಕಲ್ಪಿಸುತ್ತದೆ. ಏಕಾಂಗಿತನದಿಂದ ಒದ್ದಾಡುತ್ತಿದ್ದರೆ, ಬೇಸರದಿಂದ ಬೇಸತ್ತಿದ್ದರೆ… ಬೇಕಾದವರೊಂದಿಗೆ ಬೇಕಾದ ಸ್ಥಳಕ್ಕೆ ತೆರಳಿ ಬೇಕಾದ್ದನ್ನು ಮಾಡುವ ಅವಕಾಶ ಇರುವುದು ಹಗಲಿನಲ್ಲಿ ಕಾಣುವ ಕನಸಿನಲ್ಲಿ ಮಾತ್ರವೇ ತಾನೇ! ಬಹಳಷ್ಟು ಸೃಜನಶೀಲ ಮಂದಿಗೆ ಅವರ ಕಲೆ, ಸಾಹಿತ್ಯ, ಸಂಗೀತ ಮುಂತಾದ ಬಹಳಷ್ಟು ಕ್ಷೇತ್ರಗಳಲ್ಲಿ ಮುಂದುವರಿಯುವುದಕ್ಕೆ ಇಂಥ ಕಲ್ಪನೆಗಳು ನೆರವಾಗುತ್ತವೆ; ಚೋದಕದಂತೆ ಕೆಲಸ ಮಾಡುತ್ತವೆ.

ಸಮಸ್ಯೆಯೇನು?

ಅತಿಯಾಗಿ ಹಗಲುಗನಸು ಕಾಣುವುದನ್ನು ಅಸಹಜ/ಅಸಮರ್ಪಕ ಹಗಲುಗನಸು ಅಥವಾ ಮಾಲ್‌ ಅಡಾಪ್ಟಿವ್‌ ಡೇಡ್ರೀಮಿಂಗ್‌ ಎಂದು ಕರೆಯಲಾಗುತ್ತದೆ. ಸಹಜ ಹಗಲುಗನಸಿನಂತೆ ಇದು ಮನಸ್ಸಿಗೊಂದು ವಿರಾಮ ನೀಡುವ ಬದಲು, ಪ್ರಖರವಾದ ಕಲ್ಪನೆಗಳನ್ನು ಮೂಡಿಸಿ, ಮನಸ್ಸನ್ನು ಉದ್ರೇಕಿಸಿ, ಅದರಿಂದ ಹೊರಬರಲಾಗದ ರೀತಿಯಲ್ಲಿ ಮನಸ್ಸ ನ್ನೆಲ್ಲ ಆವರಿಸಿಕೊಂಡು ಬಿಡುತ್ತದೆ. ಇದರಿಂದ ಕೆಲಸವೆಲ್ಲ ಹಾಳು, ದಿನವೆಲ್ಲ ದಂಡ ಎನ್ನುವ ಅವಸ್ಥೆಗೆ ವ್ಯಕ್ತಿಯನ್ನು ನೂಕುತ್ತದೆ. ಕನಸಿನಲ್ಲೇ ಕಥೆಗಳು ಸೃಷ್ಟಿಯಾಗಿ, ಪಾತ್ರಗಳು ಮೂಡಿಬಂದು, ಕೂತಲ್ಲೇ ಸಿನೆಮಾ ಕಾಣುವ ಈ ಪ್ರವೃತಿ ಎಂಥಾ ವ್ಯಸನ ವನ್ನು ಸೃಷ್ಟಿಸುತ್ತದೆಂದರೆ, ಇದರಿಂದ ಹೊರಬರುವುದಕ್ಕೆ ವ್ಯಕ್ತಿಗಳೇ ನಿರಾಕರಿಸುತ್ತಾರೆ; ತಮ್ಮ ಸ್ವಪ್ನ ಸೌಧದಲ್ಲೇ ಸುಖವಾಗಿರಲು ಹಾತೊರೆಯುತ್ತಾರೆ. ನಿಜ ಜೀವನದ ಎಲ್ಲ ಕೆಲಸ, ಹೊಣೆಗಾರಿಕೆಗಳನ್ನೂ ನಿರಾಕರಿಸುತ್ತಾರೆ.

ಇರಲಿ, ಏನೀಗ ಎಂದಿರೋ…? ಇದು ಸಮಸ್ಯೆಯ ಪ್ರಾರಂಭ ಮಾತ್ರ. ಸುಮ್ಮನೆ ವಿರಾಮದ ಚಟುವಟಿಕೆಯಾಗಿರುವುದಕ್ಕಿಂತ ಹೆಚ್ಚಿನ ಸಮಯವನ್ನು ಹಗಲುಗನಸು ಕಾಣುವುದರಲ್ಲಿ ಕಳೆಯುವುದು ಹಲವು ಮಾನಸಿಕ ಸಮಸ್ಯೆಗಳಿಗೆ ಮೂಲವಾಗ ಬಹುದು ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಋಣಾತ್ಮಕ ಭಾವಗಳಲ್ಲೇ ತೇಲಾಡಿಸುವ ಒಸಿಡಿ (Obsessive-compulsive disorder), ಮಾನಸಿಕ ಒತ್ತಡ, ಉನ್ಮಾದ, ಖಿನ್ನತೆ ಮುಂತಾದವು ಹೆಚ್ಚಿ, ಮನಸ್ಸಿನ ಸ್ವಾಸ್ಥ್ಯ ಹಾಳಾಗುವ ಸಾಧ್ಯತೆ ಅಧಿಕ ವಾಗುತ್ತದೆ. ಈ ಹಂತದಲ್ಲಿ ಅವರಿಗೆ ನೆರವು ದೊರೆಯದಿದ್ದರೆ, ಸಾಮಾನ್ಯ ಬದುಕು ದೂರಾಗಿ, ಎಲ್ಲರಿಂದ ವಿಮುಖರಾಗಿ, ಭ್ರಮೆಯಲ್ಲೇ ಬದುಕುವ ಹಂತಕ್ಕೆ ಹೋಗುತ್ತದೆ. ತನ್ನ ಸುತ್ತಲೂ ಭ್ರಾಮಕ ಜಗತ್ತನ್ನು ತಾನೇ ಸೃಷ್ಟಿಸಿಕೊಂಡ ವ್ಯಕ್ತಿ, ಹೊರ ಬರಲಾಗದೆ ಅಸಹಾಯಕನಾಗುತ್ತಾನೆ.

ಪರಿಹಾರವೇನು?

ಇಂಥಾ ವರ್ತನೆಯನ್ನು ಆಪ್ತರಲ್ಲಿ ಕಾಣುತ್ತಿದ್ದಂತೆಯೇ, ಅವರಿಗೆ ಮಾನಸಿಕ ವೈದ್ಯರ ನೆರವು ಬೇಕೆಂಬುದನ್ನು ಅರ್ಥಮಾಡಿಕೊಳ್ಳಿ. ಇದಕ್ಕೆ ಕೇವಲ ವೈದ್ಯರಲ್ಲಿ ಹೋಗುವುದೊಂದೇ ಪರಿಹಾರವಾಗುವುದಿಲ್ಲ. ಜೊತೆಗೆ ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಕುಟುಂಬದ ನೆರವು ಬಹುಮುಖ್ಯ ಎನಿಸುತ್ತದೆ.

ಇದನ್ನು ಓದಿ: World Health Day: ಜೀವನಶೈಲಿ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ: ಪ್ರಾಕ್ಟೊ

ದೇಹ-ಮನಸ್ಸುಗಳು ಸೋಮಾರಿಯಾಗುತ್ತಿದ್ದಂತೆ ಭ್ರಮೆಯೆಂಬ ಸೈತಾನ ಸವಾರಿ ಮಾಡತೊಡಗುತ್ತದೆ. ಹಾಗಾಗಿ ಅವರನ್ನು ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿ. ಮನೆವಾಳ್ತೆಯಲ್ಲಿ ಇದಿಷ್ಟು ಅವರ ಪಾಲು ಎಂದು ಅವರಿಗೆ ಅರ್ಥ ಮಾಡಿಸಿ. ಅವರ ಪಾಲಿನ ಕೆಲಸಗಳನ್ನು ದಿನವೂ ಪೂರ್ಣಗೊಳಿಸಲು ಪ್ರೋತ್ಸಾಹಿಸಿ. ಜನರೊಂದಿಗೆ ಹೆಚ್ಚಾಗಿ ಒಡನಾಡುವುದು ಅಗತ್ಯ. ನಿತ್ಯವೂ ಪಾರ್ಕಿನಲ್ಲಿ ನಡೆಯುವುದು, ಯೋಗ, ಏರೋಬಿಕ್ಸ್‌ ಮುಂತಾದ ತರಗತಿಗಳ ಗುಂಪನ್ನು ಸೇರಿಕೊಳ್ಳುವುದು, ಕಲೆ-ಸಂಗೀತದಂಥ ಇನ್ನಾವುದೇ ಚಟುವಟಿಕೆಗಳು ಇಷ್ಟವಾದರೆ ಅದನ್ನು ಅಭ್ಯಾಸ ಮಾಡುವುದು- ಇವೆಲ್ಲವುಗಳ ಮೂಲಕ ಬದುಕಿಗೊಂದು ಶಿಸ್ತನ್ನು ರೂಢಿಸಿ. ಆಗ ಮನಸ್ಸು ಅಂಡಲೆಯುವುದನ್ನು ಕಡಿಮೆ ಮಾಡಿ, ವರ್ತಮಾನಕ್ಕೆ ಬರುತ್ತದೆ.