ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಬಳೆ ತೊಡಿಸಿಕೊಂಡು ತವರಲ್ಲಿ ಲೆಕ್ಕ ಕೇಳು ಎಂದ ದುರ್ಗಾಮಾತೆ

ಮಲ್ಲಯ್ಯ, ಬಾ ತಾಯಿ ಎಂದು ಒಂದು ಮರದ ಕೆಳಗೆ ಕುಳಿತು ತನ್ನ ಬಳೆದಿಂಡಿನ ಗಂಟನ್ನು ಬಿಚ್ಚಿ ಹರಡಿ ಅವಳಿಗೆ ಬಳೆಯನ್ನು ತೋರಿಸಿದ. ಹೊಳೆಯುವ ಕೆಂಪು, ಹಸಿರು, ಹಳದಿ, ನೀಲಿ ಬಳೆಗಳನ್ನು ಆರಿಸಿ ಎರಡೂ ಕೈಗಳ ತುಂಬಾ ಹಾಕಿಸಿ ಕೂಂಡಳು. ಬಳೆಗಾರನಿಗೆ, ಮಲ್ಲಾರ ಇದು ನನ್ನ ಗಂಡನ ಮನೆ, ಪಕ್ಕದ ‘ಗೌರಿಹಳ್ಳಿ’ಯ ರಥ ಬೀದಿಯಲ್ಲಿ ಊರ ಹೆಂಚಿನ ದೊಡ್ಡ ಮಾಳಿಗೆ ಮನೆ ಇದೆ.

ಬಳೆ ತೊಡಿಸಿಕೊಂಡು ತವರಲ್ಲಿ ಲೆಕ್ಕ ಕೇಳು ಎಂದ ದುರ್ಗಾಮಾತೆ

ಒಂದೊಳ್ಳೆ ಮಾತುʼ

rgururaj628@gmail.com

ದುರ್ಗಾಪುರ ಗ್ರಾಮದಲ್ಲಿ ಬಳೆಗಾರ ಮಲ್ಲಯ್ಯ ಬಳೆ ವ್ಯಾಪಾರ ಮಾಡುತ್ತಿದ್ದನು. ಆತನು ಗೌರಿ ದೇವಿಯ ಭಕ್ತನಾಗಿದ್ದು, ಬಳೆಗಳನ್ನು ’‘ಗೌರಿಬಳೆ’ ಎಂದೆ ಕೂಗುತ್ತಿದ್ದನು. ಎಂದಿನಂತೆ ಅಂದು ಬಳೆ ವ್ಯಾಪಾರ ಮಾಡಲು ಕಮಲಾಪುರ ಗ್ರಾಮದ ಕಡೆ ಹೊರಟಿದ್ದನು. ಊರು ದಾಟಿ ನಿರ್ಜನ ‌ಪ್ರದೇಶ ದತ್ತ ಬರುತ್ತಿದ್ದನು. ಮಧ್ಯದಲ್ಲಿ ಕಮಲ ಪುಷ್ಪಗಳಿಂದ ತುಂಬಿದ ಸುಂದರವಾದ ಕೆರೆ ಏರಿಯ ಮೇಲೆ, ಅರಿಶಿನ ಹಚ್ಚಿ ಹಣೆಯಲ್ಲಿ ಕಾಸಿನಗಲ ಕುಂಕುಮ, ಕೈ ತುಂಬಾ ಬಳೆ ತೊಟ್ಟು ಸಾಕ್ಷಾತ್ ಮಹಾಲಕ್ಷ್ಮಿಯಂತಿದ್ದ ಹೆಣ್ಣು ಮಗಳು ಬರುತ್ತಿದ್ದಳು. ಅವಳು ಬಳೆಗಾರನನ್ನು ನೋಡಿ ಮಲ್ಲಾರ ನನ್ನ ಕೈಗೂ ತುಂಬಾ ಬಳೆಗಳನ್ನು ತೊಡಿಸು ಎಂದಳು.

ಮಲ್ಲಯ್ಯ, ಬಾ ತಾಯಿ ಎಂದು ಒಂದು ಮರದ ಕೆಳಗೆ ಕುಳಿತು ತನ್ನ ಬಳೆದಿಂಡಿನ ಗಂಟನ್ನು ಬಿಚ್ಚಿ ಹರಡಿ ಅವಳಿಗೆ ಬಳೆಯನ್ನು ತೋರಿಸಿದ. ಹೊಳೆಯುವ ಕೆಂಪು, ಹಸಿರು, ಹಳದಿ, ನೀಲಿ ಬಳೆಗಳನ್ನು ಆರಿಸಿ ಎರಡೂ ಕೈಗಳ ತುಂಬಾ ಹಾಕಿಸಿ ಕೂಂಡಳು. ಬಳೆಗಾರನಿಗೆ, ಮಲ್ಲಾರ ಇದು ನನ್ನ ಗಂಡನ ಮನೆ, ಪಕ್ಕದ ‘ಗೌರಿಹಳ್ಳಿ’ಯ ರಥ ಬೀದಿಯಲ್ಲಿ ಊರ ಹೆಂಚಿನ ದೊಡ್ಡ ಮಾಳಿಗೆ ಮನೆ ಇದೆ.

ಇದನ್ನೂ ಓದಿ: Roopa Gururaj Column: ಕ್ಷಮೆ ಕೇಳುವುದರಿಂದ ನಾವು ಚಿಕ್ಕವರಾಗುವುದಿಲ್ಲ

ಅದು ನನ್ನ ತವರು ಮನೆ ಅಲ್ಲಿಗೆ ಹೋಗಿ, ನಿಮ್ಮ ಮಗಳ ಕೈಗೆ ಬಳೆ ಹಾಕಿದ್ದೇನೆ ಅದರ ಕಾಸು ಕೊಡಿ ಎಂದು ನನ್ನ ತಂದೆಯನ್ನು ಕೇಳಿ ತೆಗೆದುಕೊ, ಇನ್ನೂ ಒಂದು ವಿಚಾರ, ನಾನು ತವರಿಗೆ ಹೋಗದೆ ವರ್ಷಗಳ ಮೇಲಾಯಿತು. ಇದರಿಂದ ಅವರಿಗೆ ಕೋಪ ಬಂದಿದೆ.

ನನಗೆ ಮಗಳೇ ಇಲ್ಲ ಎನ್ನಬಹುದು. ಆದರೆ ನೀನು ನಂಬಬೇಡ ಕಾಸು ಕೊಡದಿದ್ದರೆ, ದೇವರ ಗೂಡಿ ನಲ್ಲಿ ಕುಂಕುಮದ ಭರಣಿ ಇದೆ, ಅದರಲ್ಲಿ ಕಾಸು ಇದೆ ಅದನ್ನೇ ಕೊಡಲು ಹೇಳು ಎನ್ನುತ್ತಲೇ ಕೆರೆಯ ಹತ್ತಿರ ಹೋದಳು. ಮಲ್ಲಯ್ಯ ಗೌರಿಹಳ್ಳಿಗೆ ಬಂದು ನಡೆದದ್ದು ಹೇಳಿದಾಗ ಅವಧಾನಿಗಳು ಯಾವ ಮಗಳು, ಯಾವ ಬಳೆ ನೀನು ಏನು ಹೇಳುವೆ? ಎಂದು ಪ್ರಶ್ನಿಸಿದರು.

ಮಲ್ಲಯ್ಯ ಸ್ವಾಮಿ, ನೀವು ಹೀಗೆ ಹೇಳುತ್ತೀರಿ ಎಂದು ನಿಮ್ಮ ಮಗಳು ಹೇಳಿದ್ದಳು. ನಿಮ್ಮ ಮನೆ ದೇವರ ಗೂಡಿನ ಒಂದು ಕಪಾಟಿನ ಮೂಲೆಯಲ್ಲಿ ಕುಂಕುಮದ ಭರಣಿಯಲ್ಲಿ ಕಾಸು ಇದೆಯಂತೆ ಅದನ್ನೇ ತಂದು ಕೊಡಿ ಎಂದನು.

ಅವಧಾನಿಗಳು ಕೂಡಲೇ ದೇವರ ಕೋಣೆಗೆ ಬಂದು ಕಪಾಟಿನಲ್ಲಿದ್ದ ದೇವರ ಸಾಮಾನು ಸರಿಸಿ ನೋಡುತ್ತಾರೆ, ಮೂಲೆಯಲ್ಲಿ ಒಂದು ಕಂಚಿನ ಭರಣಿ ಇದ್ದು ಅದರ ಮುಚ್ಚಳ ತೆಗೆದಾಗ ಸಂಪುಟ ದೊಳಗೆ ಸಿಂಹವಾಹಿನಿ ಖಡ್ಗಧಾರಣಿ ದುರ್ಗಾಮಾತೆಯ ವಿಗ್ರಹವಿತ್ತು. ಅದರೊಳಗೆ ಒಂದು ಚಿನ್ನದ ಲಕ್ಷ್ಮಿ ಕಾಸೂ ಕಂಡಿತು. ಬಳೆಗಾರನಿಗೆ ಕಾಸನ್ನು ಕೊಟ್ಟು, ನೀನು ನನ್ನ ಮಗಳನ್ನು ಎಲ್ಲಿ ನೋಡಿದೆ ಅಲ್ಲಿಗೇ ಕರೆದುಕೊಂಡು ಹೋಗಿ ತೋರಿಸು ಎಂದರು.

ಮಲ್ಲಯ್ಯ ಕೆರೆಯ ಸಮೀಪ ಬಂದು ನೋಡುತ್ತಾನೆ, ಅಲ್ಲಿ ಯಾರೂ ಇರಲಿಲ್ಲ. ಮಲ್ಲಯ್ಯ ಅಮ್ಮಾ ದೇವಿ, ತಾಯಿ, ಗೌರಮ್ಮ ಎಲ್ಲಿರುವೆ ಬಾಮ್ಮಾ ಎಂದು ಕೂಗಿದ. ನನ್ನನ್ನು ಸುಳ್ಳುಗಾರ ಎನಿಸು ವೆಯಾ? ಬಾ ತಾಯಿ ಎಂದು ಕೈಮುಗಿದು ಪ್ರಾರ್ಥಿಸಿದನು. ಸ್ವಲ್ಪ ಹೊತ್ತಿಗೆ ಕೆರೆಯೊಳಗಿಂದ ಬಳೆ ತೊಟ್ಟಿರುವ ಎರಡು ಕೈಗಳು ಮೇಲೆ ಬಂದಿತು.

ಅದು ಮಲ್ಲಾರ ತೊಡಿಸಿದ್ದ ಕೆಂಪು- ಹಸಿರು -ಹಳದಿ ಬಳೆಗಳೇ ಆಗಿದ್ದವು. ಅನಾಯಾಸವಾಗಿ ಊರವರಿಗೆ ತಾಯಿಯ ಹಸ್ತದ ದರ್ಶನವಾಯಿತು. ಅವಧಾನಿಗಳಿಗೆ ಊರವರೆಲ್ಲ ನಿಮ್ಮ ತಲೆಮಾರಿ ನವರು ದುರ್ಗಾಮಾತೆ ಪೂಜಿಸುವುದನ್ನು ಬಿಟ್ಟು ಒಳಗೆ ಇಟ್ಟಿದ್ದರಿಂದ ಆಕೆಯನ್ನು ಪೂಜಿಸುವಂತೆ ಈ ರೀತಿಯಾಗಿ ತಾಯಿ ನಿಮಗೆ ನೆನಪಿಸಿದ್ದಾಳೆ ಎಂದರು.

ಅವಧಾನಿಗಳು ಸಂತೋಷದಿಂದ ಮನೆಗೆ ಬಂದು, ಕೆಲವೇ ದಿನಗಳಲ್ಲಿ ಶುಭ ಮುಹೂರ್ತದಲ್ಲಿ ದೇವಿಯ ಆರಾಧನೆಯ ಸಂಕಲ್ಪ ಮಾಡಿ, ಊರವರನ್ನೆಲ್ಲ ಕರೆದು ಪೂಜೆ ಮಾಡಿ ಅನ್ನದಾನ ಮಾಡಿ ದುರ್ಗಾ ಮಾತೆಯ ಆರಾಧನೆಯನ್ನು ಆರಂಭ ಮಾಡಿದರು. ನಮ್ಮ ಪೂರ್ವಜರು ಹಾಕಿ ಕೊಟ್ಟಿರುವ ಮನೆದೇವರ ಆರಾಧನೆಯ ಪರಿಪಾಠವನ್ನು ಎಂದಿಗೂ ಕೈ ಬಿಡಬಾರದು. ಮರೆತರೆ ಅದನ್ನ ನೆನಪಿ ಸುವ ಒಂದಲ್ಲ ಒಂದು ಘಟನೆ ನಡೆದೇ ನಡೆಯುತ್ತದೆ. ಇದು ನಿಮ್ಮ ಅನುಭವಕ್ಕೂ ಬಂದಿರ ಬಹುದು.