JD Vance's First India Visit: ಕುರ್ತಾ ಪೈಜಾಮ, ಅನಾರ್ಕಲಿ; ಭಾರತೀಯ ಸಾಂಪ್ರದಾಯಿಕ ಡ್ರೆಸ್ನಲ್ಲಿ ಮಿಂಚಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಕ್ಕಳು
JD Vance: ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜೆ.ಡಿ. ವ್ಯಾನ್ಸ್ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದಾರೆ. 4 ದಿನಗಳ ಭೇಟಿಗಾಗಿ ಸೋಮವಾರ (ಏ. 21) ದಿಲ್ಲಿಗೆ ಬಂದಿಳಿದ ಅವರ ಜತೆಗೆ ಪತ್ನಿ, ಭಾರತೀಯ ಮೂಲದ ಉಷಾ ವ್ಯಾನ್ಸ್, ಮೂವರು ಮಕ್ಕಳಿದ್ದಾರೆ. ಈ ವೇಳೆ ಮೂವರು ಮಕ್ಕಳು ಸಾಂಪ್ರದಾಯಿಕ ಕುರ್ತಾ ಪೈಜಾಮ, ಅನಾರ್ಕಲಿ ಡ್ರೆಸ್ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.



ಹೊಸದಿಲ್ಲಿ: ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಜೆ.ಡಿ. ವ್ಯಾನ್ಸ್ ಭಾರತಕ್ಕೆ ಆಗಮಿಸಿದ್ದಾರೆ. ತಮ್ಮ ಪತ್ನಿ, ಅಮೆರಿಕದ ಸೆಕೆಂಡ್ ಲೇಡಿ ಉಷಾ ವ್ಯಾನ್ಸ್ ಮತ್ತು ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ ಜತೆಗೆ ಅವರು ದಿಲ್ಲಿಗೆ ಬಂದಿಳಿದರು. ಈ ವೇಳೆ ಇವಾನ್, ವಿವೇಕ್ ಮತ್ತು ಮಿರಾಬೆಲ್ ಭಾರತದ ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದರು. ಇವರು ಭಾರತಕ್ಕೆ ಬಂದಿಳಿಯುತ್ತಲೇ ದಿಲ್ಲಿಯ ಸ್ವಾಮಿ ನಾರಾಯಣ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಿದರು.

ಸದ್ಯ ಜೆ.ಡಿ. ವ್ಯಾನ್ಸ್-ಉಷಾ ದಂಪತಿಯ ಮಕ್ಕಳ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತ ಪ್ರವಾಸದ ವೇಳೆ ಹಿರಿಯ ಪುತ್ರ ಇವಾನ್ ನೀಲಿ ಕರ್ತಾ ಧರಿಸಿದ್ದರೆ, 2ನೇ ಪುತ್ರ ವಿವೇಕ್ ಹಳದಿ ಕರ್ತಾ ಮತ್ತು ಪೈಜಾಮ ತೊಟ್ಟು ಗಮನ ಸೆಳೆದಿದ್ದಾನೆ. ಇನ್ನು ಪುತ್ರಿ, 3ರ ಹರೆಯದ ಮಿರಾಬೆಲ್ ನೀಲಿ ಅನಾರ್ಕಲಿ ಧರಿಸಿದ್ದಾಳೆ.

ಸೋಮವಾರ ಪಾಲಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೆ.ಡಿ. ವಾನ್ಸ್ ದಂಪತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಅವರೊಂದಿಗೆ ಪೆಂಟಗನ್ ಮತ್ತು ವಿದೇಶಾಂಗ ಇಲಾಖೆಯ ಪ್ರತಿನಿಧಿಗಳು ಸೇರಿದಂತೆ ಐದು ಸದಸ್ಯರ ನಿಯೋಗವಿದೆ. 2 ದೇಶಗಳ ಸಂಬಂಧ ವೃದ್ದಿಸುವ ನಿಟ್ಟಿನಲ್ಲಿ ಅವರು ಪ್ರದಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಜೆ.ಡಿ. ವ್ಯಾನ್ಸ್ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವಾರು ಕೇಂದ್ರ ಸಚಿವರು ಮತ್ತು ಹಿರಿಯ ಬಿಜೆಪಿ ನಾಯಕರು ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ವ್ಯಾನ್ಸ್ ದೇಶದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. 4 ದಿನಗಳ ಈ ಪ್ರವಾಸಲ್ಲಿ ಅವರು ಆಗ್ರಾದ ತಾಜ್ಮಹಲ್, ರಾಜಸ್ಥಾನದ ಅರಮನೆ ಮುಂತಾದೆಡೆಗಳಿಗೆ ತೆರಳಲಿದ್ದಾರೆ. ಉಷಾ ಅವರು ಮೂಲತಃ ಆಂಧ್ರ ಪ್ರದೇಶದವರು.