ʻಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್‌ಗೆ ಸ್ಥಾನʼ:2024-25ರ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಿಸಿದ ಬಿಸಿಸಿಐ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2024-25ರ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಏಪ್ರಿಲ್ 21 ರಂದು ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್‌ಗೆ ಸ್ಥಾನ ಕಲ್ಪಿಸಲಾಗಿದೆ. ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 34 ಆಟಗಾರರಿಗೆ ಸ್ಥಾನ ನೀಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ನಾಲ್ವರು ಆಟಗಾರರಿಗೆ ಎ+ ಗ್ರೇಡ್‌ನಲ್ಲಿ ಸ್ಥಾನವನ್ನು ನೀಡಲಾಗಿದೆ.

2024-25 ರ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟ.

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಪುರುಷ ಹಿರಿಯರ ತಂಡದ 2024-25ರ ಸಾಲಿನ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಏಪ್ರಿಲ್ 21 ರಂದು ಸೋಮವಾರ ಪ್ರಕಟಿಸಿದೆ. ಕಳೆದ ವರ್ಷ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಇಶಾನ್ ಕಿಶನ್ (Ishan Kishan) ಇದೀಗ ಮರಳಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದರ ಹೊರತಾಗಿಯೂ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಗ್ರ ದರ್ಜೆಯಲ್ಲಿ ತಮ್ಮ-ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.
2024-25ರ ಸಾಲಿನ ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 34 ಆಟಗಾರರಿಗೆ ಸ್ಥಾನವನ್ನು ನೀಡಲಾಗಿದೆ. 2024ರ ಅಕ್ಟೋಬರ್ 1 ರಿಂದ 2025ರ ಸೆಪ್ಟಂಬರ್ 30ರ ವರೆಗೂ ಈ ಅವಧಿ ಒಳಗೊಂಡಿದೆ. ಎ+ ದರ್ಜೆಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾಗೆ ಸ್ಥಾನವನ್ನು ನೀಡಲಾಗಿದೆ. ಎ ದರ್ಜೆಯಲ್ಲಿ ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಹಾಗೂ ರಿಷಭ್ ಪಂತ್‌ಗೆ ಸ್ಥಾನವನ್ನು ಕಲ್ಪಿಸಲಾಗಿದೆ.
IPL 2025: ಕನ್ನಡಿಗ ಮನೀಶ್ ಪಾಂಡೆಗೆ ಅನ್ಯಾಯ ಮಾಡಿತೇ ಬಿಸಿಸಿಐ?
2024-25ರ ಸಾಲಿನ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ
ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ
ಗ್ರೇಡ್ ಎ: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರಿಷಭ್ ಪಂತ್
ಗ್ರೇಡ್ ಬಿ: ಸೂರ್ಯಕುಮಾರ್ ಯಾದವ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್
ಗ್ರೇಡ್ ಸಿ: ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ
🚨 𝗡𝗘𝗪𝗦 🚨
— BCCI (@BCCI) April 21, 2025
BCCI announces annual player retainership 2024-25 - Team India (Senior Men)#TeamIndia
Details 🔽https://t.co/lMjl2Ici3P pic.twitter.com/CsJHaLSeho
ಆರ್ ಅಶ್ವಿನ್ ಔಟ್
ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ ಹೊರತಾಗಿಯೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರನ್ನು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಆಧಾರದ ಮೇಲೆ ಗ್ರೇಡ್ ಎ+ನಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ, ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈ ಬಿಡಲಾಗಿದೆ.
ಎ ಗ್ರೇಡ್‌ಗೇರಿದ ರಿಷಭ್ ಪಂತ್
ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಬಿ ಗ್ರೇಡ್‌ನಿಂದ ಎ ಗ್ರೇಡ್‌ಗೆ ಏರಿಕೆ ಕಂಡಿದ್ದಾರೆ. ಹೋದ ವರ್ಷ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರು ಕ್ರಮವಾಗಿ ಗ್ರೇಡ್ ಬಿ ಮತ್ತು ಗ್ರೇಡ್ ಸಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅವರು ದೇಶಿ ಕ್ರಿಕೆಟ್‌ಗೆ ಮರಳಿದ ಬಳಿಕ ಅವರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಗೆ ಪರಿಗಣಿಸಿದೆ.
IPL 2025: ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ!
ಶಾರ್ದುಲ್ ಠಾಕೂರ್ ಔಟ್
ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ, ಹಿರಿಯ ವೇಗದ ಬೌಲರ್ ಶಾರ್ದುಲ್ ಠಾಕೂರ್ ಹಾಗೂ ಟೆಸ್ಟ್ ವಿಕೆಟ್ ಕೀಪರ್ ಕೆಎಸ್ ಭರತ್ ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ತೆಗೆಯಲಾಗಿದೆ. ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ಅವರನ್ನು ಗುತ್ತಿಗೆ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ.