ʻರಾಹುಲ್ ದ್ರಾವಿಡ್ ನನಗೆ ಯಾವಾಗಲೂ ವಿಶೇಷʼ: ಕನ್ನಡಿಗನನ್ನು ಶ್ಲಾಘಿಸಿದ ರೋಹಿತ್ ಶರ್ಮಾ!
Rohit Sharma on Rahul Dravid: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷವಾಗಿ ಗುಣಗಾಣ ಮಾಡಿದ್ದಾರೆ. ದ್ರಾವಿಡ್ ಯಾವಾಗಲೂ ನನ್ನ ಹೃದಯದಲ್ಲಿ ಅತ್ಯಂತ ವಿಶೇಷ ವ್ಯಕ್ತಿಯಾಗಿ ಉಳಿಯಲಿದ್ದಾರೆಂದು ತಿಳಿಸಿದ್ದಾರೆ.

ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಮೆಚ್ಚುಗೆ.

ನವದೆಹಲಿ: ಮುಂಬೈ ಇಂಡಿಯನ್ಸ್ ಪರ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿ ಆಡುತ್ತಿರುವಾಗ ರೋಹಿತ್ ಶರ್ಮಾ (Rohit Sharma) ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಹಠಾತ್ ವಿದಾಯ ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು (Indian Cricket Team) ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆಂದು ವರದಿಯಾಗಿತ್ತು. ಅದರಂತೆ ರೋಹಿತ್ ಶರ್ಮಾ ಕೂಡ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದರು. ಆದರೆ, ಅವರು ಹಠಾತ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ರೋಹಿತ್ ಶರ್ಮಾ ಕಳೆದ ಟೆಸ್ಟ್ ಸರಣಿಗಳಲ್ಲಿ ಬ್ಯಾಟ್ಸ್‌ಮನ್ ಆಗಿ ಹಾಗೂ ನಾಯಕನಾಗಿ ವೈಫಲ್ಯ ಅನುಭವಿಸಿದ್ದರು. ಈ ಕಾರಣದಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟು, ಹೊಸ ನಾಯಕತ್ವದೊಂದಿಗೆ ಇಂಗ್ಲೆಂಡ್ ಟೆಸ್ಟ್ ಸರಣಿ ಆಡಲು ಬಿಸಿಸಿಐ ಬಯಸುತ್ತಿದೆ ಎಂದು ಹಲವು ವರದಿಗಳು ತಿಳಿಸಿದ್ದವು. ಇದರ ಬೆನ್ನಲ್ಲೆ ರೋಹಿತ್ ಶರ್ಮಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಟೆಸ್ಟ್ ನಿವೃತ್ತಿ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೂ ಮುನ್ನ ಅಂದರೆ ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನ ಬಳಿಕ ಅವರು ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.
Rohit sharma Retirement: ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ ರೋಹಿತ್ ಶರ್ಮಾ!
ಕ್ರೀಡಾ ಪತ್ರಕರ್ತ ವಿಮಲ್‌ಕುಮಾರ್ ಅವರ ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮಾ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಆರಂಭಿಕ ದಿನಗಳನ್ನು ಸ್ಮರಿಸಿಕೊಂಡರು ಹಾಗೂ ತಮ್ಮ ಮಾಜಿ ನಾಯಕ ರಾಹುಲ್ ದ್ರಾವಿಡ್‌ಗೆ ಹೃದರ ಪೂರ್ವಕ ಗೌರವವನ್ನು ಸಲ್ಲಿಸಿದ್ದಾರೆ. ರಾಹುಲ್ ದ್ರಾವಿಡ್ ನಾಯಕತ್ವದ ಅಡಿಯಲ್ಲಿ ಐರ್ಲೆಂಡ್ ವಿರುದ್ದ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಅಲ್ಲದೆ ರಾಹುಲ್ ದ್ರಾವಿಡ್ ಅವರ ಹೆಡ್ ಕೋಚ್ ಅವಧಿಯಲ್ಲಿ ರೋಹಿತ್ ಶರ್ಮಾ ಅವರು ಮೂರೂ ಸ್ವರೂಪದಲ್ಲಿ ಭಾರತ ತಂಡದ ನಾಯಕರಾಗಿದ್ದರು. ಈ ಇಬ್ಬರ ಸಾರಥ್ಯದಲ್ಲಿ ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿತ್ತು. ಅಂದರೆ 17 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಅನ್ನು ಗೆದ್ದಿತ್ತು.
ಟೆಸ್ಟ್‌ಗೆ ವಿದಾಯ ಹೇಳಿದ ರೋಹಿತ್ ಶರ್ಮಾಗೆ ವಿಶೇಷ ಸಂದೇಶ ರವಾನಿಸಿದ ಕ್ರಿಕೆಟ್ ದೇವರು!
ರಾಹುಲ್ ದ್ರಾವಿಡ್ ಅತ್ಯಂತ ವಿಶೇಷ ವ್ಯಕ್ತಿ
ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, "ರಾಹುಲ್ ಭಾಯ್ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ. ಮೂರು ವರ್ಷಗಳ ಕಾಲ ನಾವು ಜೊತೆಯಾಗಿ ಕಾರ್ಯ ನಿರ್ವಹಿಸಿದ್ದೇವೆ. ಅವರು ನನಗೆ ತುಂಬಾ ವಿಶೇಷ. ಭಾರತ ತಂಡದ ಚೊಚ್ಚಲ ಕ್ಯಾಪ್ ನೀಡಿದ್ದು ಕೂಡ ಇವರೇ. ಐರ್ಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾಗ, ಅವರೇ ನಮ್ಮ ನಾಯಕರಾಗಿದ್ದರು. ನನ್ನ ಜೀವನದ ಆ ವಿಶೇಷ ನೆನಪುಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತುಂಬಾ ಉನ್ನತ ಮಟ್ಟದ ವ್ಯಕ್ತಿ. ಭಾರತೀಯ ಕ್ರಿಕೆಟ್‌ನಲ್ಲಿ ಅವರ ಹೆಸರು ಅಗ್ರ ಆಟಗಾರರಲ್ಲಿ ಸ್ಥಾನ ಪಡೆದಿದೆ ಮತ್ತು ಅದಕ್ಕೆ ಅರ್ಹರಾಗಿದ್ದಾರೆ. ಆದರೆ ನಮ್ಮ ಮುಂದೆ ತಮ್ಮನ್ನು ಹೇಗೆ ಪ್ರಸ್ತುತಪಡಿಸಿದರು ಎಂಬುದು ನನಗೆ ಬಹಳಷ್ಟು ಸ್ಫೂರ್ತಿ ನೀಡಿದೆ," ಎಂದು ಶ್ಲಾಘಿಸಿದ್ದಾರೆ.
ರೋಹಿತ್ ಶರ್ಮಾ 67 ಟೆಸ್ಟ್ ಪಂದ್ಯಗಳಿಂದ 4301 ರನ್‌ಗಳನ್ನು ಕಲೆ ಹಾಕಿದ್ದರೆ, ಟಿ20ಐ ಕ್ರಿಕೆಟ್‌ನಲ್ಲಿ 159 ಪಂದ್ಯಗಳನ್ನು ಆಡಿದ್ದು, 4231 ರನ್‌ಗಳನ್ನು ಗಳಿಸಿದ್ದಾರೆ. 2007 ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಆಡಿದ್ದರು.