Girl Death: ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಔಷಧಿ ಕೊರತೆಯಿಂದ ಬಾಲಕಿ ಸಾವು: ಆರೋಪ
ಫಿಟ್ಸ್ ಹಿನ್ನೆಲೆಯಲ್ಲಿ ಕಳೆದ 16 ದಿನಗಳಿಂದ ಕಿಮ್ಸ್‌ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುನ ವೆಂಟಿಲೇಟರ್ನಲ್ಲಿಟ್ಟು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಕುಟುಂಬಸ್ಥರು ಔಷಧಿಗಾಗಿ ಪರದಾಟ ನಡೆಸುತ್ತಿದ್ದರಂತೆ. ಹೈ ಡೋಸ್ನಿಂದ ಮಗು ಕೋಮಾಗೆ ಹೋಗಿತ್ತು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ(KIMS Hospital) ಅವ್ಯವಸ್ಥೆ ಹಾಗೂ ಔಷಧಿಯ ಕೊರತೆ (Medicine scarcity) ಒಬ್ಬಳು ಪುಟ್ಟ ಬಾಲಕಿಯ ಸಾವಿಗೆ (girl death) ಕಾರಣವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆಯೂ ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ಕೆಲವು ವರದಿಗಳು ಬಿತ್ತರಗೊಂಡಿದ್ದವು. ಇದೀಗ ಆ ಅವ್ಯವಸ್ಥೆ ಬಾಲಕಿಯ ಸಾವಿನೊಂದಿಗೆ ಗಂಭೀರ ಸ್ವರೂಪ ಪಡೆದಿದೆ.
ಬಶೀರ್ ಅಹ್ಮದ್ ಬಳ್ಳಾರಿ ಹಾಗೂ ನಿಕ್ಕತ್ ಬಳ್ಳಾರಿ ಎಂಬ ದಂಪತಿಯ ಎರಡೂವರೆ ವರ್ಷದ ಮಗು ಔಷಧಿ ಕೊರತೆಯಿಂದಾಗಿ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ದಂಪತಿ ಹಳೆ ಹುಬ್ಬಳ್ಳಿಯ ಆನಂದನಗರದಲ್ಲಿ ವಾಸವಾಗಿದ್ದರು. ಫಿಟ್ಸ್ ಹಿನ್ನೆಲೆಯಲ್ಲಿ ಕಳೆದ 16 ದಿನಗಳಿಂದ ಕಿಮ್ಸ್‌ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಬೆಳಿಗ್ಗೆ ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಸಂಜೆ 9 ಗಂಟೆಗೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರಿಗೆ ಮಾಹಿತಿ ಕೊಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕುಟುಂಬಸ್ಥರು ಔಷಧಿಗಾಗಿ ಪರದಾಟ ನಡೆಸುತ್ತಿದ್ದರಂತೆ. ಆದರೆ, ಔಷಧಿ ವಿಭಾಗದ ಸಿಬ್ಬಂದಿ ನೋ ಸ್ಟಾಕ್ ಅಂತ ಬರೆದು ಕೊಡುತ್ತಿದ್ದರಂತೆ.
ಐಸಿಯುನ ವೆಂಟಿಲೇಟರ್ನಲ್ಲಿಟ್ಟು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೈ ಡೋಸ್ನಿಂದ ಮಗು ಕೋಮಾಗೆ ಹೋಗಿತ್ತು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೊರಗಡೆ ಬರೆದು ಕೊಡುವ ಔಷಧಿಗಳು ಸಾಕಷ್ಟು ದುಬಾರಿಯಾಗಿದೆ. ಬಡ ಜನರಿಗೆ ಅಷ್ಟು ದುಡ್ಡು ಖರ್ಚು ಮಾಡಿ ಔಷಧಿ ತೆಗೆದುಕೊಳ್ಳುವ ಶಕ್ತಿ ಎಲ್ಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಿಮ್ಸ್ ಶುಲ್ಕ ಏರಿಕೆ ದೂರು
ಇತ್ತೀಚೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಶುಲ್ಕ ಏರಿಕೆಯಾಗಿದೆ. ಹೊರ ರೋಗಿಗಳ ನೋಂದಣಿ ವಿಭಾಗದ ಶುಲ್ಕ 10 ರೂಪಾಯಿಯಿಂದ 20 ರೂಪಾಯಿಗೆ ಏರಿಕೆಯಾಗಿದೆ. ಒಳ ರೋಗಿಗಳ ನೋಂದಣಿ ವಿಭಾಗದ ಶುಲ್ಕ 30 ರೂಪಾಯಿಯಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಜೊತೆಗೆ ಎಕ್ಸ್‌ರೇ, ಸ್ಕ್ಯಾನಿಂಗ್, ಜನನ, ಮರಣ ಪ್ರಮಾಣ ಪತ್ರ ನೀಡುವಿಕೆ ದರದಲ್ಲೂ ಬದಲಾವಣೆ ಮಾಡಿದೆ. ಜನನ, ಮರಣ ಪ್ರಮಾಣ ಪತ್ರ ನೀಡಲು ಈ ಮುಂಚೆ 5 ರೂಪಾಯಿ ತೆಗೆದುಕೊಳ್ಳಲಾಗುತ್ತಿತ್ತು. ಇದೀಗ, ಈ ದರವನ್ನು ಕಿಮ್ಸ್ ಆಡಳಿತ ಮಂಡಳಿ 50 ರೂಪಾಯಿಗೆ ಏರಿಸಿದೆ. ಕಿಮ್ಸ್ ಬರೊಬ್ಬರಿ ಎಂಟು ವರ್ಷಗಳ ನಂತರ ದರ ಬದಲಾವಣೆ ಮಾಡಿದೆ.
ಈ ಬಗ್ಗೆ ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಮಾತನಾಡಿ, ಕಿಮ್ಸ್‌ನಲ್ಲಿ ಶೇ.5ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡಿದ್ದೇವೆ. ದಿಢೀರ್ ದರ ಏರಿಕೆಯಾಗಿಲ್ಲ, ಒಂದು ವರ್ಷದಿಂದ ಚರ್ಚೆಯಾಗುತ್ತಿತ್ತು. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಸಭೆ ನಂತರ ದರ ಬದಲಾವಣೆ ಮಾಡಿದ್ದೇವೆ. ಇದು ಬಡವರಿಗೆ ಹೊರೆ ಆಗಲ್ಲ ಎಂದು ಹೇಳಿದರು. ಅಕಸ್ಮಾತ್ ರೋಗಿಗಳ ಬಳಿ ಹಣ ಇಲ್ಲದಿದ್ದರೂ ಚಿಕಿತ್ಸೆ ನೀಡುತ್ತೇವೆ. ಒಳ್ಳೆಯ ಚಿಕಿತ್ಸೆ ಕೊಡುವ ಕಾರಣಕ್ಕೆ ಅಲ್ಪ ಪ್ರಮಾಣದ ದರ ಏರಿಕೆ ಮಾಡಿದ್ದೇವೆ. ಬಿಪಿಎಲ್ ಕಾರ್ಡ್ ಬಳಕೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಕಿಮ್ಸ್‌ನಲ್ಲಿ ಚಿಕಿತ್ಸಾ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುವುದು. ದಿಢೀರ್ 20 ರೂ., 50 ರೂ. ಹೆಚ್ಚಳ ಮಾಡಿರುವುದು ತಪ್ಪು. ರಕ್ತ ತಪಾಸಣೆ ದರವೂ ಹೆಚ್ಚಿಸಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Hubballi news: ʼಇನ್ನಷ್ಟು ಸಿಸಿಟಿವಿ ಅಳವಡಿಸಿʼ: ಹುಬ್ಬಳ್ಳಿಯ ಮೃತ ಬಾಲಕಿ ಮನೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭೇಟಿ