Military Power: ಪಾಕ್ ಸೇನೆ ಮತ್ತು ಉಗ್ರರನ್ನು ಎದುರಿಸಲು ಭಾರತದ ಸೇನೆ ಎಷ್ಟು ಬಲಿಷ್ಠವಾಗಿದೆ? ಇಲ್ಲಿದೆ ಡಿಟೇಲ್ಸ್
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಆಕ್ರೋಶದ ಜ್ವಾಲೆ ಎಬ್ಬಿಸಿದೆ ಎಂದರೆ ತಪ್ಪಾಗಲಾರದು. ಹೆಚ್ಚಿನವರು ಪಾಕಿಸ್ತಾನವನ್ನು ಭಾರತೀಯ ಸೈನ್ಯ ಸೆದೆಬಡಿಯಬೇಕು ಎಂದು ಬಯಸುತ್ತಿದ್ದಾರೆ. ಒಂದು ರೀತಿಯಲ್ಲಿ ಈಗ ಎರಡೂ ದೇಶಗಳ ಮಧ್ಯೆ ಯುದ್ಧ ಸನ್ನಿವೇಶ ಉಂಟಾದರೂ ಅಚ್ಚರಿಯಿಲ್ಲ. ಒಂದು ವೇಳೆ ಯುದ್ಧವಾದರೆ ಭಾರತೀಯ ಸೈನ್ಯಕ್ಕೆ ಪಾಕಿಸ್ತಾನವನ್ನು ಸದೆ ಬಡಿಯುವ ಸಾಮರ್ಥ್ಯವಿದೆಯೇ ? ಪಾಕಿಸ್ತಾನ ಎಷ್ಟು ದಿನಗಳ ಕಾಲ ಭಾರತದ ವಿರುದ್ದ ಹೊರಡಬಹುದು? ಈ ಎಲ್ಲ ಮಾಹಿತಿ ಇಲ್ಲಿದೆ.


ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and kashmi) ಪದೇ ಪದೆ ಉಗ್ರರ ದಾಳಿಯಾಗುತ್ತಿರುವುದು (terror attack) ಒಂದರ್ಥದಲ್ಲಿ ಭಾರತೀಯ ಮಿಲಿಟರಿ (Indian army) ಸಾಮರ್ಥ್ಯವನ್ನು ಕೆರಳಿಸುವ ಪ್ರಯತ್ನವನ್ನು ಪಾಕಿಸ್ತಾನ (pakistan) ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಇದೀಗ ದಕ್ಷಿಣ ಕಾಶ್ಮೀರದ (South Kashmir) ಪಹಲ್ಗಾಮ್‌ನಲ್ಲಿ (Pahalgam) ಮಂಗಳವಾರ ನಡೆದ ದಾಳಿ ಹಾಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ (Pakistan Army Chief) ಜನರಲ್ ಅಸಿಮ್ ಮುನೀರ್ ( General Asim Munir) ಹೇಳಿರುವುದು ಎರಡೂ ದೇಶಗಳ ಮಧ್ಯೆ ಯುದ್ಧದ ಸನ್ನಿವೇಶವನ್ನು ನಿರ್ಮಿಸಿದೆ. ಹೀಗಾಗಿ ಇದೀಗ ಎರಡು ದೇಶಗಳ ಮಧ್ಯೆ ಇರುವ ಮಿಲಿಟರಿ ಸಾಮರ್ಥ್ಯದ ಕುರಿತು ಚರ್ಚೆ ಪ್ರಾರಂಭವಾಗಿದೆ. ಈ ಕುರಿತು ಜಾಗತಿಕ ಮಿಲಿಟರಿ ಸಾಮರ್ಥ್ಯವನ್ನು ಗುರುತಿಸುವ ಪ್ರಸಿದ್ಧ ಸಂಘಟನೆಯಾದ ಗ್ಲೋಬಲ್ ಫೈರ್‌ಪವರ್ ( Global Firepower ) ಹೇಳಿರುವುದು ಏನು ? ಎನ್ನುವ ಕುರಿತು ಇಲ್ಲಿದೆ ಮಾಹಿತಿ.
- ಗ್ಲೋಬಲ್ ಫೈರ್‌ಪವರ್ ಪ್ರಕಾರ ಭಾರತವು ಸುಮಾರು 1.44 ಮಿಲಿಯನ್ ಸಕ್ರಿಯ ಮಿಲಿಟರಿ ಸಿಬ್ಬಂದಿಯನ್ನು ಹೊಂದಿದ್ದು, ಇದು ವಿಶ್ವದ ಎರಡನೇ ಅತಿದೊಡ್ಡ ಸೈನ್ಯವಾಗಿದೆ.
- ಪಾಕಿಸ್ತಾನದ ಮಿಲಿಟರಿ ಗಾತ್ರ ಭಾರತೀಯ ಸೈನ್ಯ ಬಲದ ಅರ್ಧಕ್ಕಿಂತಲೂ ಕಡಿಮೆ ಇದೆ. ಪಾಕಿಸ್ತಾನದಲ್ಲಿರುವ ಸುಮಾರು 5,00,000 ಮಿಲಿಟರಿ ಸಿಬ್ಬಂದಿ ಇದ್ದು, ಇದಕ್ಕೆ ಹೋಲಿಸಿದರೆ ಭಾರತವು 2.5 ಮಿಲಿಯನ್‌ಗಿಂತಲೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ದೊಡ್ಡ ಪ್ಯಾರಾಮಿಲಿಟರಿ ಪಡೆಯನ್ನು ಹೊಂದಿದೆ. ಅಲ್ಲದೇ ಯುದ್ಧ ವಿಮಾನಗಳು, ಆಧುನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿಗಳ ವ್ಯಾಪಕ ದಾಸ್ತಾನು ಇದ್ದರೂ ಎರಡು ದೇಶಗಳ ಶಕ್ತಿಯಲ್ಲಿ ಗಮನಾರ್ಹ ಅಂತರವಿದೆ.

ಭಾರತೀಯ ಸೇನೆ
- ಭೂ ಸೈನ್ಯದಲ್ಲಿ 1.44 ಮಿಲಿಯನ್ ಸಕ್ರಿಯ ಪಡೆಗಳು, 1.15 ಮಿಲಿಯನ್ ಮೀಸಲು ಪಡೆಗಳು, 25 ಲಕ್ಷಕ್ಕೂ ಹೆಚ್ಚು ಅರೆಸೈನಿಕ ಪಡೆಗಳೊಂದಿಗೆ ಭಾರತದ ಸೇನೆಯು ಸುಧಾರಿತ ಯುದ್ಧ ಸಲಕರಣೆಗಳನ್ನು ಹೊಂದಿದೆ.
- ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್‌ಗಳು, ಟಿ-90 "ಭೀಮ್" ಟ್ಯಾಂಕ್‌ಗಳು, ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‌ಗಳು, ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳು, ಹೊವಿಟ್ಜರ್‌ಗಳು ಮತ್ತು ಇತರ ಆಧುನಿಕ ಫಿರಂಗಿಗಳು ಭಾರತೀಯ ಭೂ ಸೈನ್ಯದ ಶಕ್ತಿಯಾಗಿವೆ.
- ಎರಡೂ ದೇಶಗಳು ಪ್ರಬಲ ಸೈನ್ಯಗಳನ್ನು ಹೊಂದಿದ್ದರೂ ಭಾರತದ ಸೇನೆಯು ದೊಡ್ಡದಾಗಿದೆ. ಹೆಚ್ಚು ಅಧುನಿಕ ಶಸ್ತ್ರಾಸ್ತಗಳನ್ನು ಒಳಗೊಂಡಿದೆ. ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಕೂಡ ಶಕ್ತಿ ಶಾಲಿಯಾಗಿದೆ. ಯುದ್ಧ ಎಂದಾದರೂ ಸಂಭವಿಸಿದರೆ ಪಾಕಿಸ್ತಾನವು ಭಾರತದ ಪೂರ್ಣ ಪ್ರಮಾಣದ ಮಿಲಿಟರಿ ಸಾಮರ್ಥ್ಯಗಳ ವಿರುದ್ಧ ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗುವುದಿಲ್ಲ.
- ಭಾರತದ ವಾಯುಪಡೆಯು ವಿಶ್ವದ ಅತ್ಯಂತ ಶಕ್ತಿಶಾಲಿಗಳಲ್ಲಿ ಒಂದಾಗಿದೆ. 2,229 ಒಟ್ಟು ವಿಮಾನಗಳಲ್ಲಿ 600 ಯುದ್ಧ ವಿಮಾನಗಳು, 831 ಬೆಂಬಲ ವಿಮಾನಗಳು, 899 ಹೆಲಿಕಾಪ್ಟರ್‌ಗಳು ಸೇರಿವೆ.
- ಪ್ರಮುಖ ಯುದ್ಧ ವಿಮಾನಗಳಲ್ಲಿ ರಫೇಲ್, ಮಿರಾಜ್ 2000, ಮಿಗ್-29, ಸುಖೋಯ್ ಸು-30ಎಂಕೆಐ ಅನ್ನು ಒಳಗೊಂಡಿದ್ದು, ಭಾರತದ ವಾಯು ಶಕ್ತಿಯನ್ನು ಬಲಪಡಿಸುವ ಕ್ಷಿಪಣಿಗಳಲ್ಲಿ ಬ್ರಹ್ಮೋಸ್ (ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ), ರುದ್ರಮ್ (ವಿಕಿರಣ ವಿರೋಧಿ ಕ್ಷಿಪಣಿ), ಅಸ್ತ್ರ (ವಾಯು ಕ್ಷಿಪಣಿ), ನಿರ್ಭಯ್ (ಸಬ್ಸಾನಿಕ್ ಕ್ರೂಸ್ ಕ್ಷಿಪಣಿ), ಆಕಾಶ್ (ವಾಯು ರಕ್ಷಣಾ ವ್ಯವಸ್ಥೆ) ಯನ್ನು ಒಳಗೊಂಡಿದೆ.
- ಭಾರತದ ನೌಕಾ ಬಲವು ಪ್ರಬಲವಾಗಿದೆ. ಇದರಲ್ಲಿ 1,42,251 ನೌಕಾ ಸಿಬ್ಬಂದಿ, ಸುಮಾರು 150 ಯುದ್ಧನೌಕೆಗಳು, ಪರಮಾಣು ಜಲಾಂತರ್ಗಾಮಿ ನೌಕೆಗಳು, 2 ವಿಮಾನ ವಾಹಕಗಳಾದ ಐಎನ್ಎಸ್ ವಿಕ್ರಮಾದಿತ್ಯ, ಐಎನ್ಎಸ್ ವಿಕ್ರಾಂತ್ ಅನ್ನು ಒಳಗೊಂಡಿದೆ. ಈ ಬೃಹತ್ ವಾಹಕ ನೌಕೆಗಳು ಯುದ್ಧ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಉಡಾಯಿಸಬಲ್ಲವು.

ಪಾಕಿಸ್ತಾನದ ಮಿಲಿಟರಿ ಶಕ್ತಿ
- ಗ್ಲೋಬಲ್ ಫೈರ್‌ಪವರ್ ಪ್ರಕಾರ ಪಾಕಿಸ್ತಾನವು ಕಳೆದ ವರ್ಷ 9 ನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ ಸ್ಥಾನದಲ್ಲಿತ್ತು. ಆದರೆ ಈ ವರ್ಷ 6,54,000 ಸಕ್ರಿಯ ಸಿಬ್ಬಂದಿಯೊಂದಿಗೆ 12ನೇ ಸ್ಥಾನಕ್ಕೆ ಕುಸಿದಿದೆ. ದೇಶವು ಒಟ್ಟು 1,434 ವಿಮಾನಗಳನ್ನು ಹೊಂದಿದ್ದು ಅವುಗಳಲ್ಲಿ 387 ಫೈಟರ್ ಜೆಟ್‌ಗಳು, 60 ಸಾರಿಗೆ ವಿಮಾನಗಳು, 549 ತರಬೇತಿ ವಿಮಾನಗಳು, 352 ಹೆಲಿಕಾಪ್ಟರ್‌ಗಳು, 57 ದಾಳಿ ಮಾಡುವ ಹೆಲಿಕಾಪ್ಟರ್‌ಗಳು, 4 ವೈಮಾನಿಕ ಟ್ಯಾಂಕರ್‌ಗಳು ಸೇರಿವೆ.
- ಪಾಕಿಸ್ತಾನದ ನೌಕಾ ಮತ್ತು ಭೂಸೈನ್ಯದಲ್ಲಿ 3,742 ಟ್ಯಾಂಕ್‌ಗಳು, 50,523 ಶಸ್ತ್ರಸಜ್ಜಿತ ವಾಹನಗಳು, 752 ಸ್ವಯಂ ಚಾಲಿತ ಫಿರಂಗಿ ಘಟಕಗಳು, 692 ಮೊಬೈಲ್ ರಾಕೆಟ್ ಲಾಂಚರ್‌ಗಳನ್ನು ಒಳಗೊಂಡಿದೆ:
- ನೌಕಾಪಡೆಯಲ್ಲಿ 114 ನೌಕಾ ಹಡಗುಗಳು, 8 ಜಲಾಂತರ್ಗಾಮಿ ನೌಕೆಗಳು, 9 ಯುದ್ಧನೌಕೆಗಳನ್ನು ಒಳಗೊಂಡಿವೆ. ಹಲವಾರು ಸ್ವದೇಶಿ-ಅಭಿವೃದ್ಧಿಪಡಿಸಿದ ಮತ್ತು ಆಮದು ಮಾಡಿಕೊಂಡ ಕ್ಷಿಪಣಿಗಳೂ ಸೇರಿವೆ.
- ಭಾರತ ಮತ್ತು ಪಾಕಿಸ್ತಾನ ಎರಡೂ ಗಮನಾರ್ಹ ಮಿಲಿಟರಿ ಶಕ್ತಿಯನ್ನು ಹೊಂದಿದ್ದರೂ ಭಾರತವು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಹೀಗಾಗಿ ಒಂದು ವೇಳೆ ಯುದ್ಧ ಸಂಭವಿಸಿದರೂ ಹೆಚ್ಚಿನ ಪ್ರಯೋಜನ ಭಾರತಕ್ಕೆ ದೊರೆಯುತ್ತದೆ.