RCB vs RR: ತವರಿನಲ್ಲಿ ಗೆಲುವಿನ ಖಾತೆ ತೆರೆದೀತೇ ರಾಯಲ್ ಚಾಲೆಂಜರ್ಸ್?
ಚೊಚ್ಚಲ ಪಂದ್ಯದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಭಾರೀ ಸಂಚಲನ ಮೂಡಿಸಿರುವ 14ರ ಪೋರ ವೈಭವ್ ಸೂರ್ಯವಂಶಿ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅದರಲ್ಲೂ ಬ್ಯಾಟಿಂಗ್ ಟ್ರ್ಯಾಕ್ ಚಿನ್ನಸ್ವಾಮಿಯಲ್ಲಿ ಅವರ ಅಬ್ಬರ ಹೇಗಿದ್ದೀತು ಎಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ಬೆಂಗಳೂರು: ತವರಿನಾಚೆ ಆಡಿದ 5 ಪಂದ್ಯಗಳಲ್ಲೂ ಗೆದ್ದಿದ್ದರೂ, ಚಿನ್ನಸ್ವಾಮಿ ಸ್ಟೇಡಿಯಂ(M Chinnaswamy Stadium)ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs RR) ತಂಡ ನಾಲ್ಕನೇ ಪ್ರಯತ್ನದಲ್ಲಿ ಗೆಲುವು ಸಾಧಿಸುವ ಹಂಬಲದಲ್ಲಿದೆ. ಗುರುವಾರ ನಡೆಯುವ ಐಪಿಎಲ್(IPL 2025) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲು ಎದುರಿಸಲಿದೆ. ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 6 ರಲ್ಲಿ ಸೋಲು ಕಂಡಿರುವ ರಾಜಸ್ಥಾನ್‌ಗೆ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ.
ಅಸ್ಥಿರ ನಿರ್ವಹಣೆಯೊಂದಿಗೆ ತಿಣುಕಾಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿಯೂ ಸುಲಭವಾಗಿ ಗೆಲ್ಲುವ ಪಂದ್ಯಗಳನ್ನು ಕೈಚೆಲ್ಲಿತ್ತು. ಡೆಲ್ಲಿ ವಿರುದ್ಧ ಸೂಪರ್ ಓವರ್‌ನಲ್ಲಿ ಮುಗ್ಗರಿಸಿದರೆ, ಲಕ್ನೋ ವಿರುದ್ಧ 2 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ತಂಡದ ದಯನೀಯ ಬ್ಯಾಟಿಂಗ್ ವೈಫಲ್ಯ ಇದಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ ತಂಡದ ವಿರುದ್ಧ ಫಿಕ್ಸಿಂಗ್ ಆರೋಪ ಕೂಡ ಕೇಳಿಬಂದಿದೆ. ಈ ಎಲ್ಲ ನೋವನ್ನು ಮರೆತು ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟರ್‌ಗಳು ಲಯಕ್ಕೆ ಮರಳುವ ನಿರೀಕ್ಷೆ ರಾಜಸ್ಥಾನ್ ತಂಡದ್ದಾಗಿದೆ. ಪಾರ್ಶ್ವ ಸ್ನಾಯು ಸೆಳೆತದಿಂದ ಬಳಲುತ್ತಿರುವ ಖಾಯಂ ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರಿಯಾಗ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ.
ವೈಭವ್ ಸೂರ್ಯವಂಶಿ ಹೈಲೆಟ್ಸ್
ಚೊಚ್ಚಲ ಪಂದ್ಯದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಭಾರೀ ಸಂಚಲನ ಮೂಡಿಸಿರುವ 14ರ ಪೋರ ವೈಭವ್ ಸೂರ್ಯವಂಶಿ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅದರಲ್ಲೂ ಬ್ಯಾಟಿಂಗ್ ಟ್ರ್ಯಾಕ್ ಚಿನ್ನಸ್ವಾಮಿಯಲ್ಲಿ ಅವರ ಅಬ್ಬರ ಹೇಗಿದ್ದೀತು ಎಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Your toes felt that too 😂🔥 pic.twitter.com/a01RK0fEvW
— Rajasthan Royals (@rajasthanroyals) April 23, 2025
ಸಿಡಿಯಬೇಕಿದೆ ಕೊಹ್ಲಿ
ತವರಿನಾಚೆ ಉತ್ತಮವಾಗಿ ಬ್ಯಾಟ್ ಬೀಸುವ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್, ಜಿತೇಶ್ ಶರ್ಮ ತವರಿನ ಪಂದ್ಯದಲ್ಲಿ ಇದುವರೆಗೂ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಆಡಿದ ಮೂರು ಪಂದ್ಯಗಳಲ್ಲಿಯೂ ಸಂಪೂರ್ಣ ವಿಫಲರಾಗಿದ್ದಾರೆ. ಆಸ್ಟ್ರೇಲಿಯಾದ ಟಿಮ್ ಡೇವಿಡ್ ಮಾತ್ರ ಕೆಲ ಕ್ರಮಾಂಕದಲ್ಲಿ ಏಕಾಂಗಿ ಬ್ಯಾಟಿಂಗ್ ಹೋರಾಟ ನಡೆಸಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿಯೂ ಇವರನ್ನೇ ನಂಬಿ ಕುಳಿತರೆ ಆಗದು. ಈ ಪಂದ್ಯದಲ್ಲಾದರೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ತೋರಲೇ ಬೇಕು.
ಇದನ್ನೂ ಓದಿ RCB vs RR: ಆರ್‌ಸಿಬಿ-ರಾಜಸ್ಥಾನ್ ಮರುಮುಖಾಮುಖಿ; ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ
ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳನ್ನು ಹೊರತುಪಡಿಸಿ ವೇಗಿಗಳಾದ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಜೋಶ್ ಹ್ಯಾಜಲ್‌ವುಡ್ ಜೋಶ್ ತೋರುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಪರಿಣಾಮಕಾರಿ ಸ್ಪಿನ್ನರ್ ತಂಡದಲ್ಲಿ ಇಲ್ಲದೆ ಇರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸಿದೆ ಎಂದರೂ ತಪ್ಪಾಗಲಾರದು.