Operation Sindoor: ಉಗ್ರರರನ್ನು ಸದೆ ಬಡಿದಿರುವುದು ಸಮಾಧಾನ ತಂದಿದೆ; ಆಪರೇಷನ್ ಸಿಂಧೂರ್ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಪಹಲ್ಗಾಮ್ ಸಂತ್ರಸ್ತನ ಪುತ್ರಿ
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಎನ್ ರಾಮಚಂದ್ರನ್ ಅವರ ಪುತ್ರಿ ಆರತಿ ಮೆನನ್, ಭಯೋತ್ಪಾದಕರ ವಿರುದ್ಧ ಭಾರತ ನಡೆಸಿದ ದಾಳಿಯ ಸುದ್ದಿ ಖುಷಿ ತಂದಿದೆ ಎಂದು ಹೇಳಿದ್ದಾರೆ. ಭಯೋತ್ಪಾದಕರ ವಿರುದ್ಧ ಭಾರತ ತೆಗೆದುಕೊಂಡ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.


ನವದೆಹಲಿ: ಭಾರತ- ಪಾಕಿಸ್ತಾನ ಯುದ್ಧ (Operation Sindoor) ಆರಂಭವಾಗಿದೆ. ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. ಇದೀಗ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಎನ್ ರಾಮಚಂದ್ರನ್ ಅವರ ಪುತ್ರಿ ಆರತಿ ಮೆನನ್, ಭಯೋತ್ಪಾದಕರ ವಿರುದ್ಧ ಭಾರತ ನಡೆಸಿದ ದಾಳಿಯ ಸುದ್ದಿ ಖುಷಿ ತಂದಿದೆ ಎಂದು ಹೇಳಿದ್ದಾರೆ. ಭಯೋತ್ಪಾದಕರ ವಿರುದ್ಧ ಭಾರತ ತೆಗೆದುಕೊಂಡ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ದುಃಖದ ಕಾಲದಲ್ಲಿ ಈ ರೀತಿ ಆಗಿರುವುದು ಸಮಾಧಾನವಿದೆ ಎಂದು ಹೇಳಿದ್ದಾರೆ.
"ನಮ್ಮ ನಷ್ಟ ಭರಿಸಲಾಗದು. ಪಾಕಿಸ್ತಾನದ ವಿರುದ್ಧ ಭಾರತದ ಕ್ರಮದಿಂದ ನಮಗೆ ತುಂಬಾ ಹೆಮ್ಮೆ ಮತ್ತು ಭಾವುಕತೆ ಇದೆ. ನಾವು ಇನ್ನಷ್ಟು ಬಲವಾಗಿ ಹೊರಬರುತ್ತೇವೆ. ನಾನು ನನ್ನ ಎರಡೂ ಕೈಗಳನ್ನು ಜೋಡಿಸಿ ನಮ್ಮ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತೇನೆ" ಎಂದು ಅವರು ಹೇಳಿದರು. ಎರಡು ವಾರಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ನಿಷೇಧಿತ ಜೈಶ್-ಎ-ಮೊಹಮ್ಮದ್‌ನ ಭದ್ರಕೋಟೆಯಾದ ಬಹವಾಲ್‌ಪುರದ ಮೇಲೆಯೂ ದಾಳಿ ನಡೆಸಲಾಗಿದೆ.
ಆಪರೇಷನ್ ಸಿಂಧೂರ್ ಅಡಿಯಲ್ಲಿ ಸೇನಾ ದಾಳಿಗಳನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಬೆಳಗಿನ ಜಾವ 1.44 ಕ್ಕೆ ಹೇಳಿಕೆಯಲ್ಲಿ ತಿಳಿಸಿದೆ. "ನಮ್ಮ ಕ್ರಮಗಳು ಕೇಂದ್ರೀಕೃತವಾಗಿವೆ, ನಿಖರವಾಗಿವೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ನಾವು ಗುರಿಯಾಗಿಸಿಕೊಂಡಿಲ್ಲ. ಗುರಿಗಳ ಆಯ್ಕೆ ಮತ್ತು ದಾಳಿಯ ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ" ಎಂದು ಭಾರತ ಹೇಳಿದೆ. "ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ" ಎಂದಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂಧೂರ್ ಬಗ್ಗೆ ಅಮೆರಿಕಕ್ಕೆ ವಿವರಿಸಿದ ಅಜಿತ್ ದೋವಲ್; ಸಂಘರ್ಷ ಶೀಘ್ರದಲ್ಲಿಯೇ ಕೊನೆಯಾಗಲಿ ಎಂದ ಡೊನಾಲ್ಡ್ ಟ್ರಂಪ್
ಭಾರತ ನಡೆಯನ್ನು ವಿರೋಧಿಸಿರುವ ಪಾಕಿಸ್ತಾನ ಯುದ್ಧ ಸಿದ್ಧ ಎಂದು ಹೇಳಿಕೆ ನೀಡಿದೆ. ಇಂದು ತಡರಾತ್ರಿ ಕೂಡ LOC ಬಳಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ 3 ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.