Vishwavani Editorial: ಒಬ್ಬನಿಗಿಂತ ಮೂವರು ಲೇಸು
ಅಮೆರಿಕದ ಸುಂಕಪರ್ವದ ಬಿಕ್ಕಟ್ಟಿನಿಂದ ಬಚಾವಾಗಲು ಇರಬಹುದಾದ ಪರ್ಯಾಯ ಮಾರ್ಗಗಳನ್ನು ತಡಕುವ ಯತ್ನಕ್ಕೂ ಭಾರತ ಮುಂದಾಗಿರುವುದು ಶ್ಲಾಘನೀಯ. ಈ ಕಸರತ್ತಿನ ಒಂದು ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳಲ್ಲಿ ಐರೋಪ್ಯ ರಾಷ್ಟ್ರಗಳಾದ ನಾರ್ವೆ, ನೆದರ್ಲ್ಯಾಂಡ್ ಮತ್ತು ಕ್ರೊವೇಷಿಯಾಗೆ ಭೇಟಿ ನೀಡುತ್ತಿದ್ದಾರೆ


ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿ ಕೇಳಿ ಉದ್ಯಮದ ಹಿನ್ನೆಲೆಯವರು. ಮತ್ತೊಂದು ದೇಶದ ಜತೆಗಿನ ‘ವಾಣಿಜ್ಯಿಕ’ ಸಂಬಂಧದಿಂದ ತಮ್ಮ ದೇಶಕ್ಕೆ ಒದಗಬಹುದಾದ ಲಾಭದ ಲೆಕ್ಕಾಚಾರ ಹಾಕಿಯೇ ಅವರು ‘ರಾಜತಾಂತ್ರಿಕ’ ಸಂಬಂಧಕ್ಕೆ ಕೈಚಾಚುವುದು ಎನ್ನುತ್ತಾರೆ ಬಲ್ಲವರು. ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಶುರುವಿಟ್ಟುಕೊಂಡಿರುವ ‘ಪ್ರತಿಸುಂಕ’ ಹೇರಿಕೆಯ ಉಪಕ್ರಮಕ್ಕೆ ಅವರು ತಾತ್ಕಾಲಿಕ ವಿರಾಮ ನೀಡಿದ್ದಾರಾದರೂ, ಅವರ ಚಿತ್ತಸ್ಥಿತಿ ಯಾವಾಗ ಸಂಯಮದಿಂದ ಕೂಡಿರುತ್ತದೆ ಮತ್ತು ಯಾವಾಗ ಕೆರಳುತ್ತದೆ ಎಂಬುದನ್ನು ಮುನ್ನಂದಾಜಿಸಲು ಆಗದು. ಚೀನಾದೊಡನೆ ಸುಂಕ ಸಮರಕ್ಕೆ ಇಳಿದಿರುವ ಟ್ರಂಪ್ ಆ ದೇಶದ ಮೇಲೆ ಹೇರಿರುವ ಸುಂಕದ ಮಟ್ಟವನ್ನು ಪ್ರಸ್ತುತ ಶೇ.245ಕ್ಕೆ ಏರಿಸಿ ಹಲವರ ಹುಬ್ಬೇರುವಂತೆ ಮಾಡಿದ್ದಾರೆ; ಇಷ್ಟಾಗಿಯೂ ಚೀನಾ ಜಗ್ಗದಿರುವುದಕ್ಕೆ ಟ್ರಂಪ್‌ಗೆ ಕೋಪ ಬಂದಿರಲಿಕ್ಕೂ ಸಾಕು.
ಇದನ್ನೂ ಓದಿ: Vishwavani Editorial: ಇದು ಸೊಕ್ಕಿನ ಪರಮಾವಧಿಯಷ್ಟೇ!
ಈ ಹಗ್ಗಜಗ್ಗಾಟಕ್ಕೆ ಹೋಲಿಸಿದಾಗ, ಭಾರತದ ಮೇಲೆ ಅವರು ಹೇರಿರುವ ಸುಂಕದ ಪ್ರಮಾಣ ಶೇ.26ರಷ್ಟಿದ್ದು, ಇದಕ್ಕೆ ನಮ್ಮ ದೇಶದೆಡೆಗೆ ಟ್ರಂಪ್ ತಳೆದಿರುವ ‘ಮೃದುಧೋರಣೆ’ಯೇ ಕಾರಣ ಎನ್ನುವವರಿದ್ದಾರೆ. ಆದರೆ ಇದನ್ನು ಸಂಪೂರ್ಣ ನಂಬಲಾಗದು ಎಂಬುದು ರಾಜತಾಂತ್ರಿಕತೆಯ ಕೆರೆ ನೀರನ್ನು ಕುಡಿದಿರುವವರ ಅನುಭವದ ಮಾತು.
ಹೀಗಾಗಿಯೇ, ಅಮೆರಿಕದ ಸುಂಕಪರ್ವದ ಬಿಕ್ಕಟ್ಟಿನಿಂದ ಬಚಾವಾಗಲು ಇರಬಹುದಾದ ಪರ್ಯಾಯ ಮಾರ್ಗಗಳನ್ನು ತಡಕುವ ಯತ್ನಕ್ಕೂ ಭಾರತ ಮುಂದಾಗಿರುವುದು ಶ್ಲಾಘನೀಯ. ಈ ಕಸರತ್ತಿನ ಒಂದು ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳಲ್ಲಿ ಐರೋಪ್ಯ ರಾಷ್ಟ್ರಗಳಾದ ನಾರ್ವೆ, ನೆದರ್ಲ್ಯಾಂಡ್ ಮತ್ತು ಕ್ರೊವೇಷಿಯಾಗೆ ಭೇಟಿ ನೀಡುತ್ತಿದ್ದಾರೆ. ಈ ರಾಷ್ಟ್ರ ಗಳೊಂದಿಗೆ ‘ಮುಕ್ತ ವ್ಯಾಪಾರ ಒಪ್ಪಂದ’ದ ಸಾಧ್ಯಾಸಾಧ್ಯತೆಗಳ ಕುರಿತು ಪರಸ್ಪರ ಚರ್ಚಿಸುವುದು ಹಾಗೂ ಅದು ಸಕಾರಾತ್ಮಕ ಫಲಿತಗಳನ್ನು ಹೊಮ್ಮಿಸಿದರೆ ಒಡಂಬಡಿಕೆಗಳನ್ನು ಮಾಡಿಕೊಳ್ಳು ವುದು ಈ ಭೇಟಿಯ ಮುಖ್ಯ ಧ್ಯೇಯ ಎನ್ನಲಾಗಿದೆ.
ಭಾರತ ಹಾಗೂ ಮೋದಿಯವರ ಕುರಿತು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಈಗಾಗಲೇ ಮೂಡಿರುವ ಸೌಹಾರ್ದ ಭಾವನೆಯ ಹಿನ್ನೆಲೆಯಲ್ಲಿ ಈ ಭೇಟಿಗಳು ಫಲಪ್ರದವಾಗಲಿವೆ ಎಂಬುದೇ ಬಹುತೇಕರ ಅಂಬೋಣ. ಅದು ನಿಜವಾಗಲಿ...