ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shimla Agreement: ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ-ಯುದ್ಧಕ್ಕೆ ಅಹ್ವಾನ ನೀಡಿತೇ ಪಾಕ್ ?

ದಕ್ಷಿಣ ಕಶ್ಮೀರ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ಮುರಿಯುವುದಾಗಿ ಬೆದರಿಕೆ ಒಡ್ಡುತ್ತಿದೆ. ಈ ಮೂಲಕ ಪಾಕಿಸ್ತಾನವು ಯುದ್ಧ ನಡೆಸಲು ಭಾರತಕ್ಕೆ ಬಹಿರಂಗವಾಗಿಯೇ ಅಹ್ವಾನ ನೀಡುತ್ತಿದೆ. ಒಂದು ವೇಳೆ ಪಾಕಿಸ್ತಾನ ಈ ಒಪ್ಪಂದ ಮುರಿದರೆ ಮತ್ತೊಮ್ಮೆ ಎರಡು ದೇಶಗಳ ನಡುವೆ ಯುದ್ಧ ಪ್ರಾರಂಭವಾಗುವುದರಲ್ಲಿ ಸಂದೇಹವಿಲ್ಲ.

ಭಾರತಕ್ಕೆ ಪಾಕ್‌ನಿಂದ ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ

ನವದೆಹಲಿ: ಕಾಶ್ಮೀರದ (Kashmir) ಪಹಲ್ಗಾಮ್ (Pahalgam Terror Attack) ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ (terror Attack) 26 ಮಂದಿ ಸಾವನ್ನಪ್ಪಿದ ಬಳಿಕ ಭಾರತ ಮತ್ತು ಪಾಕಿಸ್ತಾನದ (pakistan) ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ. ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಲು ಪ್ರಾರಂಭಿಸಿದೆ. ಇದರ ಮೊದಲ ಹಂತವಾಗಿ ಸಿಂಧೂ ಜಲ ಒಪ್ಪಂದ ರದ್ದು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ಭಾರತ ಕೈಗೊಂಡರೆ ಪಾಕಿಸ್ತಾನ ಕೂಡ ಭಾರತೀಯ ಪ್ರಜೆಗಳಿಗೆ ವೀಸಾ ರದ್ದುಗೊಳಿಸಿದೆ ಮತ್ತು ಭಾರತದಿಂದ ಎಲ್ಲಾ ಗಡಿಯಾಚೆಗಿನ ಸಾಗಣೆಯನ್ನು ಸ್ಥಗಿತಗೊಳಿಸಿದೆ. ಇದರೊಂದಿಗೆ ಶಿಮ್ಲಾ ಒಪ್ಪಂದವನ್ನುಮುರಿಯುವುದಾಗಿ ಭಾರತಕ್ಕೆ ಬೆದರಿಕೆಯನ್ನು ಒಡ್ಡಿದೆ.

ರಾಜತಾಂತ್ರಿಕ ಸಂಬಂಧಗಳನ್ನು ಬಹುತೇಕ ಕಡಿಮೆಗೊಳಿಸಿದ ಭಾರತದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದಲ್ಲೂ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಿದೆ. ಈ ಸಭೆಯಲ್ಲಿ ಪ್ರಮುಖ ಮಂತ್ರಿಗಳು ಮತ್ತು ಮೂವರು ಸೇನಾ ಮುಖ್ಯಸ್ಥರು ಭಾಗವಹಿಸಿದ್ದರು.

ಸಭೆಯ ಬಳಿಕ ಬಿಡುಗಡೆಯಾದ ಹೇಳಿಕೆಯಲ್ಲಿ ಶಿಮ್ಲಾ ಒಪ್ಪಂದ ಒಳಗೊಂಡಂತೆ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸುವ ನಿರ್ಣಯವನ್ನು ಕೈಗೊಂಡಿರುವುದಾಗಿ ರಾಷ್ಟ್ರೀಯ ಭದ್ರತಾ ಸಮಿತಿ (NSC) ತಿಳಿಸಿದೆ. ಭಾರತದಿಂದ ಪಾಕಿಸ್ತಾನದ ಗಡಿಯಾಚೆಗಿನ ಸಾಗಣೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಗಡಿ ದಾಟಿ ಬಂದವರು ಏಪ್ರಿಲ್ 30ರೊಳಗಾಗಿ ಹಿಂದಿರುಗುವಂತೆ ಅದು ಆದೇಶಿಸಿದೆ.

ಇದರೊಂದಿಗೆ 1972ರ ಶಿಮ್ಲಾ ಒಪ್ಪಂದವನ್ನು ಮುರಿಯುವುದಾಗಿ ಹೇಳಿರುವ ಪಾಕಿಸ್ತಾನ ಈ ಮೂಲಕ ಉರಿಯುವ ಕೆಂಡಕ್ಕೆ ತುಪ್ಪ ಸುರಿಯುವ ಪ್ರಯತ್ನ ಮಾಡಿದೆ. ಈ ಮೂಲಕ ಶಿಮ್ಲಾದಲ್ಲಿ ಭಾರತದ ಪ್ರಾಬಲ್ಯವನ್ನು ಎದುರಿಸುವ ಗುರಿಯನ್ನು ಹೊಂದಿದೆ. ಇದನ್ನು ಕಾರ್ಯಗತಗೊಳಿಸಿದರೆ ಭಾರತ ಮತ್ತು ಪಾಕಿಸ್ತಾನದ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

shimla

ಏನಿದು ಶಿಮ್ಲಾ ಒಪ್ಪಂದ?

1972ರ ಜುಲೈ 2ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಜುಲ್ಫಿಕರ್ ಅಲಿ ಭುಟ್ಟೋ ಅವರು ಸಹಿ ಮಾಡಿರುವ ಒಪ್ಪಂದಇದಾಗಿದೆ. 1971ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಯುದ್ಧದ ಅನಂತರ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಪರಿಣಾಮವಾಗಿ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆಯಿತು. ಈ ಒಪ್ಪಂದದ ಪ್ರಕಾರ ಎರಡೂ ದೇಶಗಳು ಘರ್ಷಣೆ ಮತ್ತು ಯುದ್ಧವನ್ನು ಕೊನೆಗೊಳಿಸಬೇಕು. ಪರಸ್ಪರ ಸ್ನೇಹ ಮತ್ತು ಸಾಮರಸ್ಯದಿಂದ ಸಂಬಂಧಗಳನ್ನು ಬೆಳೆಸಬೇಕು. ಉಪಖಂಡದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಬೇಕು ಎನ್ನುವ ನಿಯಮವಿದೆ. ಈ ಒಪ್ಪಂದದ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಶಾಂತಿಯುತ ವಿಧಾನಗಳಿಂದ ಪರಿಹರಿಸಲು ಎರಡೂ ದೇಶಗಳು ನಿರ್ಧರಿಸಿವೆ ಎನ್ನಲಾಗುತ್ತದೆ.

ಇದನ್ನೂ ಓದಿ: Pahalgam terror Attack: ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್‌ ಉಗ್ರರ ಮನೆಗಳು ಧ್ವಂಸ

ಎರಡೂ ದೇಶಗಳ ನಡುವೆ ಯಾವುದೇ ಸಮಸ್ಯೆಗಳ ಅಂತಿಮ ಇತ್ಯರ್ಥಕ್ಕೆ ಬಾಕಿ ಇರುವಾಗ ಏಕಪಕ್ಷೀಯವಾಗಿ ಪರಿಸ್ಥಿತಿಯನ್ನು ಬದಲಾಯಿಸಬಾರದು ಎಂದು ಈ ಒಪ್ಪಂದದಲ್ಲಿ ಹೇಳಲಾಗಿದೆ.

1999ರ ಆರಂಭದಲ್ಲಿ ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ಉಲ್ಲಂಘಿಸಿತು. ಇದು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು. ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಪ್ರದೇಶಕ್ಕೆ ನುಸುಳಿದವು. ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಪ್ರಮುಖ ಸ್ಥಾನಗಳನ್ನು ವಶಪಡಿಸಿಕೊಂಡವು. ಪಾಕಿಸ್ತಾನಿ ಪಡೆಗಳನ್ನು ಹೊರಹಾಕಲು ಭಾರತ ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿತು.

ಒಂದು ವೇಳೆ ಈ ಒಪ್ಪಂದ ಮುರಿದರೆ ಇದು ಪರಮಾಣು ಸುರಕ್ಷತೆ, ವಾಯುಪ್ರದೇಶ ಶಿಷ್ಟಾಚಾರ ಮತ್ತು ಕೈದಿಗಳ ವಿನಿಮಯದ ಕುರಿತಾದ ಒಪ್ಪಂದಗಳು ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ದುರ್ಬಲಗೊಳಿಸುತ್ತದೆ. ಇದು ದಕ್ಷಿಣ ಏಷ್ಯಾದಲ್ಲಿ ಅಸ್ಥಿರತೆಯನ್ನು ಉಂಟು ಮಾಡಬಹುದು ಎನ್ನುತ್ತಾರೆ ವಿಶ್ಲೇಷಕರು.