ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs KKR: ಶುಭಮನ್‌ ಗಿಲ್‌ ಅಬ್ಬರ, ಕೆಕೆಆರ್‌ ಎದುರು ಗುಜರಾತ್‌ ಟೈಟನ್ಸ್‌ಗೆ ಭರ್ಜರಿ ಜಯ!

GT vs KKR Match Highlights: ಶುಭಮನ್‌ ಗಿಲ್‌ (90 ರನ್‌) ಸ್ಪೋಟಕ ಬ್ಯಾಟಿಂಗ್‌ ಹಾಗೂ ರಶೀದ್‌ ಖಾನ್‌ ಸ್ಪಿನ್‌ ಮೋಡಿಯ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 39ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ 39 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 12 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು.

ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ಗೆ ಆಘಾತ ನೀಡಿದ ಗುಜರಾತ್‌ ಟೈಟನ್ಸ್‌!

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ 39 ರನ್‌ಗಳ ಜಯ.

Profile Ramesh Kote Apr 21, 2025 11:28 PM

ಕೋಲ್ಕತಾ: ಶುಭಮನ್‌ ಗಿಲ್‌ (90 ರನ್‌) ಮತ್ತು ಸಾಯಿ ಸುದರ್ಶನ್‌ ( 52 ರನ್‌) ಸ್ಪೋಟಕ ಬ್ಯಾಟಿಂಗ್‌ ಹಾಗೂ ರಶೀದ್‌ ಖಾನ್‌ (25 ಕ್ಕೆ 2) ಮತ್ತು ಪ್ರಸಿಧ್‌ ಕೃಷ್ಣ (25 ಕ್ಕೆ 2) ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಗುಜರಾತ್‌ ಟೈಟನ್ಸ್‌ (Gujarat Titans) ತಂಡ, ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ದ 39 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆರನೇ ಗೆಲುವು ಪಡೆಯುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು. ಇನ್ನು ಐದನೇ ಸೋಲು ಅನುಭವಿಸಿದ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ಗೆ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ.

ಸೋಮವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 199 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್‌ ರೈಡರ್ಸ್‌, ಅಜಿಂಕ್ಯ ರಹಾನೆ (50) ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಇದರ ಪರಿಣಾಮವಾಗಿ ಕೆಕೆಆರ್‌ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಸೋಲು ಒಪ್ಪಿಕೊಂಡಿತು.

GT vs KKR: 90 ರನ್‌ಗೆ ಔಟ್‌ ಆಗಿ ವಿರಾಟ್‌ ಕೊಹ್ಲಿಯ ಅಗತ್ಯ ದಾಖಲೆ ಸರಿಗಟ್ಟಿದ ಶುಭಮನ್‌ ಗಿಲ್‌!

ಅಜಿಂಕ್ಯ ರಹಾನೆ ಅರ್ಧಶತಕ ವ್ಯರ್ಥ

ಸವಾಲಿನ ಮೊತ್ತದ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ರೆಹಮಾನುಲ್ಲಾ ಗುರ್ಬಾಝ್‌ (1) ಹಾಗೂ ಸುನೀಲ್‌ ನರೇನ್‌ (17) ಕೆಕೆಆರ್‌ಗೆ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅಜಿಂಕ್ಯ ರಹಾನೆ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿ 36 ಎಸೆತಗಳಲ್ಲಿ 50 ರನ್‌ ಸಿಡಿಸಿದರು. ಆದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಯಾರಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ. ಇದರ ಶ್ರೇಯ ಗುಜರಾತ್‌ ಟೈಟನ್ಸ್‌ ಬೌಲರ್‌ಗಳಿಗೆ ಸಲ್ಲಬೇಕು. ರಶೀದ್‌ ಖಾನ್‌, ಪ್ರಸಿಧ್‌ ಕೃಷ್ಣ ಸೇರಿದಂತೆ ಜಿಟಿ ಬೌಲರ್‌ಗಳು ಶಿಸ್ತುಬದ್ದ ದಾಳಿಯನ್ನು ಕೆಕೆಆರ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ವೆಂಕಟೇಶ್‌ ಅಯ್ಯರ್‌, ರಿಂಕು ಸಿಂಗ್‌ ಹಾಗೂ ಆಂಡ್ರೆ ರಸೆಲ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.



ಗುಜರಾತ್‌ ಟೈಟನ್ಸ್‌ ಪರ ಬೌಲ್‌ ಮಾಡಿದ ಎಲ್ಲಾ ಬೌಲರ್‌ಗಳು ವಿಕೆಟ್‌ ಪಡೆದರು. ಅದರಲ್ಲಿಯೂ ವಿಶೇಷವಾಗಿ ರಶೀದ್‌ ಖಾನ್‌ ಹಾಗೂ ಪ್ರಸಿಧ್‌ ಕೃಷ್ಣ ಪ್ರಮುಖ ಎರಡೆರಡು ವಿಕೆಟ್‌ಗಳನ್ನು ಪಡೆದರು. ಇನ್ನುಳಿದವರು ತಲಾ ಒಂದೊಂದು ವಿಕೆಟ್‌ ಪಡೆದರು.

199 ರನ್‌ಗಳನ್ನು ಕಲೆ ಹಾಕಿದ್ದ ಗುಜರಾತ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್ ಟೈಟನ್ಸ್‌ ತಂಡ, ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 198 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ಗೆ 199 ರನ್‌ಗಳ ಗುರಿಯನ್ನು ನೀಡಿತ್ತು.



ಗಿಲ್‌-ಸುದರ್ಶನ್‌ ಶತಕದ ಜತೆಯಾಟ

ಗುಜರಾತ್‌ ಟೈಟನ್ಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಹೊಸ ಚೆಂಡಿನಲ್ಲಿ ಬಹಳ ಎಚ್ಚರಿಕೆಯಿಂದ ಆಡಿದ್ದರು. ಅಲ್ಲದೆ ಕೆಕೆಆರ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಮುರಿಯದ ಮೊದಲನೇ ವಿಕೆಟ್‌ಗೆ 74 ಎಸೆತಗಳಲ್ಲಿ 114 ರನ್‌ಗಳನ್ನು ಗಳಿಸಿ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿತ್ತು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸಾಯಿ ಸುದರ್ಶನ್‌ 36 ಎಸೆತಗಳಲ್ಲಿ 52 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.



ಶುಭಮನ್‌ ಗಿಲ್‌ ಬೊಂಬಾಟ್‌ ಬ್ಯಾಟಿಂಗ್‌

ಆರಂಭದಿಂದಲೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ನಾಯಕ ಶುಭಮನ್‌ ಗಿಲ್‌ ಕೆಕೆಆರ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 18ನೇ ಓವರ್‌ವರೆಗೂ ಕ್ರೀಸ್‌ನಲ್ಲಿ ಸಮಯ ಕಳೆದಿದ್ದ ಗಿಲ್‌, 55 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 10 ಮನಮೋಹಕ ಬೌಂಡರಿಗಳೊಂದಿಗೆ 90 ರನ್‌ಗಳನ್ನು ಸಿಡಿಸಿದರು. ಆದರೆ, 18ನೇ ಓವರ್‌ ಕೊನೆಯ ಎಸೆತದಲ್ಲಿ ವೈಭವ್‌ ಅರೋರಾಗೆ ವಿಕೆಟ್‌ ಒಪ್ಪಿಸುವ ಮೂಲಕ ಕೇವಲ10 ರನ್‌ ಅಂತರದಲ್ಲಿ ಶತಕ ವಂಚಿತರಾದರು. ಕೊನೆಯಲ್ಲಿ ಬ್ಯಾಟ್‌ ಮೂಲಕ ಅಬ್ಬರಿಸಿದ್ದ ಜೋಸ್‌ ಬಟ್ಲರ್‌ ಕೇವಲ 23 ಎಸೆತಗಳಲ್ಲಿ ಅಜೇಯ 41 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಜಿಟಿ 200 ಸನಿಹ ತಲುಪಲು ನೆರವು ನೀಡಿದ್ದರು.