ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ಬಂದ್

ಪಾಕಿಸ್ತಾನದಿಂದ ಬರುವ ಎಲ್ಲ ವಿಮಾನಗಳಿಗೆ ಭಾರತ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಕಳೆದ ವಾರ ಎಲ್ಲ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿತ್ತು. ಇದೀಗ ಭಾರತವು ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಿಂದ ನೋಂದಾಯಿಸಲ್ಪಟ್ಟ, ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ಎಲ್ಲ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ಬಂದ್

ಸಾಂದರ್ಭಿಕ ಚಿತ್ರ.

Profile Ramesh B Apr 30, 2025 11:44 PM

ಹೊಸದಿಲ್ಲಿ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಮಂದಿಯನ್ನು ಉಗ್ರರು ಹತ್ಯೆಗೈದ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಕೈಗೊಳ್ಳುತ್ತಿದೆ (Pahalgam Attack). ಅದರ ಭಾಗವಾಗಿ ಪಾಕಿಸ್ತಾನದಿಂದ ಬರುವ ಎಲ್ಲ ವಿಮಾನಗಳಿಗೆ ಭಾರತ ತನ್ನ ವಾಯುಪ್ರದೇಶವನ್ನು (Airspace) ಮುಚ್ಚಿದೆ. ಕಳೆದ ವಾರ ಎಲ್ಲ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿತ್ತು. ಇದೀಗ ಭಾರತವು ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಿಂದ ನೋಂದಾಯಿಸಲ್ಪಟ್ಟ, ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ಎಲ್ಲ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಇದು ಏಪ್ರಿಲ್ 30ರಿಂದ 2025ರ ಮೇ 23ರವರೆಗೆ ಜಾರಿಯಲ್ಲಿರಲಿದೆ.

ಈ ಮೂಲಕ ಭಾರತ ಮತ್ತು ಪಾಕಿಸ್ತಾನ ಎರಡೂ ಮೇ 23ರ ರಾತ್ರಿ 11:59ರವರೆಗೆ ತಮ್ಮ ವಾಯುಪ್ರದೇಶದಲ್ಲಿ ಪರಸ್ಪರ ವಿಮಾನಯಾನ ಸಂಸ್ಥೆಗಳನ್ನು ನಿರ್ಬಂಧಿಸಿವೆ. ʼʼಪಾಕಿಸ್ತಾನ ನೋಂದಾಯಿತ ವಿಮಾನಗಳು ಮತ್ತು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದಲ್ಲಿ ಪ್ರವೇಶವಿಲ್ಲʼʼ ಎಂದು ಭಾರತ NOTAM (ನೋಟಿಸ್‌ ಟು ಏರ್‌ಮನ್‌) ಹೊರಡಿಸಿದೆ.



ಈ ಸುದ್ದಿಯನ್ನೂ ಓದಿ: Pak Based Hackers: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ; ಗುಂಡಿನ ದಾಳಿ ಬಳಿಕ ಇದೀಗ ಸೈಬರ್‌ ಆಕ್ರಮಣ

ಏ. 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿಮಾನಗಳು ಈಗಾಗಲೇ ಭಾರತೀಯ ವಾಯುಪ್ರದೇಶವನ್ನು ಬಳಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ನಡೆಯಿಂದ ಎರಡೂ ದೇಶಗಳ ವಿಮಾನಗಳು ಸುತ್ತು ಬಳಸಿ ವಿವಿಧ ದೇಶಗಳಿಗೆ ತೆರಳಬೇಕಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಜತೆಗೆ ವಿಮಾನ ಸಂಸ್ಥೆಗಳಿಗೆ ವೆಚ್ಚ ಹೆಚ್ಚಾಗಲಿದೆ ಎಂದು ವರದಿಯೊಂದು ಹೇಳಿದೆ. ಇದಕ್ಕೂ ಮೊದಲು ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದು, ತಾತ್ಕಾಲಿಕ ವೀಸಾ ಹೊಂದಿರುವ ಪಾಕಿಸ್ತಾನದ ಪ್ರಜೆಗಳು ತೆರಳುವಂತೆ ತಿಳಿಸಿತ್ತು.