ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Bill: ವಕ್ಫ್‌ ಕಾಯಿದೆ ತಿದ್ದುಪಡಿ ವಿರೋಧಿಸಿ ಇಂದು ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ, ಸಂಚಾರ ಮಾರ್ಗ ಬದಲು

ಪ್ರತಿಭಟನೆ ವೇಳೆ ರಸ್ತೆ ಸಂಚಾರ ನಿರ್ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್​ಹೆಚ್ 73 ಬಂದ್ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ. ಸರ್ಕಾರ ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಸರ್ಕಾರ ಅನುಮತಿ ನೀಡುವಾಗ ಸುಪ್ರೀಂ ಕೋರ್ಟ್ ವಿಚಾರಣೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.

ವಕ್ಫ್‌ ತಿದ್ದುಪಡಿ ವಿರೋಧಿಸಿ ಇಂದು ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Apr 18, 2025 7:27 AM

ಮಂಗಳೂರು : ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Bill, Waqf amendment bill) ವಿರೋಧಿಸಿ ಇಂದು ಮಂಗಳೂರಿನಲ್ಲಿ (Mangaluru) ಬೃಹತ್ ಪ್ರತಿಭಟನೆ (Protest) ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ ಸುಮಾರು 2000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ಮಾರ್ಗ ಕೂಡ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ಎಸ್ಪಿ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ

ವಕ್ಫ್ ತಿದ್ದುಪಡಿ ವಿರುದ್ಧ ಕರ್ನಾಟಕ ಉಲಮಾ ಸಂಘಟನೆಯಿಂದ ಈ ಪ್ರತಿಭಟನೆ ನಡೆಯುತ್ತಿದೆ. ಮಂಗಳೂರಿನ ಗಾರ್ಡನ್ ಮೈದಾನದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ಮಂಗಳೂರು ನಗರದಲ್ಲಿ ಐವರು ಎಸ್‌ಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಐವರು ಎಸ್ಪಿಗಳು, ಐವರು ಹೆಚ್ಚುವರಿ ಎಸ್ಪಿಗಳು, 20 ಡಿವೈಎಸ್ಪಿ, 230 ಇನ್ಸ್ಪೆಕ್ಟರ್‌ಗಳು ಸೇರಿದಂತೆ 2,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅರೆಸೇನಾಪಡೆ, 20 ಕೆಎಸ್‌ಆರ್‌ಪಿ ತುಕಡಿ, 20 ಸಶಸ್ತ್ರ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ ಎಂದು ಅನುಪಮ್ ಅಗರ್ವಾಲ್ ಮಾಹಿತಿ ನೀಡಿದರು.

ಧರಣಿಯ ಸ್ಥಳ, ಮಂಗಳೂರಿನ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ನೀಡಲಾಗುತ್ತಿದ್ದು, ನಗರದ ಹಲವೆಡೆ ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇಡೀ ದಿನ ನಗರದಲ್ಲಿ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಪ್ರತಿಭಟನೆಗೆ ಮುಚ್ಚಳಿಕೆ ಬಳಸಿಕೊಂಡು ಷರತ್ತು ಬದ್ಧ ಅನುಮತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 73ರಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಮಸೀದಿಗಳಿಗೆ ಸುತ್ತೋಲೆ

ಮುಸ್ಲಿಂ ಬಾಹುಳ್ಯದ ಕರಾವಳಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿಸಿ ದೊಡ್ಡ ಪ್ರತಿಭಟನೆ ಮಾಡಬೇಕೆಂದು ಈಗಾಗಲೇ ಮಸೀದಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಶುಕ್ರವಾರ ಮಸೀದಿ ಪ್ರಾರ್ಥನೆ ಬಳಿಕ ಎಲ್ಲ ಮುಸ್ಲಿಂ ಜನತೆ ಪ್ರತಿಭಟನೆಗೆ ಬರುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಲಕ್ಷಾಂತರ ಜನ ಬರುವ ಸಾಧ್ಯತೆಯಿದೆ.

ಕರ್ನಾಟಕದ ಪ್ರಮುಖ ಮುಸ್ಲಿಂ ಧಾರ್ಮಿಕ ನಾಯಕರಾದ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಖಾಝಿ ಶೈಖುನಾ ಮಾಣಿ ಉಸ್ತಾದ್ ಮಾರ್ಗದರ್ಶನದಲ್ಲಿ ಈ ಪ್ರತಿಭಟನಾ ಸಭೆ ನಡೆಯಲಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಕರ್ನಾಟಕದಲ್ಲಿ ಮೊದಲ ಬಾರಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಸಭೆ ಇದಾಗಿದ್ದು ಮುಂದೆ ಬೆಂಗಳೂರು, ಹುಬ್ಬಳಿಯಲ್ಲಿಯೂ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿದೆ.

ಹೆದ್ದಾರಿ ಬಂದ್‌ ಮಾಡುವಂತಿಲ್ಲ

ಪ್ರತಿಭಟನೆ ವೇಳೆ ರಸ್ತೆ ಸಂಚಾರ ನಿರ್ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಮಂಗಳೂರಿನ ರಾಜೇಶ್ ಅರ್ಕುಳ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ವಕ್ಫ್ ತಿದ್ದುಪಡಿ ವಿಚಾರ ಸುಪ್ರೀಂ ಕೋರ್ಟ್​ ಪರಿಗಣಿಸುವಾಗ ಪ್ರತಿಭಟನೆ ಸರಿಯಲ್ಲ. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್​ಹೆಚ್ 73 ಬಂದ್ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ. ಸರ್ಕಾರ ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಸರ್ಕಾರ ಅನುಮತಿ ನೀಡುವಾಗ ಸುಪ್ರೀಂ ಕೋರ್ಟ್ ವಿಚಾರಣೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.

ಮಾರ್ಗ ಬದಲಾವಣೆ

ಅಡ್ಯಾರ್ ಕಣ್ಣೂರು ಬಳಿ ಇರುವ ಷಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12ರಿಂದ ರಾತ್ರಿ 9 ಗಂಟೆವರೆಗೆ ಸಂಚಾರ ದಟ್ಟಣೆ ಆಗಬಹುದಾದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್- ಕಣ್ಣೂರು- ಅಡ್ಯಾರ್- ಸಹ್ಯಾದ್ರಿ- ಅರ್ಕುಳ (ಎರಡು ಕಡೆಯಿಂದ) ಮಾರ್ಗಗಳ ಬದಲಾಗಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಲು ಪೊಲೀಸ್‌ ಇಲಾಖೆ ಕೋರಿದೆ.

ಮೆಲ್ಕಾರು ಜಂಕ್ಷನ್- ಪುತ್ತೂರು/ ಬಂಟ್ವಾಳ/ ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್- ಬೊಳಿಯಾರ್- ಮುಡಿಪು- ದೇರಳಕಟ್ಟೆ- ತೊಕ್ಕೊಟ್ಟು ಮೂಲಕ ಸಂಚರಿಸುವುದು. ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಪೊಳಲಿ ದ್ವಾರದ ಮೂಲಕ ಕಲ್ಪಣೆ ಜಂಕ್ಷನ್- ನೀರುಮಾರ್ಗ- ಬೈತುರ್ಲಿ- ಕುಲಶೇಖರ- ನಂತೂರು ಮೂಲಕ ಸಂಚರಿಸುವುದು.

ವಳಚ್ಚಿಲ್ ಜಂಕ್ಷನ್- ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ವಳಚ್ಚಿಲ್‌ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು- ನೀರುಮಾರ್ಗ- ಬೈತುರ್ಲಿ- ನಂತೂರು ಮೂಲಕ ಸಂಚರಿಸುವುದು. ಅಡ್ಯಾರ್ ಕಟ್ಟೆ- ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್- ಕೊಣಾಜೆ- ದೇರಳಕಟ್ಟೆ- ತೊಕ್ಕೊಟ್ಟು ಮೂಲಕ ಸಂಚರಿಸುವುದು.

ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು- ದೇರಳಕಟ್ಟೆ- ಮುಡಿಪು- ಬೊಳಿಯಾರ್- ಮೆಲ್ಕಾರ್ ಮೂಲಕ ಸಂಚರಿಸುವುದು. ನಂತೂರು ವೃತ್ತ- ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ- ಕುಲಶೇಖರ- ಬೈತುರ್ಲಿ ಜಂಕ್ಷನ್- ನೀರುಮಾರ್ಗ- ಕಲ್ಪಣೆ ಜಂಕ್ಷನ್- ಬಿ.ಸಿ ರೋಡ್ ಕೈಕಂಬ, ಪೊಳಲಿ ದ್ವಾರದ ಮೂಲಕ ಸಂಚರಿಸುವುದು.

ಕೆ.ಪಿ.ಟಿ. ವೃತ್ತ- ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ- ಪಚ್ಚನಾಡಿ- ವಾಮಂಜೂರು- ಬೈತುರ್ಲಿ ಜಂಕ್ಷನ್- ನೀರುಮಾರ್ಗ- ಕಲ್ಪನೆ ಮೂಲಕ ಅಥವಾ ಬೋಂದೆಲ್- ಕಾವೂರು- ಬಜಪೆ- ಕೈಕಂಬ- ಮೂಡುಬಿದಿರೆ ಮೂಲಕ ಸಂಚರಿಸುವುದು. ಮೂಲ್ಕಿ ವಿಜಯಸನ್ನಿಧಿ- ಉಡುಪಿ/ ಮೂಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ- ಮೂಡುಬಿದಿರೆ- ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವುದು.

ಪಡುಬಿದ್ರಿ- ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ - ಮೂಡುಬಿದಿರೆ- ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: Waqf Amendment Act 2025: ವಕ್ಫ್‌ ಮಂಡಳಿಗಳ ನೇಮಕಾತಿಗೆ ಸುಪ್ರೀಂ ಕೋರ್ಟ್‌ ತಡೆ