BCCI President: ಅಧಿಕಾರಾವಧಿ ಮುಕ್ತಾಯಕ್ಕೂ ಮುನ್ನವೇ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ಕೊಕ್ ಸಾಧ್ಯತೆ!
ಸೌರವ್ ಗಂಗೂಲಿ ಅವರ ಅಧಿಕಾರಾವಧಿ ಮುಗಿದ ನಂತರ ಅಕ್ಟೋಬರ್ 2022ರಲ್ಲಿ1983 ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ, ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಗ ಅವರಿಗೆ 67 ವರ್ಷ ವಯಸ್ಸಾಗಿತ್ತು.


ನವದೆಹಲಿ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಮುಂದಿನ ತಿಂಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಮಧ್ಯಂತರ ಅಧ್ಯಕ್ಷರಾಗಿ(BCCI President) ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯೊಂದು ಕಂಡುಬಂದಿದೆ. ಹೌದು ಹಾಲಿ ಮುಖ್ಯಸ್ಥ ರೋಜರ್ ಬಿನ್ನಿ(Roger Binny) ಅವರಿಗೆ ಜುಲೈನಲ್ಲಿ 70 ವರ್ಷ ತುಂಬಲಿದೆ. ಬಿಸಿಸಿಐ ಸಂವಿಧಾನದ ಪ್ರಕಾರ, ಅಧ್ಯಕ್ಷರು ಸೇರಿದಂತೆ ಯಾವುದೇ ಪದಾಧಿಕಾರಿಗಳು 70 ವರ್ಷ ದಾಟಿದ ನಂತರ ತಮ್ಮ ಹುದ್ದೆಯನ್ನು ತ್ಯಜಿಸಬೇಕು. ಹೀಗಾಗಿ ರೋಜರ್ ಬಿನ್ನಿ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಿದೆ. ಸದ್ಯ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಸೌರವ್ ಗಂಗೂಲಿ ಅವರ ಅಧಿಕಾರಾವಧಿ ಮುಗಿದ ನಂತರ ಅಕ್ಟೋಬರ್ 2022ರಲ್ಲಿ1983 ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ, ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಗ ಅವರಿಗೆ 67 ವರ್ಷ ವಯಸ್ಸಾಗಿತ್ತು. ಮಧ್ಯಮ ವೇಗಿ ಬಿನ್ನಿ 1983 ರಲ್ಲಿ ಭಾರತದ ಐತಿಹಾಸಿಕ ವಿಶ್ವಕಪ್ ವಿಜಯದ ಒಬ್ಬರಾಗಿದ್ದರು. ಎಂಟು ಪಂದ್ಯಗಳಲ್ಲಿ, ಅವರು ಪ್ರತಿಷ್ಠಿತ ಪಂದ್ಯಾವಳಿಯ ಆ ಆವೃತ್ತಿಯಲ್ಲಿ 18 ವಿಕೆಟ್ ಗಳನ್ನು ಪಡೆದಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಐಸಿಸಿ ಅಧ್ಯಕ್ಷರಾಗಿರುವ ಕಾರಣ ಹಾಲಿ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಮಂಡಳಿಯ ಹಿರಿಯ ಅಧಿಕಾರಿಗಳಲ್ಲಿ ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು, ದಶಕಗಳಿಂದ ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಕೇಂದ್ರ ವ್ಯಕ್ತಿಯಾಗಿರುವ ಶುಕ್ಲಾ ಅವರನ್ನೇ ಉತ್ತರಾಧಿಕಾರಿ ಎಂದು ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ IPL 2025 final: ಐಪಿಎಲ್ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!
ಮಂಡಳಿಯು ಚುನಾವಣೆಗಳನ್ನು ನಡೆಸುವವರೆಗೆ ಹಿರಿಯರಾಗಿರುವ ಉಪಾಧ್ಯಕ್ಷರೇ ಮಧ್ಯಂತರ ಅಧ್ಯಕ್ಷರಾಗಿ ಮಂಡಳಿಯ ಅಧಿಕಾರ ವಹಿಸಿಕೊಳ್ಳುತ್ತಾರೆ. ಡಿಸೆಂಬರ್ 24, 2020 ರಂದು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶುಕ್ಲಾ ಆ ಮಾನದಂಡಗಳಿಗೆ ಸರಿಹೊಂದುತ್ತಾರೆ. ಜುಲೈ 19ಕ್ಕೆ ಬಿನ್ನಿಗೆ 70 ವರ್ಷ ತುಂಬಲಿದೆ.