CSK vs PBKS: ಹ್ಯಾಟ್ರಿಕ್ ವಿಕೆಟ್ ಕಿತ್ತು ವಿಶೇಷ ದಾಖಲೆ ಬರೆದ ಯುಜ್ವೇಂದ್ರ ಚಹಲ್!
Yuzvendra Chahal took Hat-Trick: ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಇದರೊಂದಿಗೆ ಸಿಎಸ್ಕೆ ಎದುರು ಹ್ಯಾಟ್ರಿಕ್ ವಿಕೆಟ್ ಕಿತ್ತ ಮೊದಲ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.



ಹ್ಯಾಟ್ರಿಕ್ ವಿಕೆಟ್ ಕಿತ್ತ ಯುಜ್ವೇಂದ್ರ ಚಹಲ್
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ 19ನೇ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ಚಹಲ್ ಪಾಲಿಗೆ ಎರಡನೇ ಹ್ಯಾಟ್ರಿಕ್ ವಿಕೆಟ್
ಯುಜ್ವೇಂದ್ರ ಚಹಲ್ ಅವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಎರಡನೇ ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 2022ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು.

ಹೆಚ್ಚು ಹ್ಯಾಟ್ರಿಕ್ ಕಿತ್ತ ಮೂರನೇ ಬೌಲರ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಬಳಿಕ ಚಹಲ್ ಎರಡನೇ ಸಲ ಈ ಸಾಧನೆಯನ್ನು ಐಪಿಎಲ್ನಲ್ಲಿ ಮಾಡಿದ್ದಾರೆ. ಆ ಮೂಲಕ ಐಪಿಎಲ್ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಐಪಿಎಲ್ನಲ್ಲಿ ಹೆಚ್ಚು ಬಾರಿ ಹ್ಯಾಟ್ರಿಕ್ ಸಾಧಕರು
ಅಮಿತ್ ಮಿಶ್ರಾ: ಮೂರು ಬಾರಿ ಹ್ಯಾಟ್ರಿಕ್ ಸಾಧನೆ (2008, 2011 & 2013)
ಯುವರಾಜ್ ಸಿಂಗ್: ಎರಡು ಬಾರಿ ಹ್ಯಾಟ್ರಿಕ್ ಸಾಧನೆ (2009)
ಯುಜ್ವೇಂದ್ರ ಚಹಲ್: ಎರಡು ಬಾರಿ ಹ್ಯಾಟ್ರಿಕ್ ಸಾಧನೆ (2022, 2025)

ಸಿಎಸ್ಕೆ ಎದುರು ಮೊದಲ ಹ್ಯಾಟ್ರಿಕ್
ಚೆನ್ನೈ ಸೂಪರ್ ಕಿಂಗ್ಸ್ ಎದುರು ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ನೂತನ ದಾಖಲೆಯನ್ನು ಯುಜ್ವೇಂದ್ರ ಚಹಲ್ ಬರೆದಿದ್ದಾರೆ. ಅಲ್ಲದೆ 2008ರ ಬಳಿಕ ಚೆಪಾಕ್ನಲ್ಲಿ ದಾಖಲಾದ ಮೊದಲ ಹ್ಯಾಟ್ರಿಕ್ ಇದಾಗಿದೆ.

ಹ್ಯಾಟ್ರಿಕ್ಗೆ ಬಲಿಯಾದ ಬ್ಯಾಟರ್ಸ್
ಪಂದ್ಯದ 19ನೇ ಓವರ್ನ ಎರಡನೇ ಎಸೆತದಲ್ಲಿ ಎಂಎಸ್ ಧೋನಿಯನ್ನು ಔಟ್ ಮಾಡಿದ ಬಳಿಕ ಚಹಲ್, 4, 5 ಹಾಗೂ 6ನೇ ಎಸೆತಗಳಲ್ಲಿ ಕ್ರಮವಾಗಿ ದೀಪಕ್ ಹೂಡ, ಅನ್ಷುಲ್ ಕಾಂಬೋಜ್ ಹಾಗೂ ನೂರ್ ಅಹ್ಮದ್ ಅವರನ್ನು ಔಟ್ ಮಾಡಿದರು.