Basavanagowda Hebbalagere Column: ಮಕ್ಕಳನ್ನು ಸುಶಿಕ್ಷಿತರನ್ನಾಗಿ ರೂಪಿಸಬೇಕಾದ ಕಾಲಘಟ್ಟವಿದು
ಇದು ನಮ್ಮ ಶಾಲೆಯಲ್ಲಿ ನಡೆದ ಪ್ರಸಂಗ. ಒಂದು ಕಡೆ ಇರಿಸಲಾಗಿದ್ದ ಪೇರಲೆ, ನೇರಲೆ, ಸಪೋಟ ಹೀಗೆ ವಿವಿಧ ಜಾತಿಯ ಗಿಡಗಳನ್ನು ಮಕ್ಕಳಿಗೆ ತೋರಿಸಿ, “ಇವನ್ನು ಮನೆಗೆ ತೆಗೆದುಕೊಂಡುಹೋಗಿ" ಎಂದು ಹೇಳಿದೆ. ಆಗ ನನಗೆ ಅಚ್ಚರಿ ಎನಿಸಿದ್ದು- ತಮ್ಮನ್ನು ತುಂಬಾ ಜಾಣರು ಎಂದು ಭಾವಿಸಿಕೊಂಡಿದ್ದ ವಿದ್ಯಾರ್ಥಿಗಳು ಆ ಗಿಡಗಳನ್ನು ಕೊಂಡೊಯ್ಯಲಿಲ್ಲ, ಓದಿನಲ್ಲಿ ಸಾಮಾನ್ಯರು ಎನಿಸಿಕೊಂಡಿದ್ದವರು ಎರಡೆರಡು ಗಿಡಗಳನ್ನು ಮನೆಗೊಯ್ದರು!


ವಿಶ್ಲೇಷಣೆ
ಬಸವನಗೌಡ ಹೆಬ್ಬಳಕೆರೆ
ಇದು ನಮ್ಮ ಶಾಲೆಯಲ್ಲಿ ನಡೆದ ಪ್ರಸಂಗ. ಒಂದು ಕಡೆ ಇರಿಸಲಾಗಿದ್ದ ಪೇರಲೆ, ನೇರಲೆ, ಸಪೋಟ ಹೀಗೆ ವಿವಿಧ ಜಾತಿಯ ಗಿಡಗಳನ್ನು ಮಕ್ಕಳಿಗೆ ತೋರಿಸಿ, “ಇವನ್ನು ಮನೆಗೆ ತೆಗೆದುಕೊಂಡುಹೋಗಿ" ಎಂದು ಹೇಳಿದೆ. ಆಗ ನನಗೆ ಅಚ್ಚರಿ ಎನಿಸಿದ್ದು- ತಮ್ಮನ್ನು ತುಂಬಾ ಜಾಣರು ಎಂದು ಭಾವಿಸಿ ಕೊಂಡಿದ್ದ ವಿದ್ಯಾರ್ಥಿಗಳು ಆ ಗಿಡಗಳನ್ನು ಕೊಂಡೊಯ್ಯಲಿಲ್ಲ, ಓದಿನಲ್ಲಿ ಸಾಮಾನ್ಯರು ಎನಿಸಿ ಕೊಂಡಿದ್ದವರು ಎರಡೆರಡು ಗಿಡಗಳನ್ನು ಮನೆಗೊಯ್ದರು!
ವಿಪರ್ಯಾಸವೆಂದರೆ, ಪರಿಸರದ ಬಗ್ಗೆ ಪ್ರಬಂಧ ಬರೆಯಲು ತಿಳಿಸಿ, “ಉತ್ತಮ ಬರಹಕ್ಕೆ ಬಹುಮಾನ ವಿದೆ" ಎಂದು ನಾನು ಹೇಳಿದಾಗ, ಗಿಡವನ್ನು ಮನೆಗೆ ತೆಗೆದುಕೊಂಡು ಹೋಗದ ವಿದ್ಯಾರ್ಥಿಗಳೇ ಬರೆದು ಬಹುಮಾನ ಗಿಟ್ಟಿಸಿದರು! ನನಗೆ ಆಗ ‘ಯಾರು ವಿದ್ಯಾವಂತರು?’ ಎಂಬ ಬಗ್ಗೆ ಗೊಂದಲ ಶುರುವಾಯಿತು. ಜ್ಞಾನವನ್ನು ನಿತ್ಯಜೀವನಕ್ಕೆ ಅನ್ವಯಿಸಿಕೊಂಡು ಆಚರಣೆಗೆ ತರುವವರೋ? ಅಥವಾ ತಮ್ಮ ಜ್ಞಾನವನ್ನು ಕೇವಲ ಅಂಕಪಟ್ಟಿಗೆ ಸೀಮಿತವಾಗಿರಿಸಿಕೊಳ್ಳುವವರೋ? ಎಂಬ ಜಿಜ್ಞಾಸೆ ಕಾಡತೊಡಗಿತು.
ಜತೆಗೆ, ಶಾಲಾ ಪರೀಕ್ಷೆಯಲ್ಲಿ ಒಂದೊಮ್ಮೆ ಫೇಲಾದರೂ, ಶಾಲೆಯಲ್ಲಿ ಕಲಿತಿದ್ದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವವರನ್ನು ಕೂಡ ‘ಜಾಣರು’ ಎನ್ನ ಬೇಕಲ್ಲವೇ? ಎಂಬ ಪ್ರಶ್ನೆಯೂ ನನ್ನನ್ನು ಕಾಡತೊಡಗಿತು. ರಾಷ್ಟ್ರದ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಗೆ ಒಂದು ಘನತೆಯನ್ನು ತಂದುಕೊಟ್ಟ ಟಿ.ಎನ್.ಶೇಷನ್ ಅವರ ಜೀವನದಲ್ಲಿ ನಡೆದ ಘಟನೆಯೊಂದು ‘ಯಾರು ವಿದ್ಯಾವಂತರು’ ಎಂಬ ವಿಷಯದಲ್ಲಿ ಚಿಂತನೆಗೆ ಹಚ್ಚುತ್ತದೆ.
ಇದನ್ನೂ ಓದಿ: Vishweshwar Bhat Column: ಆತ್ಮಹತ್ಯೆಯಲ್ಲೂ ಮುಂದು
ಒಮ್ಮೆ ಅವರು ತಮ್ಮ ಕುಟುಂಬಿಕರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಒಂದು ಪ್ರದೇಶದಲ್ಲಿ ಸುಂದರವಾದ ಗುಬ್ಬಿ ಗೂಡುಗಳು ಗೋಚರಿಸಿದವಂತೆ. ಆಗ ಅವರ ಮಡದಿಯು ಒಂದು ಗುಬ್ಬಿ ಗೂಡನ್ನು ಬಯಸಿದರಂತೆ. ಅವರ ಆಸೆಯನ್ನು ಈಡೇರಿಸಲು ಮುಂದಾದ ಶೇಷನ್, ತಮ್ಮ ಅಂಗರಕ್ಷಕರಾಗಿ ಬಂದಿದ್ದ ಪೊಲೀಸರಿಗೆ ಒಂದು ಗೂಡನ್ನು ಕೊಡಿಸುವಂತೆ ಕೇಳಿಕೊಂಡರಂತೆ. ಆಗ ಪೊಲೀಸರು ಅಲ್ಲೇ ಸಮೀಪದಲ್ಲಿ ದನ ಕಾಯುತ್ತಿದ್ದ ಹುಡುಗನೊಬ್ಬನನ್ನು ಕರೆದು, “ಒಂದು ಗುಬ್ಬಿ ಗೂಡನ್ನು ಕಿತ್ತುಕೊಡು, ನಿನಗೆ 10 ರುಪಾಯಿ ಕೊಡುತ್ತೇನೆ" ಎಂದರಂತೆ.
ಇದಕ್ಕೆ ಆ ಹುಡುಗ ಒಪ್ಪದಿದ್ದಾಗ ಪೊಲೀಸರು ಇನ್ನೂ ಹೆಚ್ಚಿನ ಹಣದ ಆಮಿಷ ತೋರಿಸಿದರಂತೆ. ಅದಕ್ಕೂ ಆ ಹುಡುಗ ಜಗ್ಗದಿದ್ದಾಗ, “ಯಾಕೆ ಹೀಗೆ ಹಠ ಮಾಡ್ತಿದ್ದೀಯ?" ಎಂದು ಪೊಲೀಸರು ಪ್ರಶ್ನಿಸಲಾಗಿ ಆತ, “ಸ್ವಾಮೀ, ನೀವು ನೀಡುವ ಹಣದಾಸೆಗೆ ನಾನು ಗೂಡನ್ನು ಕಿತ್ತುಕೊಟ್ಟರೆ ಅದರಲ್ಲಿರುವ ಮರಿಹಕ್ಕಿಗಳ ಗತಿ ಏನಾಗಬೇಕು? ಅವುಗಳ ತಾಯಿಹಕ್ಕಿಯ ರೋದನೆಯ ಶಾಪ ನನಗೆ ತಟ್ಟುವುದಿಲ್ಲವೇ? ನಮ್ಮ ಆಸೆಯ ಈಡೇರಿಕೆಗೆ ಇಂಥ ಹೆಜ್ಜೆಯಿಡುವುದು ಆ ಹಕ್ಕಿಗಳಿಗೆ ಮಾಡುವ ದ್ರೋಹವಲ್ಲವೇ? ತಾಯಿಹಕ್ಕಿಯು ಸಂಜೆ ಮರಳಿದಾಗ ತನ್ನ ಮರಿಗಳಿದ್ದ ಗೂಡು ಕಣ್ಮರೆಯಾಗಿ ರುವುದನ್ನು ಕಂಡು ಅನುಭವಿಸುವ ಯಾತನೆಯನ್ನು ನನ್ನಿಂದ ನೋಡಲು ಸಾಧ್ಯವಾಗುವುದಿಲ್ಲ" ಎಂದು ಮಾರುತ್ತರ ನೀಡಿದನಂತೆ.
ಆಗ ತಬ್ಬಿಬ್ಬಾಗುವ ಸರದಿ ಶೇಷನ್ ಅವರದ್ದಾಗಿತ್ತಂತೆ! ಇಂದು ನಮ್ಮ ಸಮಾಜದಲ್ಲಿ ಹೀಗೆಯೇ ಆಗುತ್ತಿದೆ. ಹೆಚ್ಚೆಚ್ಚು ಓದಿದವರು ಎನಿಸಿಕೊಂಡ ಕೆಲವರು ನಮ್ಮ ಸಮಾಜಕ್ಕೆ, ಪರಿಸರಕ್ಕೆ ಮುಳು ವಾಗುತ್ತಿದ್ದಾರೆ. ಹಣದ ಹಿಂದೆ ಬಿದ್ದು ಮೌಲ್ಯಗಳಿಗೆ ತಿಲಾಂಜಲಿ ನೀಡುತ್ತಿದ್ದಾರೆ. ‘ಪುಸ್ತಕದ ಬದನೇ ಕಾಯಿ ತಿನ್ನೋದಕ್ಕೆ ಬರುವುದಿಲ್ಲ’ ಎಂಬ ಮಾತನ್ನು ಇಂಥವರನ್ನು ನೋಡಿಯೇ ಕಟ್ಟಿರಬೇಕು ಎನಿಸುತ್ತದೆ.
ಪ್ಲಾಸ್ಟಿಕ್‌ನಿಂದಾಗಿ ಪರಿಸರಕ್ಕೆ ತೊಂದರೆ ಎಂಬುದು ಗೊತ್ತಿದ್ದರೂ, ಆ ಅರಿವು ಇರುವವರು ಪ್ರವಾಸಿ ತಾಣಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತೂರುತ್ತಾರೆ. ಸಂತೋಷಕೂಟ, ಮೋಜು-ಮಸ್ತಿಯ ಹೆಸರಿನಲ್ಲಿ ಮದ್ಯಪಾನ ಮಾಡಿ, ಖಾಲಿ ಬಾಟಲಿಗಳನ್ನು ನದಿಗೆ, ರಸ್ತೆಗೆ ಎಸೆದು ಬರುತ್ತಾರೆ. ‘ಹಸಿರೇ ಉಸಿರು, ಕಾಡಿದ್ದರೆ ಮಾತ್ರವೇ ನಾಡು, ಪರಿಸರ ಚೆನ್ನಾಗಿದ್ದರೆ ಮಾತ್ರವೇ ನಮ್ಮ ಉಳಿವು’ ಎಂಬುದು ಗೊತ್ತಿದ್ದರೂ ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ಕಡಿದು ಒತ್ತುವರಿ ಮಾಡುವ ಪರಿಪಾಠದ ಬಗೆಗೆ ಬಿಡಿಸಿ ಹೇಳಬೇಕಿಲ್ಲ.
ಹೇಳುತ್ತ ಹೋದರೆ ಇಂಥ ಸಾಕಷ್ಟು ನಿದರ್ಶನಗಳನ್ನು ನೀಡಬಹುದು- ‘ನಮ್ಮ ದೇಶದಲ್ಲಿ ಹಸಿದ ವರು ಬಹಳ ಮಂದಿ ಇದ್ದಾರೆ, ದಯಮಾಡಿ ಅನ್ನ ಚೆಲ್ಲಬೇಡಿರಿ’ ಎಂಬ ಘೋಷ ವಾಕ್ಯವು ಗೋಡೆಯ ಮೇಲೆ ರಾರಾಜಿಸುತ್ತಿದ್ದರೂ ನಮ್ಮ ಜನರು ಆ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳುವು ದಿಲ್ಲ; ಅದನ್ನು ನೋಡಿಯೇ ಇಲ್ಲದವರಂತೆ ಮದುವೆ-ಗೃಹಪ್ರವೇಶ ಮುಂತಾದ ಸಮಾರಂಭಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಪದಾರ್ಥಗಳಲ್ಲಿ ಎಲೆ ಮೇಲೆ ಬಡಿಸಿಕೊಂಡು, ನಂತರ ತಿನ್ನಲಾಗದೆ ಚೆಲ್ಲುತ್ತಾರೆ.
ನೀರಿನ ಸಮಸ್ಯೆಯಿರುವುದು ಗೊತ್ತಿದ್ದರೂ ಬಕೆಟ್‌ಗಟ್ಟಲೆ ನೀರನ್ನು ಬಳಸಿ ಮನೆಯ ವಾಹನ ಗಳನ್ನು ತೊಳೆಯುವ ಕಸರತ್ತಿನಲ್ಲಿ ವ್ಯಸ್ತರಾಗುತ್ತಾರೆ. ಇಲ್ಲಿಯೇ ಹುಟ್ಟಿ ಬೆಳೆದು ಓದಿ ವಿದ್ಯಾವಂತ ರಾಗಿ ದೇಶದ ಸೌಲಭ್ಯಗಳನ್ನೆಲ್ಲಾ ಪಡೆದರೂ, ಒಂದು ಹಂತಕ್ಕೆ ಬಂದ ಮೇಲೆ ಪರದೇಶಗಳಿಗೆ ತೆರಳಿ ಅಲ್ಲಿ ದುಡಿಯುತ್ತಾ, ತಮ್ಮ ತಾಯ್ನಾಡಿನ ಕುರಿತೇ ಅವಹೇಳನ ಮಾಡುತ್ತಾರೆ. ತಮ್ಮ ಮತ್ತು ತಮ್ಮ ಮನೆಯವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟರ ಮಟ್ಟಿಗೆ ವೇತನ ಹಾಗೂ ಇತರ ಸೌಲಭ್ಯ ಗಳು ದೊರೆತಿದ್ದರೂ, ಅದಕ್ಕೆ ಹೊರತಾದ ಗಿಂಬಳಕ್ಕೆ ಹಲ್ಲು ಗಿಂಜುತ್ತಾರೆ.
ಜೀವ ಪ್ರಪಂಚದ ಮತ್ತಾವುದೇ ಪ್ರಾಣಿಗಳೂ ಮಾಡದ ರೀತಿಯಲ್ಲಿ ಒಂದು ಅಮಾಯಕ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಮುಂದಾಗುವ ದುರ್ಮಾರ್ಗಿಗಳನ್ನು ನಮ್ಮ ಸಮಾಜವು ಸಾಕಷ್ಟು ಕಂಡಿದೆ. ಇನ್ನು, ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಮಾತು ಗೊತ್ತಿದ್ದರೂ ದುರಾಸೆಗೆ ಬಿದ್ದು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವವರು, ಧರ್ಮಾಂಧರಾಗಿ ಮತ್ತೊಬ್ಬರ ಜೀವ ತೆಗೆಯುವ ಹಂತಕ್ಕೂ ಹೋಗುವವರು, ಸಂಪನ್ಮೂಲಗಳು ಇರುವುದು ಮಾನವನ ಆಸೆಯನ್ನು ತಣಿಸುವುದಕ್ಕೇ ಹೊರತು ದುರಾಸೆಯನ್ನು ಈಡೇರಿ ಸುವುದಕ್ಕಲ್ಲ ಎಂಬುದರ ಅರಿವಿದ್ದರೂ ಸಂಪನ್ಮೂಲಗಳನ್ನು ಬೇಕಾಬಿಟ್ಟಿ ಬಳಸುವವರು ನಮ್ಮ ಸಮಾಜದಲ್ಲಿ ಸಾಕಷ್ಟಿದ್ದಾರೆ.
ಹೇಳುತ್ತಾ ಹೋದರೆ ಆ ಪಟ್ಟಿ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಆದರೆ ಈ ಪಟ್ಟಿಯಲ್ಲಿ ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆದವರೂ ಇರುತ್ತಾರೆ ಎಂಬುದು ಆಘಾತಕಾರಿ ಸಂಗತಿ. ಹಾಗಾದರೆ, ಇವರ ವಿದ್ಯಾಭ್ಯಾಸದಿಂದ ಸಮಾಜಕ್ಕೆ ಆದ ಲಾಭವಾದರೂ ಏನು? ಎಂಬುದು ಇಲ್ಲಿ ಕಾಡುವ ಪ್ರಶ್ನೆ. ಇದಕ್ಕೆ ಉತ್ತರ ಮಾತ್ರ ಶೂನ್ಯ!
ಇಂಥ ಸಮಯದಲ್ಲಿ ಸಾಲುಮರದ ತಿಮ್ಮಕ್ಕ ನೆನಪಾಗುತ್ತಾರೆ. ಗಿಡ-ಮರಗಳೇ ತಮ್ಮ ಉಸಿರು, ಅವು ತಮ್ಮ ಮಕ್ಕಳಿದ್ದಂತೆ ಎಂದು ಪರಿಭಾವಿಸಿ ನೀರುಣಿಸಿ ಬೆಳೆಸಿ, ‘ಆಮ್ಲಜನಕ ಕೊಟ್ಟ ಮಹಾತಾಯಿ’ ಎಂದೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕರೆಸಿಕೊಂಡಿದ್ದ ಮಹಾತಾಯಿ ಈಕೆ. ತಿಮ್ಮಕ್ಕ ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದಾಕೆ ಎಂಬುದು ಗೊತ್ತಾದರೆ ಹೃದಯ ತುಂಬಿ ಬರುತ್ತದೆ.
ಮತ್ತೊಂದೆಡೆ ಸೂಲಗಿತ್ತಿ ನರಸಮ್ಮ ನೆನಪಾಗುತ್ತಾರೆ; ಸಾಮಾನ್ಯ ಹೆರಿಗೆ ಆಗುವಂತಿದ್ದರೂ ಹಣದಾಹಕ್ಕೆ ಸಿಸೇರಿಯನ್ ಹೆರಿಗೆ ಮಾಡಿಸುವ ಧನದಾಹಿ ವೈದ್ಯರಿರುವ ಈ ಕಾಲದಲ್ಲಿ, ಸಾವಿರಾರು ಸಹಜ ಹೆರಿಗೆ ಮಾಡಿಸಿದ ಸೂಲಗಿತ್ತಿ ಇವರು. ಬಹುಮಹಡಿಯ ಶಾಲಾ ಕಟ್ಟಡಗಳನ್ನು ಕಟ್ಟಿ ಲಕ್ಷಗಟ್ಟಲೆ ಡೊನೇಷನ್ ವಸೂಲಿ ಮಾಡುವವರ ಮಧ್ಯೆ, ಬೀದಿ ಬದಿ ಕಿತ್ತಳೆ ಹಣ್ಣು ಮಾರುತ್ತಾ ಕೂಡಿಟ್ಟ ಹಣವನ್ನು ಶಾಲೆಗೆ ದಾನವಾಗಿ ಕೊಟ್ಟ ‘ಅಕ್ಷರ ಸಂತ ಹಾಜಬ್ಬ’ ನೆನಪಾಗುತ್ತಾರೆ. ಆದರೆ, ಕೆರೆಗಳನ್ನು ಮುಚ್ಚಿ ಅಥವಾ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್‌ಗಳನ್ನು ನಿರ್ಮಿಸುವ ಪ್ರಭೃತಿಗಳಿಗೆ, ಊರಿನಲ್ಲಿ ಕೆರೆ ಕಟ್ಟಿಸುವ ಸಂದರ್ಭದಲ್ಲಿ ಅದಕ್ಕೆ ನೀರು ಬರಲೆಂದು ತನ್ನ ಹಿರಿಸೊಸೆ ಭಾಗೀರಥಿಯನ್ನು ಬಲಿಕೊಟ್ಟ ‘ಕೆರೆಗೆಹಾರ’ ನಾಟಕದ ಮಲ್ಲನಗೌಡ ನೆನಪಾಗು ವುದೇ ಇಲ್ಲ!
ಇಷ್ಟೆಲ್ಲಾ ಓದಿದ ಮೇಲೆ, ಭಾವಿ ಜನಾಂಗವನ್ನು ‘ನಿಜಾರ್ಥದಲ್ಲಿ’ ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ನಾವೇನು ಮಾಡಬಹುದು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದನ್ನು ಅರಿಯಲು ಯತ್ನಿಸೋಣ. ನಮ್ಮ ಪರಿಸರ ಪ್ರೇಮವನ್ನು ಬರೀ ಕಾರ್ಯಕ್ರಮಗಳಿಗೆ, ಅದರಲ್ಲಿನ ಭಾಷಣಗಳಿಗೆ ಸೀಮಿತ ಗೊಳಿಸದೆ ಮಕ್ಕಳಲ್ಲಿ ಪ್ರಾಯೋಗಿಕ ಪರಿಸರ ಪ್ರಜ್ಞೆಯನ್ನು ಬೆಳೆಸಲು ನಾವು ಯತ್ನಿಸಬೇಕು. ಶಾಲೆಯಲ್ಲಿ ಪರಿಸರ ಸಂಘವನ್ನು ಮಾಡಿಕೊಂಡು ಅದಕ್ಕೆ ಎಲ್ಲಾ ಶಿಕ್ಷಕರೂ ಕೈಜೋಡಿಸಬೇಕು.
ಪರಿಸರ ಮಾಲಿನ್ಯದಿಂದ ಆಗುವ ತೊಂದರೆಗಳ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಬೇಕು. ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಬರಗಾಲ, ಜಾಗತಿಕ ತಾಪಮಾನದ ಹೆಚ್ಚಳದಿಂದ ಉಂಟಾಗುತ್ತಿರುವ ಪ್ರವಾಹ ಮತ್ತಿತರ ಸಮಸ್ಯೆಗಳ ಬಗ್ಗೆ ಕ್ಷೇತ್ರ ಭೇಟಿ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ತಿಳಿಸಬೇಕು. ಶಾಲಾ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದರ ಜತೆಗೆ, ಗಿಡಗಳನ್ನು ನೆಟ್ಟು ಅವನ್ನು ಪೋಷಿಸುವುದೂ ಮುಖ್ಯ ಎಂಬ ಭಾವನೆ ಯನ್ನು ಮಕ್ಕಳಲ್ಲಿ ಬೆಳೆಸಬೇಕು. ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ, ‘ಕೆರೆಯಂ ಕಟ್ಟಿಸು, ದೇವಾಗಾರಮಂಮಾಡಿಸು’ ಎಂಬ ಮಾತನ್ನು ಹೇಳುತ್ತಿದ್ದರಂತೆ.
ಇಂಥ ಪರಿಪಾಠ ಈಗಲೂ ಪುನರಾವರ್ತನೆ ಆಗಬೇಕಿದೆ. ‘ಉದಾತ್ತ ಚಿಂತನೆ, ಸರಳ ಜೀವನ’ ಎಂಬ ಪರಿಕಲ್ಪನೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವುದರ ಜತೆಗೆ ಪ್ರಾಮಾಣಿಕವಾಗಿ ಗಳಿಸುವ, ಹಾಸಿಗೆ ಯಿದ್ದಷ್ಟು ಕಾಲುಚಾಚುವ ಪ್ರವೃತ್ತಿಯನ್ನೂ ರೂಢಿಸಬೇಕು. ನಮ್ಮ ಜೇಬಿಗೆ ಬಂದು ಸೇರುವ ಹಣವು ನಮ್ಮ ಪರಿಶ್ರಮದ ಬೆವರಿನ ಮೂಲಕ ಬಂದಿದ್ದಾಗಿರಬೇಕೇ ಹೊರತು, ಪರರ ಕಣ್ಣೀರಿನಿಂದ ದಕ್ಕಿಸಿಕೊಂಡಿರುವಂಥದ್ದು ಆಗಿರಬಾರದು ಎಂಬ ಪ್ರಜ್ಞೆಯನ್ನು ಮಕ್ಕಳಲ್ಲಿ ಎರಕ ಹೊಯ್ಯಬೇಕು.
‘ತಾನಷ್ಟೇ ಚೆನ್ನಾಗಿರಬೇಕು’ ಎಂಬ ಚಿಂತನೆಯ ಬದಲಿಗೆ ಸಮಾಜದ ಬಗ್ಗೆಯೂ ಆಲೋಚಿಸುವ, ಸಾಮಾಜಿಕ ಸಮಸ್ಯೆ ಗಳಿಗೆ ಸ್ಪಂದಿಸುವ ನಿಸ್ವಾರ್ಥ ಮನೋಭಾವವನ್ನು ಮಕ್ಕಳಲ್ಲಿ ಬಾಲ್ಯ ದಿಂದಲೇ ರೂಢಿಸಿಬಿಟ್ಟರೆ, ಸಮಾಜದ ಹಿತರಕ್ಷಣೆಯ ಆಶಯ ಅವರಲ್ಲಿ ತಾನೇ ತಾನಾಗಿ ಬೆಳೆಯುತ್ತಾ ಹೋಗುತ್ತದೆ.
ಪ್ರತಿದಿನ ಅಲ್ಲದಿದ್ದರೂ ಕಡೇಪಕ್ಷ ವಾರದಲ್ಲಿ 2-3 ದಿನವಾದರೂ ತಮ್ಮ ಮನೆಯ, ಕೇರಿಯ, ಗ್ರಾಮದ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳುವ ಬದ್ಧತೆಯನ್ನು ಮಕ್ಕಳಲ್ಲಿ ರೂಪಿಸಿದರೆ, ಮುಂದೆ ಪರಿಸರ ಸಂರಕ್ಷಣೆಯ ಪ್ರಜ್ಞೆಯು ಅವರಲ್ಲಿ ವರ್ಧಿಸುತ್ತಾ ಹೋಗುತ್ತದೆ. ಮಕ್ಕಳನ್ನು ಕೇವಲ ಅಂಕ ಗಳಿಸುವ ರೋಬೋಟ್‌ಗಳನ್ನಾಗಿಸದೆ, ತಾವು ಅಧ್ಯಯನ ಮಾಡಿದ ಮಹಾನ್ ವ್ಯಕ್ತಿಗಳ ಆದರ್ಶ ಗಳನ್ನು ಅವರು ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ಮೌಲ್ಯವಂತರಾಗುವುದಕ್ಕೆ ಹಿರಿಯ ರೆನಿಸಿಕೊಂಡವರು ಅನುವುಮಾಡಿಕೊಡಬೇಕು.
ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಧರ್ಮಾಂಧತೆಯನ್ನು ಬೆಳೆಸುವ ಬದಲು, ‘ಎಲ್ಲಾ ಧರ್ಮಗಳ ಮೂಲಸಾರ ಒಂದೇ’ ಎಂದು ಬೋಧಿಸಿ ಸಾಮಾಜಿಕ ಸಾಮರಸ್ಯದ ತಳಹದಿ ಹಾಕಬೇಕು. ವಿದ್ಯಾರ್ಥಿಯೊಬ್ಬ ಕೇವಲ ಶಾಲೆಯಿಂದಷ್ಟೇ ಅಲ್ಲದೆ ತನ್ನ ಮನೆ, ಗೆಳೆಯರು, ಸುತ್ತಮುತ್ತಲ ಪರಿಸರ, ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಹೀಗೆ ವಿವಿಧ ನೆಲೆಗಳಿಂದಲೂ ಸಾಕಷ್ಟು ಕಲಿಯುತ್ತಾನೆ.
ಆದ್ದರಿಂದ, ಮಕ್ಕಳ ಎಲ್ಲಾ ಅವಶ್ಯಕತೆಗಳನ್ನೂ ಪೂರೈಸಿ ಉತ್ತಮ ಶಾಲೆಗೆ ಸೇರಿಸಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಪೋಷಕರು ನಿರಾಳರಾಗದೆ ಮಕ್ಕಳ ಮೇಲೆ ಹದ್ದಿನಕಣ್ಣು ಇಟ್ಟಿರಲೇಬೇಕು. ಹಾಗಾದಾಗ ಮಾತ್ರವೇ ಮಕ್ಕಳು ಅಡ್ಡದಾರಿ ಹಿಡಿಯುವುದಿಲ್ಲ. ಈ ಆಶಯ ವನ್ನು ಪೋಷಕರು ಕಟ್ಟುನಿಟ್ಟಾಗಿ ನೆರವೇರಿಸಬೇಕಿದೆ, ಏಕೆಂದರೆ ಸಮಾಜಕ್ಕೆ ಇಂದು ‘ನಿಜಾರ್ಥದ’ ಸುಶಿಕ್ಷಿತರ ಅಗತ್ಯ ತುಂಬಾ ಇದೆ.
(ಲೇಖಕರು ಶಿಕ್ಷಕರು)