ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶಿಸ್ತಿನ ಜೀವನ ಒಳ್ಳೆಯ ಆರೋಗ್ಯಕ್ಕೆ ಬುನಾದಿ

ಒಂದು ಶಿಸ್ತಿನ ಜೀವನ, ಕ್ರಮಬದ್ಧವಾದ ಬದುಕು, ಮನೆಯ ಆಹಾರ, ವ್ಯಾಯಾಮ, ಸರಿಯಾದ ಸಮ ಯಕ್ಕೆ ಮಲಗಿ ಬೆಳಗ್ಗೆ ಬೇಗ ಎದ್ದು ದಿನವಿಡೀ ಮನಸು ದೇಹವನ್ನ ಚಟುವಟಿಕೆಯಿಂದ ಇರಿಸಿಕೊಂಡರೆ ನಮಗೆ ಬರುವ ಅರ್ಧ ಕಾಯಿಲೆಗಳು ಬರುವುದೇ ಇಲ್ಲ. ಅನೇಕ ರೋಗಲಕ್ಷಣಗಳು ನಮ್ಮ ಬದುಕಿನ ಶೈಲಿಯಿಂದ ಹುಟ್ಟಿಕೊಂಡವು

ಶಿಸ್ತಿನ ಜೀವನ ಒಳ್ಳೆಯ ಆರೋಗ್ಯಕ್ಕೆ ಬುನಾದಿ

ಒಂದೊಳ್ಳೆ ಮಾತು

ವ್ಯಕ್ತಿಯೊಬ್ಬನಿಗೆ ಪ್ರತಿ ರಾತ್ರಿ ಮಲಗಿದಾಗ ತನ್ನ ಮಂಚದ ಕೆಳಗೆ ಯಾರೋ ಅಡಗಿ ಕುಳಿತಂತೆ ಭಾಸವಾಗಿ ಭಯದಿಂದ ಎಷ್ಟೋ ದಿನಗಳಿಂದ ನಿದ್ರೆಯನ್ನೇ ಮಾಡುತ್ತಿರಲ್ಲಿಲ್ಲ. ರಾತ್ರಿ ಇಡೀ ಪದೇ ಪದೇ ಮಂಚದ ಕೆಳಗೆ ಬಗ್ಗಿ ಬಗ್ಗಿ ನೋಡುವುದೇ ಆಗುತ್ತಿತ್ತು. ಇದನ್ನು ಮನೆಯವರಲ್ಲಿ ಹೇಳಿ ಕೊಳ್ಳಲು ಅವನಿಗ್ಯಾಕೋ ಹಿಂಜರಿಕೆ ಬೇರೆ ಆಗುತ್ತಿತ್ತು. ಅವರೇನಾದರೂ ತನ್ನನ್ನು ಹಾಸ್ಯ ಮಾಡಿದರೆ ಎಂದು ಚಿಕ್ಕ ಅಳುಕು. ಇದು ಏನೋ ನನ್ನ ಮಾನಸಿಕ ಖಾಯಿಲೆಯೇ ಇರಬೇಕೆಂದು ಕೊಂಡು, ಹೇಗಾದರೂ ಸರಿ ಈ ಭಯದಿಂದ ಹೊರ ಬರಬೇಕೆಂದು ನಿರ್ಧರಿಸಿ ಮಾನಸಿಕ ವೈದ್ಯರಲ್ಲಿ ಹೋಗಬೇಕೆಂದು ತೀರ್ಮಾನಿಸಿದ.

ಮಾರನೆಯ ದಿನ ಒಬ್ಬ ಮಾನಸಿಕ ವೈದ್ಯರಲ್ಲಿ ಹೋಗಿ ಅವರಲ್ಲಿ ತನ್ನ ಸಮಸ್ಯೆಯನ್ನು ಹೇಳಿ ಕೊಂಡ. ಆಗ ವೈದ್ಯರು ಹೇಳಿದರು, ನೋಡಿ ಇದೊಂದು ಮಾನಸಿಕ ಖಾಯಿಲೆ, ಇದರ ಗುಣಲಕ್ಷಣ ವನ್ನು ತಿಳಿದುಕೊಂಡು ಇದಕ್ಕಾಗಿ ನಾನು ನಿಮಗೆ ಉಪಚಾರ ಮಾಡಲು ನೀವು ಸುಮಾರು ಆರು ತಿಂಗಳ ಕಾಲ ನಿರಂತರವಾಗಿ ಪ್ರತೀವಾರ ನನ್ನಲ್ಲಿಗೆ ಬರಬೇಕಾಗುತ್ತೆ ಎಂದರು.

ಇದನ್ನೂ ಓದಿ: Roopa Gururaj Column: ಪ್ರಾಮಾಣಿಕವಾಗಿ ಬದುಕುವುದು ದೊಡ್ಡ ಸಂಸ್ಕಾರ

ಆಗ ವ್ಯಕ್ತಿ ಕೇಳಿದ ಒಂದು ವಾರದ ನಿಮ್ಮ ಫೀ ಎಷ್ಟಾಗುತ್ತದೆ ಎಂದು. ವೈದ್ಯರು ಹೇಳಿದರು ಒಂದು ವಾರಕ್ಕೆ ಸುಮಾರು ಐದುಸಾವಿರದಷ್ಟು ಆಗುತ್ತದೆ. ನಿಮ್ಮ ರೋಗ ಗುಣವಾಗಲು ನಾನು ಸರಿಯಾದ ಚಿಕಿತ್ಸೆ ನೀಡಬೇಕಲ್ಲಾ ಎಂದು. ಈ ವ್ಯಕ್ತಿಯ ಎದೆ ಧಸಕ್ಕೆಂದಿತು. ಆರು ತಿಂಗಳವರೆಗೂ ಅಷ್ಟೊಂದು ಹಣವನ್ನು ತಾನು ಹೇಗೆ ತಾನೆ ಹೊಂದಿಸಲಿ ಎಂದು ಅವನಿಗೆ ಚಿಂತೆಯಾಯಿತು. ಮತ್ತೆ ಬರುತ್ತೇನೆ ಎಂದು ವೈದ್ಯರಿಗೆ ಸಬೂಬು ಹೇಳಿ ಹೇಗೋ ಮನೆಗೆ ಬಂದ.

ನೀವೂ ಬರೆಯಬಹುದು ಇದೇ ಯೋಚನೆಯಲ್ಲಿ, ಎರಡು ದಿನ ಕಳೆದು ಮಾರನೇ ದಿನ ತನ್ನ ಸ್ನೇಹಿತನೊಬ್ಬನಲ್ಲಿಗೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆಗ ಅವನು ನಗುತ್ತಾ ಇಷ್ಟೇ ತಾನೇ, ಇದೆಂತಾ ಸಮಸ್ಯೆನೇ ಅಲ್ಲಾ , ದಡ್ಡಾ, ಮಂಚ ಬಿಚ್ಚಿಟ್ಟು ಕೆಳಗೆ ಮಲಗು ಎಂದು ಹೇಳಿದ. ಅವನು ಸ್ನೇಹಿತ ಹೇಳಿದಂತೆ ನೆಲದ ಮೇಲೆ ಹಾಸಿಗೆ ಹಾಸಿಕೊಂಡು ಮಲಗತೊಡಗಿದ.

ಒಂದೆರಡು ದಿನಗಳ ಇರುಸು ಮುರುಸಿನ ನಂತರ ಭಯವೂ ಹೋಯಿತು, ಚೆನ್ನಾಗಿ ನಿದ್ರೆಯೂ ಬರತೊಡಗಿತು. ಇಂತಹ ಪರಿಸ್ಥಿತಿಯನ್ನು ನಾವೆಲ್ಲರೂ ಇಂದು ಎದುರಿಸುತ್ತಿದ್ದೇವೆ. ಚಿಕ್ಕ ಚಿಕ್ಕ ಲಕ್ಷಣಗಳಿಗೂ ಕೂಡ ಅದಾವ ದೊಡ್ಡ ಕಾಯಿಲೆ ಬಂದಿದೆಯೋ ಎಂದು ಪರೀಕ್ಷಿಸಲು ಹೋಗು ತ್ತೇವೆ. ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳೂ ವ್ಯಾಪಾರೀಕರಣಕ್ಕೆ ಒಳಗಾಗಿವೆ. ಒಂದು ಸಣ್ಣ ಸಮಸ್ಯೆಯನ್ನು ಇರಿಸಿಕೊಂಡು ನಾವು ಹೋದರೂ ಕೂಡ ಅದಕ್ಕಾಗಿ ಎಲ್ಲಾ ರೀತಿಯ ಪರೀಕ್ಷೆ ಗಳನ್ನು ಮಾಡಿಸಿ ಅನಗತ್ಯವಾಗಿ ನಮ್ಮನ್ನು ಆತಂಕಕ್ಕೆ ಈಡು ಮಾಡುವ ಒಂದು ಗುಂಪಿನ ಜನರೇ ಇದ್ದಾರೆ.

ಕೆಲವು ಪ್ರಾಮಾಣಿಕ ವೈದ್ಯರನ್ನು ಹೊರತುಪಡಿಸಿ, ಅನೇಕರು ಇಲ್ಲಿ ಲಾಭ ಮಾಡಿಕೊಳ್ಳುವದಕ್ಕೆ ಈ ಕ್ಷೇತ್ರವನ್ನು ಆರಿಸಿಕೊಂಡಂತೆ ನಡೆದುಕೊಳ್ಳುತ್ತಾರೆ. ಸರಳವಾದ ಸುಲಭವಾದ ಚಿಕಿತ್ಸೆಗಳನ್ನು ನೀಡುವ ಬದಲು ಯಾವುದೇ ಲಕ್ಷಣವನ್ನು ವೈಭವಿಕರಿಸಿ ನಮ್ಮನ್ನು ಆತಂಕಕ್ಕೆ ಈಡು ಮಾಡಿ, ನಂತರ ನಮ್ಮ ಭಯವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಒಂದು ವರ್ಗದ ಜನರೇ ಇದ್ದಾರೆ.

ಆದ್ದರಿಂದಲೇ ಚಿಕ್ಕ ಪುಟ್ಟ ರೋಗಲಕ್ಷಣಗಳಿಗೆ ಅನಗತ್ಯವಾಗಿ ಎಲ್ಲದಕ್ಕೂ ಔಷಧಿಗಳಿಗೆ ಮೊರೆ ಹೋಗಬೇಡಿ. ಸಾಧ್ಯವಾದರೆ ಮನೆಯಲ್ಲಿ ಪಥ್ಯ ಮಾಡಿ. ಅಲ್ಲಿಗೂ ಸರಿ ಹೋಗದಿದ್ದರೆ ಉತ್ತಮ ವೈದ್ಯರ ಬಳಿಗೆ ಹೋಗಿ. ಪ್ರತಿಯೊಂದಕ್ಕೂ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ. ಇದರಿಂದ ನಮ್ಮ ದೇಹದ ಆರೋಗ್ಯ ಸರಿಹೋಗುವ ಬದಲು ಲಿವರ್ ಮತ್ತಷ್ಟು ಹಾನಿಗೊಳಗಾಗು ತ್ತದೆ.

ಒಂದು ಶಿಸ್ತಿನ ಜೀವನ, ಕ್ರಮಬದ್ಧವಾದ ಬದುಕು, ಮನೆಯ ಆಹಾರ, ವ್ಯಾಯಾಮ, ಸರಿಯಾದ ಸಮಯಕ್ಕೆ ಮಲಗಿ ಬೆಳಗ್ಗೆ ಬೇಗ ಎದ್ದು ದಿನವಿಡೀ ಮನಸು ದೇಹವನ್ನ ಚಟುವಟಿಕೆಯಿಂದ ಇರಿಸಿಕೊಂಡರೆ ನಮಗೆ ಬರುವ ಅರ್ಧ ಕಾಯಿಲೆಗಳು ಬರುವುದೇ ಇಲ್ಲ. ಅನೇಕ ರೋಗಲಕ್ಷಣಗಳು ನಮ್ಮ ಬದುಕಿನ ಶೈಲಿಯಿಂದ ಹುಟ್ಟಿಕೊಂಡವು. ಅದನ್ನು ಸರಿ ಮಾಡಿಕೊಂಡರೆ ಆರೋಗ್ಯ ತಾನೆ ತಾನಾಗಿ ಸರಿ ಹೋಗುತ್ತದೆ.