ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr K Kasturirangan: ಪಶ್ಚಿಮ ಘಟ್ಟಗಳ ಜೊತೆಗೆ ತಳುಕು ಹಾಕಿಕೊಂಡ ಡಾ. ಕಸ್ತೂರಿರಂಗನ್

ಕಸ್ತೂರಿರಂಗನ್ 1994ರಿಂದ 2003ರವರೆಗೆ 9ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. 2003- 2009ರ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿದ್ದರು. ಯೋಜನಾ ಆಯೋಗದ ಸದಸ್ಯರಾಗಿದ್ದರು. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಇವರ ವರದಿ ವಿವಾದಾತ್ಮಕ.

ಪಶ್ಚಿಮ ಘಟ್ಟಗಳ ಜೊತೆಗೆ ತಳುಕು ಹಾಕಿಕೊಂಡ ಡಾ. ಕಸ್ತೂರಿರಂಗನ್

ಡಾ.ಕೆ. ಕಸ್ತೂರಿರಂಗನ್

ಹರೀಶ್‌ ಕೇರ ಹರೀಶ್‌ ಕೇರ Apr 25, 2025 3:08 PM

ಇಂದು ಕೊನೆಯುಸಿರೆಳೆದ ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್‌ (Dr K Kasturirangan) ಅವರ ಹೆಸರಿನೊಂದಿಗೆ ಪಶ್ಚಿಮ ಘಟ್ಟಗಳೂ (Western Ghats) ಸೇರಿಹೋಗಿವೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಯ ವಿಚಾರ ಬಂದಾಗ ಕಸ್ತೂರಿರಂಗನ್‌ ವರದಿಯ ವಿಚಾರವೂ ಬಂದೇ ಬರುತ್ತದೆ. ಅದರೆ ಕಸ್ತೂರಿ ರಂಗನ್‌ ಅವರ ಸಾಧನೆ, ವಿಶಿಷ್ಟತೆ, ತಜ್ಞತೆ ಬರಿಯ ಈ ವರದಿಗೆ ಸೀಮಿತವಲ್ಲ. ನೂತನ ಶಿಕ್ಷಣ ನೀತಿಯ ನಿರೂಪಣೆಯಲ್ಲೂ ಅವರ ಮಹತ್ವದ ಕೊಡುಗೆ ಇದೆ.

ಅವರ ಪೂರ್ತಿ ಹೆಸರು ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್. ಕೇರಳದ ಎರ್ನಾಕುಲಂನಲ್ಲಿ 1940ರ ಅಕ್ಟೋಬರ್‌ 24ರಂದು ಜನಿಸಿದ ಕಸ್ತೂರಿ ರಂಗನ್‌, ಇಸ್ರೋ ಸೇರಿದ ಬಳಿಕ ಕರ್ನಾಟಕದವರೇ ಆಗಿಹೋಗಿದ್ದರು. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಬಾಹ್ಯಾಕಾಶ ವಿಜ್ಞಾನಿಯಾಗಿದ್ದರು. 1994ರಿಂದ 2003ರವರೆಗೆ 9ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. 2003- 2009ರ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿದ್ದರು. ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದರು. ಕೇಂದ್ರ ಸರ್ಕಾರ ರೂಪಿಸಿದ ಶಿಕ್ಷಣ ನೀತಿಯ ಹಿಂದೆ ಇವರ ಯೋಗದಾನವಿದೆ. ದೇಶದ ಅನೇಕ ಉಪಗ್ರಹಗಳು ಕಾರ್ಯಾಚರಿಸುತ್ತಿರುವುದರ ಹಿಂದೆ ಇವರ ಪರಿಶ್ರಮವಿದೆ. ಭಾರತ ಸರ್ಕಾರ ನೀಡುವ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪುರಸ್ಕಾರಗಳನ್ನು ಪಡೆದಿದ್ದಾರೆ. ಲೆಕ್ಕವಿಲ್ಲದಷ್ಟು ಇತರ ಪುರಸ್ಕಾರಗಳನ್ನೂ ಗೌರವ ಡಾಕ್ಟರೇಟ್‌ಗಳನ್ನೂ ಪಡೆದಿದ್ದಾರೆ. ಅಂತಾರಾಷ್ಟ್ರೀಯವಾಗಿ ಬಾಹ್ಯಾಕಾಶ ವಿಜ್ಞಾನ ವಲಯದಲ್ಲಿ ಗೌರವ ಪಡೆದಿದ್ದ ತಜ್ಞರಾಗಿದ್ದರು.

ಡಾ. ಕಸ್ತೂರಿರಂಗನ್ ಅವರು ವಿಜ್ಞಾನದಲ್ಲಿ ವಿಶೇಷ ಪದವಿ ಮತ್ತು ಬಾಂಬೆ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ ಪಡೆದರು. ಎಕ್ಸ್‌ಪರಿಮೆಂಟಲ್ ಹೈ ಎನರ್ಜಿಯಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿದರು. ಖಭೌತ ವಿಜ್ಞಾನಿಯಾಗಿ, ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳು ಹಾಗೂ ಆಪ್ಟಿಕಲ್ ಖಗೋಳ ವಿಜ್ಞಾನಗಳು ಇವರ ಸಂಶೋಧನ ಆಸಕ್ತಿಯಾಗಿದ್ದವು. ಖಗೋಳ ವಿಜ್ಞಾನದ ಬಗ್ಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ 224ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಡಾ. ಕಸ್ತೂರಿರಂಗನ್ ಭಾರತದೊಳಗೆ ಮತ್ತು ವಿದೇಶಗಳಲ್ಲೂ ಹಲವು ಪ್ರಮುಖ ವಿಜ್ಞಾನ ಅಕಾಡಮಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿದ್ದರು.

ಡಾ. ಕಸ್ತೂರಿರಂಗನ್ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ, ಅದಕ್ಕೂ ಮೊದಲು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-2) ಮತ್ತು ಭಾರತೀಯ ದೂರಗ್ರಾಹಿ ಉಪಗ್ರಹಗಳು (ಐಆರ್‌ಎಸ್-1ಎ ಮತ್ತು 1ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆ ನೋಡಿಕೊಂಡರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು. ಇವರ ನಾಯಕತ್ವದಲ್ಲಿ, ಭಾರತದ ಹೆಸರಾಂತ ಉಡಾವಣಾ ವಾಹನಗಳಾದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಮತ್ತು ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನದ ಉಡಾವಣೆ ಮತ್ತು ಕಾರ್ಯನಿರ್ವಹಣೆಯನ್ನು ಕೈಗೊಳ್ಳಲಾಗಿದೆ. ಜಿಎಸ್ಎಲ್‌ವಿ, ಜಿಎಸ್ಎಲ್‌ವಿಎಂಕೆ-III ಯ ಸುಧಾರಿತ ಆವೃತ್ತಿಯ ಮತ್ತು ಅದರ ಸಂಪೂರ್ಣ ವಿನ್ಯಾಸ ಸಹ ಪೂರ್ಣಗೊಳಿಸಲಾಯಿತು. ಹೊಸ ಯುಗದ ಇನ್ಸಾಟ್ ಸಂವಹನ ಉಪಗ್ರಹಗಳು ಜೊತೆಗೆ ಸಾಗರ ವೀಕ್ಷಣೆ ಉಪಗ್ರಹಗಳಾದ ಐಆರ್‌ಎಸ್ -ಪಿ3/ಪಿ4ರಲ್ಲೂ ಪ್ರಮುಖ ಪಾತ್ರ ವಹಿಸಿದರು. ಚಂದ್ರಯಾನಕ್ಕೆ ಬೇಕಾದ ಮೂ ಕೆಲಸಗಳನ್ನು ಮಾಡಿದರು. ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣಗಳ ಎಕ್ಸ್-ರೇಗಳ ಪರಿಣಾಮಗಳ ಅಧ್ಯಯನಗಳಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.

ಕಸ್ತೂರಿರಂಗನ್‌ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ನೂತನ ಶಿಕ್ಷಣ ನೀತಿಯ ನಿರೂಪಣೆಯನ್ನು ರೂಪಿಸುವಲ್ಲಿ ಅವರ ಪ್ರಧಾನ ಪಾತ್ರ ಇದೆ. ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2004ರ ಎಪ್ರಿಲ್‌ನಿಂದ 2009ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು.

ವರದಿ ತಂದ ವಿವಾದ

ಪಶ್ಚಿಮ ಘಟ್ಟಗಳ ಜೊತೆಗೆ ಅವರ ಹೆಸರು ತಳುಕು ಹಾಕಿಕೊಂಡಿದೆ. ಅದು ಆದದ್ದು ಹೀಗೆ. ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿತು. ಅವರು ಆಗಸ್ಟ್ 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಈ ವರದಿ ತೀವ್ರ ಟೀಕೆಗೆ ಒಳಗಾಯಿತು. ಈ ವರದಿಯಲ್ಲಿ ಶೇ. 94-97% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬಾರದೆಂದೂ ಹೇಳಿತ್ತು. ಇದನ್ನು ಪಶ್ಚಿಮ ಘಟ್ಟಗಳ ಜನತೆ ವಿರೋಧಿಸಿದರು. ಆಗ ಸರಕಾರ ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಿತು. ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು 2013ರ ಏಪ್ರಿಲ್ 15ರಂದು ಸಲ್ಲಿಸಿತು. ಇತರ 10 ಸದಸ್ಯರೂ ಸಮಿತಿಯಲ್ಲಿದ್ದರು. ಈ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಇದೂ ಕೂಡ ವಿವಾದಕ್ಕೆ ಒಳಗಾಯಿತು. ತಾನು ಇದನ್ನು ಮಾನ್ಯ ಮಾಡುವುದಿಲ್ಲ ಎಂದು ಕರ್ನಾಟಕ ಹಾಗೂ ಕೇರಳ ಸರಕಾರ ಹೇಳಿವೆ.

ವಿವಾದ ಯಾಕೆ? ಕಸ್ತೂರಿ ರಂಗನ್‌ ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಚ.ಕಿ.ಮೀ. ವ್ಯಾಪ್ತಿಯ ಪ್ರದೇಶ (36.49%) ಇಕೋಸೆನ್ಸಿಟಿವ್ ಏರಿಯಾ (ಇಎಸ್ ಎ) ಕ್ಕೆ ಒಳಪಟ್ಟು ನಿರ್ಬಂಧಿತವಾಗುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷದೊಳಗೆ ಸ್ಥಗಿತಗೊಳಿಸಬೇಕು. 20,000 ಚ.ಮೀ.ಗಿಂತ, ದೊಡ್ಡ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್‌ಎನಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು.

ವರದಿ ಅನುಷ್ಠಾನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಲೆನಾಡಿನ ರೈತರು ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾರೆ. ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಸರ್ಕಾರ ಅಲೆಮಾರಿಗಳು, ಗಿರಿಜನರನ್ನು ಒಕ್ಕಲೆಬ್ಬಿಸಿದ ನೆನಪು ಇದೆ. ಪಶ್ಚಿಮ ಘಟ್ಟವನ್ನು ಉಳಿಸಬೇಕು ಎನ್ನುವ ವಿಷಯಕ್ಕೆ ಮಲೆನಾಡಿನ ಜನರ ಸಹಮತವಿದೆ. ಆದರೆ, ಈ ಉದ್ದೇಶ ಈಡೇರಿಕೆಗಾಗಿ ಮಲೆನಾಡಿನ ಜನರ ಬದುಕಿನ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂಬುದು ಜನತೆಯ ಅಭಿಪ್ರಾಯ.

ಇದನ್ನೂ ಓದಿ: Dr K Kasturirangan: ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್‌ ನಿಧನ