Pahalgam Attack: ಪಾಕಿಸ್ತಾನಕ್ಕೆ ಬಲವಾದ ಉತ್ತರ ನೀಡುವ ಸಮಯ: ಮೇಘನಾದ್ ದೇಸಾಯಿ
ದೀರ್ಘ ಕಾಲದಿಂದ ಇರುವ ಕಾಶ್ಮೀರದ ಸಮಸ್ಯೆಯನ್ನು ಬಗೆ ಹರಿಸಲು ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಭಾರತೀಯ ಮೂಲದ ಬ್ರಿಟಿಷ್ ಸಂಸದ ಲಾರ್ಡ್ ಮೇಘನಾದ್ ದೇಸಾಯಿ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಏ. 22ರಂದು ನಡೆದ ಭಯೋತ್ಪಾದಕ ದಾಳಿಯಿಂದ 26 ಅಮಾಯಕ ನಾಗರಿಕರು ಸಾವನ್ನಪ್ಪಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.


ನವದೆಹಲಿ: ದೀರ್ಘ ಕಾಲದಿಂದ ಇರುವ ಕಾಶ್ಮೀರದ ಸಮಸ್ಯೆಯನ್ನು ಬಗೆ ಹರಿಸಲು ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan-occupied Kashmir) ಅನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಭಾರತೀಯ ಮೂಲದ ಬ್ರಿಟಿಷ್ ಸಂಸದ ಲಾರ್ಡ್ ಮೇಘನಾದ್ ದೇಸಾಯಿ (British MP Lord Meghnad Desai) ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಿಂದ (Pahalgam Attack) 26 ಅಮಾಯಕ ನಾಗರಿಕರು ಸಾವನ್ನಪ್ಪಿರುವುದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶ ಪಡಿಸಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಥ ಶಾಸ್ತ್ರಜ್ಞ ದೇಸಾಯಿ, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮತ್ತು ಅಂತಹ ಕೃತ್ಯಗಳು ಎಂದಿಗೂ ಮರುಕಳಿಸದಂತೆ ಖಚಿತಪಡಿಸಿಕೊಳ್ಳಲು ಭಾರತ ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸಬೇಕು ಎಂದು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಅತ್ಯಂತ ಕ್ರೂರವಾದದ್ದು. ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಭಾರತ ಪಿಒಕೆಯನ್ನು ಸ್ವಾಧೀನಪಡಿಸಿಕೊಳ್ಳುವುದು ಒಂದೇ ಮಾರ್ಗ ಎಂದು ನಾನು ಭಾವಿಸುತ್ತೇನೆ. ನಮ್ಮ ಬಳಿ ರಾಜನ ಪತ್ರವಿದೆ. ಆದ್ದರಿಂದ ಅದು ನಮಗೆ ಸೇರಿದೆ ಎಂದು ಅವರು ತಿಳಿಸಿದರು.
ಉಗ್ರರು ನಡೆಸಿದ ಪಹಲ್ಗಾಮ್ ದಾಳಿ ಅಂತಿಮವಾಗಿರಲಿ. ಈ ದಾಳಿಗೆ ಸೂಕ್ತ ಉತ್ತರ ನೀಡಬೇಕು ಮತ್ತು ಇಂತಹ ಘಟನೆಗಳು ಮುಂದುವರಿದರೆ ಭಾರತ ಪಿಒಕೆಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂಬ ಬಲವಾದ ಸಂದೇಶವನ್ನು ಕಳುಹಿಸಬೇಕು. ಇದುವರೆಗಿನ ಅತ್ಯಂತ ಆಘಾತಕಾರಿ ಘಟನೆಗಳಲ್ಲಿ ಇದು ಒಂದು ಎಂದು ಹೇಳಿದರು.
ಭಾರತ ಸರ್ಕಾರವು ಇದಕ್ಕೆ ಕಠಿಣ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಮುಂದುವರಿದರೆ ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Hafiz Saeed: 26/11 ಮುಂಬೈ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಅಡಗುತಾಣ ಪತ್ತೆ
ಕಾಶ್ಮೀರ ಸಮಸ್ಯೆಗೆ ಮೋದಿಯಿಂದ ಪರಿಹಾರ
ಗುಜರಾತ್‌ನಲ್ಲಿ ಜನಿಸಿದ ಬ್ರಿಟಿಷ್ ಸಂಸದ ದೇಸಾಯಿ, ಇದು ನಂಬಲಾಗದಷ್ಟು ಕ್ರೂರ ದಾಳಿ ಎಂದು ಪ್ರಧಾನಿ ಮೋದಿ ಸರಿಯಾಗಿ ತಿಳಿಸಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಅವರು ಶಾಶ್ವತವಾಗಿ ಪರಿಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ವಡೋದರಾದಲ್ಲಿ ಜನಿಸಿದ ಮೇಘನಾದ್ ದೇಸಾಯಿ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಶೈಕ್ಷಣಿಕ ಮತ್ತು ರಾಜಕೀಯ ಜೀವನದುದ್ದಕ್ಕೂ ಭಾರತದೊಂದಿಗೆ ಬಲವಾದ ಸಂಬಂಧವನ್ನು ಉಳಿಸಿಕೊಂಡಿರುವ ಅವರು ಪ್ರಮುಖ ಅರ್ಥ ಶಾಸ್ತ್ರಜ್ಞರಾಗಿದ್ದು ಭಾರತೀಯ ನೀತಿ ನಿರೂಪಕರು ಮತ್ತು ನಾಯಕರೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದಾರೆ. ಆರ್ಥಿಕ ಸುಧಾರಣೆಗಳು ಮತ್ತು ಅಭಿವೃದ್ಧಿ ತಂತ್ರಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್ ಸದಸ್ಯರಾಗಿದ್ದ ದೇಸಾಯಿ 2020ರಲ್ಲಿ ಜನಾಂಗೀಯತೆಯ ಕಾರಣಕ್ಕಾಗಿ ಲೇಬರ್ ಪಕ್ಷದ ಸದಸ್ಯತ್ವದಿಂದ ಕೆಳಗಿಳಿದರು.