Laxman Gorlakatte Column: ಬಾಳ ಪಾಠಶಾಲೆಯಲ್ಲಿ ಪುಸ್ತಕಗಳೇ ಬೋಧಕರು
‘ಓದುವುದು’ ಒಂದು ಸುಲಭಸಾಧ್ಯವಾದ, ಉತ್ತಮವಾದ ಹವ್ಯಾಸ. ಇಲ್ಲಿ ಓದಲು ಬಂದರೆ ಸಾಕು, ಮತ್ತೇನೂ ಕೌಶಲದ ಅಥವಾ ಸಲಕರಣೆಗಳ ಅಗತ್ಯವೇ ಇರುವುದಿಲ್ಲ! ಶಿಕ್ಷಕರಾಗಲೀ ತರಬೇತಿ ಯಾಗಲೀ ಇದಕ್ಕೆ ಬೇಕಿಲ್ಲ, ಪುಸ್ತಕವೊಂದಿದ್ದರೆ ಸಾಕು. ಯಾವ ವಯಸ್ಸಿನವರಾದರೂ ಸರಿ ಬೆಳೆಸಿಕೊಳ್ಳಬಹುದಾದ ಓದುವ ಹವ್ಯಾಸಕ್ಕೆ ಹೆಚ್ಚಿನ ಖರ್ಚು ಇಲ್ಲ. ಅನೇಕ ಒಳ್ಳೆಯ ಪುಸ್ತಕಗಳು ಕೈಗೆಟುಕುವ ಬೆಲೆಗೇ ದೊರಕು ತ್ತವೆ. ದುಬಾರಿ ಬೆಲೆಯ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲದಿದ್ದರೆ, ಅವನ್ನು ಉಚಿತವಾಗಿ ಓದಲು ಗ್ರಂಥಾಲಯಗಳಿವೆ.


ತನ್ನಿಮಿತ್ತ
ಲಕ್ಷ್ಮಣ್ ಗೊರ್ಲಕಟ್ಟೆ
ಏಪ್ರಿಲ್ ತಿಂಗಳ 23ರಂದು ‘ಅಂತಾರಾಷ್ಟ್ರೀಯ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ’ವನ್ನು ಆಚರಿಸ ಲಾಗುತ್ತದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ವಿಭಾಗವು (ಯುನೆಸ್ಕೊ) 1995ರಲ್ಲಿ ಈ ದಿನದ ಆಚರಣೆಗೆಂದು ನಿರ್ಧರಿಸಿತು. ಪ್ರಸ್ತುತ 100ಕ್ಕೂ ಹೆಚ್ಚು ದೇಶ ಗಳಲ್ಲಿ ಈ ದಿನಾಚರಣೆಯ ಪರಿಪಾಠವಿದೆ. ಪ್ರಸಿದ್ಧ ಆಂಗ್ಲಕವಿ ಮತ್ತು ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ನ ಜನನ ಮತ್ತು ಮರಣ ಎರಡೂ ಏಪ್ರಿಲ್ 23ರಂದೇ ಆಗಿದ್ದು; ಹೀಗಾಗಿ ಅವರ ಸ್ಮರಣಾರ್ಥ ವಾಗಿಯೂ ಈ ದಿನವನ್ನು ‘ಪುಸ್ತಕ ದಿನ’ವಾಗಿ ಆಚರಿಸಲಾಗುತ್ತದೆ ಎಂಬುದು ಗಮನಾರ್ಹ ಸಂಗತಿ.
ಜ್ಞಾನಾರ್ಜನೆಗೆ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ದೇಶವನ್ನು ಪರ್ಯಟನೆ ಮಾಡುವುದು ಹಾಗೂ ಪುಸ್ತಕಗಳನ್ನು ಓದುವುದು ಅವಶ್ಯಕ ಎಂಬ ಗ್ರಹಿಕೆಯನ್ನು ‘ದೇಶ ಸುತ್ತು, ಕೋಶ ಓದು’ ಎಂಬ ನಾಣ್ಣುಡಿಯು ಒತ್ತಿಹೇಳುತ್ತದೆ. ಇತ್ತೀಚೆಗೆ ಜನರು ದೇಶ-ವಿದೇಶಗಳ ಪ್ರವಾಸದಲ್ಲಿ ಹೆಚ್ಚೆಚ್ಚು ಆಸಕ್ತಿ ತೋರುತ್ತಿದ್ದಾರೆ; ಆದರೆ ಇವರಲ್ಲಿ ಕೆಲವರಿಗೆ ಪುಸ್ತಕ ಓದುವುದರಲ್ಲಿ ಮಾತ್ರ ನಿರಾಸಕ್ತಿ!
ಇದೇಕೆ ಹೀಗೆ? ಓದುವುದರ ಮಹತ್ವದ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಓದಿದರೆ ತಾನೇ ಅದರ ರುಚಿ ಗೊತ್ತಾಗುವುದು?! ಓದಲು ಬಾರದ ‘ಅನಕ್ಷರಸ್ಥ’ ಹಾಗೂ ಓದಲು ಬಂದರೂ ಓದಿ ನಿಂದ ವಿಮುಖನಾಗುವ ‘ಅಕ್ಷರಸ್ಥ’ ಇವರಿಬ್ಬರ ನಡುವೆ ಏನೂ ವ್ಯತ್ಯಾಸವಿಲ್ಲ! ಯಾವುದೇ ಪ್ರವಾಸಿ ತಾಣದ ಭೇಟಿ ಫಲಪ್ರದವಾಗಬೇ ಕಾದರೆ, ಅದರ ಬಗೆಗಿನ ವಿವರವಾದ ಮಾಹಿತಿಯನ್ನು ಮೊದಲೇ ಓದಿರಬೇಕು. ಇಲ್ಲದಿದ್ದರೆ ಅಂಥ ಪ್ರವಾಸವು ಸಾರ್ಥಕವಾಗಲಾರದು.
ಇದನ್ನೂ ಓದಿ: Dr N Someshwara Column: ಹುಳುಗಳನ್ನು ಔಷಧವನ್ನಾಗಿ ಬಳಸಬಹುದೇ ?
‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು ಜಪಾನ್ ಪ್ರವಾಸ ಮಾಡಿಬಂದ ನಂತರ, ಆ ದೇಶದ ಜನರ ಶಿಸ್ತು-ಶಿಷ್ಟಾಚಾರ, ಸಂಸ್ಕೃತಿ ಮತ್ತು ಜೀವನಶೈಲಿ ಮುಂತಾದವು ಓದುಗರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಸರಣಿ ಲೇಖನಗಳನ್ನು ಬರೆದಿದ್ದಾರೆ, ಇನ್ನೂ ಬರೆಯುತ್ತಿದ್ದಾರೆ. ಕೆಲವೇ ದಿನಗಳ ಪ್ರವಾಸದಲ್ಲಿ ಅಷ್ಟೊಂದು ಸ್ವಾರಸ್ಯಕರ ಮಾಹಿತಿಯನ್ನು ದಕ್ಕಿಸಿಕೊಂಡು ಬರೆಯುವುದು ತಮಾಷೆಯ ಬಾಬತ್ತಲ್ಲ; ಅವರು ಪ್ರವಾಸಕ್ಕೆ ತೆರಳುವುದಕ್ಕೂ ಮೊದಲು ಜಪಾನ್ ಬಗ್ಗೆ ವಿಪುಲ ಮಾಹಿತಿಯನ್ನು ಕಲೆಹಾಕಿ ಓದಿದ್ದರಿಂದಲೇ ಅದು ಸಾಧ್ಯವಾಯಿತು.
ಆದ್ದರಿಂದ, ನಾವು ಪ್ರವಾಸ ಮಾಡುವುದು ‘ಹೋದ ಪುಟ್ಟ, ಬಂದ ಪುಟ್ಟ’ ಎಂಬಂತೆ ಆಗಬಾರದು. ಪ್ರವಾಸಕ್ಕೆ ತೆರಳುವ ಮುನ್ನ ಆಯಾ ತಾಣಗಳ ಬಗ್ಗೆ ಒಂದಿಷ್ಟು ಓದಿಕೊಂಡು ಹೋದರೆ ಪ್ರವಾಸವು ಅರ್ಥಪೂರ್ಣವೂ ಸಾರ್ಥಕವೂ ಆಗುವುದು. ಹಿಂದೆ ಆಗಿಹೋದ ಅನೇಕ ಮಹನೀಯರು, ತಾವು ಪುಸ್ತಕಗಳನ್ನು ಓದಿ ಪ್ರಭಾವಿತರಾಗಿ ಜೀವನದಲ್ಲಿ ಸಾಫಲ್ಯವನ್ನು ಪಡೆದ ಬಗ್ಗೆ ಆತ್ಮಚರಿತ್ರೆಗಳಲ್ಲಿ ವಿವರಿಸಿದ್ದಾರೆ.

ಒಂದು ಒಳ್ಳೆಯ ಪುಸ್ತಕ ಅಥವಾ 'ಅದರಲ್ಲಿನ ಒಂದು ಉತ್ತಮ ಅಂಶವು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಮೇಲಕ್ಕೆ ಕೊಂಡೊಯ್ದ ಬಗ್ಗೆ ಹೇಳಿಕೊಂಡಿರುವ ಇಂಥ ಮಹನೀಯರು ‘ಪುಸ್ತಕಗಳನ್ನು ಓದಿ’ ಅಂತ ಒತ್ತಿ ಒತ್ತಿ ಹೇಳಿದ್ದಾರೆ. ‘ಟೈಮ್’ ಪತ್ರಿಕೆಯ 2011ರ ಜಗತ್ತಿನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿದ್ದ ಅಮೆರಿಕನ್‌ನ ಲೇಖಕ ಜಾರ್ಜ್ ಆರ್.ಆರ್. ಮಾರ್ಟಿನ್, “ಒಬ್ಬ ಓದುಗನು ಒಂದು ಸಾವಿರ ಜನ್ಮಗಳನ್ನು ಜೀವಿಸಿದರೆ, ಓದದೇ ಇರುವವನು ಒಂದು ಜನ್ಮ ಮಾತ್ರ ಜೀವಿಸುತ್ತಾನೆ!" ಎಂದು ಉದ್ಗರಿಸಿದ್ದಾನೆ. ಶೈಕ್ಷಣಿಕ ಪದವಿ ಗಳಿಸಿ ಒಂದು ಉದ್ಯೋಗವನ್ನೂ ದಕ್ಕಿಸಿಕೊಂಡ ಕೆಲವರು, “ಬದುಕಿನಲ್ಲಿ ಸೆಟ್ಲ್ ಆಗಿದ್ದೇವೆ, ಇನ್ನೇಕೆ ಓದುವುದು?" ಎಂಬ ಮನೋಭಾವವನ್ನು ತಳೆಯುತ್ತಾರೆ. ಇದು ಸಲ್ಲದು.
ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು, ಪ್ರಯೋಗಗಳು ನಿರಂತರವಾಗಿ ಆಗುತ್ತಿರುತ್ತವೆ. ಇವು ಗಳನ್ನು ಅರಿತು ಬದಲಾವಣೆಗಳಿಗೆ ಹೊಂದಿಕೊಂಡು ಹೋಗದಿದ್ದರೆ ಹಿಂದೆ ಉಳಿಯ ಬೇಕಾಗುತ್ತದೆ. ಉದಾಹರಣೆಗೆ, 2-3 ದಶಕಗಳ ಹಿಂದೆ ವೈದ್ಯಕೀಯ ಪದವಿ ಪಡೆದಾತನೊಬ್ಬ ವೈದ್ಯನಾದ ನಂತರ ಅದೆಷ್ಟೋ ಹೊಸ ಆವಿಷ್ಕಾರಗಳ ಬಗ್ಗೆ ಅಧ್ಯಯನ ಮಾಡದಿದ್ದರೆ ತನ್ನ ವೃತ್ತಿಯಲ್ಲಿ ಪ್ರಗತಿ ಹೊಂದುವುದು, ಪ್ರಾವೀಣ್ಯವನ್ನು ದಕ್ಕಿಸಿಕೊಳ್ಳುವುದು ಸಾಧ್ಯವಾಗದು. ಇದು ವೈದ್ಯಕೀಯ ಮಾತ್ರವಲ್ಲದೆ ಬದುಕಿನ ಎಲ್ಲ ಕಾರ್ಯಕ್ಷೇತ್ರಗಳಿಗೂ ಅನ್ವಯಿಸುವ ಮಾತು.
‘ಓದುವುದು’ ಒಂದು ಸುಲಭಸಾಧ್ಯವಾದ, ಉತ್ತಮವಾದ ಹವ್ಯಾಸ. ಇಲ್ಲಿ ಓದಲು ಬಂದರೆ ಸಾಕು, ಮತ್ತೇನೂ ಕೌಶಲದ ಅಥವಾ ಸಲಕರಣೆಗಳ ಅಗತ್ಯವೇ ಇರುವುದಿಲ್ಲ! ಶಿಕ್ಷಕರಾಗಲೀ ತರಬೇತಿ ಯಾಗಲೀ ಇದಕ್ಕೆ ಬೇಕಿಲ್ಲ, ಪುಸ್ತಕವೊಂದಿದ್ದರೆ ಸಾಕು. ಯಾವ ವಯಸ್ಸಿನವರಾದರೂ ಸರಿ ಬೆಳೆಸಿ ಕೊಳ್ಳಬಹುದಾದ ಓದುವ ಹವ್ಯಾಸಕ್ಕೆ ಹೆಚ್ಚಿನ ಖರ್ಚು ಇಲ್ಲ.
ಅನೇಕ ಒಳ್ಳೆಯ ಪುಸ್ತಕಗಳು ಕೈಗೆಟುಕುವ ಬೆಲೆಗೇ ದೊರಕುತ್ತವೆ. ದುಬಾರಿ ಬೆಲೆಯ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲದಿದ್ದರೆ, ಅವನ್ನು ಉಚಿತವಾಗಿ ಓದಲು ಗ್ರಂಥಾಲಯಗಳಿವೆ. ದೃಷ್ಟಿದೋಷ ವಿದ್ದು ಓದಲು ಆಗದಿರುವವರು ಕೂಡ ‘ಶ್ರವ್ಯಪುಸ್ತಕ’ಗಳನ್ನು ನೆಚ್ಚಬಹುದು- ಅಂದರೆ, ಪುಸ್ತಕ ಗಳನ್ನು ಓದಿ ಹೇಳುವ ತಂತ್ರಜ್ಞಾನದ ಸೌಲಭ್ಯವನ್ನು ಪಡೆಯಬಹುದು.
ಪುಸ್ತಕಗಳು ಜ್ಞಾನಾರ್ಜನೆಗೆ, ವ್ಯಕ್ತಿತ್ವ ನಿರ್ಮಾಣ ಮತ್ತು ವಿಕಸನಕ್ಕೆ ಪೂರಕವಾಗಿರುವುದು ಮಾತ್ರ ವಲ್ಲದೆ, ಕಷ್ಟಗಳು ಬಂದಾಗ ಅವನ್ನು ಎದುರಿಸಲು, ಖಿನ್ನತೆಯನ್ನು ದೂರ ಮಾಡಲು, ಒಂಟಿತನ ವನ್ನು ಹೋಗಲಾಡಿಸಲು ಕೂಡ ಸಹಾಯಕಾರಿ. ಪುಸ್ತಕಗಳು ಮನೋರಂಜನೆಯನ್ನು ಒದಗಿಸು ತ್ತವೆ. ಓದಿದರೆ ನಕ್ಕು ನಗಿಸುವ ಪುಸ್ತಕಗಳೂ ಇವೆ. ಬಂಧು-ಮಿತ್ರರು ಕೈಕೊಟ್ಟರೂ, ನಮ್ಮ ಕೈಬಿಡದ ಸಂಗಾತಿಯೆಂದರೆ ಅದು ಪುಸ್ತಕವೇ.
ಆದರೆ ಅದಕ್ಕೆಂದು ನಾವು ಪುಸ್ತಕದ ಕೈಹಿಡಿಯಬೇಕು, ಅಷ್ಟೇ! ಬಸ್ಸು, ರೈಲು ಅಥವಾ ವಿಮಾನ ಪ್ರಯಾಣದ ವೇಳೆ ಕಾಯಬೇಕಾಗಿ ಬಂದಾಗ ಅಥವಾ ಪ್ರಯಾಣವು ವಿನಾಕಾರಣ ವಿಳಂಬವಾದಾಗ ಶಪಿಸುತ್ತಾ ಕಾಲಹರಣ ಮಾಡುವ ಬದಲು, ಒಂದೊಳ್ಳೆಯ ಪುಸ್ತಕ ಓದಿಕೊಂಡು ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಜಾಣತನ.
ಆದ್ದರಿಂದ, ಮುಂದಿನ ಸಲ ಪ್ರಯಾಣಕ್ಕೆ ಹೊರಟಾಗ ಒಂದೊಳ್ಳೆಯ ಪುಸ್ತಕ ನಿಮ್ಮ ಸಂಗಾತಿ ಯಾಗಿರಲಿ! ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಹತ್ತರ ಪಾತ್ರ ವಹಿಸಬಲ್ಲರು, ವಹಿಸಲೇಬೇಕು. ಮಕ್ಕಳನ್ನು ಜತೆಗಿಟ್ಟುಕೊಂಡು ಪುಸ್ತಕವನ್ನು ಓದುತ್ತ ಕೂರುವುದರಿಂದ ಮಕ್ಕಳಲ್ಲೂ ಓದುವ ಆಸಕ್ತಿ ಸುಲಭವಾಗಿ ಬೆಳೆಯುತ್ತದೆ.
ಇತ್ತೀಚೆಗೆ ಸ್ಮಾರ್ಟ್ಫೋನುಗಳ ಗೀಳು, ಅದರಲ್ಲೂ ನಿರ್ದಿಷ್ಟವಾಗಿ ಸಾಮಾಜಿಕ ಜಾಲತಾಣಗಳನ್ನು ಜಾಲಾಡುತ್ತಲೇ ಇರುವ ಗೀಳು ಜನರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಡಿವಾಣ ವಿಲ್ಲದ ಕೆಲ ಜಾಲತಾಣಗಳಲ್ಲಿ ಸುಲಭಕ್ಕೆ ಸಿಗುವ ಅನಪೇಕ್ಷಿತ-ಅಶ್ಲೀಲ-ಹಾನಿಕಾರಕ ಅಂಶಗಳು ಮಕ್ಕಳ ಮತ್ತು ಯುವಜನರ ಮನವನ್ನು ಕೆಡಿಸಿ ಅವರ ಭವಿಷ್ಯವನ್ನೇ ಹಾಳುಮಾಡಬಹುದು.
ಇಂಥ ಗೀಳಿನಿಂದ ಮಕ್ಕಳನ್ನು ದೂರವಿರಿಸಲು, ಅವರ ಜತೆಯಲ್ಲೇ ಕುಳಿತು ಒಳ್ಳೆಯ ಕಥೆಗಳನ್ನೋ, ಕಾರ್ಟೂನುಗಳನ್ನೋ ಓದಿ ವಿವರಿಸುವುದರಿಂದ ಮಕ್ಕಳು ‘ಪುಸ್ತಕ ಪ್ರಪಂಚ’ಕ್ಕೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳ ಮನಸ್ಸು-ಮಿದುಳು ಚುರುಕಾಗಲು ವಿಶೇಷ ಪುಸ್ತಕಗಳೂ ಲಭ್ಯವಿವೆ. ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ವ್ಯಾಯಾಮ ಬೇಕು. ಒಳ್ಳೆಯದೊಂದು ಪುಸ್ತಕವನ್ನು ಓದು ವುದೇ ಮನಸ್ಸಿಗೆ ನೀಡುವ ಉತ್ತಮ ವ್ಯಾಯಾಮವೆನಿಸುತ್ತದೆ.
ಈ ಪರಿಪಾಠದ ರುಚಿಯನ್ನು ಮಕ್ಕಳಿಗೆ ಹತ್ತಿಸಿ ಬಿಟ್ಟರೆ ಅವರು ತಾವಾಗಿಯೇ ಓದುವ ಹವ್ಯಾಸ ವನ್ನು ರೂಢಿಸಿಕೊಂಡು ಮುಂದುವರಿಸುತ್ತಾರೆ. ಆದ್ದರಿಂದ, ಮನೆಯಲ್ಲಿ ಒಂದೊಮ್ಮೆ ಅನುಕೂಲ/ಸೌಲಭ್ಯ ಇಲ್ಲದಿದ್ದರೂ ಪೋಷಕರು ಮಕ್ಕಳ ಜತೆಗೆ ಸನಿಹದ ಗ್ರಂಥಾಲಯಕ್ಕೆ ಭೇಟಿಯಿತ್ತು ಪುಸ್ತಕ-ಪತ್ರಿಕೆಗಳನ್ನು ಓದುವ ಪರಿಪಾಠವನ್ನು ಅವರಲ್ಲಿ ರೂಢಿಸಬೇಕು. ಇದಕ್ಕೆ ವೆಚ್ಚವಾಗುವುದು ಸಮಯವಷ್ಟೇ, ಹಣವಲ್ಲ!
ಜತೆಗೆ, ಮಕ್ಕಳ ಜತೆಗಿನ ಪೋಷಕರ ಬಾಂಧವ್ಯದ ‘ಭಾವತಂತು’ ಕೂಡ ಮತ್ತಷ್ಟು ಗಟ್ಟಿಯಾಗುತ್ತದೆ. ಇನ್ನು, ಜನ್ಮದಿನ, ಮದುವೆ, ಸನ್ಮಾನ ಮುಂತಾದ ಸಮಾರಂಭಗಳಲ್ಲಿ ಗುಣಮಟ್ಟದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು ಒಂದು ಉತ್ತಮ ಪರಿಪಾಠ. ಪ್ರೀತಿಯ ಸಂದೇಶ ಮತ್ತು ಹಸ್ತಾಕ್ಷರ ವನ್ನು ಒಳಗೊಂಡ ಪುಸ್ತಕವೊಂದನ್ನು ಪ್ರೀತಿಪಾತ್ರರಿಗೆ ಉಡುಗೊರೆಯಾಗಿತ್ತರೆ, ಓದಲು ಅವರಿಗೆ ಪ್ರೇರಣೆ ಸಿಕ್ಕಂತಾಗುತ್ತದೆ.
ಅವರು ಇಂಥ ಉಡುಗೊರೆಯನ್ನು ಜತನದಿಂದ ಇಟ್ಟುಕೊಂಡು ಎಂದಾದರೂ ತೆರೆದು ಓದಲೂ ಬಹುದು, ಆಗ ಅವರ ಮುಖವರಳಿ ಕೊಡುಗೆ ಕೊಟ್ಟವರನ್ನು ನೆನೆಯಲೂಬಹುದು! ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಇತ್ತೀಚೆಗೆ ‘ಪುಸ್ತಕಮೇಳ’ವನ್ನು ಆಯೋಜಿಸಿ, ಆಸಕ್ತ ಓದುಗರಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟಕ್ಕೆ ಅನುವುಮಾಡಿಕೊಡಲಾಗಿತ್ತು.
ಇಂಥ ಮೇಳವನ್ನು ಪ್ರತಿವರ್ಷವೂ ನಡೆಸಬೇಕೆಂಬ ಹಾಗೂ ಪ್ರತಿ ಜಿಲ್ಲಾಕೇಂದ್ರಗಳಲ್ಲೂ ಆಯೋ ಜಿಸಬೇಕೆಂಬ ಯೋಜನೆ ಪರಿಶೀಲನೆಯಲ್ಲಿದೆ. ಇನ್ನು, ಕನ್ನಡ ಪುಸ್ತಕ ಪ್ರಾಧಿಕಾರವು ಇತರ ಪ್ರಕಾಶಕರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ, ಮೈಸೂರು ದಸರಾ ಮುಂತಾದ ಸಂದರ್ಭಗಳಲ್ಲಿ ಪುಸ್ತಕ ಮೇಳಗಳನ್ನು ಆಯೋಜಿಸಿ, ಓದುಗರಿಗೆ ರಿಯಾಯಿತಿ ದರದಲ್ಲಿ ಪುಸ್ತಕ ಗಳನ್ನು ದೊರಕಿಸಿಕೊಡುತ್ತಿರುವುದು ಗೊತ್ತಿರುವ ಸಂಗತಿಯೇ. ಪುಸ್ತಕಗಳನ್ನು ಕೊಂಡು ಓದುವ ಪರಿಪಾಠವನ್ನು ಬೆಳೆಸುವ ನಿಟ್ಟಿನಲ್ಲಿ ಇಂಥ ಮೇಳಗಳು ಸಹಕಾರಿ.
‘ಜೀವನವೊಂದು ನಿರಂತರ ಪಾಠಶಾಲೆ’ ಎಂಬ ಮಾತಿದೆ. ಈ ಶಾಲೆಯಲ್ಲಿ ನಾವೆಲ್ಲರೂ ವಿದ್ಯಾರ್ಥಿ ಗಳೇ. ಇಲ್ಲಿ ಪುಸ್ತಕಗಳೇ ಶಿಕ್ಷಕರು. ಗುಣಮಟ್ಟದ ಪುಸ್ತಕಗಳನ್ನು ಓದೋಣ, ಬದುಕಿನಲ್ಲಿ ವಿವೇಕಿ ಗಳಾಗೋಣ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)